Previous ಆನಂದ ಇಪ್ಪತ್ತೊಂದು ದೀಕ್ಷೆಗಳು Next

ಆರತಿ

ಆರತಿ

ಲಿಂಗಪೂಜೆಯ ಒಂದು ಭಾಗವಾದ ಆರತಿಯು ಬೆಳಕನ್ನು ಲಿಂಗಕ್ಕೆ ತೋರಿಸುವ ಒಂದು ಸಾಂಕೇತಿಕ ಕ್ರಿಯೆ. ಇದು ಒಂದು ಸಾಂಕೇತಿಕ ಕ್ರಿಯೆ ಎಂಬುದು ಮೂರು ಕಾರಣಗಳಿಗಾಗಿ.

೧) ಬೆಳಕನ್ನು ತೋರಿಸಿದಾಗ ಭೌತವಸ್ತುವಾದ ಲಿಂಗವು ಕಾಣುವಂತೆ, ನಮ್ಮ ಮನಸ್ಸಿನಲ್ಲಿರುವ ಅಜ್ಞಾನವೆಂಬ ಕತ್ತಲೆ ಹೋಗಿ ಅರಿವು ಎಂಬ ಜ್ಯೋತಿ (ಜ್ಞಾನ ಜ್ಯೋತಿ) ಬೆಳಗಿದರೆ, ಆಗ ಲಿಂಗ ಗೋಚರವಾಗುತ್ತದೆ. ಇಷ್ಟಲಿಂಗವು ಗೋಚರವಾಗುವಂತೆ ಆರತಿ ಬೆಳಗುವುದು ಒಂದು ಸಾಂಕೇತಿಕ ಕ್ರಿಯೆ.

೨. ಆರತಿಯನ್ನು ಬೆಳಗಿದಾಗ, ನಾವು ಲಿಂಗಕ್ಕೆ ನೀರು, ಗಂಧ, ಹೂವು ಹಣ್ಣುಗಳನ್ನು ಅರ್ಪಿಸುವಂತೆ ಪಂಚಭೂತಗಳಲ್ಲೊಂದು ಬೆಂಕಿಯನ್ನೂ ಅರ್ಪಿಸಿದಂತಾಗುತ್ತದೆ. ಪಂಚಭೂತಗಳಿಂದಾದ ನಮ್ಮ ವ್ಯಕ್ತಿತ್ವವನ್ನು ಪರಶಿವನೇ (ಶಿವಶಕ್ತಿಯೇ) ಸೃಷ್ಟಿಸಿರುವುದರಿಂದ, ಅದನ್ನು ನಾವು ಅವನಿಂದ ಪಡೆದ ಸಾಲವೆಂಬಂತೆ ಪರಿಗಣಿಸಿ, ಅದನ್ನು ಹಿಂದುರುಗಿಸಬೇಕು. ಆರತಿಯನ್ನು ಬೆಳಗುವುದು ಅಗ್ನಿಯನ್ನು ಹಿಂತಿರುಗಿಸಿದ ಸಂಕೇತ.

೩. ಅಜ್ಞಾನದಿಂದಾಗಿ ನಾವು ಅನೇಕ ರೀತಿಯ ಆಸೆಗಳನ್ನು ಕಲ್ಪಿಸಿಕೊಂಡು ಅವುಗಳನ್ನು ಪೂರೈಸಿಕೊಳ್ಳಲು ಅನೇಕ ರೀತಿಯ ದುಷ್ಕರ್ಮಗಳನ್ನು ಮಾಡಿ ಸಂಸಾರ ಬಂಧನಕ್ಕೊಳಗಾಗುತ್ತೇವೆ. ಆರತಿ ಎಂಬ ಬೆಂಕಿಯು ಆ ಆಸೆಗಳನ್ನು ಸುಟ್ಟ ಸಂಕೇತ.

ಆದರೆ ಆರತಿ ಪರಿಕಲ್ಪನೆಯ ಹಿಂದಿರುವ ಈ ತತ್ವವನ್ನರಿಯದೇ ಆರತಿ ಬೆಳಗುವುದೇ ಭಕ್ತಿಯೆಂದರೆ ಅದು ಅಜ್ಞಾನವಾಗುತ್ತದೆ. ಹಾಗೆ ಮಾಡುವ ಯಾಂತ್ರಿಕ ಕ್ರಿಯೆಯನ್ನು ಮಡಿವಾಳ ಮಾಚಯ್ಯ ನಿಷ್ಠುರವಾಗಿ ಖಂಡಿಸಿದ್ದಾನೆ. ಒಂದು ಆರತಿ ಮಾಡಿದೆ, ಹತ್ತು ಆರತಿ ಮಾಡಿದೆ ಎಂದು ಜಂಬ ಕೊಚ್ಚಿಕೊಳ್ಳುವ ಬದಲು ನಮ್ಮ ಬಹುಮುಖದ ಅಜ್ಞಾನವನ್ನೇಕೆ ಸುಡಬಾರದು ಎಂಬುದು ಅವನ ಪ್ರಶ್ನೆ. ಮನೋಪ್ರಕೃತಿಯ ದುರ್ಗುಣ ಪಡೆದ ಏಕಾರತಿ, ಲಿಂಗ ಬೇರೆ ಅಂಗ ಬೇರೆ ಎಂಬ ಎರಡಳಿದುದರ ಸಂಕೇತವಾದ ದ್ವಿಯಾರತಿ, ಮಲತ್ರಯಗಳಿದುದರ ಸಂಕೇತವಾಗಿ ತ್ರಿಯಾರತಿ, ಅಂತ ಕರಣ ಚತುಷ್ಟಯವಳಿದುದರ ಸಂಕೇತವಾಗಿ ಚತುರಾರತಿ, ಪಂಚಭೂತ, ಪಂಚವಾಯು, ಪಂಚೇಂದ್ರಿಯಗಳ ಪಂಚಕೇಶ ಮತ್ತು ಪಂಚಮೂರ್ತಿಗಳ ಫಲಪದಗಳನ್ನು ಅತಿಗಳೆದುದರ ಸಂಕೇತವಾಗಿ ಪಂಚಾರತಿ, ಅರಿಷಡ್ವರ್ಗಗಳನ್ನು, ಷಡ್‌ಭ್ರಮೆಗಳನ್ನೂ ಗೆಲಿದುದರ ಸಂಕೇತವಾಗಿ ಷಡಾರತಿಯನ್ನೂ ಸಪ್ರಧಾತುಗಳ ವಿಕಾರ, ಸಪ್ತವ್ಯಸನಗಳು ಅಳಿದುದಕ್ಕಾಗಿ ಸಪ್ತಾರತಿಯನ್ನೂ, ಅಂತರಂಗದ ಅಷ್ಟಮದ, ಬಹಿರಂಗದ ಅಷ್ಟಮದಗಳ ನಾಶದ ಸಂಕೇತವಾಗಿ ಅಷ್ಟಾರತಿಯನ್ನೂ, ನವಗ್ರಹಗಳ ದುಷ್ಪರಿಣಾಮಗಳನ್ನು ಹೋಗಲಾಡಿಸುದದರ ಸಂಕೇತವಾಗಿ ನವಾರತಿಯನ್ನೂ, ದಶವಾಯುಗಳ ದುಷ್ಪರಿಣಾಮಗಳಳಿದುದರ ಸಂಕೇತವಾಗಿ ದಶಾರತಿಯನ್ನೂ ಮಾಡುವುದು ನಿಜವಾದ ಭಕ್ತಿಯೇ ಹೊರತು, ಕೇವಲ ಬಹಿರಂಗದ ಕ್ರಿಯೆಗಳಲ್ಲ. (೮:೪೬೩)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಆನಂದ ಇಪ್ಪತ್ತೊಂದು ದೀಕ್ಷೆಗಳು Next