ಷಟ್‌ಸ್ಥಲ ಬ್ರಹ್ಮ | ಷಡ್ಭಾವ ವಿಕಾರಗಳು |
ಷಡಂಗ |
ವಚನಕಾರರು ಈ ಪದವನ್ನು ಎರಡು ವಿವಿಧ ಅರ್ಥಗಳಲ್ಲಿ ಉಪಯೋಗಿಸಿದ್ದಾರೆ.
೧. ನಿಷ್ಕಲ ಲಿಂಗದಲ್ಲಿ ಮೊದಲು ಅಂಗಸ್ಥಲ ಮತ್ತು ಲಿಂಗಸ್ಥಲ ಎಂಬ ಎರಡು ಭಾಗಗಳುಂಟಾಗಿ, ಅಂಗಸ್ಥಲದಲ್ಲಿ ಅಂಗಗಳಿರುತ್ತವೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಆರು ಲಿಂಗಗಳಿದ್ದು ಅಂಗನು ಆ ಆರು ಲಿಂಗಗಳನ್ನು ಒಂದಾದ ಮೇಲೊಂದರಂತೆ ಸಾಕ್ಷಾತ್ಕರಿಸಿಕೊಳ್ಳಬೇಕು. ಅಂದರೆ, ಅಂಗನ ಆಧ್ಯಾತ್ಮಿಕ ಜೀವನದಲ್ಲಿ ಆರು ಸ್ಥಲಗಳಿವೆ ಎಂದರ್ಥ. ಅಥವಾ ಪ್ರತಿಯೊಬ್ಬ ಸಾಧಕನೂ ಆರು ರೀತಿಯ ಅಂಗನಾಗುತ್ತಾನೆ. (ಷಡಂಗನಾಗುತ್ತಾನೆ. ಈ ಆರು ಅಂಗಸ್ಥಲಗಳೆಂದರೆ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ. ಷಡಂಗನು (ಆರು ಸ್ಥಲಗಳ ಸಾಧಕನು) ಯಾವಾಗಲೂ ಪರಶಿವನ ಅಂಗವೇ (ಭಾಗವೇ). ಆದರೆ ಭಕ್ತಸ್ಥಲದಲ್ಲಿ ಅದಿನ್ನೂ ಅವನಿಗೆ ಅರಿವಾಗುವುದಿಲ್ಲ. ಐಕ್ಯದಲ್ಲಿ ಈ ಸತ್ಯದ ನೇರ ಅರಿವು ಉಂಟಾಗುತ್ತದೆ.
೨. ಮತ್ತೊಂದು ಅರ್ಥದ ಪ್ರಕಾರ, ಮನುಷ್ಯನಿಗೆ ಆರು ಷಡಂಗಗಳಿವೆ. ಅವೆಂದರೆ: ೧. ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಆತ್ಮ ಎಂಬ ಆರು ಭೂತಾಂಗ, ೨. ರೂಪ, ರಸ, ಗಂಧ, ಸ್ಪರ್ಶ, ಶಬ್ದ, ಕರ್ತ ಎಂಬ ಆರು ಯೋಗಾಂಗ, ೩. ಚಿತ್ತ, ಬುದ್ಧಿ, ಮನಸ್ಸು, ಅಹಂ, ಜ್ಞಾನ, ಭಾವ ಎಂಬ ಆರು ಕಾಮಾಂಗ, ೪. ಘ್ರಾಣ, ಜಿಹ್ವೆ, ತ್ವಕ್ಕು, ನೇತ್ರ, ಶ್ರೋತ್ರ, ಚೇತನ ಎಂಬ ಆರು ದಿವ್ಯಾಂಗ, ೫. ಪಾಯು, ಪಾಣಿ, ವಾಕ್ಕು, ಗುಹ್ಯ, ಪಾದ, ಅಂತರ, ಎಂಬ ಆರು ಕರ್ಮಾಂಗಗಳು, ೬. ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಶಿವ, ಸದಾಶಿವ ಎಂಬ ಆರು ಶಿವಾಂಗ (೧೩:೧೯೨೭, ೧೯೩೨)
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಷಟ್‌ಸ್ಥಲ ಬ್ರಹ್ಮ | ಷಡ್ಭಾವ ವಿಕಾರಗಳು |