ಸಾಗರ ತರಂಗ ನ್ಯಾಯ | ಸೃಷ್ಟಿ |
ಸಾದಾಖ್ಯ |
ಸಾದಾಖ್ಯ ಎಂಬ ಪದವು ಸತ್ (ನಿಜವಾದ ) “ಆಖ್ಯ' (ಮುಖ) ಎಂಬ ಪದಗಳಿಂದ ಕೂಡಿ ಆದುದು. ಆ ಸಂಸ್ಕೃತ ಪದಕ್ಕೆ ಮುಖ ಮತ್ತು ಬಾಯಿ ಎಂಬ ಎರಡು ಅರ್ಥಗಳಿದ್ದು ವಚನಕಾರರು ಈ ಪದವನ್ನು ಎರಡೂ ಅರ್ಥಗಳಲ್ಲಿ ಬಳಸುತ್ತಾರೆ.
ಸಾದಾಖಿಗಳು ಆರೆಂದು ಕೆಲವು ವಚನಕಾರರು, ಐದೆಂದು ಕೆಲವು ವಚನಕಾರರು ಅಭಿಪ್ರಾಯಪಡುತ್ತಾರೆ. ಅಷ್ಟೆ ಅಲ್ಲ, ಸಾದಾಖ್ಯೆಗಳ ಸ್ವರೂಪ ಮತ್ತು ಕರ್ತವ್ಯಗಳ ಬಗೆಗೂ ಒಮ್ಮತವಿಲ್ಲ. ತೋಂಟದ ಸಿದ್ದಲಿಂಗ ಶಿವಯೋಗಿಗಳು ಸಾದಾಖ್ಯಗಳು ಐದೆಂದು ಕೆಲವು ಸಾರಿ ಹೇಳಿ, ಆರೆಂದು ಕೆಲವು ಸಾರಿ ಹೇಳುತ್ತಾರೆ. ಉದಾಹರಣೆಗೆ ನೋಡಿ ೧೧:೩೬, ೬೩, ಇತ್ಯಾದಿ.
ಸಾದಾಖ್ಯಗಳ ಹೆಸರುಗಳೂ ಸಹ ಒಂದೇ ತೆರನಿರುವುದಿಲ್ಲ. ತೋಂಟದ ಸಿದ್ಧಲಿಂಗ ಶಿವಯೋಗಿಗಳು ಮಹಾಸಾದಾಖ್ಯ, ಶಿವಸಾದಾಖ್ಯ, ಮೂರ್ತಿ ಸಾದಾಖ್ಯ, ಅಮೂರ್ತಿ ಸಾದಾಖ್ಯ, ಕರ್ತೃ ಸಾದಾಖ್ಯ ಮತ್ತು ಕರ್ಮಸಾದಾಖ್ಯ ಎಂಬ ಆರು ಸಾದಾಖ್ಯೆಗಳನ್ನು ಗುರುತಿಸಿದ್ದಾರೆ. (೧೧:೬೩) ಕೆಲವರು ಸಾದಾಖ್ಯಗಳಿಗೆ ಸದ್ಯೋಜಾತ, ವಾಮದೇವ, ಅಘೋರ, ತತ್ಪರುಷ ಮತ್ತು ಈಶಾನ ಎಂಬ ಹೆಸರುಗಳನ್ನು ಕೊಟ್ಟಿದ್ದಾರೆ.
ಆಗಮಗಳಲ್ಲಿಯೂ, ವಚನಗಳಲ್ಲಿಯೂ ಬರುವ ಈ ಪದಕ್ಕೆ ಪ್ರಾಯಶಃ ಈ ಅರ್ಥವಿದ್ದೀತು ; ಶಿವನು ಚಿತ್‌ಸ್ವರೂಪನಾದುದರಿಂದ ಅವನು ಇಂದ್ರಿಯಾತೀತ ಮತ್ತು ಮನೋತೀತ. ಅಂಥ ಶಿವನು ಭಕ್ತರಿಗೆ ಕಾಣಿಸಿಕೊಳ್ಳಬೇಕಾದರೆ ಯಾವುದಾದರೊಂದು ಮಾಧ್ಯಮ ಬೇಕು, ಅಥವಾ ಅವನು ಯಾವುದಾದರೊಂದು ರೂಪದಲ್ಲಿ ಪ್ರಕಾಶಿಸಬೇಕು. ಇಂಥ ಮಾಧ್ಯಮ ಅಥವಾ ಪ್ರಕಾಶವೇ ಮುಖ ಅಥವಾ ಸಾದಾಖ್ಯ. ಅರ್ಥಾಥ್, ಪರಶಿವನು ಶಕ್ತಿಗಳನ್ನು ಚಿನ್ಮಯ ಮಾಡುವ ಮೂಲಕ ಪ್ರಕಾಶಿಸುತ್ತಾನೆ (ವ್ಯಕ್ತವಾಗುತ್ತಾನೆ. ಹೀಗೆ ಶಿವನು ಒಬ್ಬನೇ ಆದರೂ ಭಕ್ತರಿಗೆ ಐದು (ಅಥವಾ ಆರು) ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಆದರೆ ಆ ಮುಖಗಳು ಇಂದ್ರಿಯಗೋಚರವಲ್ಲ.
ಸಾದಾಖ್ಯ ಪರಿಕಲ್ಪನೆಯು ಪ್ರಾಯಶಃ ಪರಶಿವನ ಸರ್ವವ್ಯಾಪಕತ್ವವನ್ನೂ ಸರ್ವಜ್ಞತ್ವವನ್ನೂ ಪ್ರತಿಬಿಂಬಿಸುತ್ತವೆ. ಹೇಗೆಂದರೆ ಕಾಲದೇಶಗಳ ಮಿತಿಗೊಳಪಟ್ಟ ಮಾನವನು ಯಾವುದಾದರೊಂದು ಸ್ಥಳ ಅಥವಾ ದಿಕ್ಕಿಗೆ ಹೋಗಬಲ್ಲನು, ಆದರೆ ಪರಶಿವನು ಎಲ್ಲಾ ಆರು ದಿಕ್ಕುಗಳಿಗೂ (ಮೇಲೆ, ಕೆಳಗೆ, ಹಿಂದೆ, ಮುಂದೆ, ಎಡ ಮತ್ತು ಬಲ) ಏಕಕಾಲಕ್ಕೆ ಹೋಗಬಲ್ಲನು. ಅಥವಾ ವ್ಯಾಪಾಸಿಕೊಳ್ಳಬಲ್ಲನು. ಅದೇ ರೀತಿ ಮನುಷ್ಯನು ಒಂದು ಕಾಲದಲ್ಲಿ ಒಂದೇ ದಿಕ್ಕಿನಲ್ಲಿ ನೋಡಬಲ್ಲನು, ಅಥವಾ ನೋಡಿ ಅರಿಯಬಲ್ಲನು. ಆದರೆ ಪರಶಿವನು ಆರು ದಿಕ್ಕುಗಳಲ್ಲಿ ಏಕಕಾಲದಲ್ಲಿ ನೋಡಿ ತಿಳಿಯಬಲ್ಲನು. ಹೀಗೆ ನೋಡಲು ಅವನಿಗೆ ಆರು ಮುಖಗಳು ಬೇಕು. ಆ ದೃಷ್ಟಿಯಿಂದ ಪರಶಿವನಿಗೆ ಆರು ಸಾದಾಖ್ಯಗಳಿವೆ ಎಂದು ವಚನಕಾರರು ಹೇಳಿರಬಹುದು. ಕೆಲವು ಸಾರಿ ನಾಲ್ಕು ದಿಕ್ಕುಗಳನ್ನು ನೋಡಲು ನಾಲ್ಕು ಮುಖಗಳೂ, ಮಧ್ಯದಲ್ಲಿರಲೂ ಐದನೇ ಮುಖವೂ ಬೇಕೆಂದು ಕೆಲವರು ಐದೇ ಸಾದಾಖ್ಯಗಳು ಸಾಕೆಂದು ನಂಬಿರಬಹುದು.
ಮೇಲಿನ ಈ ಎರಡು ಅರ್ಥಗಳು ಕೇವಲ ಊಹೆಯ ಆಧಾರದ ಮೇಲೆ ನಿಂತಿದ್ದು, ಅವುಗಳ ಬಗೆಗೆ ವಚನಕಾರರು ಏನು ಹೇಳುತ್ತಾರೆಂಬುದನ್ನು ನೋಡೋಣ. ಅವರು ಸೃಷ್ಟಿಗೆ ಸಂಬಂಧಿಸಿದಂತೆ ಪಂಚಸಾದಾಖ್ಯ ಕಲ್ಪನೆಯನ್ನು ಹೀಗೆ ಪ್ರತಿಪಾದಿಸಿದ್ದಾರೆ. ಮೂಲಶಕ್ತಿಯು ಪರಶಿವನಲ್ಲಿ ಯಾವಾಗಲೂ ಅವಿನಾಭಾವದಿಂದ ಇರುತ್ತದೆ. ಅದು ಪ್ರಲಯಕಾಲದಲ್ಲಿ ಅವನಲ್ಲಿ ಅವ್ಯಕ್ತವಾಗಿ ಅಡಗಿದ್ದರೆ, ಸೃಷ್ಟಿಯ ಕಾಲದಲ್ಲಿ ವ್ಯಕ್ತವಾಗುತ್ತದೆ. ಆದರೆ ಅವ್ಯಕ್ತವಾಗಿದ್ದ ಶಕ್ತಿಯು ನಾನಾ ಹಂತಗಳಲ್ಲಿ ವಿಕಸಿತವಾಗಿ, ಕೊನೆಗೆ ಪ್ರಪಂಚದ ವಿವಿಧ ಚರಾಚರವಸ್ತುಗಳಾಗಿ ವ್ಯಕ್ತವಾಗಬೇಕಾದರೆ, ಅದಕ್ಕೆ ಪ್ರತಿಹಂತದಲ್ಲಿಯೂ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿ, ಅದನ್ನು ನಿಯಂತ್ರಿಸಲು ಪರಶಿವನೆಂಬ ಚಿದ್ವಸ್ತು ಬೇಕೇ ಬೇಕು. ವಿವಿಧ ಹಂತಗಳಲ್ಲಿ ಏಕಸಿತವಾದ ಶಕ್ತಿಗೆ ಪರಾಶಕ್ತಿ, ಆದಿಶಕ್ತಿ, ಮುಂತಾದ ಹೆಸರುಗಳಿರುವಂತೆ, ಅವುಗಳಿಗೆ ವಿವಿಧ ಹಂತಗಳಲ್ಲಿ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುವ ಪರಶಿವನಿಗೂ ಶಿವಸಾದಾಖ್ಯ, ಅಮೂರ್ತಿಸಾದಾಖ್ಯ, ಮುಂತಾದ ಹೆಸರುಗಳಿವೆ. ವಚನಕಾರರು ಯಾವ ಸಾದಾಖ್ಯ ಯಾವ ಶಕ್ತಿಯ ಜೊತೆಗಿರುತ್ತದೆ ಎಂಬುದನ್ನು ಹೀಗೆ ತಿಳಿಸಿದ್ದಾರೆ.
ಸದ್ಯೋಜಾತ ಅಥವಾ ಶಿವಸಾದಾಖ್ಯ - ಶಾಂತ್ಯತೀತ ಕಲೆ ಅಥವಾ ಪರಾಶಕ್ತಿ
ವಾಮದೇವ ಅಥವಾ ಅಮೂರ್ತಿಸಾದಾಖ್ಯ - ಶಾಂತಿಕಲಾ ಅಥವಾ ಆದಿಶಕ್ತಿ
ಅಘೋರ ಅಥವಾ ಮೂರ್ತಿ ಸಾದಾಖ್ಯ - ವಿದ್ಯಾಕಲಾ ಅಥವಾ ಇಚ್ಛಾಶಕ್ತಿ
ತತ್ಪುರಷ ಅಥವಾ ಕರ್ತೃಸಾದಾಖ್ಯ - ಪ್ರತಿಷ್ಠಾಕಲಾ ಅಥವಾ ಜ್ಞಾನಶಕ್ತಿ
ಈಶಾನ್ಯ ಅಥವಾ ಕರ್ಮಸಾದಾಖ್ಯ. ನಿವೃತ್ತಿಕಲಾ ಅಥವಾ ಕ್ರಿಯಾಶಕ್ತಿ
ಶಿವ ತಾನೊಬ್ಬನೇ ಸೃಷ್ಟಿಸಲಾರ, ಶಕ್ತಿ ತಾನೊಂದೇ ವಿಕಾಸವಾಗಲಾರದು. ಶಿವನ ಪ್ರೇರಣೆಯಂತೆ ಶಕ್ತಿ ವಿಕಾಸವಾದರೆ ಅದೇ ಸೃಷ್ಟಿ
ಆಧ್ಯಾತ್ಮಿಕ ಜೀವನದ ದೃಷ್ಟಿಯಿಂದ ನೋಡಿದಾಗ, ಸಾದಾಖ್ಯ ಪರಿಕಲ್ಪನೆಗೆ ಹೆಚ್ಚಿನ ಅರ್ಥ ಬರುತ್ತದೆ. ಆಗ ಸಾದಾಖ್ಯಕ್ಕೆ ಬಾಯಿ ಎಂಬರ್ಥ ಕೊಡಬೇಕಾಗುತ್ತದೆ. ಭಕ್ತನು ಇಡೀ ವಿಶ್ವವೂ ತನ್ನ ದೇಹ, ಇಂದ್ರಿಯ, ಕರಣಾದಿಗಳೆಲ್ಲವೂ ಶಿವನಿಂದ ಪಡೆದ ಸಾಲವೆಂದು ತಿಳಿದು, ಅವುಗಳನ್ನು ಹಿಂದಿರುಗಿಸುವುದು ತನ್ನ ಕರ್ತವ್ಯವೆಂದು ತೀರ್ಮಾನಿಸಿದಾಗ, ಅವನ ನಿಜವಾದ ಆಧ್ಯಾತ್ಮಿಕ ಜೀವನ ಪ್ರಾರಂಭವಾಗುತ್ತದೆ. ಆಗ ಅವನು ತನ್ನ ಎಲ್ಲವನ್ನೂ ಅಂದರೆ, ತಾನು ಸೇವಿಸುವ ನೀರು, ಆಹಾರ, ಕೇಳುವ ಶಬ್ದ, ವಾಸಿಸುವ ವಾಸನೆ, ಬುದ್ದೀಂದ್ರಿಯ ಕರ್ಮೇಂದ್ರಿಯಗಳು ಮೊದಲಾದವುಗಳೆಲ್ಲವನ್ನೂ ಪರಶಿವನಿಗೆ ಸಮರ್ಪಿಸುತ್ತಾನೆ. ಹೀಗೆ ಸಮರ್ಪಿಸುವಾಗ ಅವನು ಆಯಾ ಪದಾರ್ಥಗಳನ್ನು ಕೈಯಲ್ಲಿ ಸ್ಪರ್ಶಿಸದೇ, ಅವೆಲ್ಲಿಯೋ ಅಲ್ಲಿಂದಲೇ, ಮನಸ್ಸಿನಲ್ಲೇ, ಪರಶಿವನ ಆರು ಅಥವಾ ಐದು ಬಾಯಿಗಳಿಗೆ (ಸಾದಾಖ್ಯಗಳಿಗೆ) ಅರ್ಪಿಸುತ್ತಾನೆ. ಆ ಮಾತು " .... ಇನ್ನಿದಕ್ಕೆ ಅರ್ಪಿತ ಮುಖಂಗಳ ಹೇಳಿಹೆನು : ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದ ಲಿಂಗ, ಮಹಾಲಿಂಗ ಈ ಐದು ಲಿಂಗವೂ ಆಚಾರ ಲಿಂಗಕ್ಕೆ ಮುಖವೆಂದರಿಯಲುಬೇಕಯ್ಯಾ, ಶಿವಲಿಂಗ, ಜಂಗಮಲಿಂಗ, ಪ್ರಸಾದ ಲಿಂಗ, ಮಹಾಲಿಂಗ, ಆಚಾರಲಿಂಗ ಈ ಐದು ಲಿಂಗವು ಗುರುಲಿಂಗಕ್ಕೆ ಮುಖವೆಂದು ಅರಿಯಲು ಬೇಕಯ್ಯಾ . . ಹೀಂಗೆ ಅಂಗಮುಖಗಳಲ್ಲಿಯೂ ಲಿಂಗವೇ ಮುಖವಾಗಿಪ್ಪ ಭೇದವನರಿಯಬೇಕಯ್ಯಾ . . .” (೧೧:೪೧೩) ಎಂಬ ತೋಂಟದ ಸಿದ್ಧಲಿಂಗ ಶಿವಯೋಗಿಗಗಳ ವಚನದಿಂದ ಸ್ಪಷ್ಟವಾಗುತ್ತದೆ. ಆಗ ನಮ್ಮ ಇಂದ್ರಿಯದ ಪ್ರತಿಯೊಂದು ಬಾಗಿಲು ಲಿಂಗದ ಪರಶಿವನ ಬಾಯಿಯಾಗುತ್ತದೆ. ಈ ಮಾತೂ ಸಹ “ಅಂಗವಾದ ಭಕ್ತನು ಸುಚಿತ್ತವೆಂಬ ಹಸ್ತದಿಂದ ಆಚಾರಲಿಂಗಕ್ಕೆ ಪ್ರಾಣವೆಂಬ ಮುಖದಲ್ಲಿ ಗಂಧದ ಸಮರ್ಪಣವ ಮಾಡಿ ಆಚಾರಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯಾ. ಜಲವೇ ಅಂಗವಾದ ಮಹೇಶ್ವರನು ಸುಬುದ್ದಿಯೆಂಬ ಹಸ್ತದಿಂದ ಗುರುಲಿಂಗಕ್ಕೆ ಜಿಹ್ವೆಯೆಂಬ ಮುಖದಲ್ಲಿ ರಸವನು ಸಮರ್ಪಣವ ಮಾಡಿ ಗುರುಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯಾ....” (೧೧:೪೧೪) ಎಂಬ ಅವರ ವಚನದಿಂದಲೇ ಸ್ಪಷ್ಟವಾಗುತ್ತದೆ.
ಕೆಲವು ಸೃಷ್ಟಿಯ ವಚನಗಳಲ್ಲಿ ಶಕ್ತಿವಿಕಾಸದ ಪರಿಕಲ್ಪನೆಯ ಜೊತೆಗೆ ಸಾದಾಖ್ಯದ ಪರಿಕಲ್ಪನೆಯೂ ಬರುತ್ತದೆ. ಅಲ್ಲಿಯೂ ಸಹ ಸಾದಾಖ್ಯ ಎಂಬ ಪದಕ್ಕೆ ಬಾಯಿ ಎಂಬರ್ಥವೇ ಇದೆ. ಉದಾಹರಣೆಗೆ ಆ ... ಆ ಲಿಂಗದ ಮಧ್ಯದಲ್ಲಿ ಬೀಜದಿಂದ ವೃಕ್ಷವು ಉದಯವಾಗುವ ಹಾಂಗೆ, ಆ ಲಿಂಗವು ತನ್ನ ಇಚ್ಛಾಶಕ್ತಿಯ ಕೂಡಿಕೊಂಡು ಜಗದುತ್ಪತ್ತಿ ಸ್ಥಿತಿ ಲಯಂಗಳಿಗೆ ಕರ್ತುವಾಗಿ..... ಒಪ್ಪುತ್ತಿಪ್ಪುದು ಸದಾಶಿವ ಮೂರ್ತಿ. ಆ ಸದಾಶಿವನ ಈಶಾನ್ಯ ಮುಖದಲ್ಲಿ ಆಕಾಶ ಪುಟ್ಟಿತ್ತು, ತತ್ಪುರುಷ ಮುಖದಲ್ಲಿ ವಾಯು ಪುಟ್ಟಿತ್ತು...” (೧೧:೬೭) ಎಂಬ ವಚನವೂ, ಇಂತೆನೆವ ಶಿವನ ಮುಖದಲ್ಲಿ ಒಗೆದ ಭೂತಗಳಾವುದೆಂದಡೆ: ಸದ್ಯೋಜಾತ ಮುಖದಲ್ಲಿ ಪೃಥ್ವಿ, ವಾಮದೇವ ಮುಖದಲ್ಲಿ ಅಪ್ಪು, ಅಘೋರ ಮುಖದಲ್ಲಿ ಅಗ್ನಿ, ತತ್ಪುರುಷ ಮುಖದಲ್ಲಿ ವಾಯು, ಈಶಾನ್ಯ ಮುಖದಲ್ಲಿ ಆಕಾಶ' (೧೧:೫೪೫) ಎಂಬ ವಚನವೂ ಈ ಮಾತನ್ನು ಪುಷ್ಟಿಕರಿಸುತ್ತದೆ. ಹೀಗೆ ಸಾದಾಖ್ಯೆಗಳು ಹೇಗೆ ಶಿವನ ಸೃಷ್ಟಿಯೋ ಹಾಗೆಯೇ, ಸಾದಾಖ್ಯಗಳು ಶಕ್ತಿಯೊಡಗೂಡಿ ವಿವಿಧ ತತ್ವಗಳನ್ನು ಸೃಷ್ಟಿಸುತ್ತವೆ.
ಇಲ್ಲಿ ಬಾಯಿ ಅಥವಾ ಮುಖ ಎಂಬ ಅರ್ಥವು “ಪರಶಿವನಿಗೆ ವಾಸ್ತವವಾಗಿಯೂ ಒಂದು ದೇಹವಿದೆ, ಅದಕ್ಕೊಂದು ತಲೆಯಿದೆ, ಅದರಲ್ಲೊಂದು ಬಾಯಿಯಿದೆ ಎಂಬ ತಪ್ಪು ಕಲ್ಪನೆಗೆ ಎಡೆಮಾಡಿಕೊಡಬಾರದು. ಅನೇಕ ದಾರ್ಶನಿಕ ವಿಚಾರಗಳನ್ನು ನಾವು ನೇರವಾದ ಭಾಷೆಯಲ್ಲಿ ಹೇಳಲು ಸಾಧ್ಯವಿಲ್ಲ. ಆಗೆಲ್ಲ ನಾವು ಉಪಮೆ ಮುಂತಾದ ಆಲಂಕಾರಿಕ ಭಾಷೆಯನ್ನೇ ಬಳಸುವುದು ಅನಿವಾರ್ಯವಾಗುತ್ತದೆ. ಪರಶಿವನ ಮುಖ, ಸಾದಾಖ್ಯ, ಇಂದ್ರಿಯಗಳ ಬಾಗಿಲು, ವಿಶ್ವತೋಬಾಹು, ಸುಹಸ್ತ, ಮುಂತಾದ ಪದಗಳೂ ಅಂತಹ ಇತರ ಪದಗಳೂ ಆಲಂಕಾರಿಕ ಭಾಷೆಯೇ. ಅವುಗಳನ್ನು ವಾಚ್ಯಾರ್ಥದಲ್ಲಿ ತೆಗೆದುಕೊಳ್ಳಬಾರದು. ಹಾಗೆ ವಾಚ್ಯಾರ್ಥದಲ್ಲಿ ತೆಗೆದುಕೊಂಡರೆ ಶಿವನಿಗೆ ಮಾನವಗುಣಗಳನ್ನು ಆರೋಪಿಸಬೇಕಾಗುತ್ತದೆ. ಶಿವನಿಗೆ ಅಷ್ಟತನು (ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ, ಆತ್ಮ, ಸೂರ್ಯ ಮತ್ತು ಚಂದ್ರ ಎಂಬ ಎಂಟು ಘಟಕಗಳಿಂದ ಕೂಡಿದ ದೇಹ) ಇದೆ ಎಂದು ತೋಂಟದ ಸಿದ್ದಲಿಂಗ ಶಿವಯೋಗಿಗಳೂ ಇತರ ವಚನಕಾರರೂ ಹೇಳಿದರೂ, ಆ ಅಷ್ಟತನು ನಮ್ಮ ತನುವಿನಂತಹುದಲ್ಲ ಎಂದು ಅವರೇ ಹೇಳುತ್ತಾರೆ. ಉದಾಹರಣೆಗೆ ಆಕಾರವಿಲ್ಲದಾತಂಗೆ ಅಂಗವೆಂದೇಕೆ ಕಲ್ಪಿಸಿ ಹೇಳುವಿರಿ?” ಎಂದು ಸಿದ್ದಲಿಂಗ ಶಿವಯೋಗಿಗಳು ಕೇಳುವಾಗ, ಪರಶಿವನಿಗೆ ನಮ್ಮ ಆಕಾರದ ದೇಹವಿಲ್ಲ ಎಂಬ ಅವರ ಅಭಿಪ್ರಾಯ ಸ್ಪಷ್ಟವಾಗುತ್ತದೆ.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಸಾಗರ ತರಂಗ ನ್ಯಾಯ | ಸೃಷ್ಟಿ |