ಜೀವತ್ರಯ | ತಾಪತ್ರಯ |
ತತ್ವ, ತತ್ವಜ್ಞಾನ, ತತ್ವತ್ರಯ,ತತ್ವದೀಕ್ಷೆ, ತತ್ವಮಸಿ |
ಈ ಪದವು ತತ್" (ಅದು) ಮತ್ತು ತ್ವ" (ತನ) ಎಂಬ ಎರಡು ಧಾತುಗಳಿಂದ ವ್ಯುತ್ಪತ್ತಿಯಾಗಿದೆ. ಇದರಿಂದ ತತ್ವವೆಂದರೆ ಒಂದು ವಸ್ತುವಿನ ಮೂಲ ಅಥವಾ ಬದಲಾಗದ ಗುಣ ಎಂಬರ್ಥ ಆಗುತ್ತದೆ.
ಸಾಂಖ್ಯರ ಪ್ರಕಾರ, ತತ್ವಗಳು ಇಪ್ಪತ್ತೈದು. ಅವೆಂದರೆ ಪ್ರಕೃತಿ, ಬುದ್ದಿ, ಮನಸ್ಸು, ಅಹಂಕಾರ, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು ತನ್ಮಾತ್ರೆಗಳು ಮತ್ತು ಐದು ಮಹಾಭೂತಗಳು ಮತ್ತು ಇಪ್ಪತ್ತೈದನೆ ತತ್ವ ಆತ್ಮ (ಪುರುಷ), ವಚನಕಾರರ ಪ್ರಕಾರ ತತ್ವಗಳು ಮೂವತ್ತಾರು. ಅವೆಂದರೆ, ಐದು ಅಧಿದೇವತೆಗಳು, ಐದು ಶಕ್ತಿಗಳು, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು, ವಾಯುಗಳು, ಐದು ಮಹಾಭೂತಗಳು, ಆತ್ಮನೂ ಸೇರಿ ಐದು ಅಂತ:ಕರಣಗಳು, ಪರಶಿವ ಮೂವತ್ತಾರನೆ ತತ್ವ, ಚಿನ್ನದ ಆಭರಣಗಳಿಗೆ ಚಿನ್ನವೇ ಆಧಾರವಾಗಿರುವಂತೆ, ಪ್ರಪಂಚದ ಚರಾಚರ ವಸ್ತುಗಳಿಗೆ ಈ ತತ್ವಗಳೇ ಆಧಾರ. ಆಭರಣಗಳ ರೂಪ, ಬದಲಾಗಬಹುದಾದರೂ ಚಿನ್ನದ ಮೂಲಗುಣ ಬದಲಾಯಿಸುವುದಿಲ್ಲ. ಹಾಗೆಯೇ ಚರಾಚರ ವಸ್ತುಗಳ ರೂಪ ಬದಲಾವಣೆಗೊಂಡರೂ ಅವುಗಳಲ್ಲಿರುವ ತತ್ವಗಳು ಬದಲಾಯಿಸುವುದಿಲ್ಲ.
ಮೂವತ್ತೈದು ತತ್ವಗಳು ಪರಶಿವನಿಂದಲೇ ಉದ್ಭವಿಸುವುದರಿಂದ ಹಾಗೂ ಅವುಗಳಲ್ಲಾಗುವ ರೂಪಾಂತರಕ್ಕೆ ಪರಶಿವನೇ ಕಾರಣನಾದುದರಿಂದ, ಪರಶಿವನಿಗೆ ನಿಜತತ್ವವೆಂದು ಹೆಸರು.
ಇರುವುದೆಲ್ಲದರ ತತ್ವಗಳನ್ನು ಅರಿತುಕೊಳ್ಳುವುದು ಎಂಬುದು ಇದರ ಅರ್ಥ. ಈ ತತ್ವಗಳನ್ನು ನಾವು ಮುಖ್ಯವಾಗಿ ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು. ಇವೆಂದರೆ ಹೊರಜಗತ್ತಿನ ತತ್ವ ಮತ್ತು ಆತ್ಮ ತತ್ವ. ಆದರೆ ಈ ತತ್ವದ ಜ್ಞಾನವು ನಮಗೆ ಬೇರೆಯವರ ಬೋಧನೆಯಿಂದ ಅಥವಾ ಪುಸ್ತಕಗಳಿಂದ ಬರುವುದಿಲ್ಲ. ಅಂದರೆ ಸಾಂಖ್ಯರ ೨೫ ತತ್ವಗಳನ್ನಾಗಲಿ, ವಚನಕಾರರ ೩೬ ತತ್ವಗಳನ್ನಾಗಲಿ ನಾವು ಪರರ ಬೋಧನೆಯಿಂದ ಅಥವಾ ಪುಸ್ತಕಗಳಿಂದ ತಿಳಿದುಕೊಂಡರೆ, ನಾವು ತತ್ವಜ್ಞಾನಿಗಳೆನಿಸಿಕೊಳ್ಳುವುದಿಲ್ಲ. ಇಲ್ಲಿ ತತ್ ಎಂಬ ಪದಕ್ಕೆ ಬದಲಾಗದ ಸತ್ಯ ಎಂಬ ಅರ್ಥವಿದೆ. ಇಂತಹ ಬದಲಾಗದ ಕಾಲಾತೀತ, ದೇಶಾತೀತ ತತ್ವವು ಇಂದ್ರಿಯಾತೀತ, ತರ್ಕಾತೀತ ಮತ್ತು ಮನೋತೀತ. ಅದರ ಜ್ಞಾನವನ್ನು ಯೋಗಿಯ ಸಮಾಧಿ ಸ್ಥಿತಿಯಲ್ಲಿದ್ದಾಗ ಪಡೆಯುವುದರಿಂದ ತತ್ವಜ್ಞಾನವು ಯೋಗಿಗಳಿಗಷ್ಟೆ ಸಾಧ್ಯ.
ವಚನಕಾರರ ಪ್ರಕಾರ ಪರಶಿವನೇ ಮಹಾತತ್ವ ಅಥವಾ ಪರತತ್ವ. ಪರತತ್ವವನ್ನು ಜ್ಞಾತೃವೊಬ್ಬನು ಜ್ಞೇಯವೊಂದನ್ನು ಅರಿತಂತೆ, ಅರಿಯಲು ಸಾಧ್ಯವಿಲ್ಲ. ವಾಸ್ತವವಾಗಿ ಉಳಿದೆಲ್ಲವನ್ನೂ ಅರಿಯುವ ಮೂಲತತ್ವವೇ ಅರಿವು ಅಥವಾ ಜ್ಞಾನ. ಆದುದರಿಂದ ತತ್ವಜ್ಞಾನವೆಂದರೆ ತಾನೇ ಪರಶಿವನ ಅಂಗ ಅಥವಾ ಅಂಶ ಎಂಬ ಅರಿವು. ಹೀಗೆ ತತ್ವಜ್ಞಾನವು ನಮ್ಮನ್ನು ನಾವು ತಿಳಿದುಕೊಳ್ಳುವ ಜ್ಞಾನವಾದರೆ, ಬೇರೆಯ ವಸ್ತುಗಳ ಬಗೆಗಿನ ಜ್ಞಾನವು ಸಾಧಾರಣ ಜ್ಞಾನ ಅಥವಾ ವಿಜ್ಞಾನ ಎನಿಸಿಕೊಳ್ಳುತ್ತದೆ. (೯ : ೧೦೦)
ವಚನಕಾರರು ಇರುವುದೆಲ್ಲವನ್ನೂ ಮೂವತ್ತಾರು ತತ್ವಗಳಿಗೆ ಭಟ್ಟಿ ಇಳಿಸುತ್ತಾರೆ. ಹಾಗೂ ಅವುಗಳನ್ನು ಶಿವತತ್ವ, ವಿದ್ಯಾತತ್ವ ಮತ್ತು ಆತ್ಮತತ್ವ ಎಂದು ಮೂರು ಗುಂಪುಗಳನ್ನಾಗಿ ಮಾಡುತ್ತಾರೆ. ೧. ಶಿವತತ್ವವೆಂದರೆ ಉಳಿದ ಮೂವತೈದು ತತ್ವಗಳಿಗೆ ಮೂಲ, ಆಧಾರ ಮತ್ತು ನಿಯಂತ್ರಕ.
೨. ವಿದ್ಯಾತತ್ವದಲ್ಲಿ ಐದು ಅಧಿದೇವತೆಗಳು ಮತ್ತು ಐದು ಶಕ್ತಿಗಳು ಇವೆ. ಬ್ರಹ್ಮ, ವಿಷ್ಣು, ರುದ್ರ ಈಶ್ವರ ಮತ್ತು ಸದಾಶಿವ ಇವು ಐದು ಅಧಿದೇವತೆಗಳು. ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಛಾಶಕ್ತಿ, ಆದಿಶಕ್ತಿ ಮತ್ತು ಪರಾಶಕ್ತಿ ಇವು ಐದು ಶಕ್ತಿಗಳು. ಕೆಲವು ವೇಳೆ ಅಧಿದೇವತೆಗಳ ಬದಲು ಐದು ಸಾದಾಖ್ಯಗಳನ್ನು ಹೆಸರಿಸಲಾಗುತ್ತದೆ. ಅದೇ ರೀತಿ ಐದು ಶಕ್ತಿಗಳ ಬದಲು ನಿವೃತ್ತಿಕಲಾ, ಪ್ರತಿಷ್ಠಾಕಲಾ, ವಿದ್ಯಾಕಲಾ, ಶಾಂತಿಕಲಾ ಮತ್ತು ಶಾಂತ್ಯತೀತಕಲಾ ಎಂಬ ಹೆಸರುಗಳನ್ನು ಬಳಸಲಾಗುತ್ತದೆ. ಅಂತೂ ವಿದ್ಯಾತತ್ವದಲ್ಲಿ ಹತ್ತು ಉಪತತ್ವಗಳಿವೆ.
೩. ಆತ್ಮದಲ್ಲಿ ಇಪ್ಪತ್ತೈದು ತತ್ವಗಳಿವೆ. ಅವೆಂದರೆ, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು ವಾಯುಗಳು, ಐದು ಮಹಾಭೂತಗಳು ಮತ್ತು ಅಂತಃ ಕರಣ ಚತುಷ್ಟಯ ಮತ್ತು ಜೀವಾತ್ಮ.
ಮುಮುಕ್ಷುವು ತಾನು ನಲವತ್ನಾಲ್ಕು ತತ್ವಗಳಿಂದ ಕೂಡಿದ ಚಿದಂಗವೆಂದೂ, ಆ ಚಿದಂಗದಲ್ಲಿ ಐವತ್ತೇಳು ಲಿಂಗಗಳು ಅಡಕವಾಗಿವೆಯೆಂದೂ, ತಾನಾರು, ತನ್ನ ಉದ್ದೇಶವೇನಿರಬೇಕು, ೧೦೧ ಸ್ಥಲಗಳ ಮರ್ಮವೇನು ಮುಂತಾದ ತತ್ವಗಳನ್ನು ವಿಧ್ಯುಕ್ತವಾಗಿ ತಿಳಿಸಿಕೊಡುವ ದೀಕ್ಷೆಯೇ ತತ್ವದೀಕ್ಷೆ, ಲಿಂಗದೀಕ್ಷೆ ಪಡೆದವನು ತತ್ವದೀಕ್ಷೆಯಿಲ್ಲದೆಯೇ ಇಷ್ಟಲಿಂಗ ಪೂಜೆ, ಗುರು ಜಂಗಮ ಭಕ್ತಿ, ವಿಭೂತಿ ಧಾರಣೆ ಮುಂತಾದವುಗಳನ್ನು ಮಾಡಿದರೆ ಏನೂ ಪ್ರಯೋಜನವಿರುವುದಿಲ್ಲ. (೧೦ : ೬೯೫)
ತತ್, ತ್ವಂ. ಅಸಿ (=ಅದು, ನೀನು ಆಗಿದ್ದೀಯ). ಈ ಉಪನಿಷತ್ತಿನ ವಾಕ್ಯದ ಪ್ರಕಾರ, ಅದು ಎಂದರೆ ಬ್ರಹ್ಮ, ನೀನು ಎಂದರೆ ಜೀವಾತ್ಮ. ಜೀವನ ನಿಜವಾದ ಸ್ವರೂಪವೂ ಪರಬ್ರಹ್ಮನ ಸ್ವರೂಪವೂ ಒಂದೇ ಆಗಿದೆ, ಎಂಬುದೇ ಈ ವಾಕ್ಯದ ಸಂದೇಶ. ಆದರೆ ಜೀವನು ಪರಬ್ರಹ್ಮನಾಗಬೇಕಾದರೆ, ಅವನಿಗೆ ಸ್ವಾಭಾವಿಕವಾಗಿ ಅನಾದಿಕಾಲದಿಂದ ಅಂಟಿಕೊಂಡಿರುವ ಅವಿದ್ಯೆ ಮತ್ತಿತರ ಉಪಾಧಿಗಳಿಂದ ಮುಕ್ತನಾಗಬೇಕು. ಆಗ ಅವನು ತಾನು ಸಹಜವಾಗಿಯೇ ಬ್ರಹ್ಮ ಸ್ವರೂಪನೆಂದು ಅರಿತುಕೊಳ್ಳುತ್ತಾನೆ.
ಜೀವನು ಬ್ರಹ್ಮನಾಗುವುದೆಂದರೇನೆಂಬುದರ ಬಗೆಗೆ ಅದ್ವೈತಿ ಮತ್ತು ವಿಶಿಷ್ಟಾದ್ವೈತಿಗಳಲ್ಲಿ ಭಿನ್ನಾಭಿಪ್ರಾಯವಿದೆ. ಶಂಕರಾಚಾರ್ಯ ಮತ್ತು ಅವರ ಅನುಯಾಯಿಗಳ ಪ್ರಕಾರ, ಅವಿದ್ಯೆಯಿಂದ ಮುಕ್ತನಾದ ಜೀವನಿಗೆ, ತಾನು ಜೀವನಲ್ಲ, ಬ್ರಹ್ಮ ಎಂಬ ಅರಿವೂ, ಪ್ರಪಂಚವು ಮಿಥ್ಯ, ಬ್ರಹ್ಮ ಮಾತ್ರ ಸತ್ಯ ಎಂಬ ಅರಿವೂ ಮೂಡುತ್ತದೆ. ಹೀಗೆ ಜೀವಾತ್ಮನು ಪರಮಾತ್ಮನೇ ಆಗಿದ್ದರೂ, ಅವಿದ್ಯೆಯಿಂದಾಗಿ ತಾನು ಪ್ರತ್ಯೇಕನೆಂಬ ತಪ್ಪು ಕಲ್ಪನೆಗೆ ಒಳಗಾಗಿದ್ದ. ಆದರೆ ರಾಮಾನುಜಾಚಾರ್ಯ ಹಾಗೂ ಲಿಂಗಾಯತರ ಪ್ರಕಾರ, ಅವಿದ್ಯೆಯಿಂದ ಮುಕ್ತನಾದ ಜೀವನಿಗೆ ತಾನು ಪರಮಾತ್ಮನ ಅವಿಭಾಜ್ಯ ಅಂಗ ಎಂಬ ಅರಿವು ಮೂಡುತ್ತದೆ. ಅವನು ಅವಿದ್ಯೆಯಿಂದಾಗಿ ತಾನು ಪ್ರತ್ಯೇಕ ವ್ಯಕ್ತಿ ಎಂಬ ತಪ್ಪು ಕಲ್ಪನೆಗೆ ಒಳಗಾಗಿದ್ದ. ತನ್ನ ದೇಹೇಂದ್ರಿಯಾದಿಗಳನ್ನೆಲ್ಲಾ ಪರಶಿವನೇ ಆಕ್ರಮಿಸಿಕೊಳ್ಳವುದರಿಂದ ಆ ಭಕ್ತನಿಗೆ ನಾನು ಎಂಬ ಭಾವ ಹೋಗುತ್ತದೆ. ಅಥವಾ ತನಗೂ ಪರಶಿವನಿಗೂ ಇರುವ ವ್ಯತ್ಯಾಸ ಇಲ್ಲವಾಗುತ್ತದೆ. ಅವನು ನಾನೆ ಪರಶಿವ ಎಂದುಕೊಂಡರೂ, ನಾನೇ ಸೃಷ್ಟಿ, ಸ್ಥಿತಿ ಮುಂತಾದ ಕಾರ್ಯಗಳನ್ನು ಮಾಡುತ್ತೇನೆ ಎಂಬರ್ಥ ಅವನ ಹೇಳಿಕೆಗೆ ಇರುವುದಿಲ್ಲ.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಜೀವತ್ರಯ | ತಾಪತ್ರಯ |