ಆರತಿ | ಏಕಾದಶವರ್ಮ ( ಹನ್ನೊಂದು ರಹಸ್ಯಗಳು) |
ಇಪ್ಪತ್ತೊಂದು ದೀಕ್ಷೆಗಳು |
ಸಂಸಾರ ಜೀವನಕ್ಕೆ ಹೇಸಿ, ಲಿಂಗಾಂಗ ಸಾಮರಸ್ಯ ಪಡೆಯಬೇಕೆಂಬ ಇಚ್ಛೆಯಿಂದ ಬಂದ ಸಾಧಕನಿಗೆ ಗುರುವು ದೀಕ್ಷೆ ನೀಡುತ್ತಾನೆ. ಈ ದೀಕ್ಷೆಯು ಇಪ್ಪತೊಂದು ತೆರನಾಗಿದ್ದು, ಅವುಗಳನ್ನು ಚೆನ್ನಬಸವಣ್ಣನವರು ಮೂರು ವರ್ಗಗಳನ್ನಾಗಿ ಮಾಡಿದ್ದಾರೆ. ಹೇಗೆಂದರೆ :
ಕಾಯಕ್ಕೆ ಸಂಬಂಧಿಸಿದ ದೀಕ್ಷೆಗಳು: ಆಜ್ಞಾದೀಕ್ಷೆ, ಉಪಮಾ ದೀಕ್ಷೆ, ಸ್ವಸ್ತಿಕಾರೋಹಣ ದೀಕ್ಷೆ, ಕಳಶಾಭಿಷೇಕ ದೀಕ್ಷೆ, ವಿಭೂತಿಪಟ್ಟ ದೀಕ್ಷೆ, ಲಿಂಗಾಯತ ದೀಕ್ಷೆ ಮತ್ತು ಲಿಂಗಸ್ವಾಯತ ದೀಕ್ಷೆ,
ಪ್ರಾಣಕ್ಕೆ ಸಂಬಂಧಿಸಿದ ದೀಕ್ಷೆಗಳು: ಸಮಯ ದೀಕ್ಷೆ, ನಿಸ್ಸ೦ಸಾರ ದೀಕ್ಷೆ, ನಿರ್ವಾಣದೀಕ್ಷೆ, ತತ್ವದೀಕ್ಷೆ, ಆಧ್ಯಾತ್ಮ ದೀಕ್ಷೆ, ಅನುಗ್ರಹ ದೀಕ್ಷೆ, ಶುದ್ಧವಿದ್ಯಾ ದೀಕ್ಷೆ.
ಮನಸ್ಸಿಗೆ ಸಂಬಂಧಿಸಿದ ದೀಕ್ಷೆಗಳು: ಏಕಾಗ್ರಚಿತ್ತ ದೀಕ್ಷೆ, ದೃಢವ್ರತ ದೀಕ್ಷೆ, ಪಂಚೇಂದ್ರಿಯಾರ್ಪಿತ ದೀಕ್ಷೆ, ಅಹಿಂಸಾ ದೀಕ್ಷೆ, ಮನೋರ್ಲಯ ದೀಕ್ಷೆ, ಲಿಂಗನಿಜ ದೀಕ್ಷೆ ಮತ್ತು ಸದ್ಯೋನ್ಮುಕ್ತಿ ದೀಕ್ಷೆ.
ಮೊದಲಿನ ಏಳು ದೀಕ್ಷೆಗಳು ದೇಹಕ್ಕೆ ಸಂಬಂಧಿಸಿವೆ. ಅಂದರೆ, ಗುರುವು ದೀಕ್ಷಾರ್ಥಿಗೆ ಸ್ವಸ್ತಿಕದ ಮೇಲೆ ಕೂರುವಂತೆ ಆಜ್ಞಾಪಿಸಿ, ಶುಚಿರ್ಭೂತನಾಗಿ ಬಂದಿರುವ ಅವನಿಗೆ ವಿಭೂತಿಯನ್ನು ಧರಿಸಿ, ಲಿಂಗವನ್ನು ಕೊಡುತ್ತಾನೆ. ಹಾಗೆ ಕೊಟ್ಟ ಲಿಂಗವನ್ನು ದೀಕ್ಷಾರ್ಥಿಯು ಸೊಂಟದ ಮೇಲಿನ ಯಾವುದಾದರೊಂದು ಭಾಗದಲ್ಲಿ ಧರಿಸುತ್ತಾನೆ.
ಪ್ರಾಣಕ್ಕೆ ಸಂಬಂಧಿಸಿದ ದೀಕ್ಷೆಗಳು ವೀರಶೈವಾಚಾರಗಳ ಹಿಂದಿರುವ ತತ್ವದ ಬೋಧನೆಯನ್ನು ಒಳಗೊಳ್ಳುತ್ತವೆ. ಈ ತತ್ವಗಳನ್ನು ಅರಿತ ಸಾಧಕನು ಆಚಾರಗಳನ್ನು ಯಾಂತ್ರಿಕವಾಗಿ ಆಚರಿಸದೆ, ಅವೆಲ್ಲ ಅರ್ಥಪೂರ್ಣವೆಂಬಂತೆ ಆಚರಿಸುತ್ತಾನೆ.
ಮನಸ್ಸಿಗೆ ಸಂಬಂಧಿಸಿದ ದೀಕ್ಷೆಗಳು ಲಿಂಗಧ್ಯಾನದಿಂದುಂಟಾಗುವ ಅನುಭಾವವನ್ನು (ಲಿಂಗಾಂಗ ಸಾಮರಸ್ಯ ಅಥವಾ ಸದ್ಯೋನ್ಮುಕ್ತಿಯನ್ನು) ಪಡೆಯಲು ಆವಶ್ಯಕವಾದ ಏಕಾಗ್ರತೆಯನ್ನು ಹೇಗೆ ಸಾಧಿಸಬೇಕು, ಪಂಚೇಂದ್ರಿಯಗಳನ್ನು ಹೇಗೆ ಅರ್ಪಿಸಬೇಕು, ಹೇಗೆ ಮನೋರ್ಲಯ ಮಾಡಬೇಕು, ನಮ್ಮಲ್ಲಿ ಅಂತಸ್ಥವಾಗಿರುವ ಲಿಂಗವನ್ನು ಹೇಗೆ ಸಾಕ್ಷಾತ್ಕರಿಸಿಕೊಳ್ಳಬೇಕು ಮುಂತಾದ ವಿಧಾನಗಳನ್ನು ತಿಳಿಸಿಕೊಡುತ್ತವೆ. (೩:೯೯೫)
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಆರತಿ | ಏಕಾದಶವರ್ಮ ( ಹನ್ನೊಂದು ರಹಸ್ಯಗಳು) |