Previous ಅಂಗಸ್ಥಲ-ಲಿಂಗಸ್ಥಲ ಸಂಬಂಧ ಅನಿರ್ವಾಚ್ಯ ಅನುಭಾವ Next

ಅಧಿದೇವತೆಗಳು ಮತ್ತು ಶಕ್ತಿಗಳು

ಅಧಿದೇವತೆಗಳು ಮತ್ತು ಶಕ್ತಿಗಳು

ವಚನಕಾರರ ಪ್ರಕಾರ, ಪ್ರಪಂಚದ ಸೃಷ್ಟಿಗೆ ಎರಡು ರೀತಿಯ ಕಾರಣಗಳಿವೆ. ಶಕ್ತಿಯು ಉಪದಾನ ಕಾರಣ, ಶಿವನು ನಿಮಿತ್ತ ಕಾರಣ. ಆದರೆ ಶಿವ-ಶಕ್ತಿ ಎಂಬ ಕಾರಣಗಳು ಮಣ್ಣು-ಕುಂಬಾರರಂತೆ ಭಿನ್ನ ವಸ್ತುಗಳಲ್ಲ. ಶಕ್ತಿಯು ಯಾವಾಗಲೂ ಶಿವನಲ್ಲೇ ಇದ್ದು, ಕೆಲವು ವೇಳೆ ಅವ್ಯಕ್ತವಾಗಿಯೂ ಮತ್ತೆ ಕೆಲವು ವೇಳೆ ವ್ಯಕ್ತವೂ ಆಗಿರುತ್ತದೆ. ಶಕ್ತಿಯು ಅವ್ಯಕ್ತವಾಗಿ ಶಿವನಲ್ಲಿ ಒಂದಾಗಿದ್ದರೆ, ಆ ಸ್ಥಿತಿಗೆ ಪ್ರಳಯವೆಂತಲೂ, ಅದೇ ಶಕ್ತಿ ವ್ಯಕ್ತವಾಗಿ ವಿಕಾಸವಾದರೆ ಸೃಷ್ಟಿಯಂತಲೂ ಹೆಸರು. ಶಕ್ತಿ ಅನೇಕ ಹಂತಗಳಲ್ಲಿ ವಿಕಾಸವಾಗಿದ್ದು, ಪ್ರತಿಯೊಂದು ಹಂತದಲ್ಲಿಯೂ ಅದಕ್ಕೆ ಶಿವನ ಮಾರ್ಗದರ್ಶನವಿರುತ್ತದೆ. ಶಕ್ತಿ ವಿಕಾಸದ ವಿವಿಧ ಹಂತಗಳಿಗೆ ಬೇರೆ ಬೇರೆ ಹೆಸರುಗಳಿರುವಂತೆ, ಅವುಗಳ ವಿಕಾಸವನ್ನು ನಿಯಂತ್ರಿಸಿ, ಅವಕ್ಕೆ ಮಾರ್ಗದರ್ಶನ ನೀಡುವ ಶಿವನಿಗೂ ಆಯಾ ಹಂತಗಳಿಗೆ ತಕ್ಕಂತೆ ಬೇರೆ ಬೇರೆ ಹೆಸರುಗಳಿವೆ. ಶಿವನ ಈ ವಿವಿಧ ಅವಸ್ಥೆಗಳಿಗೆ ಅಧಿದೇವತೆಗಳೆಂದು ಹೆಸರು. ಅಂದರೆ ಅಧಿದೇವತೆಗಳು ಶಿವಾಂಶಿಕರಾದ ದೇವತೆಗಳೇ ಹೊರತು, ಅನ್ಯರಲ್ಲ. ಹೀಗೆ ಕ್ರಿಯಾಶಕ್ತಿಯ ಮತ್ತೊಂದು ರೂಪಾದ ಪೃಥ್ವಿತತ್ವವನ್ನು ನಿಯಂತ್ರಿಸುವ ಅಧಿದೇವತೆ ಬ್ರಹ್ಮ ಜ್ಞಾನ ಶಕ್ತಿಯ ಮತ್ತೊದು ರೂಪಾದ ಅಗ್ನಿತತ್ವವನ್ನು ನಿಯಂತ್ರಿಸುವವನು ವಿಷ್ಣು ಇಚ್ಛಾಶಕ್ತಿ, ಆದಿಶಕ್ತಿ ಮತ್ತು ಪರಾಶಕ್ತಿಯ ಬೇರೆ ರೂಪಗಳಾದ ಅಗ್ನಿ, ವಾಯು ಮತ್ತು ಆಕಾಶತತ್ವಗಳನ್ನು ನಿಯಂತ್ರಿಸುವವರು ರುದ್ರ, ಈಶ್ವರ, ಮತ್ತು ಸದಾಶಿವ. ಪರಶಿವನು ತನ್ನ ವಿವಿಧ ಶಕ್ತಿಗಳನ್ನು ತಮಗೆ ಬೇಕಾದ ರೀತಿಯಲ್ಲಿ ವಿಕಾಸವಾಗಲು ಬಿಡದೆ, ಅಥವಾ ತಾನೇ ಅವುಗಳಿಂದ ಬಂಧಿತನಾಗದೆ, ಅವುಗಳನ್ನು ಸಕಾಲದಲ್ಲಿ ನಿಯಂತ್ರಿಸಿ, ಅವಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ವಿಕಸಿತವಾಗುವಂತೆ ಮಾಡುತ್ತಾನೆ. ಪ್ರಪಂಚದ ಪ್ರತಿ ಆಗು ಹೋಗುಗಳಲ್ಲಿಯೂ ಅವನಿಗೆ ಆಸಕ್ತಿ ಇದೆ ಎಂಬುದು ಇದರಿಂದ ವ್ಯಕ್ತವಾಗುತ್ತದೆ.

ಕ್ರಿಯಾಶಕ್ತಿಯ ಮತ್ತೊದು ರೂಪ ಪೃಥ್ವಿತತ್ವ: ಬ್ರಹ್ಮ ಅದರ ನಿಯಂತ್ರಕನಾದ ಅಧಿದೇವತೆ. ಅವನು ಪೃಥ್ವಿ ತತ್ವವೊಂದನ್ನೇ ಅಲ್ಲದೆ ಇತರ ತತ್ವಗಳನ್ನೂ ಸೇರಿಸಿಕೊಂಡು ಸೃಷ್ಟಿ ಮಾಡುತ್ತಾನೆ: ಬ್ರಹ್ಮನಿಲ್ಲದಿದ್ದರೆ, ಪಂಚಶಕ್ತಿಗಳು (ಪಂಚಭೂತಗಳು) ಇರುತ್ತವೆ. ಆದರೆ ಅವುಗಳಿಂದಾಗುವ ಸೃಷ್ಟಿಯಿರುವುದಿಲ್ಲ.

ಜಲತತ್ವವು ಸಂಘಟನಾಶಕ್ತಿಯುಳ್ಳ ಶಕ್ತಿ, ಜಲತತ್ವದಿಂದಾಗಿಯೇ ವಸ್ತುವಾದರೂ ಭಾಗವಾಗದೇ ಅಥವಾ ಪುಡಿಯಾಗದೇ ಉಳಿದಿರುವುದು, ಒಂದು ಪುಡಿಯನ್ನು ಅಥವಾ ಹುಡಿ ಮಣ್ಣನ್ನು ನೀರು ಹಾಕಿ ಕಲಸಿ ಮುದ್ದೆ ಮಾಡಬಹುದು. ಅದೇ ರೀತಿ ಇಡೀ ಪ್ರಪಂಚವನ್ನು ಚದುರಿಹೋಗದಂತೆ ಹಿಡಿದಿಟ್ಟಿರುವ ಶಕ್ತಿ ವಿಷ್ಣುವಿಗಿದೆ. ವಿಷ್ಣು ಜಲ ತತ್ವದ (ಅಥವಾ ಜ್ಞಾನಶಕ್ತಿಯ) ಅಧಿದೇವತೆ ಎಂದರೂ ಒಂದೇ, ವಿಷ್ಣುವು ಜಗದ್ರಕ್ಷಕ ಎಂದರೂ ಒಂದೇ. ಅದೇ ರೀತಿ, ಅಗ್ನಿಗೆ ನಾಶಮಾಡುವ ಶಕ್ತಿಯಿರುವಂತೆ ಅಗ್ನಿ ಅಥವಾ ಇಚ್ಛಾಶಕ್ತಿಯ ಅಧಿದೇವತೆಯಾದ ರುದ್ರನಿಗೂ ಸಂಹಾರ ಮಾಡುವ ಶಕ್ತಿಯಿದೆ.

ವಾಯುವಿಗೆ ವಸ್ತುಗಳನ್ನು ಸ್ಥಳಾಂತರಿಸುವ ಶಕ್ತಿಯಿದೆ. ಅದೇ ರೀತಿ ಅದರ (ಅಥವಾ ಆದಿಶಕ್ತಿಯ) ಅಧಿ ದೇವತೆಯಾದ ಈಶ್ವರನಿಗೆ, ಮನುಷ್ಯನ ಮರಣದ ನಂತರ ಜೀವಾತ್ಮನನ್ನೂ ಅವನ ಜೊತೆಯಲ್ಲಿರುವ ಸೂಕ್ಷ್ಮ ಮತ್ತು ಕಾರಣ ಶರೀರವನ್ನೂ, ಅದರ ಕರ್ಮಕ್ಕನುಗುಣವಾಗಿ ಮತ್ತೊಂದು ಜನ್ಮಕ್ಕೆ (ಗರ್ಭಕ್ಕೆ) ಸ್ಥಳಾಂತರಿಸುವ ಶಕ್ತಿಯಿದೆ. ಆಕಾಶತತ್ವವು ವಸ್ತುಗಳು ಸ್ವತಂತ್ರವಾಗಿ (ಯಾವುದೇ ತಡೆಯಿಲ್ಲದೆ) ಚಲಿಸಲು ಅವಕಾಶಮಾಡಿಕೊಡುತ್ತದೆ. ಅದೇ ರೀತಿ, ಆಕಾಶತತ್ವದ ಅಥವಾ ಪರಾಶಕ್ತಿಯ ಅಧಿದೇವತೆಯಾದ ಸದಾಶಿವನೂ ಸಹ, ಜೀವಾತ್ಮರು ಆಧ್ಯಾತ್ಮಿಕ ಸಾಧನೆಯ ಮೂಲಕ ಲಿಂಗೈಕ್ಯತೆ ಪಡೆದರೆ, ಅವರಿಗೆ ಸ್ವಾತಂತ್ರ್ಯವನ್ನು ಅನುಗ್ರಹಿಸುತ್ತಾನೆ. ಲಿಂಗೈಕ್ಯರಿಗೆ ಕಾಲದೇಶಗಳ ತಡೆಯಿಲ್ಲದಿರುವುದೇ ಅವರು ಚಿದಾಕಾಶದಲ್ಲಿರುವುದಕ್ಕೆ ಕುರುಹು. ಆದಿಶಕ್ತಿ ಮತ್ತು ಪರಾಶಕ್ತಿಗಳಿಗೆ ಕ್ರಮವಾಗಿ ತಿರೋಧಾನಶಕ್ತಿ ಮತ್ತು ಅನುಗ್ರಹಶಕ್ತಿ ಎಂಬ ಹೆಸರುಗಳೂ ಇವೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಅಂಗಸ್ಥಲ-ಲಿಂಗಸ್ಥಲ ಸಂಬಂಧ ಅನಿರ್ವಾಚ್ಯ ಅನುಭಾವ Next