ಮಂತ್ರ | ಮಹಾಪ್ರಳಯ |
ಮಲ, ಮಲತ್ರಯ |
ಎಲ್ಲಕ್ಕೂ ಕಾರಣೀಭೂತನಾದ ಪರಶಿವನಲ್ಲಿ ಶಕ್ತಿಯಿರುತ್ತದೆ. ಪ್ರಳಯ ಸ್ಥಿತಿಯಲ್ಲಿ ಅದು ಸುಪ್ತಸ್ಥಿತಿಯಲ್ಲಿರುತ್ತದೆ. ಪರಶಿವನು ಸೃಷ್ಟಿಸಬೇಕೆಂದು ನೆನಸಿದಾಗ, ಆ ಶಕ್ತಿಯು ಅವನ ಇಚ್ಛೆಯ ಪ್ರಕಾರ ವಿವಿಧ ಹಂತಗಳ ಮೂಲಕ ವಿಕಾಸಹೊಂದಿ ಕೊನೆಗೆ ಜಗತ್ತಾಗುತ್ತದೆ. ಆ ಶಕ್ತಿಯು ಜೀವನಲ್ಲಿರುವಾಗ ಅವು ಮಲ ಎನಿಸಿಕೊಳ್ಳುತ್ತವೆ. ವಾಸ್ತವವಾಗಿ ಪ್ರಪಂಚದ ಯಾವುದೇ ಶಕ್ತಿಯು ಮಲವಲ್ಲ. ಆದರೆ ಮಾನವನು ತನ್ನ ಅಜ್ಞಾನದಿಂದಾಗಿ ಅನೇಕ ರೀತಿಯ ಕರ್ಮಗಳನ್ನೆಸಗಿ ಅವುಗಳ ಫಲದಿಂದಾಗಿ ಅವನು ಬಂಧಿತನಾಗಿದ್ದಾನೆ. ನಾನು ಬಂಧಿಯಾಗಿದ್ದೇನೆ, ಎಂಬ ಮನೋಭಾವವೇ ಶಕ್ತಿಸಂಕೋಚದ ಗುರುತು. ಸಂಕುಚಿತ ಶಕ್ತಿಯೇ ಮಲ.
ಎಲ್ಲಿಯವರೆಗೆ ಮಾನವನು ಭಕ್ತಿ ಮಾರ್ಗಕ್ಕೆ ಬರದೆ ಕೇವಲ ಲೌಕಿಕ ಮಾರ್ಗದಲ್ಲೇ ಚಲಿಸುತ್ತಾನೋ ಅಲ್ಲಿಯವರೆಗೆ ಅವನಿಗೆ ಶಕ್ತಿಗಳು ಮಲಗಳಾಗಿಯೇ ಇರುತ್ತವೆ. ಹಾಗೂ ಎಲ್ಲಿಯವರೆಗೆ ಆ ಮಲಗಳಿರುತ್ತವೆಯೋ, ಅವು ಅವನನ್ನು ಮತ್ತಷ್ಟು ಪ್ರಾಪಂಚಿಕನನ್ನಾಗಿ ಮಾಡುತ್ತವೆ.
ವಚನಕಾರರು ಮೂರು ರೀತಿಯ ಮಲಗಳನ್ನು ಗುರುತಿಸಿದ್ದಾರೆ. ಅವೆಂದರೆ: ಆಣವ ಮಲ, ಮಾಯಾಮಲ, ಮತ್ತು ಕಾರ್ಮಿಕ ಮಲ.
ಆಣವ ಮಲ = ಶಂಕರಾಚಾರ್ಯರ ಅದ್ವೈತದ ಪ್ರಕಾರ ಪರಬ್ರಹ್ಮನಿಗೆ ಯಾವ ಗುಣವೂ ಇಲ್ಲ. ಅಂದರೆ, ಅವನಿಗೆ ಪ್ರಪಂಚವನ್ನು ಸೃಷ್ಟಿಸುವ ಶಕ್ತಿ, ಇಚ್ಛೆ ಹಾಗೂ ಜ್ಞಾನವಿಲ್ಲ. ಆದರೆ ವಚನಕಾರರ ಪ್ರಕಾರ ಪರಬ್ರಹ್ಮ (ಪರಶಿವ) ನಿರ್ಗುಣನಲ್ಲ, ಅವನಿಗೆ ಶಕ್ತಿ ಇದೆ. ಈ ಶಕ್ತಿ ಮುಖ್ಯವಾಗಿ ಮೂರು ಪ್ರಕಾರಗಳಲ್ಲಿ ಪ್ರಕಟವಾಗುತ್ತದೆ. ಸೃಷ್ಟಿಸಬೇಕೆಂಬ ಪರಶಿವನ ಇಚ್ಛೆಯೇ ಇಚ್ಛಾಶಕ್ತಿ, ಯಾವ ರೀತಿಯ ಜಗತ್ತನ್ನು ಸೃಷ್ಟಿಸಬೇಕು, ಯಾವಾಗ ಸೃಷ್ಟಿಸಬೇಕು ಎಂಬ ಅವನ ಜ್ಞಾನವೇ ಜ್ಞಾನಶಕ್ತಿ, ಇಚ್ಛಾಶಕ್ತಿ ಮತ್ತು ಜ್ಞಾನಶಕ್ತಿಗಳಿಗನುಸಾರವಾಗಿ ಕಾರ್ಯಗತವಾಗುವ ಅವನ ಶಕ್ತಿಯೇ ಕ್ರಿಯಾಶಕ್ತಿ. ಪರಶಿವನ ಜ್ಞಾನಕ್ಕೆ ಮಿತಿಯೇ ಇಲ್ಲ. ಪ್ರಳಯಪೂರ್ವ ಜೀವನಗಳಲ್ಲಿ ನಾವೆಲ್ಲರೂ ಏನೇನು ಮಾಡಿದ್ದೇವೆಂಬುದು ಅವನಿಗೆ ಗೊತ್ತಿದೆ. ಅಂದರೆ ಅವನು ಸರ್ವಜ್ಞ. ಅವನಿಗೆ ಏನನ್ನು ಬೇಕಾದರೂ ಮಾಡಬಲ್ಲ ಶಕ್ತಿಯಿದೆ. ಅಂದರೆ, ಅವನು ಸರ್ವಶಕ್ತ. ಆದರೆ ಈ ಶಕ್ತಿಗಳು ಜೀವನಲ್ಲಿ ಇದ್ದರೂ ಅವು ಸಂಕುಚಿತವಾಗಿವೆ. ನಾನು ಏನು ಬೇಕಾದರೂ ಮಾಡಬಲ್ಲೆನೆಂಬ ಶಿವಶಕ್ತಿ, ಜೀವನಲ್ಲಿ ನನಗೆ ಅಲ್ಪಶಕ್ತಿಯಿದೆ, ಆದುದರಿಂದ ಪೂರ್ಣ ಸ್ವತಂತ್ರನಲ್ಲ ಎಂಬ ಭಾವವಾಗಿ ವ್ಯಕ್ತವಾಗುತ್ತದೆ. ಹೀಗೆ ಜೀವನಲ್ಲಿ ತನ್ನ ಅಲ್ಪತ್ವದ (ಅಣುವೆಂಬ) ಅರಿವು ಮೂಡಿಸುವ ಶಕ್ತಿಯು ಆಣವ ಮಲವೆನಿಸಿಕೊಳ್ಳುತ್ತದೆ. ಶಿವನ ಸರ್ವಜ್ಞತ್ವವು (ಜ್ಞಾನಶಕ್ತಿಯು) ಜೀವನಲ್ಲಿ ಸಂಕುಚಿತವಾಗಿ ಮಾಯಾಮಲವೆನಿಸಿಕೊಳ್ಳುತ್ತದೆ. ಇದರಿಂದಾಗಿ ಅವನಿಗೆ ಅಲ್ಪಜ್ಞಾನದ ಅರಿವು ಮೂಡುತ್ತದೆ. ಶಿವನ ಕ್ರಿಯಾಶಕ್ತಿಯು ಜೀವನದಲ್ಲಿ ಕಿಂಚಿತ್ ಕರ್ತೃತ್ವ ಶಕ್ತಿಯಾಗಿ ಪರಿಣಮಿಸಿ, ಕಾರ್ಮಿಕ ಮಲವೆನಿಸಿಕೊಳ್ಳುತ್ತದೆ.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಮಂತ್ರ | ಮಹಾಪ್ರಳಯ |