Previous ಭಕ್ತಿ ಭವರಾಟಳ, ಭವಚಕ್ರ Next

ಭರಿತಾರ್ಪಣ

ಭರಿತಾರ್ಪಣ

ಭರಿತಾರ್ಪಣವೆಂದರೆ ತೃಪ್ತಿಯಾಗುವವರೆಗೂ ಅರ್ಪಣೆ ಮಾಡುವುದು ಎಂದರ್ಥ. ಈ ಅರ್ಥಕ್ಕೆ ಎರಡು ಮಗ್ಗಲುಗಳಿವೆ; ಅರ್ಪಣೆ ಮಾಡುವ ಭಕ್ತನು ತನಗೆ ತೃಪ್ತಿಯಾಗುವವರೆಗೂ ಅರ್ಪಿಸಬೇಕು ಎಂಬುದು ಒಂದು ಮಗ್ಗಲಾದರೆ, ಅರ್ಪಣೆ ಸ್ವೀಕರಿಸುವ ಗುರು, ಲಿಂಗ ಮತ್ತು ಜಂಗಮರು ತೃಪ್ತಿಯಾಗುವವರೆಗೂ ಅರ್ಪಿಸಬೇಕು ಎಂಬುದು ಮತ್ತೊಂದು ಮಗ್ಗಲು. ಇವು ಪರಸ್ಪರ ಸಂಬಂಧವುಳ್ಳ ಅರ್ಥಗಳು ಎಂಬುದನ್ನು ನಾವು ಮರೆಯಬಾರದು.

ಚೆನ್ನ ಕೂಡಲ ರಾಮೇಶ್ವರ ಲಿಂಗ ಎಂಬ ಅಂಕಿತವನ್ನಿಟ್ಟುಕೊಂಡು ವಚನಗಳನ್ನು ಬರೆದಿರುವ ಭರಿತಾರ್ಪಣದ ಚೆನ್ನಬಸವಣ್ಣನು ಭರಿತಾರ್ಪಣದ ಕೆಲವು ನಿಯಮಗಳನ್ನು ತಿಳಿಸಿದ್ದಾನೆ. ಅವುಗಳಲ್ಲಿ ಮುಖ್ಯವಾದ ಕೆಲವು ಹೀಗಿವೆ :

೧. ಹಸಿವು ಅಥವಾ ನಾಲಗೆಯ ಚಪಲವನ್ನು ತೀರಿಸಿಕೊಳ್ಳುವ ಉದ್ದೇಶದಿಂದ ಪದೇ ಪದೇ ಲಿಂಗಾರ್ಪಿತ ಮಾಡಿ ಆಹಾರ ಸ್ವೀಕರಿಸುವುದು ಸ್ವಾಥವೇ ಹೊರತು, ಭರಿತಾರ್ಪಣವಲ್ಲ.

೨. ನಮಗೆ ಏನೆಲ್ಲವನ್ನೂ ಕೊಟ್ಟಿರುವುದಾಗಿ, ನಾವು ಪರಮಾತ್ಮನಿಗೆ ಕೃತಜ್ಞತೆ ತೋರಿಸಬೇಕು. ಅವನಿಗೆ ತೋರಿಸುವ ಭಕ್ತಿಯೇ ಆ ಕೃತಜ್ಞತೆಯ ವ್ಯಕ್ತರೂಪ. ಕೃತಜ್ಞತೆ ತೋರಿಸದೆ ಹಾಗೆಯೇ ಭಂಜಿಸುವುದು ಭಕ್ತಿಯನ್ನು ಮರೆತಂತೆ, “ಭಕ್ತಿಯ ಮರೆದು, ಸತ್ಯವ ತೊರೆದ, ದುರ್ಮತ್ತಂಗೆ ಭರತಾರ್ಪಣವಿಲ್ಲ. (೮:೪೦೪)

೩. ನೋಡಿ ಅನುಭವಿಸಿ, ಅನಂತರ ಅನಂತರ ಮುಟ್ಟಿ ಅನುಭವಿಸಿ ಅರ್ಪಿಸುವುದು ಭರಿತಾರ್ಪಣವಲ್ಲ. ವಸ್ತುಗಳನ್ನು ನೋಡುವ ಮುನ್ನ, ಮುಟ್ಟುವ ಮುನ್ನ, ಮನಸ್ಸಿನಲ್ಲೇ ಭಕ್ತಿಪೂರ್ವಕವಾಗಿ ಅರ್ಪಿಸಬೇಕು.

೪. ಬೆಲೆವೆಣ್ಣುಗಳ ಸಹವಾಸ, ಪರಸ್ತ್ರೀಗಮನ, ಹುಸಿ, ಕೊಲೆ, ಹಿಂಸೆ ಕಳವುಗಳನ್ನು ಮಾಡದೆ, ಮೃಷ್ಟಾನ್ನವನ್ನು ಇಚ್ಛಿಸದೆ, ಇರುವುದನ್ನು ಅರ್ಪಿಸಿ, ಅದನ್ನೆ ಭುಂಜಿಸಿ, ತೃಪ್ತಿ ಪಟ್ಟುಕೊಳ್ಳುವುದೇ ಭರಿತಾರ್ಪಣ.

೫. ತಾನು ಮಾಡುತ್ತಿರುವ ಅನೈತಿಕತೆಯನ್ನು ಅರಿತುಕೊಂಡು, ಮತ್ತೆ ಅದನ್ನು ಮಾಡದಂತೆ ಪ್ರತಿಜ್ಞೆ ಮಾಡಿ, ಅದರಂತೆ ನಡೆದುಕೊಳ್ಳುವುದೇ ಭರಿತಾರ್ಪಣ.

೬. ದೇಹದ ದುಷ್ಟ ಪ್ರಭಾವಕ್ಕೆ ಒಳಗಾಗದೆ, ಇಂದ್ರಿಯ ವಿಷಯಗಳಿಗೆ ದಾಸನಾಗದೆ, ಮತ್ತೆ ಕರ್ಮಪುನರ್ಜನ್ಮಗಳಿಗೊಳಗಾದಂತೆ ಪ್ರತಿಯೊಂದು ವಸ್ತುವನ್ನೂ ಮನಸ್ಸಿನಲ್ಲೇ ಅರ್ಪಿಸುವುದು ಭರಿತಾರ್ಪಣ.

೭. ಅರ್ಪಿಸುವಾಗ ಜನರ ಸ್ತುತಿನಿಂದೆಗಳಿಗೆ ಗಮನ ಕೊಡಬಾರದು.

೮. ಪ್ರತಿ ತುತ್ತನ್ನು ತಿಂದು ತೃಪ್ತಿ ಪಡುವಾಗಲೂ ಲಿಂಗಕ್ಕೆ ಅರ್ಪಿಸಿದ ತೃಪ್ತಿಭಾವವಿರಬೇಕು. ಸತಿಸಂಗ ಮಾಡುವಾಗಲೂ ಅರ್ಪಣಾಭಾವವಿರಬೇಕು.

೯. ಮನ ಲಿಂಗದಲ್ಲಿ ನೆಲೆಗೊಂಡು, ನಾನು ಮತ್ತು ಲಿಂಗ ಬೇರೆ ಬೇರೆ ಎಂಬ ಉಭಯಭಾವ ಅಳಿದು ಮಾಡುವ ಅರ್ಪಣೆಯ ಭರಿತಾರ್ಪಣೆ. (೮:೪೦೪,೪೧೪,೫:೩೮೨)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಭಕ್ತಿ ಭವರಾಟಳ, ಭವಚಕ್ರ Next