Previous ವಿಮರ್ಶಾ ಶಕ್ತಿ ವಚನ Next

ವಿಭೂತಿ

ವಿಭೂತಿ

ಭಸ್ಮ, ಭಸಿತ. ಇದು ಕಾಮದಹನದ ಸಂಕೇತ. ಜ್ಞಾನವೆಂಬ ಅಗ್ನಿಯಿಂದ ಸ್ವಾರ್ಥಪರವಾದ ಎಲ್ಲ ಕಾಮ (ಆಸೆ)ಗಳನ್ನೂ ದಹಿಸಿದವನೇ ನಿಜವಾದ ಶಿವಯೋಗಿ, ಅಂಥವನ ಮೈಮನವೆಲ್ಲಾ ವಿಭೂತಿಯಿಂದಾಗಿದೆ, ಎಂದು ಸಾಂಕೇತಿಕ ಭಾಷೆಯಲ್ಲಿ ಹೇಳಬಹುದು. ಆದರೆ ಅವನಂತೆ ತಾವೂ ಆಗಬೇಕೆಂದು ಬಯಸುವ ಸಾಧಕರು ಮೊದಲು ಸಾಂಕೇತಿಕವಾಗಿ, ಅಂದರೆ, ಕಾಮದಹನದ ಸಂಕೇತವಾದ ವಿಭೂತಿ ಧಾರಣೆಯಿಂದ ಪ್ರಾರಂಭಿಸುತ್ತಾರೆ. ಆದರೆ ವಿಭೂತಿ ಧಾರಣೆ ಕೇವಲ ಸಾಂಕೇತಿಕ ಆಚರಣೆಯೆಂದೂ, ಜ್ಞಾನಾಗ್ನಿಯಿಂದ ಎಲ್ಲ ರೀತಿಯ ಆಸೆಗಳನ್ನು ಸುಡುವುದೇ ನಿದವಾದ ಆಚರಣೆಯೆಂದೂ ತಿಳಿದವನು ಸಾಂಕೇತಿಕ ಆಚರಣೆಯಿಂದ ಇನ್ನೂ ಮುಂದೆ ಹೋಗುತ್ತಾನೆ. ವಿಭೂತಿ ಎಂಬ ಶಬ್ದಕ್ಕೆ ಐಶ್ವರ್ಯ ಎಂಬುದು ಪರ್ಯಾಯವಾಗಿದೆ. ಈಶ್ವರ ಎಂಬುದರ ಭಾವವೇ ಐಶ್ವರ್ಯ. ಈಶ್ವರನೆಂದರೆ ಒಬ್ಬ ವ್ಯಕ್ತಿಯ ಅಂಕಿತನಾಮವಲ್ಲ. ಈಶ್ವರ ಎಂದರೆ ಪ್ರಭು, ಅಥವಾ ಸ್ವಾಮಿ (ಒಡೆಯ) ಎಂದರ್ಥ. ಇಲ್ಲಿಯೂ ಈಶ್ವರ ಒಂದು ಸಂಕೇತ. ಒಡೆಯನು ತನ್ನ ಸೇವಕರನ್ನು ಹೇಗೆ ನಿಯಂತ್ರಿಸುತ್ತಾನೋ ಹಾಗೆ ಈಶ್ವರನು ಎಲ್ಲ ಇಂದ್ರಿಯಗಳ ಒಡೆಯ. ಈ ಅರ್ಥದಲ್ಲಿ ಇಂದ್ರಿಯಗಳನ್ನು ಹತೋಟಿಯಲ್ಲಿಡುವವನು ಈಶ್ವರ. ಹೀಗೆ, ವಿಭೂತಿ ಅಥವಾ ಐಶ್ವರ್ಯವೆಂದರೆ ಇಂದ್ರಿಯ ನಿಯಂತ್ರಣ ಸಾಮರ್ಥ್ಯ ಎಂದಾಗುತ್ತದೆ. ವಿಭೂತಿ ಧರಿಸುವವನು ಅನಂತರವಾದರೂ ಆ ಆಚಾರದ ಹಿಂದಿರುವ ದರ್ಶನವನ್ನು ತಿಳಿದುಕೊಳ್ಳಬೇಕು.

ನೀರಿಂಗೆ ನೈದಿಲೆಯೆ ಶೃಂಗಾರ ; ಸಮುದ್ರಕ್ಕೆ ತೆರೆಯೆ ಶೃಂಗಾರ ;
ನಾರಿಗೆ ಗುಣವೇ ಶೃಂಗಾರ ; ಗಗನಕ್ಕೆ ಚಂದ್ರಮನೇ ಶೃಂಗಾರ ;
ನಮ್ಮ ಕೂಡಲ ಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ. -- ಬಸವಣ್ಣನವರು

ವಿಶಾಲವಾದ ಹರವಿಕೊಂಡು ನಿಂತ ನೀರು ನೈದಿಲೆಯಿಂದ ಹೆಚ್ಚು ಸುಂದರವಾಗಿ ಕಾಣುವಂತೆ ಸಮುದ್ರವು ತೆರೆಗಳಿಂದ ಚೆಲುವಾಗಿ ಕಾಣುವಂತೆ, ಸ್ತ್ರೀಗೆ ಗುಣವೇ ಸೌಂದರ್ಯವನ್ನು ಹೆಚ್ಚಿಸುವ ಅಂಶ, ಆಕಾಶದ ಚೆಲುವು ಚಂದ್ರಮನಿಂದ ವೃದ್ಧಿಗೊಳ್ಳುವಂತೆ, ಶರಣರ ಚೆಲುವು ನೊಸಲ ವಿಭೂತಿಯಿಂದ ಹೆಚ್ಚುತ್ತದೆ. ಇಲ್ಲವಾದರೆ ಆ ಹಣೆ ಬೋಳು ಬೋಳಾಗಿ ಕಾಣುತ್ತದೆ

ಬಸವ ಬಸವಾ ಎಂದು ಭಸಿತಮಂ ಧರಿಸಿದರೆ
ಬಸವಾದಿ ಪ್ರಮಥರಿಗೆ ಪ್ರೀತಿಯಯ್ಯಾ
ಬಸವ ಷಟಸ್ಥಲ ಚನ್ನಬಸವ ಪ್ರಭು ಮುಖ್ಯರು
ಭಸಿತಮಂ ಧರಿಸಿ ಬಯಲಾದರಯ್ಯ
ಎಸೆವ ಅಂಗುಲಿತ್ರಯವು ಭಸಿತರೇಖೆಗಳೆಲ್ಲ
ಬಸವಾಕ್ಷರತ್ರಯಗಳೆಂದು ಮುದದಿ
ಭಸಿತದಿಂ ನವ ಪ್ರಣವ ಹಸನಾಗಿ ಅಂಗದಲಿ
ಬಸವ ಬಸವಾ ಎಂದು ಸಂಬಂಧಿಸುವೆನು
ದುರುಳ ಕರಣಂಗಳೆಂಬ ಬೆರಣಿಗಳನುರುಹಿದ
ಪರಮಚಿದ್ಭಸಿತವೆಂದರಿದು ನಾನು
ಹರಬಸವ ಗುರುಬಸವ ಚರಬಸವ ಎಂದೆನುತ
ಶಿರವಾದಿ ಚರಣಾಂತ್ಯದೊಳು ಧರಿಸುವೆ
ನೀನು ಧರಿಸಿದೆಯಾಗಿ ಆನು ಧರಿಸುವೆನಯ್ಯ
ಸ್ನಾನಧೂಳನ ಧಾರಣಗಳಿಂದ
ಹೀನ ಮಾನವರಿದರ ಜ್ಞಾನವಿಲ್ಲದೆ ಭವದ,
ಕಾನನದೊಳಗೆ ತಾವು ಬೀಳುತಿಹರು
ತ್ರಿನಯನ ಮಹಾಂತೇಶ ದಣಿ ಬಸವರಾಜನ
ಅಣಿಯರದಿ ಸ್ಮರಿಸುತ್ತ ಭಜಿಸುತ್ತಲಿ
ಅಣುಮಾತ್ರ ಭಸಿತವನು ಹಣೆಯೊಳಿಟ್ಟಾಕ್ಷಣವೆ
ಒಣಗುವವು ದುರಿತಂಗಳೆಂಬ ಕುಜವು. - ಬಾಲ ಲೀಲಾ ಮಹಾಂತ ಶಿವಯೋಗಿಗಳು

ವಿಭೂತಿ ಧರಿಸಲು ಹೆಣ್ಣು-ಗಂಡು ಎಂಬ ಲಿಂಗ ಭೇದವಿಲ್ಲ, ಜಾತಿ ಭೇದವಿಲ್ಲ, ವಗ೯ಭೇದವಿಲ್ಲ, ಸನ್ಯಾಸಿ-ಸಂಸಾರಿ ಆಶ್ರಮ ಭೇದವಿಲ್ಲ

ವಿಭೂತಿ ಧರಿಸಿದವರೆಲ್ಲರೂ ಸಮಾನರೂ ಎಂಬುದು 12ನೆಯ ಶತಮಾನದ ಅನುಭವ ಮಂಟಪದ ನಿಯಮ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ವಿಮರ್ಶಾ ಶಕ್ತಿ ವಚನ Next