ಜ್ಞಾನವಾರು | ತತ್ವ, ತತ್ವಜ್ಞಾನ, ತತ್ವತ್ರಯ |
ಜೀವತ್ರಯ |
ಅವಸ್ಥೆಗಳಿಗನುಗುಣವಾಗಿ ಜೀವಾತ್ಮನನ್ನು ವಿಶ್ವ, ತೈಜಸ ಮತ್ತು ಪ್ರಾಜ್ಞ ಎಂದು ಕರೆಯಲಾಗುತ್ತದೆ. ಜಾಗೃದವಸ್ಥೆಯಲ್ಲಿರುವ ಜೀವಾತ್ಮನೇ ವಿಶ್ವ, ಸ್ವಪ್ನಾವಸ್ಥೆಯಲ್ಲಿರುವ ಜೀವಾತ್ಮನೇ ತೈಜಸ ಮತ್ತು ಸುಷುಪ್ತಿ ಅವಸ್ಥೆಯಲ್ಲಿರುವ ಜೀವಾತ್ಮನೇ ಪ್ರಾಜ್ಞ
ವಿಶ್ವ : ಜಾಗೃದವಸ್ಥೆಯಲ್ಲಿರುವ ಜೀವನು ಎಲ್ಲ ಪ್ರಾಪಂಚಿಕ (ವಿಶ್ವ) ವ್ಯವಹಾರಗಳಲ್ಲಿ ನಿರತನಾಗಿರುತ್ತಾನೆ. ಸ್ಕೂಲ ಶರೀರಾಭಿಮಾನಿಯಾದ ವಿಶ್ವನು ಬೇಕು ಬೇಡಗಳ ಸಾಧನೆಯಲ್ಲಿ ಹೆಚ್ಚಾಗಿ ವ್ಯವಹರಿಸುತ್ತಿದ್ದರೂ, ಗುರು-ಶಿಷ್ಯ, ಬಂಧನ-ಮೋಕ್ಷ, ಮುಂತಾದವುಗಳ ಸಾಧನೆಯಲ್ಲೂ, ಜ್ಞಾನಾರ್ಜನೆಯಲ್ಲೂ ನಿರತನಾಗಿರುತ್ತಾನೆ.
ತೈಜಸ : ಸೂಕ್ಷ್ಮಶರೀರದ ಮೂಲಕ ಸ್ವಪ್ನಾವಸ್ಥೆಯಲ್ಲಿ ಮಾನಸಿಕ ವಿಷಯಗಳೊಡನೆ ವ್ಯವಹರಿಸುವ ಜೀವನೇ ತೈಜಸ ಎನಿಸಿಕೊಳ್ಳುತ್ತಾನೆ. ಸ್ವಪ್ನಾವಸ್ಥೆಯಲ್ಲಿ ಸ್ಥೂಲ ಶರೀರವು ಇಚ್ಛಾಪೂರ್ವಕವಾಗಿ ಚಲಿಸುವುದಿಲ್ಲ, ಹಾಗೂ ಇಂದ್ರಿಯಗಳು ನಿಷ್ಕ್ರಿಯವಾಗಿರುತ್ತವೆ. ಆಗ ಮನಸ್ಸು ತನ್ನಲ್ಲೇ ಇರುವ ಸಂಸ್ಕಾರಗಳನ್ನು ಬಳಸಿಕೊಂಡು ತನ್ನದೇ ಆದ ಸ್ವಪ್ನ ಲೋಕವನ್ನು ನಿರ್ಮಿಸುತ್ತದೆ. ಇಲ್ಲಿ ನಡೆಯುವ ಕ್ರಿಯೆಗಳು ಸೂಕ್ಷ್ಮಶರೀರದಿಂದ ಉಂಟಾದ ಕ್ರಿಯೆಗಳಾಗಿವೆ. ಇಂತಹ (ಸ್ವಪ್ನ)ಲೋಕವನ್ನು ಅನುಭವಿಸುವ ಜೀವನೇ ತೈಜಸ.
ಪ್ರಾಜ್ಞ: ಸುಷುಪ್ತಿಯಲ್ಲಿ ಸ್ಕೂಲಶರೀರವೂ ಇಚ್ಛಾಪೂರ್ವಕ ಕೆಲಸ ಮಾಡುವುದಿಲ್ಲ; ಇಂದ್ರಿಯ ಮತ್ತು ಅಂತ:ಕರಣಗಳೂ ಕೆಲಸ ಮಾಡುವುದಿಲ್ಲ. ಅಂದರೆ, ಜೀವನು ಪ್ರಪಂಚದೊಡನೆಯಾಗಲಿ, ಸ್ವಪ್ನಲೋಕದೊಡನೆಯಾಗಲಿ ವ್ಯವಹರಿಸದೆ, ತಾನೊಬ್ಬನೇ ತಾತ್ಕಾಲಿಕವಾಗಿ ನಿಸ್ಸಂಗಿಯಾಗಿರುತ್ತಾನೆ. ಆದರೆ ಅವನೊಡನೆ ಕಾರಣ ಶರೀರವಿರುತ್ತದೆ. ಕಾರಣ ಶರೀರದಲ್ಲಿ ಅವಿದ್ಯೆ ಮತ್ತು ಕರ್ಮಗಳಿರುತ್ತವೆಯಾದುದರಿಂದ, ಸುಷುಪ್ತಿಯಲ್ಲಿರುವ ಆತ್ಮನು ನಿಸ್ಸಂಗಿಯಾದರೂ ಮುಕ್ತನಲ್ಲ. ಹೀಗೆ ಕಾರಣಶರೀರದೊಡನೆ ಇರುವ ಆತ್ಮನೆ ಪ್ರಾಜ್ಞ.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಜ್ಞಾನವಾರು | ತತ್ವ, ತತ್ವಜ್ಞಾನ, ತತ್ವತ್ರಯ |