Previous ಲಿಂಗತ್ರಯ ವಿಮರ್ಶಾ ಶಕ್ತಿ Next

ಲಿಂಗಾಂಗ ಸಾಮರಸ್ಯ

ಲಿಂಗಾಂಗ ಸಾಮರಸ್ಯ

ಇಲ್ಲಿ ಮೊದಲು "ಲಿಂಗ", "ಅಂಗ", ಮತ್ತು "ಸಾಮರಸ್ಯ ಇವುಗಳ ಅರ್ಥವನ್ನು ತಿಳಿದು, ಇಡೀ ಪದಗುಚ್ಛದ ಅರ್ಥವನ್ನು ಆಮೇಲೆ ತಿಳಿಯೋಣ. ಲಿಂಗವೆಂದರೆ (ಪರಶಿವನೆಂದರೆ) ಅನಂತ, ಅವಿರಳ, ಅಖಂಡ ಚಿತ್, ಅಂಗ ಎಂದರೆ ಶುದ್ಧವಾದ ಆತ್ಮ, ಸಾಮರಸ್ಯ ಒಂದೇ ಭಾವ ಇರುವುದು. "ಶುದ್ಧವಾದ ಆತ್ಮಕ್ಕೆ ತಾನೇ ಪರಶಿವನೆಂಬ ಭಾವ ಇರುವುದು" ಎಂಬುದು ಲಿಂಗಾಂಗ ಸಾಮರಸ್ಯ"ದ ಅರ್ಥ. ಈಗ ಇಡೀ ಪದಗುಚ್ಛದ ಅರ್ಥವನ್ನು ವಿವರಿಸೋಣ.

ಅಂಗನು ಮೂಲತಃ ಪರಶಿವನ ಅಂಗ (ಭಾಗ); ಆ ಸ್ಥಿತಿಯಲ್ಲಿ ಅವನು ಶುದ್ದ ಮತ್ತು ಸದಾ ಆನಂದ ಸ್ಥಿತಿಯಲ್ಲಿದ್ದ. ಆದರೆ ಅವನು ಮರವು ಅಥವಾ ಅಜ್ಞಾನದಿಂದಾಗಿ ತಾನೊಬ್ಬ "ಪರಶಿವನಿಂದ ಪ್ರತ್ಯೇಕವಾದ ವ್ಯಕ್ತಿ" ಎಂದು ತಪ್ಪು ತಿಳಿದಿದ್ದಾನೆ; ದೇಹೇಂದ್ರಿಯಗಳ ಸೌಖ್ಯವೇ ಜೀವನದ ಮುಖ್ಯ ಗುರಿ, ಎಂದೂ ಭ್ರಮಿಸಿದ್ದಾನೆ; ಈ ಭ್ರಮದ್ವಯಗಳಿಂದಾಗಿ ಅನೇಕ ರೀತಿಯ ಕರ್ಮಗಳನ್ನು ಮಾಡಿ, ಅವುಗಳ ಫಲವನ್ನು ಅನುಭವಿಸಲು ಮತ್ತೆ ಮತ್ತೆ ಹುಟ್ಟಿ ಬರುತ್ತಿದ್ದಾನೆ, ಮರುಜನ್ಮದಲ್ಲಿಯೂ ಅದೇ ಭ್ರಮೆ ಇರುವುದರಿಂದ, ಮತ್ತೆ ಪುನರ್ಜನ್ಮಕ್ಕೆ ಅಗತ್ಯವಾದ ಕರ್ಮಗಳನ್ನೇ ಮಾಡುತ್ತಿದ್ದಾನೆ. ಹೀಗೆ ಭವಚಕ್ರದಲ್ಲಿ ನರಳುವುದು ಅವನಿಗೆ ಸಹಿಸದಾದಾಗ ಅದರಿಂದ ಹೊರಬರಲು ನಿರ್ಧರಿಸಿ, ಮಾರ್ಗದರ್ಶನಕ್ಕಾಗಿ ಗುರುವಿನಬಳಿ ಬಂದು, ಲಿಂಗದೀಕ್ಷೆಯ ಮೂಲಕ ಆಧ್ಯಾತ್ಮಿಕ ಜೀವನ ಆರಂಭಿಸಿ, ಕೊನೆಯಲ್ಲಿ ಲಿಂಗಾಂಗ ಸಾಮರಸ್ಯವನ್ನು ಗಳಿಸುತ್ತಾನೆ. ಈ ಗಳಿಕೆ ಮರುಗಳಿಕೆಯೇ ಹೊರತು, ಹೊಸಗಳಿಕೆಯೇನಲ್ಲ.

ಆಧ್ಯಾತ್ಮಿಕ ಸಾಧನೆಯ ಮೂಲಕ ಗಳಿಸಿಕೊಂಡ ಲಿಂಗಾಂಗ ಸಾಮರಸ್ಯವು ಮೋಕ್ಷದ ಇನ್ನೊಂದು ಹೆಸರು. ಸಂಸಾರದಲ್ಲಿರುವವನಿಗೆ ಮರೆವು, ಪ್ರತ್ಯೇಕತಾಭಾವ, ಪುನರ್ಜನ್ಮ ಮತ್ತು ಮಲತ್ರಯಗಳು ಇರುತ್ತವೆ. ಮೋಕ್ಷವೆಂದರೆ ಇವುಗಳಿಂದ ಬಿಡುಗಡೆ, ಆಧ್ಯಾತ್ಮಿಕ ಸಾಧನೆಯ ಮೂಲಕ ಜ್ಞಾನ ಪಡೆದವನಿಗೆ ಮರೆವು ಇಲ್ಲ; ಮರೆವು ಇಲ್ಲದವನಿಗೆ ತನ್ನ ನಿಜ ಸ್ವರೂಪ ತಿಳಿದಿರುವುದರಿಂದ ಅವನಿಗೆ ಯಾವ ಸ್ವಾರ್ಥವೂ ಇಲ್ಲ; ಸ್ವಾರ್ಥವಿಲ್ಲದಿರುವ ಶುದ್ಧಾತ್ಮನಿಗೆ ಪುನರ್ಜನ್ಮವಿಲ್ಲ; ಅವನು ಮೊದಲಿನಂತೆ ಶಿವನೊಂದಿಗೆ ಸಂಪೂರ್ಣವಾಗಿ ಬೆರೆತು ಒಂದಾಗುತ್ತಾನೆ.

"ಒಂದಾಗುವುದು" ಅಥವಾ "ಸಾಮರಸ್ಯ" ಎಂದರೇನು ಎಂಬುದು ಬಹಳ ಮುಖ್ಯ ಪ್ರಶ್ನೆ, "ಗಂಡಹೆಂಡರಲ್ಲಿ ಸಾಮರಸ್ಯವಿಲ್ಲ" ಎಂದಾಗ "ಅವರಿಬ್ಬರಲ್ಲಿಯೂ ಬಹಳಷ್ಟು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿವೆ" ಎಂದರ್ಥ. ಒಂದು ವೇಳೆ ಅವರಲ್ಲಿ ಸಾಮರಸ್ಯವಿದ್ದರೆ ಬಹಳಷ್ಟು ವಿಷಯಗಳಲ್ಲಿ ಸಹಮತವಿದೆ ಎಂದರ್ಥ. ಆದರೆ ಲಿಂಗಾಂಗ ಸಾಮರಸ್ಯವು ಮಾನವರಲ್ಲಿರುವ ಸಾಮರಸ್ಯದಂತಲ್ಲ. ಒಂದು ವೇಳೆ ಶುದ್ಧವಾದ ಅಂಗನು ನಾನು ಪರಶಿವನಾಗಿದ್ದೇನೆ ಎಂಬ ಅಭಿಪ್ರಾಯವನ್ನು ತಳೆದರೆ, ಆಗ ಪರಶಿವನೂ ನಾನು ಅಂಗನಾಗಿದ್ದೇನೆ ಎಂಬ ಅಭಿಪ್ರಾಯವನ್ನು ತಳೆಯಬೇಕಾಗುತ್ತದೆ. ಆದರೆ ಪರಶಿವ ಸೃಷ್ಟಿ, ಸ್ಥಿತಿಲಯಗಳನ್ನು ಮಾಡಿದಂತೆ, ಶುದ್ಧಾತ್ಮ ಮಾಡಲಾರ; ಆದುದರಿಂದ ಅಂಗನಷ್ಟೇ ತಾನು ಶಿವನಲ್ಲಿ ಒಂದಾಗಿದ್ದೇನೆ ಎಂದು ತಿಳಿಯುತ್ತಾನೆಯೇ ಹೊರತು, ಪರಶಿವ ತಾನು ಅಂಗನಲ್ಲಿ ಒಂದಾಗಿದ್ದೇನೆಂಬ ಭಾವ ತಳೆಯುವುದಿಲ್ಲ. ಸಾಮರಸ್ಯ ಭಾವ ಬೇಕಾಗಿರುವುದು ಅಂಗನಿಗೆ, ಲಿಂಗಕ್ಕಲ್ಲ.

ಅಂಗನು ಸಮರಸಭಾವವನ್ನು (ತಾನು ಪರಶಿವನಾಗಿದ್ದೇನೆಂಬ ಭಾವವನ್ನು) ತಳೆಯುತ್ತಾನೆಂಬುದರ ಅರ್ಥವೇನು?

ಅನುಭಾವದ ಮೂಲಕ ಐಕ್ಯಸ್ಥಿತಿಯನ್ನು ತಲುಪಿದ ಅಂಗನು ತಾನು ಪರಶಿವನಲ್ಲಿ ಬೆರೆತಿರುವುದರ ಅನುಭವವಾಗುತ್ತದೆ. ಐಕ್ಯಸ್ಥಿತಿಯೆಂದರೆ ಒಂದು ನಿರಂತರ ಸ್ಥಿತಿಯೇ ಹೊರತು, ಕೋಪ, ದುಃಖ, ಮುಂತಾದ ಸ್ಥಿತಿಗಳಂಥ ಕ್ಷಣಿಕ ಮಾನಸಿಕ ಸ್ಥಿತಿಯಲ್ಲ. ಅನುಭಾವಿಯು ದೇವನಲ್ಲಿ ಒಂದಾದನಂತರ, ತಾನು ಮಾಡುವ ಎಲ್ಲ ಕ್ರಿಯೆಗಳೂ ದೇವನ ಕ್ರಿಯೆಗಳೆಂದೇ ತಿಳಿಯುತ್ತಾನೆ. ಸಂಸಾರಬದ್ಧನಾದವನು “ನಾನು ಈ ಕೆಲಸವನ್ನು ಮಾಡುತ್ತಿದ್ದೇನೆ” ಎಂದರೆ, ಅನುಭಾವಿಯು ಅಂಗ ಅನಂಗವೆರಡೂ ಅಳಿದು, ನಿಜದಲ್ಲಿ ನಿಂದ ಲಿಂಗೈಕ್ಯನ ಅಂಗದ ಮೇಲುಳ್ಳ ಕ್ರೀಗಳೆಲ್ಲವೂ ಲಿಂಗಗಳು ನೋಡಾ!” ಎನ್ನುತ್ತಾನೆ. ಬೇರೆಯವರಿಗೆ ಅವನು ಊಟ ಮಾಡುವುದು ಕಾಣುತ್ತದೆ. ಆದರೆ ಅನುಭಾವಿ ತಾನು ಊಟಮಾಡುವಾಗ ತೃಪ್ತಿಯಾಗುವುದು ಪರಶಿವನಿಗೆ ಎಂದು ತಿಳಿಯುತ್ತಾನೆ. ಈ ಅರ್ಥದಲ್ಲಿ ಅವನು ಪರಶಿವನ ದೇಹ ಅಥವಾ ಅಂಗ.

ಸಾಮರಸ್ಯ ಪಡೆದವನಿಗೆ ಲಿಂಗೈಕ್ಯನಿಗೆ ಪುನರ್ಜನ್ಮವಿಲ್ಲ. ಸಾಮರಸ್ಯವನ್ನು ಈ ಜನ್ಮದಲ್ಲೇ ಪಡೆಯಬೇಕೇ ಹೊರತು, ಸತ್ತನಂತರ ಅಲ್ಲ: ಇಲ್ಲೇ ಪಡೆಯಬೇಕೇ ಹೊರತು, ಮತ್ತೊಂದು ಲೋಕದಲ್ಲಿ ಅಲ್ಲ ಎನ್ನುತ್ತಾರೆ, ಶರಣರು, ವೈಕುಂಠ ಅಥವಾ ಕೈಲಾಸಕ್ಕೆ ಹೋಗಬೇಕೆಂದು ಆಶಿಸುವ ಭಕ್ತರನ್ನು ಅವರು ಅವಹೇಳನ ಮಾಡುತ್ತಾರೆ.

ಸಾಮರಸ್ಯ ಪಡೆದವನಿಗೆ ಆನಂದವಾಗುತ್ತದೆ. ಇಲ್ಲಿ ಆನಂದವೆಂದರೆ, ನಮಗೆ ಗೊತ್ತಿರುವ ಸುಖ ಯಾವುದೂ ಅಲ್ಲ. ನಾವು ಸುಖಪಡುವುದು ಇಂದ್ರಿಯಗಳ ಮೂಲಕ. ಆದರೆ ಲಿಂಗಾಂಗ ಸಾಮರಸ್ಯದ ಆನಂದ ಇಂದ್ರಿಯ ಜನ್ಯವಲ್ಲ. ಶುದ್ಧವಾದ ಆತ್ಮನು ಪರಶಿವನಂತೆ ಸತ್, ಚಿತ್, ಆನಂದ. ಯಾವುದೇ ದುಃಖಕ್ಕೊಳಗಾಗದೇ, ಯಾವುದೇ ರೀತಿಯ ಲೋಭ, ಮೋಹ, ಮುಂತಾದ ಮಾನಸಿಕ ತುಮುಲಗಳಿಗೆ ಒಳಗಾಗದೆ, ಶಾಂತವಾಗಿರುವುದೇ ಆನಂದ, ಪ್ರಪಂಚದಲ್ಲಿ ಏನನ್ನು ಗಳಿಸಬೇಕೋ ಅದೆಲ್ಲಕ್ಕಿಂತ ಹೆಚ್ಚಿನದನ್ನು ಗಳಿಸಿರುವುದೇ ಅವನ ಚಿರ ಸಮಾಧಾನ, ಆ ಸಮಾಧಾನವೇ ಆನಂದ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಅವನ ಆನಂದ ಏನನ್ನೂ ಪಡೆದಿದ್ದರಿಂದ ಬಂದುದಲ್ಲ, ಎಲ್ಲವನ್ನೂ ತ್ಯಜಿಸಿದುದರಿಂದ ಬಂದುದು.

ಲಿಂಗಾಂಗ ಸಾಮರಸ್ಯವು ಸಿಡಿಲು ಹೊಡೆದಂತೆ ಒಂದೇ ಸಾರಿಗೆ ಪ್ರಾಪ್ತವಾದುದಲ್ಲ. ಅದನ್ನು ಪಡೆಯಲು ಸಾಧಕನು ಅನೇಕ ಆಧ್ಯಾತ್ಮಿಕ ಸಾಧನೆಯ ಹಂತಗಳನ್ನು ಏರಬೇಕಾಗುತ್ತದೆ. ಈ ಹಂತಗಳೇ ಷಟ್‌ಸ್ಥಲಗಳು. ಇವುಗಳನ್ನು ಮುಖ್ಯವಾಗಿ ಮೂರುಭಾಗ ಮಾಡಬಹುದು. ಭಕ್ತಸ್ಥಲ ಮತ್ತು ಮಹೇಶಸ್ಥಲದಲ್ಲಿ ಲಿಂಗಪೂಜೆ ಮಂತ್ರ, ನೈತಿಕ ಕ್ರಿಯೆ ಮುಂತಾದ ಆಚಾರಗಳನ್ನು ಮಾಡಿ ಸಾಧಕನು ಶುದ್ದನಾಗಲು ಪ್ರಯತ್ನಿಸುತ್ತಾನೆ; ಪ್ರಸಾದಿ ಮತ್ತು ಪ್ರಾಣಲಿಂಗಿ ಸ್ಥಲಗಳಲ್ಲಿ ಎಲ್ಲವೂ ದೇವನ ಪ್ರಸಾದವೆಂದೂ, ತನ್ನದೇನೂ ಇಲ್ಲವೆಂದೂ ತಿಳಿದು ಸ್ವಾರ್ಥತ್ಯಾಗ ಮಾಡುವುದನ್ನೂ ಧ್ಯಾನ ಮಾಡುವುದನ್ನೂ ಕಲಿಯುತ್ತಾನೆ. ಆಗಾಗ ಅವನಿಗೆ ಧ್ಯಾನದಲ್ಲಿ ದೇವಸಾಕ್ಷಾತ್ಕಾರ ಆಗಬಹುದು. ಶರಣಸ್ಥಲ ಹಾಗೂ ಐಕ್ಯಸ್ಥಲಗಳಲ್ಲಿ ಅವನು ಧ್ಯಾನದ ಮೂಲಕ ದೇವನಲ್ಲಿ ಒಂದಾಗುವುದೂ ಅಲ್ಲದೇ ತಾನೆಂಬ ಭಾವವನ್ನು ಮರೆಯುತ್ತಾನೆ.

ಲಿಂಗಾಂಗ ಸಾಮರಸ್ಯ ಸಾಧ್ಯವಾಗುವುದು ಲಿಂಗ ಮತ್ತು ಅಂಗಗಳೆರಡರ ಸ್ವರೂಪ ಒಂದೇ ಇದ್ದಾಗ, ಅಂಗನೂ ಚಿತ್, ಪರಶಿವನೂ ಚಿತ್ ಆಗಿರುವುದರಿಂದಲೇ ಅಂಗನು ಲಿಂಗದಲ್ಲಿ ಬೆರೆಯಲು ಸಾಧ್ಯ. ನದಿಯ ಆಕಾರ, ಸಮುದ್ರದ ಆಕಾರ, ಆ ಎರಡು ನೀರುಗಳ ರುಚಿ, ಬೇರೆ ಬೇರೆ ಇರಬಹುದು. ಆದರೂ ನದಿ ಸಮುದ್ರದಲ್ಲಿ ಸೇರಿ ಒಂದಾಗಿ ತನ್ನತನವನ್ನು ಕಳೆದುಕೊಳ್ಳುತ್ತದೆ. ಹಾಗೆಯೇ ಪರಶಿವನಿಗಿರುವ ಸೃಷ್ಟಿ, ಸ್ಥಿತಿ, ಮಾಡುವ ಶಕ್ತಿ, ಸರ್ವವ್ಯಾಪಕತ್ವ ಹಾಗೂ ಅಂಗನ ಮಿತಿಗಳು ಬೇರೆ ಬೇರೆ ಇರಬಹುದು. ಆದರೂ ಅಂಗ ಲಿಂಗದಲ್ಲಿ ಸೇರಿ ಒಂದಾಗುತ್ತದೆ. ಏಕೆಂದರೆ ಅವೆರಡೂ ಚಿದ್ವಸ್ತುಗಳು.

ಸಾಮರಸ್ಯ ಅಥವಾ ಕೂಟವೆಂದರೆ ಅಂಗ ಒಂದು ಕಡೆಯಿಂದ, ಲಿಂಗ ಮತ್ತೊಂದು ಕಡೆಯಿಂದ ಬಂದು ಕೂಡಿ ಅಲ್ಲಿಂದ ಮುಂದಕ್ಕೆ ಒಂದಾಗುತ್ತವೆ, ಎಂದರ್ಥವಲ್ಲ. ಲಿಂಗಾಂಗ ಸಾಮರಸ್ಯವನ್ನು ನದಿಯು ಸಮುದ್ರವನ್ನು ಕೂಡಿದುದಕ್ಕೆ ಹೋಲಿಸಿದರೂ ಲಿಂಗ ಮತ್ತು ಅಂಗಗಳಲ್ಲಿ ಆ ರೀತಿಯ ಕೂಟವಿರುವುದಿಲ್ಲ. ಪರಶಿವನು ಎಲ್ಲೆಲ್ಲಿಯೂ ಇರುವುದರಿಂದ ಅಂಗ ಅವನನ್ನು ಹುಡುಕಿಕೊಂಡು ಎಲ್ಲಿಯೂ ಹೋಗಬೇಕಾಗಿಲ್ಲ. ಅಂಗನು ತನ್ನಲ್ಲಿರುವ ಮಲತ್ರಯಗಳನ್ನೂ ಇತರ ದೋಷಗಳನ್ನೂ ತೊಡೆದು ಹಾಕಿದರೆ ಸಾಕು, ಅಲ್ಲಿರುವ ಪರಶಿವ ಪ್ರಕಾಶಿಸುತ್ತಾನೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಲಿಂಗತ್ರಯ ವಿಮರ್ಶಾ ಶಕ್ತಿ Next