ಅನಿರ್ವಾಚ್ಯ ಅನುಭಾವ | ಅರುವತ್ತು ನಾಲ್ಕು ಶೀಲಗಳು |
ಅನುಭಾವ |
ಅನುಭಾವ ಎಂಬ ಪದವನ್ನು ವಚನಕಾರರು ಯೋಗ, ತುರೀಯ, (ತೂರ್ಯ), ಸಮಾಧಿ, ಅದ್ವೈತ ಸ್ಥಿತಿ, ಸಮರಸ, (ಸಾಮರಸ್ಯ) ಮುಂತಾದ ಪದಗಳಿಗೆ ಪರ್ಯಾಯವಾಗಿ ಉಪಯೋಗಿಸಿದ್ದಾರೆ. ಅವೆಲ್ಲ ಪದಗಳೂ ಅನುಭಾವದ ಲಕ್ಷಣಗಳಿಗೆ ಅನ್ವಯಿಸುವುದಿಲ್ಲ. ಆದರೆ ಶಿವಾನುಭವ, ಲಿಂಗಾನುಭವ, ಸ್ವಾನುಭಾವ ಮುಂತಾದ ಪದಗಳು ಅನುಭಾವ ಪದದ ಸಮಾನಾರ್ಥಕ ಪದಗಳು, ಅನುಭಾವವು ಪರತತ್ವದ ಅರಿವನ್ನು ಕೊಡುವ ಒಂದು ಅತೀಂದ್ರಿಯ ಮತ್ತು ಅತಿ ಬೌದ್ಧಿಕ ಅನುಭವ” ಎಂಬ ಸ್ಕೂಲ ವ್ಯಾಖ್ಯೆಯೊಂದಿಗೆ ಅನುಭಾವದ ಮುಖ್ಯ ಲಕ್ಷಣಗಳ ವಿವರಣೆಯನ್ನು ಪ್ರಾರಂಭಿಸೋಣ.
೧. ಇಂದ್ರಿಯಾನುಭವವು (ಪ್ರತ್ಯಕ್ಷವು) ಇಂದ್ರಿಯಗಳನ್ನೂ ಅಂತಃಕರಣಗಳನ್ನೂ ಅವಲಂಬಿಸುತ್ತದೆ. ಉದಾಹರಣೆಗೆ ಯಾವುದೋ ಎಂದು ರುಚಿ ನಾಲಗೆಯ ಸಂಪರ್ಕಕ್ಕೆ ಬರುತ್ತದೆ. ಇದನ್ನು ಗ್ರಹಿಸಿದ ಬುದ್ಧಿಯು ಇದು ಸಹಿ ಎಂದು ನಿರ್ಧರಿಸುತ್ತದೆ. ನಾನು ಸಿಹಿಯನ್ನು ರುಚಿಸುತ್ತಿದ್ದೇನೆ ಎಂದು ಅಹಂಕಾರ ತಿಳಿಸುತ್ತದೆ. ಆದರೆ ಅನುಭಾವದಲ್ಲಿ ಇಂದ್ರಿಯ ಮತ್ತು ಅಂತಃಕರಣಗಳ ವ್ಯಾಪಾರ ಇರುವುದಿಲ್ಲ. ವಾಸ್ತವವಾಗಿ, ಅನುಭಾವವು ಪ್ರಾರಂಭವಾಗುವುದು ಇಂದ್ರಿಯ ಮತ್ತು ಅಂತಃಕರಣಗಳ ವ್ಯಾಪಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಾಗ, ಇದಕ್ಕೆ ಅಪವಾದವೆಂಬಂತೆ ಕೆಲವು ವೇಳೆ ಅನುಭಾವವು ಇಂದ್ರಿಯಾನುಭವದಿಂದ ಪ್ರಾರಂಭವಾಗುತ್ತದೆ. ಆದರೆ ಅದನ್ನೆಂದೂ ಅವಲಂಬಿಸುವುದಿಲ್ಲ. ಸೂರ್ಯಾಸ್ತದ ಸೌಂದರ್ಯದ ಅನುಭವವೂ, ಸಾಗರದ ವಿಸ್ತಾರದ ಅನುಭವವೂ, ಸಂಗೀತದ ಮಾಧುರ್ಯದ ರಸಾಸ್ವಾದವೂ ಕೆಲವು ವೇಳೆ ಅನುಭಾವವಾಗಿ ಕೊನೆಗೊಂಡಾಗ, ಅದು ಪ್ರತ್ಯಕ್ಷದಿಂದಲೇ ಪ್ರಾರಂಭವಾಗಿರುತ್ತದೆ. ಆದರೆ ಅನುಭಾವವನ್ನು ಹುಟ್ಟಿಸುವಂಥ ಯಾವ ಅಂಶವೂ ಆ ಪ್ರತ್ಯಕ್ಷಗಳಲ್ಲಿಲ್ಲ. ಅಂಥ ಅಂಶ ಅವುಗಳಲ್ಲೇನಾದರೂ ಇದ್ದಿದ್ದರೆ, ಪ್ರಾಯಶಃ ಎಲ್ಲರೂ ಪ್ರಯತ್ನ ಪಡದೆಯೇ ಅನುಭಾವಿಗಳಾಗುತ್ತಿದ್ದರೇನೋ. ಅಲ್ಲದೆ, ಪ್ರತ್ಯಕ್ಷದ ಸಹಾಯವಿಲ್ಲದೆಯೂ ಅನುಭಾವ ಸಾಧ್ಯವಿದೆ. ಉದಾಹರಣೆಗೆ, ಇಂದ್ರಿಯ, ಮನಸ್ಸು, ಬುದ್ಧಿ, ಇತ್ಯಾದಿಗಳನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿ ಮಾಡಿದ ಧ್ಯಾನವು ಅನುಭಾವದಲ್ಲಿ ಕೊನೆಗೊಂಡಾಗ ಪ್ರತ್ಯಕ್ಷದ ಪಾತ್ರ ಸ್ವಲ್ಪವೂ ಇರುವುದಿಲ್ಲ.
ಅನುಭಾವದಲ್ಲಿ ಮುಖ್ಯವಾದ ಮೂರು ಹಂತಗಳನ್ನು ಕಾಣಬಹುದು. ಲಿಂಗಧ್ಯಾನದಲ್ಲಿ ನಿರತನಾಗುವವನು ಮೊದಲು ಪ್ರತ್ಯಾಹಾರ ಮಾಡುತ್ತಾನೆ; ಅಂದರೆ, ಇಂದ್ರಿಯಗಳಿಗೆ ತಮ್ಮ ಆಹಾರಗಳಾದ ರೂಪರಸಾದಿಗಳು ಸಿಗದಂತೆ ಮಾಡುತ್ತಾನೆ, ಅಲ್ಲದೆ ಮನಸ್ಸು ಯಾವುದರ ಬಗೆಗೂ ಆಶಿಸದಂತೆ, ಚಿತ್ರ ವಿಷಯಗಳ ಕಡೆ ಹರಿಯದಂತೆ ಅವುಗಳನ್ನು ನಿಗ್ರಹಿಸುತ್ತಾನೆ. ಇದರ ಪರಿಣಾಮವಾಗಿ ಅವನ ಬಾಹ್ಯ ಪ್ರಪಂಚದ ಪ್ರಜ್ಞೆ ಮತ್ತು ತನ್ನ ಮಾನಸಿಕ ಸ್ಥಿತಿಗಳ ಅರಿವು ಇಲ್ಲದಂತಾಗುತ್ತದೆ. ಆದರೆ ನಾನು ಎಂಬ ಸ್ವಪ್ರಜ್ಞೆ ಇರುತ್ತದೆ. ಎರಡನೆ ಹಂತದಲ್ಲಿ ಅವನ ಅಂತಶ್ಚಕ್ಷುವಿಗೆ ಬಹಳ ಪ್ರಕಾಶಮಾನವಾದ ಬೆಳಗು ಕಾಣಿಸಿಕೊಳ್ಳುತ್ತದೆ. ಇದನ್ನ ವಚನಕಾರರು, ಬೆಳಗಿನ ಬೆಳಗು, ಕೋಟಿಸೂರ್ಯ ಪ್ರಕಾಶ, ದಿವ್ಯ ಪ್ರಕಾಶ, ಮುಂತಾಗಿ ಕರೆದಿದ್ದಾರೆ. ಇದು ಭೌತ ವಸ್ತುವಿನಿಂದ ಬರುವ ಬೆಳಕಲ್ಲವಾದ್ದದರಿಂದ ಅದನ್ನು ಚಿದ್ಭಳಗು, ಚಿತ್‌ಸೂರ್ಯ, ಚಿತ್‌ಪ್ರಕಾಶ ಎಂದೂ ಕರೆದಿದ್ದಾರೆ. ಈ ಬೆಳಗನ್ನು ಅವರು ಪರಶಿವನೆಂದೂ (ಅಥವಾ ಪರಶಿವನ ಪ್ರಕಾಶವೆಂದೂ) ಪರಿಗಣಿಸಿ ಅದನ್ನು ಉರಿಲಿಂಗ, ಜ್ಯೋತಿರ್ಲಿಂಗ, ಪ್ರಕಾಶಲಿಂಗ, ಎಂದು ಮುಂತಾಗಿ ಕರೆದಿದ್ದಾರೆ. ಈ ಹಂತದಲ್ಲಿ ಅನುಭಾವಿಗೆ ಸ್ವಲ್ಪ ಹೊತ್ತಿನವರೆಗೆ ಅತೀವ ಆನಂದವಾಗುತ್ತದೆ. ಇದು ಯಾವ ಐಂದ್ರಿಕ ಆನಂದವನ್ನೂ ಹೋಲುವುದಿಲ್ಲ. ಆತ್ಮವು ಇಂದ್ರಿಯ ಮತ್ತು ಅಂತಃಕರಣಗಳೊಡನೆ ಇದ್ದ ತನ್ನ ಸಂಬಂಧವನ್ನು ತಾತ್ಕಾಲಿಕವಾಗಿ ಕಡಿದುಕೊಂಡಿರುವುದರಿಂದ, ತಾನೊಂದೇ ಇರುವ ಅದರ ಆನಂದವನ್ನು ಶರಣರು ಆತ್ಮಾನಂದ, ಕೈವಲ್ಯಾನಂದ, ಚಿದಾನಂದ, ಬ್ರಹ್ಮಾನಂದ ಎಂದು ಮುಂತಾಗಿ ಕರೆದಿದ್ದಾರೆ. ಆದರೆ ಶರಣರ ಪ್ರಕಾರ ಈ ಆನಂದವೇ ಆಧ್ಯಾತ್ಮಿಕ ಜೀವನದ ಗುರಿಯಲ್ಲ. ಶರಣಸ್ಥಲದ ಸಾಧಕನು ಅನುಭಾವದ ಮೂಲಕ ಆನಂದವನ್ನು ಪಡೆದು ಇನ್ನೂ ಮುಂದೆ ಹೋಗುತ್ತಾನೆ.
ಮೂರನೆಯ ಹಂತವನ್ನು ಎರಡು ಭಾಗ ಮಾಡಬಹುದು. ಮೊದಲನೆ ಹಂತದಲ್ಲಿ ಶಿವಯೋಗಿಯು (ಅನುಭಾವಿಯು) ತನ್ನ ಆತ್ಮವು ಹಿಗ್ಗುತ್ತ ಹೋಗುವುದನ್ನೂ ಪರಮಾತ್ಮನಲ್ಲಿ ಅದು ಒಂದಾಗುವುದನ್ನೂ ಅನುಭವಿಸುತ್ತಾನೆ. ಇದನ್ನ ವಚನಕಾರರು ಲಿಂಗಾಂಗ ಸಾಮರಸ್ಯ, ಲಿಂಗೈಕ್ಯ, ಲಿಂಗಾನುಭವ, ಎಂದು ಮುಂತಾಗಿ ಕರೆದಿದ್ದಾರೆ. ಇದರಿಂದ ವ್ಯಕ್ತವಾಗುವ ಅಂಶವೇನೆಂದರೆ, ಅಂಗ (ಆತ್ಮ) ಮತ್ತು ಲಿಂಗ ಎರಡೂ ಚಿದ್ವವಸ್ತುಗಳೇ ಆದುದರಿಂದ ಅವು ಸಂದುಳಿಯದಂತೆ ಬೆರೆತು ಒಂದಾಗಲು ಸಾಧ್ಯ. ನದಿಯ ನೀರು ಸಮುದ್ರದ ನೀರಿನಲ್ಲಿ ಸಂದಿಲ್ಲದಂತೆ ಬೆರೆಯಬಹುದೇ ಹೊರತು, ಕಲ್ಲು ಅಥವಾ ಕಬ್ಬಿಣ ಎಷ್ಟು ಸಾವಿರ ವರ್ಷ ನೀರಿನಲ್ಲಿ ಮುಳುಗಿದರೂ ಅದು ನೀರಿನಲ್ಲಿ ಬೆರೆಯಲು ಸಾಧ್ಯವಿಲ್ಲ. ಕೆಲವು ವೇಳೆ ವಚನಕಾರರು ಅಂಗವು ಲಿಂಗದಲ್ಲಿ ಲೀನವಾದಂತೆ ಲಿಂಗವು ಅಂಗದಲ್ಲಿ ಲೀನವಾಗುತ್ತದೆ ಎಂದು ಹೇಳಿ ಐಕ್ಯತೆಯ ಅರ್ಥವನ್ನು ಹಿಗ್ಗಿಸಿದ್ದಾರೆ. ಈ ಕಾರಣಕ್ಕಾಗಿ ಅಲ್ಲಮಪ್ರಭು “ತುಂಬಿ ಪರಿಮಳವನುಂಡು, ಪರಿಮಳ ತುಂಬಿಯನುಂಡುದೋ? ಲಿಂಗ ಪ್ರಾಣವಾಯಿತೋ, ಪ್ರಾಣ ಲಿಂಗವಾಯಿತೋ"" ಎಂದು ಆಶ್ಚರ್ಯಚಕಿತರಾಗಿ ಕೇಳಿದ್ದಾರೆ.
ಎರಡನೆಯ ಹಂತದಲ್ಲಿ, ಅಂದರೆ ಅಂಗನು ಲಿಂಗದಲ್ಲಿ ಬೆರೆತಿರುವಾಗ, ಅನುಭಾವಿಗೆ ತಾನು ಹಾಗೆ ಲೀನವಾಗಿರುವುದಾಗಲೀ, ಲಿಂಗದ ಅಥವಾ ತನ್ನ ಬಗೆಗಾಗಲಿ ಅರಿವಾಗುವುದಿಲ್ಲ. ಇದು ಜ್ಞಾತೃ ಜ್ಷೇಯಗಳಿಲ್ಲದ ಅದ್ವೈತ ಸ್ಥಿತಿ, ಇಲ್ಲಿ ಸ್ವಪ್ರಜ್ಞೆಯೇ ಇಲ್ಲವಾದುದರಿಂದ ಅನುಭಾವಿಯು "ನನಗೆ ಯಾವುದರ ಅನುಭವವೂ ಆಗುತ್ತಿಲ್ಲ ಎಂದಾಗಲೀ "ನನಗೆ ಪರಶಿವನ ಅನುಭವವಾಗುತ್ತಿದೆ" ಎಂದಾಗಲೀ ಹೇಳುವಂತಿಲ್ಲ. ಈ ಅಂಶದಲ್ಲಿ ಅನುಭಾವವು ಸುಷುಪ್ತಿಯನ್ನು ಹೋಲುತ್ತದೆ. ಗಾಢ ನಿದ್ರೆಯಲ್ಲಿರುವವನು "ನಾನು ನಿದ್ರಿಸುತ್ತಿದ್ದೇನೆ" ಎಂದಾಗಲೀ "ನನಗೆ ಬಾಹ್ಯ ಪ್ರಜ್ಞೆಯಾಗಲೀ, ಸ್ವಪ್ರಜ್ಞೆಯಾಗಲೀ ಇಲ್ಲ" ಎಂದಾಗಲೀ ಹೇಗೆ ಹೇಳಲಾರದೋ ಹಾಗೆಯೇ ಅನುಭಾವಿಯು ತನ್ನ ಅನುಭಾವದ ಬಗೆಗೆ ಏನನ್ನೂ ಹೇಳಲಾರ. ಆದರೆ ನಿದ್ರೆಯಿಂದ ಎಚ್ಚತ್ತವನು “ನನಗೆ ನಿದ್ರೆಯಲ್ಲಿ ಯಾವುದರ ಅನುಭವವೂ ಆಗಲಿಲ್ಲ" ಎಂಬುದನ್ನು ಹೇಗೆ ಭೂತಕಾಲದ ವಾಕ್ಯದಲ್ಲಿ ಮಾತ್ರ ಹೇಳುತ್ತಾನೋ ಹಾಗೆಯೇ ಅನುಭಾವಿಯು ಜಾಗೃತ ಸ್ಥಿತಿಗೆ ಬಂದಾಗ ತನ್ನ ಅನುಭವದ ಬಗ್ಗೆ ಭೂತಕಾಲದ ವಾಕ್ಯಗಳಲ್ಲಿ ಮಾತ್ರ ಹೇಳಬಲ್ಲನು. ಹೀಗೆ ಪರಪ್ರಜ್ಞೆ, ಸ್ವಪ್ರಜ್ಞೆ ಎರಡನ್ನೂ ಕಳೆದುಕೊಂಡು ಅನುಭಾವಿಯು, ಅಲ್ಲಮಪ್ರಭುವಿನಂತೆ “ಸತ್ಯವು ಇಲ್ಲ, ಅಸತ್ಯವೂ ಇಲ್ಲ, ಸಹಜವೂ ಇಲ್ಲ, ಅಸಹಜವೂ ಇಲ್ಲ, ನಾನೂ ಇಲ್ಲ, ನೀನೂ ಇಲ್ಲ, ಇಲ್ಲ ಇಲ್ಲ ಎಂಬುವುದು ತಾನಿಲ್ಲ" ಎನ್ನುತ್ತಾನೆ.
೨. ಅನುಭಾವವು ಮುಗಿದ ನಂತರವೂ ಅನುಭಾವಿಯು ಅನುಭಾವದ ಗುಂಗಿನಲ್ಲೇ ಇರುತ್ತಾನೆ. ಅವನಿಗೆ ಯಾವುದೋ ಅಜ್ಞಾತ ಶಕ್ತಿಯು ತನ್ನನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು, ನಿಯಂತ್ರಿಸಿದಂಥ ಅನುಭೂತಿಯಾಗುತ್ತದೆ. ಅವನಿಗೆ ತಾನು ಮಾಡುವ ಕ್ರಿಯೆಗಳೆಲ್ಲವೂ ತನ್ನವಲ್ಲ, ತಾನು ಮಾಡುವ ಯೋಚನೆಗಳೆಲ್ಲವೂ ತನ್ನವಲ್ಲ, ತಾನು ಪಡುವ ಸುಖ ತನ್ನದಲ್ಲ ಎಂಬ ಪ್ರಜ್ಞೆಯೂ ಪರಶಿವನೇ ತನ್ನಿಂದ ಎಲ್ಲ ಕ್ರಿಯೆ ಮಾಡಿಸುತ್ತಾನೆ, ಎಲ್ಲ ಯೋಚನೆ ಮಾಡಿಸುತ್ತಿದ್ದಾನೆ, ಸುಖಿಸುತ್ತಿದ್ದಾನೆ ಎಂಬ ಭಾವವೂ ಬೇರೂರುತ್ತವೆ. ಅಂದರೆ, ಅನುಭಾವಿಗೆ ತನ್ನತನ ನಷ್ಟವಾಗಿದೆ. ಇದನ್ನೆ ವಚನಕಾರರು ಮನನಷ್ಟ, ಅಹಂನಷ್ಟ ಮುಂತಾಗಿ ಕರೆದಿದ್ದಾರೆ. “ಅಂಗ ಅನಂಗ ಎರಡೂ ಅಳಿದು, ನಿಜದಲ್ಲಿ ನಿಂದ ಲಿಂಗೈಕ್ಯನ ಅಂಗದ ಮೇಲುಳ್ಳ ಕ್ರಿಯೆಗಳೆಲ್ಲವೂ ಲಿಂಗ ಕ್ರಿಯೆಗಳು ನೋಡಾ! ಮನೋಲಯವಾಗಿಪ್ಪ ನಿಜಲಿಂಗೈಕ್ಯನ ಅನುಭಾವವೆಲ್ಲವೂ ಜ್ಞಾನನಷ್ಠ, ಶಬ್ದ ನಷ್ಟ.....” ಎಂಬ ಪ್ರಭುವಿನ ವಚನ ಈ ಮಾತನ್ನು ಪುಷ್ಟಿಕರಿಸುತ್ತದೆ.
ಅಂದರೆ, ಅನುಭಾವಿಯು ತನ್ನ ಮೊದಲಿನ ಸ್ವಕೇಂದ್ರೀಯ ವ್ಯಕ್ತಿತ್ವವನ್ನು ತೆಗೆದುಹಾಕಿ, ಅಲ್ಲಿ ಲಿಂಗ ಕೇಂದ್ರೀಯ ವ್ಯಕ್ತಿತ್ವವನ್ನು ಪ್ರತಿಷ್ಠಾಪಿಸಿದ್ದಾನೆ. ಆಗ ಅವನಿಗೆ ತಾನು ಬೇರೆ ಪರಶಿವ ಬೇರೆ ಎನಿಸುವುದಿಲ್ಲ. ಅವನು ತನಗೊಮ್ಮೆ ಪರಶಿವನಿಗೊಮ್ಮೆ ಎಂದು ಎರಡು ಪ್ರಸಾದಗಳನ್ನು ಮಾಡದೆ, ಪರಶಿವನೊಡನೆ ಸಹಭೋಜನದಲ್ಲಿ ಪಾಲ್ಗೊಳ್ಳುತ್ತಾನೆ; ಅಥವಾ ಚೆನ್ನಬಸವಣ್ಣ ಹೇಳುವಂತೆ ಲಿಂಗೈಕ್ಯನು (ಅನುಭಾವಿಯು) ತಾನು ಪರಶಿವನ ಅಣತಿಯಂತೆ ನಡೆದುಕೊಳ್ಳುವ ವಾಹನ, ಅಥವಾ ತಾನು ಪರಶಿವನ ದೇಹ (ಅಂಗ) ಎಂದು ತಿಳಿದುಕೊಳ್ಳುತ್ತಾನೆ.
೩. ಲಿಂಗಾಂಗ ಸಾಮರಸ್ಯವನ್ನು ಸಾಧಿಸಿದ ಅನುಭಾವಿಗೆ ತನ್ನ ಜನ್ಮ ಸಾರ್ಥಕವಾಯಿತು ಎಂಬ ತೃಪ್ತಿ ಉಂಟಾಗಿ, ತಾನಿನ್ನು ಸಾಧಿಸಬೇಕಾಗಿದ್ದೇನೂ ಇಲ್ಲ ಎಂಬ ತೃಪ್ತಿ ಉಂಟಾಗುತ್ತದೆ. ಅವನಿಗೆ ಯಾವ ಸ್ವಾರ್ಥ, ಆಸೆ ಆಕಾಂಕ್ಷೆಗಳು ಇಲ್ಲ. ಆದರೆ ಅಂಥಹವರಲ್ಲಿ ಕೆಲವರಿಗೆ ಸಾಮಾಜಿಕ ಕಳಕಳಿ ಅತೀವವಾಗಿರುತ್ತದೆ.
೪.ಅನುಭಾವವು ಅನಿರ್ವಚನೀಯ. ಇಂದ್ರಿಯಾನುಭವಕ್ಕಿಂತ ತೀರಾ ಭಿನ್ನವಾದ ಅನುಭವವನ್ನು ಯಾವ ಉಪಮೆಯ ಮೂಲಕ ವ್ಯಕ್ತಪಡಿಸಿದರೂ, ಅದರ ಸ್ವರೂಪ ನಮಗೆ ಅಪರಿಚಿತವಾಗೇ ಉಳಿಯುತ್ತದೆ. ಇದಕ್ಕೆ ಒಂದು ಪ್ರಬಲ ಕಾರಣವಿದೆ. ಇಂದ್ರಿಯ ಸಂವೇದನೆಗಳನ್ನು ನಾವು ಪ್ರತ್ಯಕ್ಷದ ಮೂಲಕ ಗಳಿಸಿದ ಪರಿಕಲ್ಪನೆಗಳ ಮೂಲಕವೇ ಯಾವಾಗಲೂ ನಿರ್ಣಯಿಸುವುದು. ಉದಾಹರಣೆಗೆ ಕಣ್ಣಿಗೆ ಯಾವುದೋ ಒಂದು ಬಣ್ಣ ಕಾಣಿಸಿಕೊಂಡಾಗ ಬುದ್ಧಿಯು ಕೆಂಪು ಬಣ್ಣಕ್ಕೆ ಸಂಬಂಧಿಸಿದ ಪರಿಕಲ್ಪನೆಯನ್ನು ಉಪಯೋಗಿಸಿಕೊಂಡು ಇದು ಕೆಂಪು ಬಣ್ಣ" ಎಂದು ನಿರ್ಣಯಿಸುತ್ತದೆ. ಆದರೆ ಅನುಭಾವಲ್ಲಾಗುವ ಘಟನೆಗಳು ಇಂದ್ರಿಯ ಅನುಭವದಲ್ಲಾಗುವ ಘಟನೆಗಳಿಗಿಂತ ತೀರಾ ಭಿನ್ನವಾಗಿರುವುದರಿಂದ, ಪ್ರಾತ್ಯಕ್ಷಿಕ ಪರಿಕಲ್ಪನೆಗಳು ಅಲ್ಲಿ ಪ್ರಯೋಜನಕಾರಿಯಾಗುವುದಿಲ್ಲ. ಚಿತ್ ಒಂದೇ ಇರುವುದನ್ನಾಗಲೀ, ಅಥವಾ ಅಂಗ ಲಿಂಗದಲ್ಲಿ ಬೆರೆಯುವುದನ್ನಾಗಲೀ ನಾವು ಕಲಿತ ಭಾಷೆಯ ಮೂಲಕ ವ್ಯಕ್ತಪಡಿಸಲು ಸಾಧ್ಯವಿಲ್ಲ. ಒಂದು ವೇಳೆ ಉಪಮೆಗಳ ಮೂಲಕ ವರ್ಣಿಸಿದರೂ ಆ ವರ್ಣನೆ ಸಂಪೂರ್ಣವಾಗುವುದಿಲ್ಲ ಉದಾಹರಣೆಗೆ, ಲಿಂಗಾಂಗ ಸಾಮರಸ್ಯವು ನದಿ ಸಮುದ್ರದಲ್ಲಿ ಸೇರಿದಂತೆ ಎಂದು ಹೇಳಿದರೆ ಕನಿಷ್ಠ ಎರಡು ಪ್ರಶ್ನೆಗಳಾದರೂ ಏಳುತ್ತವೆ. ನದಿ ಸಮುದ್ರದಲ್ಲಿ ಸೇರುವ ಮುನ್ನ ಎಲ್ಲಿಂದಲೋ ಹರಿದುಕೊಂಡು ಬರುವಂತೆ ಆತ್ಮವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಚಲಿಸುತ್ತದೆಯೋ? ನದಿ ಸಮುದ್ರವನ್ನು ಸೇರಿದಾಗ, ಸಮುದ್ರದ ನೀರು ಹೆಚ್ಚಾಗುವಂತೆ, ಆತ್ಮ ಪರಶಿವನಲ್ಲಿ ಐಕ್ಯವಾದಾಗ ಪರಶಿವನ ಗಾತ್ರವು ಇನ್ನೂ ದೊಡ್ಡದಾಗುತ್ತದೆಯೋ? ಎರಡು ಪ್ರಶ್ನೆಗಳಿಗೂ ಇಲ್ಲವೆಂದೇ ಉತ್ತರ ಹೇಳಬೇಕಾಗುತ್ತದೆ. ಅಲ್ಲದೆ ಅನುಭಾವದಲ್ಲಿ "ಗೋಚರಿಸುವ" ವಸ್ತು ಚಿದ್ವಸ್ತುವಾಗಿರುವುದರಿಂದ ಭೌತ ವಸ್ತುಗಳ ಯಾವ ವರ್ಣನೆಯೂ ಅದಕ್ಕೆ ಅನ್ವಯವಾಗುವುದಿಲ್ಲ. ಚಿದ್ವಸ್ತು ಇಲ್ಲಿಲ್ಲ, ಎಲ್ಲೆಲ್ಲಿಯೂ ಇಲ್ಲ. ಚಿದ್ವಸ್ತುವಿಗೆ ಬಣ್ಣವಿಲ್ಲ, ಗಾತ್ರವಿಲ್ಲ, ಆಕಾರವಿಲ್ಲ, ಕ್ರಿಯಾಶಕ್ತಿಯಿಲ್ಲ, ಇತ್ಯಾದಿ. ಅದಕ್ಕೆ ಉಪನಿಷತ್ಕಾರರು ಬ್ರಹ್ಮನನ್ನು, ನಿರಾಕಾರನೆಂದು ಕರೆದು ಅವನು ಅದು ಅಲ್ಲ, ಇದು ಅಲ್ಲ (ನೇತಿನೇತಿ) ಎಂದು ಹೇಳಿ, ಅಷ್ಟಕ್ಕೆ ನಿಲ್ಲಿಸಿದರು. ಅದೇ ಕಾರಣಕ್ಕಾಗಿ ವಚನಕಾರರಿಗೆ ಅನುಭಾವದಲ್ಲಿ ಗೋಚರಿಸುವ ಪರಶಿವನೂ ನಿರ್ಗುಣನೇ ಆದುದರಿಂದ, ಅವನನ್ನು ವಾಹ್ಮನೋತೀತ, ಅನಿರ್ವಾಚ್ಯ, ಅಪ್ರಮೇಯ, ನಿರ್ದ್ವಂದ್ವ, ನಿರಾಮಯ, ನಿರ್ಮಲ, ಮುಂತಾದ ನಿಷೇಧಾತ್ಮಕ ಶಬ್ದಗಳಿಂದ ವರ್ಣಸಿರುವುದು. ಆದರೆ ಇಂಥ ನಿಷೇಧಾತ್ಮಕ ವರ್ಣನೆಯು ನಮಗೆ ಪರಶಿವನ ಯಾವ ಗುಣವನ್ನೂ ಪರಿಚಯ ಮಾಡಿಕೊಡುವುದಿಲ್ಲ.
ಇಂಥ ಅನಿರ್ವಾಚ್ಯ ಪರವಸ್ತುವನ್ನು ವರ್ಣಿಸಹೋದರೆ ಅದನ್ನು ನಮ್ಮ ಮಟ್ಟಕ್ಕೆ ಇಳಿಸಿ, ಪರಿಮಿತ ವಸ್ತುವನ್ನಾಗಿ ಮಾಡುತ್ತಿದ್ದೇವೆಂದರ್ಥ.
೫. ಅನುಭಾವವು ಅನುಭಾವಿಯಲ್ಲಿ ಏಕತ್ವದ (ಐಕ್ಯ) ಭಾವನೆಯನ್ನು ಮೂಡಿಸುತ್ತದೆ. ಇಡೀ ಪ್ರಪಂಚವೇ ಒಂದೆಂದೂ, ಪ್ರಪಂಚವೂ, ಪರಶಿವನೂ ಬೇರೆ ಬೇರೆ ಅಲ್ಲವೆಂದೂ ಪರಶಿವನೂ ಜೀವನೂ ಬೇರೆ ಬೇರೆ ಅಲ್ಲವೆಂದೂ ಅವನಿಗೆ ಅನಿಸುತ್ತದೆ. ಇಂಥಹುದೇ ಅಭಿಪ್ರಾಯವನ್ನು ಶಂಕರಾಚಾರ್ಯರು ಮಂಡಿಸಿದರೂ ಅವರ ಅನುಭಾವಕ್ಕೂ ವಚನಕಾರರ ಅನುಭಾವಕ್ಕೂ ವ್ಯತ್ಯಾಸವಿದೆ. ವಚನಕಾರರು ವಿಶ್ವತೋ ಬಾಹು ವಿಶ್ವತೋ ಚಕ್ಷು, ಎತ್ತೆತ್ತ ನೋಡಿದರತ್ತತ್ತ ನೀನೇ ದೇವಾ ಎಂದು ಹೇಳುವ ಮೂಲಕ ಪರಶಿವನೂ ಇದ್ದಾನೆ, ವಿಶ್ವವೂ ಇದೆ ಎಂಬುವುದನ್ನು ಪ್ರತಿಪಾದಿಸುತ್ತಾರೆ. ಅವರು ವಿಶ್ವವನ್ನೂ ಕಂಡು ಅದರಲ್ಲಿರುವ ಪರಶಿವನನ್ನೂ ಕಂಡರೆ, ಶಂಕರಾಚಾರ್ಯರು ನಿರ್ಗುಣ ಬ್ರಹ್ಮನನ್ನಷ್ಟೆ ಕಾಣುತ್ತಾರೆ. ಪ್ರಪಂಚವನ್ನು ಮಿಥ್ಯೆಯೆನ್ನುತ್ತಾರೆ. ಅದೇ ರೀತಿ ವಚನಕಾರರು ಭಕ್ತ ದೇಹಿಕ ದೇವ, ಎಂದು ಹೇಳಿ ಭಕ್ತನು ಪರಶಿವನ ದೇಹ (ಅಂಗ) ಎಂದು ಹೇಳಿ ಭಕ್ತನೂ ಇದ್ದಾನೆ, ಪರಶಿವನೂ ಇದ್ದಾನೆ ಎಂಬ ಸಿದ್ಧಾಂತವನ್ನು ಸಾರಿದರೆ, ಶಂಕರಾಚಾರ್ಯರು ಜೀವ ಬಾಹುಳ್ಯವು ಮಿಥ್ಯೆಯೆಂದೂ ನಿರ್ಗುಣ ಬ್ರಹ್ಮ ಮಾತ್ರ ಸತ್ಯವೆಂದು ಪ್ರತಿಪಾದಿಸುತ್ತಾರೆ.
೧. ಆತ್ಮಸಾಕ್ಷಾತ್ಕಾರದ ಹಂಬಲವುಳ್ಳವರು ಒಂದೆಡೆ ಸೇರಿ ಕೈಗೊಳ್ಳುವ ಆಧ್ಯಾತ್ಮಿಕ ಚರ್ಚೆ; ತನ್ನನ್ನು ತಾನು ಅರಿತುಕೊಳ್ಳಲು ಜ್ಞಾನಿಗಳೊಂದಿಗೆ ನಡೆಸುವ ಚರ್ಚೆ ; ಕೂಡಲಸಂಗಮದೇವಯ್ಯಾ ನಿಮ್ಮ ಅನುಭಾವ ಮಾತಿನ ಮಥನವೆಂದು ನುಡಿಯಬಹುದೆ ಪ್ರಭುವೆ (ಬಸವ, ಸಮವ. ೧-೨೬೪-೯೮೧) ; ; ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ ಅನುಭಾವ ಭಕ್ತಿಗಾಧಾರ ಅನುಭಾವ ಭಕ್ತಿಗೆ ನೆಲೆವನೆ (ಜೇಡರ. ಸಮವ. ೭-೨೪೨-೭೩೧).
೨. ಶರಣರು ಒಂದೆಡೆ ಸೇರಿ ನಡೆಸುವ ಗೋಷ್ಠಿ ; ಮನದ ಮೈಲಿಗೆಯ ತೊಳೆಯಬೇಕಾದಡೆ ಕೂಡಲಚೆನ್ನಸಂಗಯ್ಯನ ಶರಣರ ಅನುಭಾವವ ಮಾಡುವುದು (ಚೆನ್ನಬ. ಸಮವ. ೩-೫೫೪-೧೫೦೧);
೩. ಶಿವಸಂಬಂಧವಾದ ಜ್ಞಾನ ; ಶಿವತತ್ತಜ್ಞಾನ ;
೪. ಪರಬ್ರಹ್ಮದ ಅರಿವುಳ್ಳವನು ; ಶಿವತತ್ತಜ್ಞಾನಿ ; ಆತ್ಮ ಆತ್ಮ ಮಥನಿಸಿ ಅನುಭಾವ ಹುಟ್ಟಿ ಹೊದ್ದಿದ ತನು ಗುಣಾದಿಗಳ ಸುಡಲಾಯಿತ್ತು ಇಂತಪ್ಪ ಅನುಭಾವರ ಅನುಭಾವವ ತೋಟೆ ಎನ್ನ ಒಡಲನುಳುಹಿಕೊಳ್ಳಾ (ಅಕ್ಕಮ. ಸಮವ. ೫-೮೪-೨೭೦).
೫. ತನ್ನನ್ನು ತಾನು ಅರಿಯುವುದು ; ಆತ್ಮವಿದ್ಯೆ ; ಆಕಾಶದ ಮಾವಿನ ಫಲವೆಂದಡೇನು ಕೊಯ್ಯಲಿಲ್ಲ ಮೆಲ್ಲಲಿಲ್ಲ ಕೂಡಲಸಂಗನ ಶರಣರ ಅನುಭಾವವಿಲ್ಲದವ ಎಲ್ಲಿದ್ದಡೇನು? ಎಂತಾದಡೇನು?
೬. ಲಿಂಗದೊಡನೆ ಅಂಗವು ಸಮರಸಗೊಳ್ಳುವ ಸ್ಥಿತಿ; ಲಿಂಗಾಂಗಸಾಮರಸ್ಯ ;
೭, ದೀಕ್ಷೆ, ಶಿಕ್ಷೆ ಮತ್ತು ಅನುಭಾವ ಎಂಬ ತ್ರಿವಿಧಗುರುಲಿಂಗದಲ್ಲಿ ಒಂದು ಪ್ರಕಾರ ; ಗುರುವಿನಿಂದ ದೀಕ್ಷೆ ಪಡೆದ ನಂತರ ಉಂಟಾಗುವ ಅರಿವು, - ಜ್ಞಾನ ; ತ್ರಿವಿಧಗುರುಲಿಂಗ ;
೮. ಪರವಸ್ತುವನ್ನು ಪ್ರಕಟಗೊಳಿಸುವ ಮೂರು ವಿಧಾನಗಳಲ್ಲಿ ಒಂದು ; ಘಟದೊಳಗಿದ್ದ ಪದಾರ್ಥವು ಆ ಘಟದ ಹೊಗೆ ಉರಿಯ ಹತ್ತಿಸಿದಲ್ಲದೆ ಪರಿಪಕ್ವವಾಗದು... ಇದು ಕಾರಣ ಕೂಡಲಚೆನ್ನಸಂಗಮದೇವಾ ಅರ್ಚನ ಅರ್ಪಣ ಅನುಭಾವಾದಿಗಳಿಂದ ನೀವು ಪ್ರಕಟಗೊಳ್ಳುವಿರಾಗಿ (ಚೆನ್ನಬ. ಸಮವ. ೩-೪೩೫-೧೨೪೧).
೯. ಪರಮಾತ್ಮನ ಚೈತನ್ಯಾಂಶ ; ಚಿತ್ಕಲೆ ; ಸ್ವಯಲಿಂಗದನುಭಾವ ತನಗೆ ದೊರೆಕೊಂಡ ಬಳಿಕ ದೇವಲೋಕವೆಂಬುದೇನೋ ಮರ್ತ್ಯಲೋಕವೆಂಬುದೇನೊ (ಬಸವ. ಸಮವ. ೧-೨೫೦-೯೪೭).)
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಅನಿರ್ವಾಚ್ಯ ಅನುಭಾವ | ಅರುವತ್ತು ನಾಲ್ಕು ಶೀಲಗಳು |