Previous ಏಕಾದಶ ಪ್ರಸಾದ ಜಂಗಮಲಿಂಗ Next

ಗಣಾಚಾರ

ಗಣಾಚಾರ

೧. ಶರಣರು ಅನುಸರಿಸಬೇಕಾದ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರ ಎಂಬ ಐದು ಬಗೆಯ ಆಚಾರಗಳಲ್ಲಿ ನಾಲ್ಕನೆಯ ಆಚಾರ; ದೇವನಿಂದೆ ಹಾಗೂ ಶಿವಾಚಾರದ ದೂಷಣೆಯನ್ನು ಕೇಳಿ ಸಹಿಸದಿರುವ ನಿಯಮ, ಆಚರಣೆ ;
ಲಿಂಗಾರ್ಪಿತವಲ್ಲದೆ ಉದಕವ ಮುಕ್ಕುಳಿಸಿದಡೆ ಸಲ್ಲೆನು ನಿಮ್ಮ ಗಣಾಚಾರಕ್ಕಯ್ಯಾ (ಬಸವ. ಸಮವ. ೧-೨೦೦-೭೮೬);

ಅಷ್ಟಾವರಣಂಗಳ ಮೇಲೆ ಅನ್ಯರಿಂದ ಕುಂದುನಿಂದೆಗಳು ಬಂದು ತಟ್ಟಿದಲ್ಲಿ ಗಣಸಮೂಹವನೊಡಗೂಡಿ ಆ ಸ್ಥಲವ ತ್ಯಜಿಸುವುದೆ ಗಣಾಚಾರವೆಂಬೆನಯ್ಯಾ (ಚೆನ್ನಬ. ಸಮವ. ೩-೩೦೨-೯೪೫) ; ಅವಧರಿಸು ಎನ್ನ ಬಿನ್ನಹವ ಗಣಾಚಾರಕ್ಕೆ ಬುದ್ದಿಗಲಿಸುವುದೆನ್ನ ತಂದೆ (ಸಿದ್ಧರಾ, ಸಮವ. ೪-೯-೨೭); ;ಲಿಂಗಾಯತರಿಗೆ ಕುಂದುನಿಂದೆಗಳು ಬಂದರೆ ಅವುಗಳನ್ನು ಪರಿಹರಿಸದೆ ತಕ್ಕ ಪ್ರತೀಕಾರ ಮಾಡುವುದೇ ಗಣಾಚಾರವು.

೨. ಆಚಾರಲಿಂಗದಲ್ಲಿಯ ಸದಾಚಾರ, ನಿಯತಾಚಾರ ಮತ್ತು ಗಣಾಚಾರ ಎಂಬ ಮೂರು ಬಗೆಗಳಲ್ಲಿ ಒಂದು: ತ್ರಿವಿಧ ಆಚಾರಲಿಂಗ -ಇವು ಸದಾಚಾರ, ನಿಯತಾಚಾರ, ಗಣಾಚಾರ ಎಂದಿವೆ.... ಕೈಕೊಂಡ ಕಾರ್ಯದಲ್ಲಿ ಎಷ್ಟು ಬಿಕ್ಕಟ್ಟುಗಳು ಬಂದರೂ ಕೂಡ ಅವುಗಳನ್ನು ಎದುರಿಸಿ ಧೈರ್ಯದಿಂದ ಕಾರ್ಯಮಾಡುವುದು ಗಣಾಚಾರವು.

ಗಣಂಗಳ ಹಿತರಕ್ಷಣೆಗಾಗಿ ಆಚರಿಸುವ ಆಚಾರವೇ ಗಣಾಚಾರ, ಯಾರೂ ಶಿವಗಣಂಗಳನ್ನು (ಭಕ್ತರನ್ನು) ಅಥವಾ ಅವರ ಆಚಾರಗಳನ್ನು ನಿಂದಿಸಬಾರದು. ಶಿವನಿಂದೆ, ಶಿವಭಕ್ತನಿಂದೆ, ಶಿವಾಚಾರನಿಂದೆಯನ್ನು ಕೇಳಿಸಿಕೊಳ್ಳಬಾರದೆಂಬ ಉದ್ದೇಶದಿಂದ ಘಂಟಾಕರ್ಣನೆಂಬುವನು ತನ್ನ ಕಿವಿಗಳಿಗೆ ಸಣ್ಣ ಗಂಟೆಗಳನ್ನು ಕಟ್ಟಿಕೊಂಡಿದ್ದನಂತೆ. ಅಂಥ ನಿಂದೆ ಕೇಳಿಸಿಕೊಳ್ಳುವ ಮೊದಲೇ ತಲೆಯಲ್ಲಾಡಿಸಿ, ಘಂಟಾಶಬ್ದ ಮಾಡುತ್ತಿದ್ದನಂತೆ. ಇದೂ ಸಾಧ್ಯವಾಗದಿದ್ದಾಗ ಆ ಸ್ಥಳವನ್ನೇ ತೊರೆಯಬೇಕು. ದೇವನಿಂದೆಯನ್ನು ಮಾಡಿದವನನ್ನು ಕೊಲ್ಲುವುದು ಅಥವಾ ಅವನ ಕಣ್ಣು ಕೀಳುವುದು ಗಣಾಚಾರದ ಮತ್ತೊಂದು ಕೊನೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಏಕಾದಶ ಪ್ರಸಾದ ಜಂಗಮಲಿಂಗ Next