Previous ರೂಪು ನಿರೂಪು ಲಿಂಗತ್ರಯ Next

ಲಿಂಗ

ಲಿಂಗ

“ಲಿಂಗ" ಎಂಬ ಪದಕ್ಕೆ "ಕಾರಣ", "ಸ್ಥಾವರಲಿಂಗ", ಇಷ್ಟಲಿಂಗ, “ಪರಶಿವ ಮುಂತಾದ ಅರ್ಥಗಳಿವೆ. ಆದರೆ ವಚನ ಸಾಹಿತ್ಯಕ್ಕೆ ಸಂಬಧಿಸಿದಂತೆ ಕೊನೆಯ ಎರಡು ಅರ್ಥಗಳು ಪ್ರಸ್ತುತ.

ಪರಶಿವನೇ ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯಕ್ಕೆ ಕಾರಣವಾಗಿರುವುದರಿಂದ, ಅವನನ್ನು ಲಿಂಗ (ಕಾರಣ) ಎಂದು ಕರೆಯಲಾಗುತ್ತದೆ. ಆದರೆ ಲಿಂಗ ಎಂಬ ಜಡವಸ್ತುವು ಪರಶಿವನ ಗುರುತು ಅಥವಾ ಸಂಕೇತವಷ್ಟೇ ಹೊರತು, ಅದೇ ಪರಶಿವನಲ್ಲ. ಲಿಂಗಕ್ಕೆ ಒಂದು ಆಕಾರ ಮತ್ತು ಗಾತ್ರವಿರುವಂತೆ, ಪರಶಿವನಿಗೆ ಯಾವ ವಿಶಿಷ್ಟ ಆಕಾರವಾಗಲಿ ಯಾವ ವಿಶಿಷ್ಟ ಗಾತ್ರವಾಗಲಿ ಇಲ್ಲ.

ಲಿಂಗವು ಸ್ಥಾವರಲಿಂಗ ಮತ್ತು ಇಷ್ಟಲಿಂಗ ಎಂದು ಎರಡು ಪ್ರಕಾರವಾಗಿದೆ. ಸ್ಥಾವರಲಿಂಗವೆಂದರೆ ಒಂದೇ ಕಡೆ ಇರುವ ಪ್ರತಿಷ್ಠೆಯಾಗಿರುವ ಲಿಂಗ ಎಂದರ್ಥ. ದೇವಸ್ಥಾನದಲ್ಲಿ ಪ್ರತಿಷ್ಠೆಯಾಗಿರುವ ಲಿಂಗಗಳೆಲ್ಲ ಸ್ಥಾವರ ಲಿಂಗಗಳೇ.

ಬಹಳ ಹಿಂದಿನ ಕಾಲದಲ್ಲಿ ಜನರು ಪ್ರಯಾಣ ಮಾಡುವಾಗ ಸ್ಥಾವರ ಲಿಂಗದ ಆಕಾರದ, ಆದರೆ ಸಣ್ಣ ಗಾತ್ರದ, ಲಿಂಗವನ್ನು ತಮ್ಮ ಜೊತೆಯಲ್ಲಿ ಒಯ್ಯುತ್ತಿದ್ದರು. ತಾವು ಬೀಡು ಬಿಟ್ಟ ಕಡೆ ಅದನ್ನು ಸ್ಥಾವರಲಿಂಗದಂತೆ ಪೂಜಿಸುತ್ತಿದ್ದರು. ಪ್ರಾಯಶಃ ಅಂಥ ಸಣ್ಣ ಗಾತ್ರದ ಲಿಂಗವನ್ನು ಅಂಗದ ಮೇಲೆ ಧರಿಸುವ ಪದ್ಧತಿ ಆಮೇಲೆ ಪ್ರಾರಂಭವಾಗಿರಬಹುದು. ಇಷ್ಟಲಿಂಗಧಾರಣೆಯು ಆ ಪದ್ಧತಿಯ ಪಳೆಯುಳಿಕೆಯಿರಬಹುದು.

ವಚನಕಾರರು ಯಾವುದನ್ನು ಇಷ್ಟಲಿಂಗವೆಂದು ಕರೆಯುತ್ತಾರೋ, ಅದರೊಳಗೆ ಸಣ್ಣ ಗಾತ್ರದ ಲಿಂಗವಿದ್ದರೂ, ಸ್ಥಾವರಲಿಂಗ ಪರಿಕಲ್ಪನೆಗೂ ಇಷ್ಟಲಿಂಗ ಪರಿಕಲ್ಪನೆಗೂ ಎರಡು ಸ್ಪಷ್ಟ ವ್ಯತ್ಯಾಸಗಳಿವೆ. ಅ). ಸ್ಥಾವರಲಿಂಗ ಗುಡಿಯಲ್ಲಿ ಮಾತ್ರ ಪ್ರತಿಷ್ಠಿತವಾಗಿದ್ದು ಎಲ್ಲರಿಗೂ ಎಲ್ಲ ವೇಳೆಯಲ್ಲಿಯೂ ಅದರ ದರ್ಶನ ಮತ್ತು ಪೂಜೆ ಲಭ್ಯವಿಲ್ಲ. ಲಿಂಗಪೂಜೆ ಅಥವಾ ದರ್ಶನ ಮಾಡಬೇಕೆನ್ನುವವರು ಅದು ಪ್ರತಿಷ್ಠಿತವಾಗಿರುವ ಗುಡಿಗೆ ಹೋಗಬೇಕೇ ಹೊರತು, ಬೇರೆ ಕಡೆಗೆ ಹೋಗುವಂತಿಲ್ಲ. ಆದರೆ ಇಷ್ಟಲಿಂಗಧಾರಕನು ಅದನ್ನು ತನ್ನಿಷ್ಟ ಬಂದಲ್ಲಿಗೆ ಒಯ್ದು ಅಲ್ಲಿ ಅದನ್ನು ಪೂಜಿಸಬಹುದು. ಅದರ ಪೂಜೆಗೆ ಕಾಲ ಮಿತಿಯೂ ಇಲ್ಲ. ಆ). ಸಾಮಾನ್ಯವಾಗಿ ಸ್ಥಾವರಲಿಂಗವನ್ನು ಪೂಜೆ ಮಾಡಲು ಒಬ್ಬ ವ್ಯಕ್ತಿಯನ್ನು ನೇಮಿಸಲಾಗುತ್ತದೆ. ಅವನು ಶುಚಿರ್ಭೂತನಾಗಿ, ಒಂದು ನಿಯಮಿತ ವೇಳೆಯಲ್ಲಿ ದೇವಸ್ಥಾನಕ್ಕೆ ಬಂದು ಲಿಂಗವನ್ನು ಪೂಜೆ ಮಾಡುತ್ತಾನೆ. ಕೆಲವು ವಿಶಿಷ್ಟ ಜಾತಿಯ ಜನರಷ್ಟೇ ಪೂಜಿಸಬೇಕು, ಇತರ ಜಾತಿಯ ಜನರು ಪೂಜಿಸಬಾರದು. ಗರ್ಭಗುಡಿಯ ಒಳಗೆ ಸಹಾ ಅವರು ಬರಬಾರದು, ಎಂಬ ನಿಮಯವನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತದೆ. ಉಳಿದವರು ಅವನ ಪೂಜೆಯನ್ನು ನೋಡಬಹುದೇ ಹೊರತು ತಾವೇ ಪೂಜೆ ಮಾಡುವಂತಿಲ್ಲ, ಅವನು ಕೊಟ್ಟ ತೀರ್ಥ ಪ್ರಸಾದ ಮಂಗಳಾರತಿಗಳನ್ನು ಇತರರು ಸ್ವೀಕರಿಸಬಹುದೇ ಹೊರತು, ತಾವೇ ಪೂಜೆಮಾಡುವಂತಿಲ್ಲ: ವಚನಕಾರರ ಪ್ರಕಾರ, ಭಕ್ತ ತಾನೇ ಪೂಜಿಸಬಹುದು; ಅದಕ್ಕೆ ತಾನೇ ಅರ್ಪಿಸಬಹುದು. ಇದಕ್ಕೆ ಲಿಂಗಭೇದವಿಲ್ಲ, ಜಾತಿ ಭೇದವೂ ಇಲ್ಲ. ಇಷ್ಟಲಿಂಗ ಪೂಜೆ ಮಾಡಲು ಗಂಡಸರಿಗರುವಷ್ಟೇ ಅಧಿಕಾರ ಹೆಂಗಸರಿಗೂ ಇದೆ.

ಇಷ್ಟಲಿಂಗವನ್ನು ಪಡೆಯಲು ಒಂದು ಅರ್ಹತೆ ಬೇಕು. ಅದೆಂದರೆ, ಭವಿತನದ ಜೀವನದಲ್ಲಿ ಅತೃಪ್ತಿ ಮತ್ತು ಶಿವಸಾಯುಜ್ಯವನ್ನು ಪಡೆಯಬೇಕೆಂಬ ಮಹತ್ವಾಕಾಂಕ್ಷೆ ಇವೆರಡೂ ಗುಣಗಳಿರುವುದೇ ಆ ಅರ್ಹತೆ. ಹೀಗೆ ಇಷ್ಟಲಿಂಗ ಪಡೆಯಲು ಬರುವವರು ಲಿಂಗಾಯತರಾಗಿರಬೇಕೆಂಬ ನಿಯಮವಿಲ್ಲ. ಆದರೆ ಇಷ್ಟಲಿಂಗ ಪಡೆದ ಮೇಲೆ ಅವರು ಲಿಂಗಾಯತ ಧರ್ಮದ ಆಚಾರಗಳನ್ನು ತಪ್ಪದೆ ಪಾಲಿಸಬೇಕು.

ಇಷ್ಟಲಿಂಗವನ್ನು ಭಕ್ತನು ಎಲ್ಲಿಂದಲೋ ತರುವುದಾಗಲಿ ಯಾರಿಂದಲೋ ಪಡೆಯವುದಾಗಲಿ ಕೂಡದು. ಅದನ್ನು ಶೈವ ಗುರುವಿನಿಂದಲೂ ಪಡೆಯಕೂಡದು. ಅದನ್ನು ಲಿಂಗಾಯತ ಗುರುವಿನಿಂದ ಮಾತ್ರ ಪಡೆಯಬೇಕು. ಗುರುವೆನ್ನಿಸಿಕೊಳ್ಳುವವನೂ ಸಹ ಲಿಂಗಾಂಗ ಸಾಮರಸ್ಯ ಪಡೆದ ವ್ಯಕ್ತಿಯೇ ಆಗಿರಬೇಕೇ ಹೊರತು, ಕೇವಲ ದೀಕ್ಷಾ ವಿಧಿಗಳನ್ನು ತಿಳಿದಿದ್ದರೆ ಸಾಲದು.

ಪ್ರತಿಯೊಬ್ಬ ಮನುಷ್ಯನಲ್ಲಿಯೂ ಚೈತನ್ಯವಿದ್ದು, ಅದು ಹಣೆ ಮತ್ತು ನೆತ್ತಿಯಲ್ಲಿ ಹೆಚ್ಚು ಪ್ರಮಾಣದಲ್ಲಿರುತ್ತದೆ ಎಂಬುದು ವನಚಕಾರ ಮತ್ತು ಶಾಕ್ತರ ನಂಬಿಕೆ. ಆಧಾರ ಚಕ್ರ ಮುಂತಾದ ಸ್ಥಾನಗಳಲ್ಲಿ ಲಿಂಗ (ಪರಶಿವ) ಇದ್ದರೂ, ಧ್ಯಾನದ ಮೂಲಕ ಆಜ್ಞಾಚಕ್ರದಲ್ಲಿರುವ ಭೂಮದ್ಯದಲ್ಲಿರುವ ಮಹಾಲಿಂಗನನ್ನೂ, ಸಹಸ್ರಾರಚಕ್ರದಲ್ಲಿರುವ (ನೆತ್ತಿಯಲ್ಲಿರುವ) ಶೂನ್ಯಲಿಂಗವನ್ನೂ ಸಾಕ್ಷಾತ್ಕರಿಸಿಕೊಳ್ಳುವುದು ಜೀವನದ ಪರಮೋದ್ದೇಶ, ಗುರುವಾದವನು ಸಾಧಕನ ನೆತ್ತಿಯನ್ನು ಮುಟ್ಟಿ, ಅಲ್ಲಿರುವ ಚೈತನ್ಯವನ್ನು ತಂದು ಇಷ್ಟಲಿಂಗದಲ್ಲಿ ಪ್ರತಿಷ್ಠಾಪಿಸಿದಾಗ ಆ ಇಷ್ಟಲಿಂಗವು ಪೂಜೆಗೆ ಯೋಗ್ಯವಾಗುತ್ತದೆ. ಅಲ್ಲದೆ ಗುರುವು ಶಿಷ್ಯನಿಗೆ ಮಂತ್ರವನ್ನುಪದೇಶಿಸಿ, ಇಷ್ಟಲಿಂಗ ಪೂಜೆಯ ವಿಧಾನವನ್ನು ಕಲಿಸಿಕೊಡುತ್ತಾನೆ. ಇಲ್ಲಿಂದ ಮುಂದೆ, ಸಾಧಕನಿಗೆ ಇಷ್ಟಲಿಂಗವು ಒಂದು ಜಡವಸ್ತುವಲ್ಲ, ಚಿತ್‌ಸ್ವರೂಪನಾದ ಪರಶಿವನ ಸಂಕೇತ ಮತ್ತು ಆವಾಸಸ್ಥಾನ. ಅದು ಜೊತೆಯಲ್ಲಿದೆ ಎಂದರೆ, ಅವನ ಪ್ರಕಾರ, ಪರಶಿವ ಜೊತೆಯಲ್ಲಿದ್ದಾನೆ ಎಂದರ್ಥ. ಇದು ಅವನಿಗೆ ಧಾರ್ಮಿಕವಾಗಿ ಮತ್ತು ನೈತಿಕವಾಗಿ ಜಾಗರೂಕತೆಯಿಂದಿರಲು ಸಹಾಯಕವಾಗುತ್ತದೆಯಷ್ಟೇ ಅಲ್ಲ, ಪರಶಿವನೆಂದರೆ ದೂರ ಎಲ್ಲೋ ಇರುವ ದೈವವಲ್ಲ, ನಮ್ಮಲ್ಲೇ ಇರುವ ಮತ್ತು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾದಂಥವನು ಎಂಬ ಆತ್ಮವಿಶ್ವಾಸವನ್ನೂ ಅದು ಮೂಡಿಸುತ್ತದೆ.

ಇಷ್ಟಲಿಂಗವು ಕೇವಲ ಪೂಜಿಸಲ್ಪಡುವ ವಸ್ತುವಷ್ಟೇ ಅಲ್ಲ. ಸಾಧಕನ ವಿಚಾರಶಕ್ತಿ ವಿಕಾಸವಾದಂತೆಲ್ಲಾ ಅವನು ಇಷ್ಟಲಿಂಗವನ್ನು ಒಂದು ಧ್ಯಾನವಸ್ತುವನ್ನಾಗಿ ಮಾಡಿಕೊಳ್ಳುತ್ತಾನೆ. ದೃಷ್ಟಲಿಂಗ (ಇಷ್ಟಲಿಂಗದಲ್ಲಿ) ಪರಶಿವನನ್ನು ಕಾಣುವುದೇ ನಿಜವಾದ ಇಷ್ಟಲಿಂಗ ಪೂಜೆ, ಎನ್ನುತ್ತಾರೆ ಶರಣರು. ಪೂಜಾವಿಧಿಗಳು ಮುಗಿದ ನಂತರ ಸಾಧಕನು ಇಷ್ಟಲಿಂಗವನ್ನೆ ದಿಟ್ಟಿಸಿ ನೋಡುತ್ತಾ ಧ್ಯಾನಮಗ್ನನಾಗಿ ಬಾಹ್ಯಪ್ರಪಂಚವನ್ನೂ ಮರೆತು, ತಾನು ಪರಶಿನಲ್ಲಿ ಒಂದಾಗುವುದನ್ನು ಅನುಭವಿಸಿ, ಕೊನೆಯಲ್ಲಿ ತನ್ನನ್ನೂ ಮರೆಯಬೇಕು ಎಂಬುದು ಈ ಮಾತಿನ ತಾತ್ಪರ್ಯ. ಈ ಸಿದ್ಧಿ ಸ್ಥಾವರಲಿಂಗ ಪೂಜೆಯಿಂದ ಸಾಧ್ಯವಾಗುವುದಿಲ್ಲ.

ಇಷ್ಟಲಿಂಗವನ್ನು ಅನೇಕರು ತಮ್ಮ ಪ್ರಾಣಕ್ಕೆ ಸಮಾನವೆಂದು ತಿಳಿಯುತ್ತಾರೆ, ಕೆಲವು ವಚನಕಾರರು, ಇಷ್ಟಲಿಂಗವನ್ನು ಒಂದು ಕ್ಷಣವೂ ಅಗಲಬಾರದು ಎಂದೂ, ಅದನ್ನು ಆಕಸ್ಮಿಕವಾಗಿ ಕಳೆದುಕೊಂಡರೆ ಪ್ರಾಣತ್ಯಾಗ ಮಾಡಬೇಕೆಂದೂ, ಹೇಳಿದರೆ, ಮತ್ತೆ ಕೆಲವು ವಚನಕಾರರು ಆಕಸ್ಮಿಕವಾಗಿ ಕಳೆದುಕೊಂಡ ಲಿಂಗದ ಬದಲು ಲಿಂಗಾಯತ ಗುರುವಿನಿಂದ ಮತ್ತೊಂದನ್ನು ಪಡೆಯಬಹುದೆಂದೂ ಹೇಳುತ್ತಾರೆ. ಆದರೆ ಎಲ್ಲ ವಚನಕಾರರು ಒಕ್ಕೊರಲಿನಿಂದ ಇಷ್ಟಲಿಂಗ ಧರಿಸಿದ ಮೇಲೆ, ಅದಕ್ಕೆ ನಿಷ್ಠೆಯನ್ನೂ ಭಕ್ತಿಯನ್ನೂ ತೋರಿಸಬೇಕೇ ಹೊರತು, ಬೇರೆ ದೈವವನ್ನು ಪೂಜಿಸಬಾರದು ಎಂದು ಹೇಳುತ್ತಾರೆ. ಪ್ರಾಯಶಃ ಇದರ ಮೂಲ ಅರ್ಥ, ಲಿಂಗಧಾರಕನಾದ ಮೇಲೆ ಮನಸ್ಸು ಇತರ ವಿಷಯಗಳ ಕಡೆ ಹರಿಯಬಾರದು ಎಂದಿರಬಹುದು. ಹೀಗೆ ಹೇಳಲು ಕಾರಣವೇನೆಂದರೆ, ಲಿಂಗಭಕ್ತಿ ಮತ್ತು ವಿಷಯಪ್ರೇಮ ಎರಡೂ ಒಟ್ಟಿಗೆ ಇರಲು ಸಾಧ್ಯವಿಲ್ಲವಾದುದರಿಂದ, ಲಿಂಗದೀಕ್ಷೆ ತೆಗೆದುಕೊಂಡವರು ಲಿಂಗಕ್ಕೆ ಬದ್ಧರಾಗಿರಬೇಕಾದುದು ಆವಶ್ಯಕ. ಅನ್ಯದೈವವನ್ನು ಪೂಜಿಸುವುದು ಲಿಂಗದಲ್ಲಿ ನಂಬಿಕೆಯಿಲ್ಲ ಎಂಬುದನ್ನು ಸೂಚಿಸುವುದರಿಂದಲೂ, ಅನ್ಯದೈವ ಪೂಜೆಯನ್ನು ವಚನಕಾರರು ಖಂಡಿಸಿರಬಹುದು.

ಪ್ರಾಯಶಃ ಇಷ್ಟಲಿಂಗವನ್ನು ಲಿಂಗಾಯತೇತರಿಗೆ ಕೊಡುವ ಸಂಪ್ರದಾಯವನ್ನು ಪ್ರಾರಂಭಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಈ ಮೂಲಕ ಧರ್ಮ ಕೇವಲ ಕೆಲವರ ಸ್ವತ್ತಲ್ಲ, ಅದು ಎಲ್ಲರ ಹಕ್ಕು ಎಂಬ ಮಾತನ್ನು ಬಸವಣ್ಣ ಸಾರಿದಂತಾಯಿತು. ಅದೂ ಅಲ್ಲದೆ

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ರೂಪು ನಿರೂಪು ಲಿಂಗತ್ರಯ Next