Previous ಗುರುಲಿಂಗ ದೀಕ್ಷಾವಿಧಿ Next

ದಶವಿಧಪಾದೋದಕ

ದಶವಿಧಪಾದೋದಕ

ಗುರುಪಾದೋದಕ, ಲಿಂಗಪಾದೋದಕ, ಜಂಗಮಪಾದೋದಕ, ಸ್ಪರ್ಶನೋದಕ, ಅವಧಾನೋದಕ, ಆಪ್ಯಾಯನೋದಕ, ಹಸ್ತೋದಕ, ಪರಿಣಾಮೋದಕ, ನಿರ್ನಾಮೋದಕ ಮತ್ತು ಸತ್ಯೋದಕ ಎಂಬ ಹತ್ತು ಬಗೆಯ ಪಾದತೀರ್ಥ ;

ತಾತ್ವಿಕದೃಷ್ಟಿ ಮತ್ತು ಕ್ರಿಯಾದೃಷ್ಟಿ ಎಂಬ ಎರಡು ರೀತಿಗಳಲ್ಲಿ ದಶವಿಧವಾದೋದಕಗಳನ್ನು ವಿಂಗಡಿಸಬಹುದು. ತಾತ್ವಿಕದೃಷ್ಟಿಯಲ್ಲಿ ಸ್ಪರ್ಶನಗುಣದಿಂದ ಬಂದುದು ಗುರುಪಾದೋದಕ, ಅಂಗದ ಗುಣವು ನಾಸ್ತಿಯಾದಲ್ಲಿ ಲಿಂಗಪಾದೋದಕ, ಮಹಾಗಣಗಳ ಅರಿವನ್ನು ಪಡೆದುದು ಜಂಗಮ ಪಾದೋದಕ, ಚತುರ್ದಳಪದ್ಮವು ವಿಕಸಿತವಾಗಲು ಸ್ಪರ್ಶನೋದಕ, ಲಿಂಗಕ್ಕೆ ಪರಮ ಪರಿಣಾಮವನ್ನು ಸಮರ್ಪಿಸಿದಾಗ ಅವಧಾನೋದಕ, ಲಿಂಗಾರೋಗಣೆ ಮಾಡಿದಲ್ಲಿ ಆಪ್ಯಾಯನೋದಕವು, ಲಿಂಗವನ್ನು ಹಸ್ತದಲ್ಲಿಡಲು ಹಸ್ತೋದಕ, ಶಿವಯೋಗವುಂಟಾದಾಗ ಪರಿಣಾಮೋದಕ, ನಾಮಸೀಮೆಯಿಲ್ಲವಾದಂದು ನಿರ್ನಾಮೋದಕ ಹಾಗೂ ಶೂನ್ಯದಲ್ಲಿ ಬೆರೆತಾಗ ಸತ್ಯೋದಕ ಎಂದು ಆಗುತ್ತವೆ. ಆಚರಣೆಯ ದೃಷ್ಟಿಯಲ್ಲಿ ಪಾದಗಳಿಗೆ ಸಂಬಂಧಪಟ್ಟುದು ಗುರುಪಾದೋದಕ, ಆ ತೀರ್ಥವನ್ನು ಲಿಂಗಸಂಬಂಧ ಮಾಡುವ ಇಚ್ಛೆಯುಂಟಾದಲ್ಲಿ ಲಿಂಗೋದಕ, ಮಜ್ಜನಕ್ಕೆ ಎರೆದಾಗ ಮಜ್ಜನೋದಕ ಅಥವಾ ಜಂಗಮ ಪಾದೋದಕ, ಜಿ.ಯಲ್ಲಿ ಸೇವಿಸಿದಾಗ ಸ್ಪರ್ಶನೋದಕ, ಅದನ್ನು ಎಚ್ಚರಿಕೆಯಿಂದ ಸೇವಿಸಿದರೆ ಅವಧಾನೋದಕ, ಸೇವನೆಯ ನಂತರ ತೃಪ್ತಿ ಹೊಂದಿದಲ್ಲಿ ಆಪ್ಯಾಯನೋದಕ, ಹಸ್ತದ ತೀರ್ಥವನ್ನು ಸಲ್ಲಿಸಿದಲ್ಲಿ ಹಸ್ತೋದಕ, ಬಟ್ಟಲ ತೀರ್ಥವನ್ನು ಮೂರು ಬಾರಿ ಸೇವಿಸಿದರೆ ಪರಿಣಾಮೋದಕ, ಅಂಥಿಂಥ ಹೆಸರನ್ನು ಪಾದೋದಕ್ಕೆ ಇಡಲು ಸಾಧ್ಯವಿಲ್ಲವಾದುದಾಗಿ ನಿರ್ನಾಮೋದಕ ಮತ್ತು ಬ್ರಹ್ಮರಂಧ್ರದಲ್ಲಿರುವ ಚಿದಮೃತವೆಂದೇ ಭಾವಿಸುವುದು ಸತ್ಯೋದಕ ಎಂದಾಗುವುವು.

ಪ್ರಥಮದಲ್ಲಿ ಪಾದೋದಕ ದ್ವಿತೀಯದಲ್ಲಿ ಲಿಂಗೋದಕ ತೃತೀಯದಲ್ಲಿ ಮಜ್ಜನೋದಕ ಚತುರ್ಥದಲ್ಲಿ ಸ್ಪರ್ಶನೋದಕ ಪಂಚಮದಲ್ಲಿ ಅವಧಾನೋದಕ ಷಷ್ಟದಲ್ಲಿ ಆಪ್ಯಾಯನೋದಕ ಸಪ್ತಮದಲ್ಲಿ ಹಸ್ತೋದಕ ಅಷ್ಟಮದಲ್ಲಿ ಪರಿಣಾಮೋದಕ ನವಮದಲ್ಲಿ ನಿರ್ನಾಮೋದಕ ದಶಮದಲ್ಲಿ ಸತ್ತೋದಕ ಇಂತೀ ದಶವಿಧಪಾದೋದಕವ ತಿಳಿದುಕೊಳ್ಳಬಲ್ಲ ಕೂಡಲಚೆನ್ನಸಂಗಾ ನಿಮ್ಮ ಶರಣ (ಚೆನ್ನಬ. ಸಮವ. ೩-೫೦೭-೧೪೧೪);

ಹಳ್ಳ, ಹೊಳೆ, ಕೆರೆ, ಬಾವಿ, ಮಡು, ಹೊಂಡ, ಚಿಲುಮೆ, ಕೊಳ ಮೊದಲಾದ ಸ್ಥಾನಕ್ಕೆ ಹೋಗಿ
ಪ್ರಥಮದಲ್ಲಿ `ಶಿವ ಶಿವ! ಹರಹರ! ಗುರುಬಸವಲಿಂಗ!' ಎಂಬ
ಮಂತ್ರಧ್ಯಾನದಿಂದ ಪಾದವನಿಟ್ಟು ಚರಣಸೋಂಕಿನಿಂ
ಪವಿತ್ರವಾದುದಕವೆ ಧೂಳಪಾದೋದಕವೆನಿಸುವದಯ್ಯ;
ಆ ಮೇಲೆ ತಂಬಿಗೆಯೊಳಗೆ ಶೋಧಿಸಿ ಬಸವಾಕ್ಷರವ ಲಿಖಿಸುವದೆ ಗುರುಪಾದೋದಕವೆನಿಸುವದಯ್ಯ;
ಆ ಮೇಲೆ ಅರ್ಚನಾಕ್ರಿಯೆಗಳ ತೀರ್ಚಿಸಿಕೊಂಡು
ನಿಚ್ಚಪ್ರಸಾದಿ ಸಂಬಂಧಾಚರಣೆಯಂತೆ ಮುಗಿದಲ್ಲಿ ಜಂಗಮ ಪಾದೋದಕವೆನಿಸುವದಯ್ಯ.
ಇಂತು ಚತುರ್ವಿಧ ಪಾದೋದಕದೊಳಗೆ ಷಡ್ವಿಧ ಪಾದೋದಕ ಉಂಟಯ್ಯ.
ಅದೆಂತೆಂದಡೆ: ಹಸ್ತವಿಟ್ಟು ಸ್ಪರ್ಶನವ ಮಾಡೆ ಸ್ಪರ್ಶನೋದಕವೆನಿಸುವದಯ್ಯ;
ಲಿಂಗಕ್ಕೆ ಧಾರೆಯಿಂದ ಅಭಿಷೇಕವ ಎರೆದಲ್ಲಿ ಅವಧಾರೋದಕವೆನಿಸುವದಯ್ಯ;
ಲಿಂಗಾರ್ಪಿತವ ಮಾಡಬೇಕೆಂಬ ಆನಂದವೆ ಆಪ್ಯಾಯನೋದಕವೆಂದೆನಿಸುವದಯ್ಯ;
ಅರ್ಪಿತಮುಖದಲ್ಲಿ ಹಸ್ತವ ಪ್ರಕ್ಷಾಸಿ ಖಂಡಿತವ ಮಾಡಿದಲ್ಲಿಗೆ ಹಸ್ತೋದಕವೆನಿಸುವದಯ್ಯ;
ಲಿಂಗಕ್ಕೆ ಸಂತೃಪ್ತಿಪರಿಯಂತರವು ಅರ್ಪಿತವ ಮಾಡಿ[ದಲ್ಲಿ] ಪರಿಣಾಮೋದಕವೆನಿಸುವದಯ್ಯ;
ತಟ್ಟೆ ಬಟ್ಟಲ ಲೇಹವ ಮಾಡಿದಲ್ಲಿ ನಿರ್ನಾಮೋದಕವೆನಿಸುವದಯ್ಯ;
ಲೇಹವ ಮಾಡಿದ ಮೇಲೆ ದ್ರವ್ಯವನಾರಿಸಿ ಸರ್ವಾಂಗದಲ್ಲಿ ಲೇಪಿಸುವದೆ ಸತ್ಯೋದಕವೆನಿಸುವದಯ್ಯ.
ಇಂತೀ ದಶವಿಧ ಪಾದೋದಕದ ವಿಚಾರವ ತಿಳಿದು
ಆ ಮೇಲೆ ನಿಚ್ಚಪ್ರಸಾದಿಯ ಸಂಬಂಧಾಚರಣೆಯಂತೆ ಪ್ರಸಾದವ ಮುಗಿವದಯ್ಯ. (ಸಿದ್ಧರಾ, ಸಮವ. ೪-೧೬-೫೧).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಗುರುಲಿಂಗ ದೀಕ್ಷಾವಿಧಿ Next