Previous ಷಡ್ವಿಧ ಆಚಾರಲಿಂಗ ಷಡ್ವಿಧ ವಿಭೂತಿಧಾರಣೆ Next

ಷಡ್ವಿಧ ಲಿಂಗಧಾರಣೆ

ಷಡ್ವಿಧ ಲಿಂಗಧಾರಣೆ

ನಮ್ಮ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳು ಶಕ್ತಿಯ ವಿವಿಧ ರೂಪಾಂತರಗಳು, ಪ್ರತಿಯೊಂದು ಇಂದ್ರಿಯದಲ್ಲಿಯೂ ಒಂದೊಂದು ಲಿಂಗವಿದ್ದು, ಆ ಲಿಂಗಗಳೂ ಸಹ ಪರಶಿವನ ವಿವಿಧ ಅವತರಣಿಕೆಗಳಾಗಿವೆ. ಶಕ್ತಿಯ ವಿವಿಧ ರೂಪಾಂತರಗಳಲ್ಲಿರುವ ಲಿಂಗದ ವಿವಿಧ ಅವತರಣಿಕೆಗಳನ್ನು ಸಾಧಕನು ವಿವಿಧ ಹಂತಗಳಲ್ಲಿ ಒಲಿಸಿಕೊಳ್ಳುತ್ತಾನೆ. ಇದನ್ನೆ ವಚನಕಾರರು ಷಡ್ವಿಧ ಲಿಂಗಧಾರಣೆ ಎಂದು ಕರೆದಿದ್ದಾರೆ. ಯಾವ ಹಂತದಲ್ಲಿ ಯಾವ ಲಿಂಗವನ್ನು ಒಲಿಸಿಕೊಳ್ಳಬೇಕೆಂಬುದಕ್ಕೆ ವಿವರ;

೧. ಪೃಥ್ವಿತತ್ವವು ಘ್ರಾಣೇಂದ್ರಿಯ ಮತ್ತು ಗುದಗಳಾಗಿ ವಿಕಸಿತಗೊಂಡಿದೆ. ಅಲ್ಲಿ ನಿವೃತ್ತಿ ಕಲೆಯೆಂಬ ಭಕ್ತಿ ಇದೆ. ಆ ಕಲೆಯಲ್ಲಿ ಕ್ರಿಯಾಶಕ್ತಿಯುತವಾದ ಆಚಾರಲಿಂಗವಿದ್ದು, ಸಾಧಕನು ಅದನ್ನು ಭಕ್ತಸ್ಥಲದಲ್ಲಿ ಧರಿಸಿ, ಭಕ್ತನೆನಿಸಿಕೊಳ್ಳುತ್ತಾನೆ.

೨. ಜಿಹ್ವೆ. ಮತ್ತು ಗುಹ್ಯ ಅಪ್ ತತ್ವದ ವಿಕಸಿತ ರೂಪಗಳು. ಅಲ್ಲಿ ಪ್ರತಿಷ್ಠಾಕಲೆಯೆಂಬ ಭಕ್ತಿ ಇದೆ, ಅದರಲ್ಲಿ ಜ್ಞಾನ ಶಕ್ತಿಯುತವಾದ ಗುರುಲಿಂಗ ಇದ್ದು, ಅದನ್ನು ಧರಿಸಿದ ಸಾಧಕನು ಮಹೇಶನೆನಿಸಿಕೊಳ್ಳುತ್ತಾನೆ.

೩. ನೇತ್ರ ಮತ್ತು ಪಾದಗಳು ಅಗ್ನಿತತ್ವದ ರೂಪಾಂತರ, ಅವುಗಳಲ್ಲಿ ವಿದ್ಯಾಕಲೆಯೆಂಬ ಭಕ್ತಿ ಇದೆ, ಅದರಲ್ಲಿ ಇಚ್ಛಾಶಕ್ತಿಯುತವಾದ ಶಿವಲಿಂಗ ಇದ್ದು, ಅದನ್ನು ಧರಿಸಿದವನು ಪ್ರಸಾದಿಯೆನಿಸಿಕೊಳ್ಳುತ್ತಾನೆ.

೪. ತ್ವಕ್ಕು ಮತ್ತು ಪಾಣಿಗಳು ವಾಯು ತತ್ವದ ರೂಪಾಂತರ. ಅವುಗಳಲ್ಲಿ ಶಾಂತಿಕಲಾ ಎಂಬ ಭಕ್ತಿಯಿದೆ. ಅದರಲ್ಲಿ ಆದಿಶಕ್ತಿಯುತವಾದ ಜಂಗಮಲಿಂಗವಿದ್ದು ಅದನ್ನು ಧರಿಸಿದವನು ಪ್ರಾಣಲಿಂಗಿ ಎನಿಸಿಕೊಳ್ಳುತ್ತಾನೆ.

೫. ಶ್ರೋತ್ರ ಮತ್ತು ವಾಗಿಂದ್ರಿಯಗಳು ಪರಾಶಕ್ತಿಯ ಬೇರೆ ರೂಪಗಳು, ಅವುಗಳಲ್ಲಿ ಶಾಂತ್ಯತೀತ ಕಲೆಯೆಂಬ ಭಕ್ತಿಯಿದ್ದು, ಅದರಲ್ಲಿ ಪರಾಶಕ್ತಿಯುತವಾದ ಪ್ರಸಾದಲಿಂಗವಿದ್ದು, ಅದನ್ನು ಧರಿಸಿಕೊಂಡಾತ ಶರಣನೆನಿಸಿಕೊಳ್ಳುತ್ತಾನೆ.

೬. ಆತ್ಮ ಎಂಬ ಅಂಗಕ್ಕೆ ಮನಸ್ಸೆಂಬ ಚಿಚ್ಛಕ್ತಿ ರೂಪದ ಶಕ್ತಿಯಿದ್ದು, ಅದರೊಳಗೆ ಶಾಂತ್ಯತೀತೋತ್ತರ ಕಲೆ ಎಂಬ ಭಕ್ತಿ ಇದೆ, ಅದರಲ್ಲಿರುವ ಚಿಚ್ಛಕ್ತಿಯುತವಾದ ಮಹಾಲಿಂಗವನ್ನು ಧರಿಸಿದವನು ಐಕ್ಯ.

ಮೇಲೆ ಹೇಳಿದ ಆರು ಲಿಂಗಗಳು ಮನುಷ್ಯನ ಕರಣೇಂದ್ರಿಯಗಳಲ್ಲಿ ಆಗಲೇ ಇವೆ. ಅವನ್ನು ಹೊಸದಾಗಿ ಅವನು ಇಷ್ಟಲಿಂಗದಂತೆ ಧರಿಸಬೇಕಾಗಿಲ್ಲ. ಅವನಲ್ಲಿ ವಿರುವ ಶಕ್ತಿಗಳೇ ಆ ಲಿಂಗಗಳನ್ನು ಮುಚ್ಚಿವೆ. ಸಾಧಕನು ಕಲೆಗಳೆಂಬ ಭಕ್ತಿಗಳ ಸಹಾಯದಿಂದ, ಆ ಶಕ್ತಿಗಳನ್ನು ಪಾರದರ್ಶಕ ಮಾಡಿ, ಅವುಗಳಲ್ಲಿರುವ ಲಿಂಗವನ್ನು ನೋಡಿದರೆ, ಲಿಂಗಧಾರಣೆ ಮಾಡಿದಂತೆ. ಶಕ್ತಿಗಳನ್ನು ಪಾರದರ್ಶಕ ಮಾಡುವುದೆಂದರೆ, ಅವುಗಳ ದುರ್ಗುಣಗಳನ್ನು ತೆಗೆದು, ಅವುಗಳ ದುರ್ವತ್ರನೆಯನ್ನು ತಡೆದು, ಅವುಗಳನ್ನು ಆಧ್ಯಾತ್ಮಿಕ ಉದ್ದೇಶಕ್ಕಾಗಿ ಬಳಸಿಕೊಳ್ಳುವುದು (೧೧:೮೫೬).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಷಡ್ವಿಧ ಆಚಾರಲಿಂಗ ಷಡ್ವಿಧ ವಿಭೂತಿಧಾರಣೆ Next