ಚಕ್ರ | ಜ್ಞಾನಪಾದೋದಕ |
ಚಾರ್ವಾಕ |
"ಚಾರ್ವಾಕ" ಎಂಬುದು ಒಂದು ಪಂಥ ಹೆಸರೋ, ಆ ಪಂಥವನ್ನು ಸ್ಥಾಪಿಸಿದವನ ಹೆಸರೋ ಗೊತ್ತಿಲ್ಲ. ಅವನ ಕೃತಿಗಳಾವುವೂ ಸಿಕ್ಕದೇ ಇದ್ದರೂ, ಅವನನ್ನು ಖಂಡಿಸಲೋಸ್ಕರ ಅವನ ವಿರೋಧಿಗಳು ಅವನ ಸಿದ್ಧಾಂತಗಳನ್ನು ಮೊದಲು ಮಂಡಿಸುತ್ತಾರೆ. ಅವನ ವಿರೋಧಿಗಳ ಪ್ರಕಾರ, ಚಾರ್ವಾಕನೆಂದರೆ ಲೋಕಾಯತ; ಅಂದರೆ, ಈ ಲೋಕವೇ ಅಂತಿಮ, ಇದಕ್ಕಿಂತ ಹೆಚ್ಚಿನದೇನೂ ಇಲ್ಲ ಎಂಬ ಸಿದ್ಧಾಂತವನ್ನು ಪ್ರತಿಪಾದಿಸುವವನು.
ಚಾರ್ವಾಕನು ಪ್ರತ್ಯಕ್ಷ ಪ್ರಮಾಣವನ್ನು ಮಾತ್ರ ನಂಬುತ್ತಾನೆ. ಅವನ ಪ್ರಕಾರ ಇಡೀ ವಿಶ್ವ ಪೃಥ್ವಿ, ಅಪ್ಪು, ವಾಯು, ಅಗ್ನಿ, ಎಂಬ ನಾಲ್ಕು ತತ್ವಗಳಿಂದಾಗಿದೆ. ಆಕಾಶ ತತ್ವವು ಪ್ರತ್ಯಕ್ಷಕ್ಕೆ ಗೋಚರವಾಗುವುದಿಲ್ಲವಾದುದರಿಂದ ಆಕಾಶ ತತ್ವವು ಇಲ್ಲವೇ ಇಲ್ಲ. ಜೀವವೂ ಚೇತನವೂ ಈ ನಾಲ್ಕು ಭೂತಗಳಿಂದಲೇ ಆಗಿದೆ. ಎಲೆ, ಅಡಿಕೆ, ಸುಣ್ಣಗಳಲ್ಲಿ ಯಾವೊಂದರಲ್ಲಿ ಕೆಂಪು ಬಣ್ಣವಿಲ್ಲದಿದ್ದರೂ, ಅವು ಒಂದು ವಿಶಿಷ್ಟ ಪ್ರಮಾಣದಲ್ಲಿ ಕೂಡಿದರೆ ಹೇಗೆ ಕೆಂಪು ಬಣ್ಣವನ್ನು ಉತ್ಪತ್ತಿ ಮಾಡಬಲ್ಲವೋ, ಹಾಗೆಯೇ ಈ ನಾಲ್ಕು ಭೂತಗಳಲ್ಲಿ ಚೇತನವಿಲ್ಲದಿದ್ದರೂ, ಅವು ವಿಶಿಷ್ಟ ಪ್ರಮಾಣಗಳಲ್ಲಿ ಕೂಡಿದಾಗ ಕಲ್ಲು, ನದಿ, ಬೆಟ್ಟ, ಗಿಡ, ಮರ, ದನಕರುಗಳು, ಮನುಷ್ಯರು ಉತ್ಪತ್ತಿಯಾಗುತ್ತವೆ. ದೇಹಕ್ಕಿಂತ ಭಿನ್ನವಾದ ಆತ್ಮವಿಲ್ಲ. ದೇಹವೇ ಆತ್ಮ, ದೇಹ ಅಥವಾ ಆತ್ಮಕ್ಕೆ ಪುನರ್ಜನ್ಮವಿಲ್ಲ. ಲೋಕಕ್ಕಿಂತ ಹೆಚ್ಚಿನ ಪರಮಾತ್ಮನಿಲ್ಲ. ಇರುವುದೊಂದೇ ಜನ್ಮವೆಂದ ಮೇಲೆ, ನಾವು ಸಾಯುವುದರೊಳಗಾಗಿ ಆದಷ್ಟು ಸಂತೋಷ ಪಡಬೇಕು; ಪುನರ್ಜನ್ಮವಿಲ್ಲ; ಪರಮಾತ್ಮನೂ ಇಲ್ಲ, ಎಂದ ಮೇಲೆ ನಾವು ಸಂತೋಷಪಡುವ ಮಾರ್ಗ ಅನೈತಿಕವಾಗಿದ್ದರೂ ಸಂಕೋಚಪಡಬೇಕಾಗಿಲ್ಲ. ಸ್ವರ್ಗ ನರಕಗಳಿಲ್ಲವೆಂದ ಮೇಲೆ ಅನೈತಿಕರಾಗಲು ಹೆದರಬೇಕಾಗಿಲ್ಲ.
ಅನೇಕ ವಚನಕಾರರು ಚಾರ್ವಾಕರನ್ನು ಬಹಳ ಹೀನಾಯವಾಗಿ ಖಂಡಿಸಿದ್ದಾರೆ. ಅವರ ನಿರೀಶ್ವರವಾದವಾಗಲಿ, ಸುಖವಾದವಾಗಲಿ, ಅನಾತ್ಮಸಿದ್ಧಾಂತವಾಗಲಿ ಅವರಿಗೆ ಸ್ವೀಕಾರಾರ್ಹವಲ್ಲ.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಚಕ್ರ | ಜ್ಞಾನಪಾದೋದಕ |