ಕರ್ಮ | ಕಲೆಗಳು |
ಕರ್ಮತ್ರಯ |
ಭಾರತೀಯ ದರ್ಶನಗಳ ಪ್ರಕಾರ, ನಾವು ಮಾಡುವ ಪ್ರತಿಯೊಂದು ಐಚ್ಛಿಕ ಕ್ರಿಯೆಗೂ ಒಂದು ದೃಷ್ಟ (ಕಣ್ಣಿಗೆ ಕಾಣುವ) ಮತ್ತು ಅದೃಷ್ಟ (ಅಗೋಚರ) ಫಲಗಳಿರುತ್ತವೆ. ಉದಾಹರಣೆಗೆ, ನಾನು ಇಂದು ಒಬ್ಬನನ್ನು ಅವಾಚ್ಯ ಶಬ್ದಗಳಿಂದ ಅವಮಾನಗೊಳಿಸಿದೆನಾದರೆ, ಇದರ ಫಲದಿಂದ ನನಗೆ ಸಂತೋಷವಾಗಿ ಅವಮಾನಿತಗೊಂಡವನಿಗೆ ದುಃಖವಾಗುತ್ತದೆ. ನನಗಾಗುವ ಸಂತೋಷ ಮತ್ತು ಇನ್ನೊಬ್ಬನಿಗಾಗುವ ದುಃಖ ಇವೆರಡೂ ದೃಷ್ಟಫಲಗಳು. ಆದರೆ ಕರ್ಮ ಸಿದ್ಧಾಂತದ ಪ್ರಕಾರ, ಈಗ ನನಗೆ ಸಂತೋಷವಾದರೂ, ಮುಂದೆ ಅಥವಾ ಮುಂದಿನ ಜನ್ಮದಲ್ಲಿ (ಅಥವಾ ಮತ್ತಾವುದೋ ಮುಂದಿನ ಜನ್ಮದಲ್ಲಿ) ಈ ನನ್ನ ಕೃತ್ಯಕ್ಕನುಗುಣವಾಗಿ ನನಗೆ ತಕ್ಕ ಪ್ರತಿಫಲ ಸಿಗಲೇಬೇಕು. ಇದು ಅದೃಷ್ಟ.
ಕರ್ಮಗಳನ್ನು ಸಾಮಾನ್ಯವಾಗಿ ಸಂಚಿತ, ಪ್ರಾರಬ್ದ ಮತ್ತು ಆಗಾಮಿ ಎಂದು ವಿಂಗಡಿಸುವುದು ವಾಡಿಕೆ. ನಾವು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳೆಲ್ಲಕ್ಕೂ ಆಯಾ ಜನ್ಮದಲ್ಲೆ ಪ್ರತಿಫಲ ಸಿಕ್ಕುತ್ತದೆ ಎಂಬ ನಿಯಮವೇನಿಲ್ಲ. ಅಂತಹ ಕರ್ಮಗಳೆಲ್ಲವೂ ಸೇರಿಕೊಂಡು ಮುಂದಿನ ಯಾವುದೋ ಒಂದು ಜನ್ಮದಲ್ಲಿ ಅಥವಾ ಜನ್ಮಗಳಲ್ಲಿ ಪ್ರತಿಫಲ ನೀಡಬಹುದು. ಎಲ್ಲಿಯವರೆಗೆ ಅಂತಹ ಕರ್ಮಗಳು ಕೂಡಿ ಇನ್ನೂ ಕರ್ಮಫಲ ನೀಡುವುದಿಲ್ಲವೋ ಅಲ್ಲಿಯವರೆಗೂ ಅವಕ್ಕೆ ಕೂಡಿಟ್ಟ (ಸಂಚಿತ) ಕರ್ಮಗಳನ್ನುತ್ತೇವೆ. ಈ ಸಂಚಿತ ಕರ್ಮಗಳೇ ನಮ್ಮ ಈಗಿನ ಮತ್ತು ಮುಂದಿನ ಸಾಮರ್ಥ್ಯ, ಬುದ್ಧಿವಂತಿಕೆ, ಪ್ರವೃತ್ತಿಗಳು, ಇವುಗಳನ್ನು ನಿರ್ಧರಿಸುವುದು.
ಯಾವುದೇ ಕರ್ಮವು ಎಂದಾದರೊಂದು ದಿನ ತಕ್ಕ ಫಲ ನೀಡಲೇಬೇಕು. ಹೀಗೆ ಫಲಕೊಡಲು ಪ್ರಾರಂಭವಾದ ಕರ್ಮವೇ ಪ್ರಾರಬ್ಧ ಕರ್ಮ. ನನಗೆ ಈ ಜನ್ಮದಲ್ಲಿ ಒಂದೇ ಕಾಲಿರಬೇಕೆಂಬುದಕ್ಕೆ, ಯಾವುದೋ ಒಂದು ಸಂಚಿತ ಕರ್ಮವು ಪ್ರಾರಬ್ಧವಾಗಿದೆ ಎಂದರ್ಥ. ಹೀಗೆ ನಮ್ಮ ದೇಹ, ಬುದ್ಧಿವಂತಿಕೆ, ನಮ್ಮ ನೈತಿಕ ಮಟ್ಟ, ನಮ್ಮ ಧಾರ್ಮಿಕ ಅಥವಾ ಆಧ್ಯಾತ್ಮಿಕ ಒಲವು, ನಮ್ಮ ವಿದ್ಯಾಸಂಪಾದನೆ, ನಮ್ಮ ಹಣಗಳಿಕೆಯ ಸಾಮರ್ಥ್ಯ, ಇತ್ಯಾದಿಗಳೆಲ್ಲವೂ ಪ್ರಾರಬ್ಧ ಕರ್ಮದ ಫಲ. ಹೀಗೆ ಸಂಚಿತ ಕರ್ಮವು ಪ್ರಾರಬ್ಧ ಕರ್ಮವಾಗುವುದನ್ನು ಅಂದರೆ, ಪ್ರಾರಬ್ಧ ಕರ್ಮದ ಫಲವಾಗಿ ನಾವು ಅನುಭವಿಸಬೇಕಾದ ಸುಖ ದು:ಖಗಳನ್ನು ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಆಗಾಮಿ ಕರ್ಮವೆಂದರೆ ಈ ಜನ್ಮದಲ್ಲಿ ಮಾಡುವ ಕರ್ಮಕ್ಕೆ ಮುಂದಿನ ಜನ್ಮದಲ್ಲಿ ಸಿಕ್ಕುವ ಫಲ. ಹಿಂದಿನ ಅನೇಕ ಜನ್ಮಗಳಲ್ಲಿ ಸಂಚಿತವಾದ ಕರ್ಮಗಳಿಗೆ ಫಲಸಿಕ್ಕುವುದು ಕೆಲವು ವೇಳೆ ಒಂದು ಜನ್ಮದಲ್ಲಿ ಸಾಕಾಗಲಾರದು. ಆದರೆ ಮೋಕ್ಷಾರ್ಥಿಯಾಗಿ ಹೊರಟವನು ವಿಜಯಿಯಾದರೆ, ಅವನು ತನ್ನ ಆಗಾಮಿಕರ್ಮಗಳನ್ನು ತಡೆಯುವುನಲ್ಲದೆ, ಸಂಚಿತ ಕರ್ಮಗಳನ್ನೂ ಸಹ ಸುಡಬಲ್ಲನು. ಅಲ್ಲದೆ ಆಗಾಮಿಕರ್ಮಗಳ ಸಹಾಯದಿಂದ ತನ್ನ ಮುಂದಿನ ಜನ್ಮವನ್ನೂ ಅವನು ರೂಪಿಸಿಕೊಳ್ಳಬಲ್ಲನು.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಕರ್ಮ | ಕಲೆಗಳು |