ಷೋಡಶೋಪಚಾರ | ದೀಕ್ಷಾತ್ರಯ |
ಲಿಂಗಾಯತ ಧರ್ಮದಲ್ಲಿ ಚರ |
೧. ಮಠಮಾನ್ಯಗಳನ್ನು ತೊರೆದು ಸ್ಥಳದಿಂದ ಸ್ಥಳಕ್ಕೆ ಸಂಚರಿಸುವ ವಿರಕ್ತ ; ಜಂಗಮ : ಬರಡಾಕಳವ ಕರೆದು ಚರತತಿಗಿತ್ತರು ನಮ್ಮ ಶರಣರು ಭಕ್ತಿಯ ಪ್ರಭಾವದಿಂದ (ಚೆನ್ನಬ. ಸಮವ. ೩-೬೫೧-೧೭೫೫) ; ಕುರುಹ ಕೊಡುವಲ್ಲಿ ಗುರುವಾಗಿ ವೇಷವ ತೊಟ್ಟು ತಿರುಗುವಲ್ಲಿ ಚರವಾಗಿ ಭಾಷೆಯ ತೊಟ್ಟು ಮಾಡುವಲ್ಲಿ ಭಕ್ತನಾಗಿ ಈ ತ್ರಿವಿಧದಾಟ ಇದು ಭೇದ (ಮೋಳಿಗೆ, ಸಮವ. ೮-೫೭೫-೧೬೮೧) ;
ಜ ಎಂದಲ್ಲಿ ಜನನನಾಸ್ತಿಯಾಗಿ ಗ ಎಂದಲ್ಲಿ ಗಮನನಾಸ್ತಿಯಾಗಿ ಮ ಎಂದಲ್ಲಿ ಮರಣನಾಸ್ತಿಯಾಗಿ ಅರಿತು ತಿರುಗುವುದು ಸ್ವಯ ಚರ ಪರವಲ್ಲದೆ ಕೂಟಕ್ಕೆ ನೆರೆದ ಅಗುಳಾಸೆಯ ವಿಹಂಗನಂತಾಗಬೇಡ (ಕೋಲಶಾಂ, ಸಮವ. ೭-೫೮-೧೪೩).
೨. ಜಂಗಮಲಿಂಗ ತ್ರಿವಿಧಗಳಾದ ಸ್ವಯ, ಚರ ಮತ್ತು ಪರ -ಎಂಬ ಮೂರು ಸ್ಥಿತಿಗಳಲ್ಲಿ ಒಂದು; ಜಂಗಮಲಿಂಗಸ್ಥಲ ತ್ರಿವಿಧ: ಸ್ವಯ ಚರ ಪರ ಇದಕ್ಕೆ ವಿವರ- ಸ್ವಯಂವೆಂದಡೆ ತಾನು ಚರವೆಂದಡೆ ಲಾಂಛನ ಮುಂತಾಗಿ ಚರಿಸುವುದು ಪರವೆಂದಡೆ ಅವು ಮುಂತಾಗಿ ಚರಿಸುವುದು (ಚೆನ್ನಬ. ಸಮವ. ೩-೩೨೧-೯೮೭) ; ಕ್ರಿಯೆಗಳ ಪರಿಣಾಮಗಳು ತನ್ನಲ್ಲಿ ನಿಶ್ಚಲವಾಗಿ ಉಳಿದರೆ ಸ್ವಯವು. ಅವು ಭಕ್ತಿಕಾರಣವಾಗಿ ಜಗತ್ತಿನಲ್ಲಿ ಜನಹಿತಕ್ಕೋಸ್ಕರ ಉಪಯೋಗಿಸಷಟ್‌ಸ್ಥಲ ಚರವು. ಹೀಗೆ ವ್ಯವಹರಿಸಿ ಚಿದಾತ್ಮನಲ್ಲಿ ಬೆರೆದಲ್ಲಿ ಅದು ಪರವು. ಇದು ಜಂಗಮದ ಉತ್ಕೃಷ್ಟಸ್ಥಿತಿಯು.
೩. ತ್ರಿವಿಧಜಂಗಮಲಿಂಗದ ಸ್ವಯ, ಚರ ಮತ್ತು ಪರ ಎಂಬ ತ್ರಿವಿಧಭಕ್ತರಲ್ಲಿ ಒಬ್ಬ : ಸ್ವಯಂ ಎಂದರೆ ತಾನು. ಇಲ್ಲಿ ಭಕ್ತನು ಶ್ರೇಷ್ಠ ತರಗತಿಯವನಾಗಿ ಸ್ವಾವಲಂಬಿಯಾಗಿ ಆಚರಿಸುವವನು. ಚರವೆಂದರೆ ತನಗೆ ಸಂಬಂಧಿಸಿದವರನ್ನು ತನ್ನಂತೆ ಮಾಡುವ ಉದ್ದಿಶ್ಯವಾಗಿ ಅವರೊಡನೆ ವ್ಯವಹರಿಸುವವನು.
೪. ಷಡ್ವಿಧ ಜಂಗಮ- ಲಿಂಗಗಳಲ್ಲಿ ಒಂದು : ಷಡ್ವಿಧಜಂಗಮಲಿಂಗ -ಇವು ಸ್ವಯ, ಚರ, ಪರ, ಪರಿಣಾಮಿ, ನಿರುಪಾಧಿಕ, ಪರಿಪೂರ್ಣ ಎಂದಿರುತ್ತವೆ. ಜಂಗಮಲಿಂಗವು, ಇಲ್ಲಿ ಪ್ರಾಣಲಿಂಗಿಸ್ಥಲಕ್ಕೆ ಸಂಬಂಧಿಸಿದುದು .
೫. ಪೀಠಸಹಿತವಾದ ಶಿವಲಿಂಗದಲ್ಲಿಯ ಚರ ಮತ್ತು ಸ್ಥಿರ ಎಂಬ ಎರಡು ಪ್ರಕಾರಗಳಲ್ಲಿ ಒಂದು; ಜಂಗಮ, ಎಲ್ಲರೂ ಚಲಿಸುವವವರೇ ಆದರೂ, ಯಾರು ಲಿಂಗದೊಂದಿಗೆ ತಾದಾತ್ಮ ಪಡೆದಿರುತ್ತಾರೋ ಅವರು ನಡೆದಾಡುವ (ಚರ)ಲಿಂಗವೆನ್ನಿಸಿಕೊಳ್ಳುವರು. (ನೋಡಿ : ಜಂಗಮ).
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಷೋಡಶೋಪಚಾರ | ದೀಕ್ಷಾತ್ರಯ |