Previous ವಿಭೂತಿ ವ್ರತ, ನೇಮ, ಶೀಲ Next

ವಚನ

ವಚನ

ಈ ಪದವನ್ನು ವಚನಕಾರರು ಅನೇಕ ಅರ್ಥಗಳಲ್ಲಿ ಬಳಸಿದ್ದಾರೆ.

೧. ಬಸವಣ್ಣನವರ ವಚನ, ಆದ್ಯರ ವಚನ, ಎಂಬಲ್ಲಿ ಒಂದು ಶೈಲಿಯ ಬರವಣಿಗೆ ಎಂದಾಗುತ್ತದೆ. ಸಾಮಾನ್ಯವಾಗಿ ಗದ್ಯರೂಪದಲ್ಲಿದ್ದರೂ ಕಾವ್ಯದ ಉಸಿರು ಹೊಂದಿರುವ ಈ ಶೈಲಿಯನ್ನೇ ನಾವು ವಚನ ಎನ್ನುತ್ತೇವೆ. ವಚನ ಎಂಬ ಪದವು ಅನುಭಾವಿಯ ಮಾತಿಗೆ ಅನ್ವಯಿಸುತ್ತದೆ. ಸತ್ಯವನ್ನು ನೇರವಾಗಿ ಅನುಭವಿಸಿದ ಅವನಿಗೆ ಯಾವುದರ ನಿರ್ಬಂಧವಿಲ್ಲದುದರಿಂದ, ಅವನು ಮಾತ್ರ ಆಧ್ಯಾತ್ಮಿಕ ವಿಷಯಗಳ ಬಗೆಗೆ ಅಧಿಕಾರಯುತವಾಗಿ ಮಾತನಾಡಬಲ್ಲ. ಇದರಲ್ಲಿ ಕಷ್ಟಪಟ್ಟು ಬರೆಯುವಂಥದೇನೂ ಇಲ್ಲ. ಅನುಭಾವಿಗಳಿಗೆ ವಚನಗಳು ಪ್ರಯತ್ನವಿಲ್ಲದೆಯೇ ಹೊರಬರುತ್ತವೆ.

೨. ಆಗಮಗಳ ಮಾತು. “ಅಹಂ ಸರ್ವಜಗತ್ ಕರ್ತಾ, ಮಮಕರ್ತಾ ಮಹೇಶ್ವರ" ಎಂದು ವಿಷ್ಣು ಹೇಳಿದ ವಚನವ ಮರೆದಿರಲ್ಲ (೧:೫೪೮).

೩. ಶಾಸ್ತ್ರದ ಮಾತು, ವೇದಗಳ ಮಾತು. (ಶಾಸ್ತ್ರದ ವಚನ ಹೋಂತಿಗೆ ಮಾರಿ" ೧:೫೭೨)

೪. ದಿಟವಾದ ಮಾತು. ಕೂಡಲ ಸಂಗನ ವಚನವಿಂತೆಂದುದು ":ಶ್ವಪಚೋಪಿಯಾದಡೇನು, ಶಿವಭಕ್ತನೇ ಕುಲಜಂ, ಭೋ”. (೧:೫೮೯)

೫. ಆಣೆ ಮಾಡುವುದು. (ಅಡಿಗಡಿಗೆ ದೇವರಾಣೆ ... ಎಂಬ ವಚನವೆ ಹೊಲ್ಲ” ೩:೬೬೦)

೬. ಸಿದ್ಧಾಂತ. “ಅನ್ಯರ ವಚನವ ಕೊಂಡಾಡಲು ಕರ್ಮ ಬಿಡದು” (೧:೧೦೭)

೭. ಆಜ್ಞೆ "ಇಂತೆಂಬುದು ಆದ್ಯರ ವಚನ".

೮. ಯಾವುದೇ ಮಾತು. (ಅವಳ ವಚನ ಬೆಲ್ಲದಂತೆ” ೧:೧೧೦)

ವಚನ ಎಂದರೆ 'ಪ್ರಮಾಣ' ಎಂದರ್ಥ - ಕನ್ನಡದ ಸಾಹಿತ್ಯ ರೂಪಗಳಲ್ಲಿ ಬಹು ಪ್ರಮುಖವಾದದ್ದು. ಇದು ಸಾಹಿತ್ಯ ಪರಿಭಾಷೆಯಾಗಿ ಒಂದು ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶಿಷ್ಟ ಕಾವ್ಯ ಪ್ರಕಾರ. ವಚನ ಸಾಹಿತ್ಯವು ಲಿಂಗಾಯತರ ಆಂದೋಲನ ಮತ್ತು ಅಭಿವ್ಯಕ್ತಿಗೆ ಸಂಗಾತಿಯಾಯಿತು. ಸಮಾಜದ ಎಲ್ಲಾ ಜಾತಿಯವರೂ ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿಯೂ ಆಯಿತು. ಬಂಡಾಯ ಸಾಹಿತ್ಯಕ್ಕಿಂತ ಮೊದಲು ಕನ್ನಡ ನಾಡಿನಲ್ಲಿ ವಚನ ಒಂದು ಚಳವಳಿಯ ಮುಖವಾಣಿಯಾಗಿತ್ತೆಂದರೆ ಅದರ ಸಾಮಾಜಿಕ ವ್ಯಾಪಕತೆ ಅಪಾರವಾದುದೆಂಬುದು ಅರಿವಿಗೆ ಬಾರದೆ ಇರದು. ವಚನಗಳು ಅತ್ಯಂತ ಸರಳ ಹಾಗೂ ನೇರವಾಗಿವೆ. ಹಲವಾರು ಕವಿಗಳು, ಜನಸಾಮಾನ್ಯರು, ಸಾಹಿತ್ಯ ರಚಿಸಿದ್ದರೂ, ಇಡೀ ಲಿಂಗಾಯತ ಸಾಹಿತ್ಯದಲ್ಲಿ ಮುಖ್ಯ ಮತ್ತು ಅಪರೂಪದ ಅಭಿವ್ಯಕ್ತಿಯೆಂದರೆ ವಚನ ಸಾಹಿತ್ಯ. ಅದು ಸ್ಥಾವರ ಸಮಾಜವನ್ನು ತಿರಸ್ಕರಿಸಿ ಜಂಗಮ ಸಮಾಜವನ್ನು ನಂಬಿದ ಬಹಳ ದೊಡ್ಡ ಮಾನವೀಯ ಮೌಲ್ಯ. ಕಾಯಕ ಮತ್ತು ದಾಸೋಹಗಳ ಮೂಲಕ ಸಮಾಜೋತ್ಪನ್ನಗಳ ಸಮಪಾಲು ಸಿದ್ಧಾಂತವನ್ನು ಮಂಡಿಸುವ ಈ ಚಳವಳಿ ಭಾರತೀಯ ಸಂಸ್ಕ್ರಿತಿಯಲ್ಲೇ ಅತಿ ಮುಖ್ಯವಾದುದು. ವಚನ ಸಾಹಿತ್ಯದ ಶ್ರೀಮಂತನಕ್ಕೆ ನೂರಾರು ಶರಣರು ಶ್ರಮಿಸಿದ್ದಾರೆ. ತಮ್ಮ ವಚನಗಳಲ್ಲಿ ತಮ್ಮದೇ ಆದ ಅಂಕಿತನಾಮಗಳನ್ನು ಬಳಸಿದ್ದಾರೆ. ಅಲ್ಲಮ ಪ್ರಭು 'ಗುಹೇಶ್ವರ' ಎಂದು ಬಳಸಿದರೆ, ಅಕ್ಕಮಹಾದೇವಿಯು 'ಚೆನ್ನಮಲ್ಲಿಕಾರ್ಜುನ' ಹಾಗು ಬಸವಣ್ಣನವರು 'ಕೂಡಲ ಸಂಗಮದೇವ' ಎಂದು ಬಳಸಿದ್ದಾರೆ. ಮತ್ತಿತರ ಸುಪ್ರಸಿದ್ಧ ವಚನಕಾರರೆಂದರೆ: ಸಿದ್ಧರಾಮೇಶ್ವರ, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ, ಸೂಳೆ ಸಂಕವ್ವೆ, ಏಕಾಂತ ರಾಮಯ್ಯ, ಹಡಪದ ಅಪ್ಪಣ್ಣ, ಒಕ್ಕಲು ಮಾದಯ್ಯ, ಮಡಿವಾಳ ಮಾಚಯ್ಯ, ಅಯಿದಕ್ಕಿ ಲಕ್ಕಮ, ಹೆಂಡದ ಮಾರಯ್ಯ ಮುಂತಾದ ೧೫೦ಕ್ಕೂ ಹೆಚ್ಚು ಶರಣರು ೫೦ಕ್ಕೂ ವೈವಿಧ್ಯಮಯ ಕಸುಬುಗಳಲ್ಲಿ ತೊಡಗಿದ್ದವರಾಗಿದ್ದರು.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ವಿಭೂತಿ ವ್ರತ, ನೇಮ, ಶೀಲ Next