ದೀಕ್ಷೆ | ಪಂಚಕೋಶ |
ನವವಿಧ ಭಕ್ತಿ |
ಆಧ್ಯಾತ್ಮಿಕ ದಾರಿಯನ್ನು ಆಗ ತಾನೆ ಪ್ರಾರಂಭಿಸುವವನ ಭಕ್ತಿ. ಆ ಹಂತದ ಸಾಧಕನಿಗೆ ತನ್ನ ಕ್ರಿಯೆಗಳ ಅರ್ಥ ಮತ್ತು ಉದ್ದೇಶ ಗೊತ್ತಿರುವುಲ್ಲ. ಅವನು ಕೇವಲ ಗುರುಗಳು ಹೇಳಿದರೆಂಬ ಒಂದೇ ಕಾರಣದಿಂದ ಅವುಗಳನ್ನು ಆಚರಿಸುತ್ತಾನೆ. ಆ ಭಕ್ತಿಯಲ್ಲಿ ಒಂಬತ್ತು ಅಂಗಗಳಿವೆ.
೧. ಶ್ರವಣ ಭಕ್ತಿ : ತನ್ನ ಆಧ್ಯಾತ್ಮಿಕ ಸಾಧನೆಯಲ್ಲಿ ಪ್ರಗತಿ ಸಾಧಿಸಿಕೊಳ್ಳುವ ಉದ್ದೇಶದಿಂದ, ಭಕ್ತನು ಆದಷ್ಟೂ ಆಧ್ಯಾತ್ಮಿಕ ಜೀವನದ ಬಗೆಗೇ ಕೇಳಿಸಿಕೊಳ್ಳಬೇಕು. ಅಂದರೆ, ಅವನು ಶಿವಭಕ್ತರ ಬಗೆಗಿನ ಕತೆಗಳನ್ನೂ, ಪ್ರಸಂಗ, ಪುರಾಣ, ಇತ್ಯಾದಿಗಳನ್ನೂ ಕೇಳಿಸಿಕೊಳ್ಳಬೇಕು. ಆಧ್ಯಾತ್ಮಿಕ ಚರ್ಚೆಗಳಲ್ಲಿ ಭಾಗವಹಿಸಬೇಕು.
೨. ಕೀರ್ತನ ಭಕ್ತಿ : ಪರಶಿವನ ಬಗೆಗಿನ ಹಾಡುಗಳನ್ನು ಪ್ರೀತಿಯಿಂದ ಹಾಡುವುದು ಕೀರ್ತನ ಭಕ್ತಿ, ಇಲ್ಲಿಯಾದರೂ ಶಿವಭಕ್ತರ ಮಹಿಮೆಯನ್ನು ಹಾಡಿ ಹೊಗಳುವುದರ ಹಿಂದೆ, ತಾನೂ ಒಬ್ಬ ದೊಡ್ಡ ಭಕ್ತನಾಗಬೇಕೆಂಬ ಉದ್ದೇಶವೇ ಇದೆ.
೩. ಸ್ಮರಣ ಭಕ್ತಿ : ಯಾವಾಗಲೂ ಪರಶಿವನ ಬಗೆಗೆ ಚಿಂತಿಸುತ್ತಿರುವುದೇ ಸ್ಮರಣ ಭಕ್ತಿ, ಮಂತ್ರೋಚ್ಚಾರಣೆ, ಭಜನೆ, ಕೀರ್ತನೆ ಇವೆಲ್ಲ ಪರಶಿವನನ್ನು ಸ್ಮರಿಸುವ ಬಾಹ್ಯ ವಿಧಾನಗಳಾದರೆ, ಮನಸ್ಸಿನಲ್ಲೇ ಸದಾ ಚಿಂತಿಸುವುದು ಆಂತರಿಕ ವಿಧಾನ.
೪. ಸೇವನ (ಪಾದಸೇವೆ) ಭಕ್ತಿ : ಇಲ್ಲಿ ವಾಸ್ತವವಾಗಿ ಸಾಧಕನು ಸಾಕಷ್ಟು ಆಧ್ಯಾತ್ಮಿಕ ಪ್ರಗತಿ ಸಾಧಿಸಿರುವವರ ಪಾದಸೇವೆ, ಮುಂತಾದ ಸೇವೆಯಲ್ಲಿ ನಿರತನಾಗಬೇಕು. ಅವರ ಒಡನಾಟದಿಂದ ಆಧ್ಯಾತ್ಮಿಕ ಪ್ರಗತಿಯನ್ನು ಹೇಗೆ ಸಾಧಿಸಬೇಕೆಂಬುದನ್ನೂ, ನಮ್ರತೆಯನ್ನೂ, ಅವನು ಕಲಿತುಕೊಳ್ಳಬಹುದು.
೫. ಪೂಜೆ : ಎಲ್ಲರೂ ಮಾಡುವಂತೆ ಇಷ್ಟಲಿಂಗವನ್ನು ಪೂಜಿಸಿಯೂ ಅವನು ತನ್ನ ಭಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
೬. ವಂದನೆ : ಪರಶಿವನಿಗೆ ಎಲ್ಲ ರೀತಿಯ ತ್ಯಾಗ ಮಾಡಲು ಸಿದ್ಧನಾಗುವುದೇ ವಂದನೆ.
೭. ದಾಸ್ಯ : ಯಾವುದೇ ಕಾರ್ಯದಲ್ಲಿ ತಾನು ಮಾಡಿದೆನೆಂಬ ಅಹಂಕಾರ ತೋರಿಸದೆ, ಪರಮಾತ್ಮನೇ ನನ್ನಿಂದ ಮಾಡಿಸುತ್ತಿದ್ದಾನೆ, ಪರಮಾತ್ಮನೇ ನನ್ನನ್ನು ಮಾತನಾಡುವಂತೆ ಮಾಡುತ್ತಿದ್ದಾನೆ, ಎಂದು ತಿಳಿಯುವುದೇ ದಾಸ್ಯ, ದಾಸನು ಹೇಗೆ ಎಲ್ಲ ಕೆಲಸಗಳನ್ನೂ ತನ್ನ ಸ್ವಾಮಿಯ ಆಜ್ಞೆಯಂತೆ ಮತ್ತು ತನ್ನ ಸ್ವಾಮಿಗಾಗಿ ಮಾತ್ರ ಮಾಡುತ್ತಾನೋ ಹಾಗೆಯೇ ದಾಸ್ಯ ಭಕ್ತಿಯಲ್ಲಿ ನಿರತನಾದ ಸಾಧಕನು, ತಾನು ಶಿವನ ದಾಸನೆಂದೂ, ತಾನು ಮಾಡುವುದೆಲ್ಲವೂ ಶಿವನಿಗಾಗಿ ಮಾತ್ರ ಎಂದೂ ತಿಳಿಯುತ್ತಾನೆ.
೮. ಸಖ್ಯ : ಸ್ನೇಹಿತನಾದವನು ಯಾವಾಗಲೂ ತನ್ನ ಪ್ರಿಯ ಗೆಳೆಯನ ಜೊತೆಯಲ್ಲಿರಲು ಬಯಸುತ್ತಾನೋ, ಹಾಗೆಯೇ ನಿಜವಾದ ಭಕ್ತನು ಯಾವಾಗಲೂ ಪರಶಿವನ ಸಂಗದಲ್ಲಿ ಬಯಸುತ್ತಾನೆ. ನಿಜವಾದ ಸಖ್ಯ ಲಾಭದ ಕಡೆ ಗಮನ ಕೊಡುವುದಿಲ್ಲ. ಹಾಗೆಯೇ ಸಾಧಕನು ಪರಮಾತ್ಮನಿಂದ ಯಾವ ಪ್ರತಿಫಲವನ್ನೂ ಅಪೇಕ್ಷಿಸುವುದಿಲ್ಲ.
೯. ಆತ್ಮಾರ್ಪಣ : ನನ್ನದೇನೂ ಇಲ್ಲ, ಎಲ್ಲವೂ ಪರಶಿವನ ಇಚ್ಛೆಯಂತೆ ನಡೆಯಲಿ ಎಂದು ಎಲ್ಲವನ್ನೂ ತನ್ನ ಆತ್ಮವನ್ನೂ - ಪರಶಿವನಿಗೆ ಅರ್ಪಿಸುವುದೇ ಆತ್ಮಾರ್ಪಣ.
ಹೀಗೆ ಭಕ್ತನು ಲಿಂಗಾಂಗ ಸಾಮರಸ್ಯಕ್ಕೆ ಅರ್ಹನಾಗುವ ಮೊದಲು ನವವಿಧ ಭಕ್ತಿಯ ಮೂಲಕ ಪರಿಶುದ್ಧನಾಗಬೇಕು.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ದೀಕ್ಷೆ | ಪಂಚಕೋಶ |