Previous ತುರೀಯ ಜಂಗಮಪಾದೋದಕ Next

ಪ್ರಣವ

ಪ್ರಣವ

ದೈವೋಪಾಸನೆಯ ನಿರ್ದಿಷ್ಟಮಂತ್ರದ ಮೂಲಭೂತವಾದ ಬೀಜಾಕ್ಷರಗಳೆನಿಸಿದ ಅ, ಉ, ಮ ಎಂಬುವುಗಳ ಸಮ್ಮಿಲನದಿಂದುಂಟಾದ ಒಂದು ಪವಿತ್ರಮಂತ್ರಾಕ್ಷರ; ಓಂಕಾರ;

ಪರಶಿವನ ಪಂಚಮುಖಗಳ ದ್ಯೋತಕಗಳೆಂದು ಹೇಳಲಾಗುವ ಪ್ರಣವವು ಸಕಲಮಂತ್ರಗಳ ಸಾರವಾಗಿದೆ. ಅ ಉ ಮ ಬಸವ ಓಂ ನಮಃ ಶಿವಾಯ ಎಂಬ ಪವಿತ್ರಾಕ್ಷರಗಳೇ ಪ್ರಣವವು. ಆ ಉ ಮ ಸ್ವರಗಳಿಂದಾದ ಪ್ರಣಮವು ಸರ್ವವ್ಯಾಪಿಯಾದುದು. ಮಹಾಲಿಂಗದಲ್ಲಿ ಪ್ರಕಟಗೊಂಡ ಸಾದಾಖ್ಯಗಳ ಶಕ್ತಿಗಳಿಗೆ ಈ ಪ್ರಣವವೇ ಮೂಲಕಾರಣವಾಗಿದೆ. ಸದಾಚರಣೆಗಳಿಗೆ ನಿಮಿತ್ತವಾದ ಪ್ರಣವ ಮಂತ್ರೋಪದೇಶವನ್ನು ಗುರುವು ತನ್ನ ಶಿಷ್ಯನಿಗೆ ದೀಕ್ಷಾಕಾಲದಲ್ಲಿ ಬೋಧಿಸುತ್ತಾನೆ. ಪ್ರಣವಾಕ್ಷರಗಳಿಂದ ಅನೇಕ ಬಗೆಯ ಜನಗಳುಂಟಾಗಿವೆ. ಶಕ್ತಿ ಸಂಬಂಧದ ಪ್ರಣವಗಳು, ಶಿವಸಂಬಂಧದ ಪ್ರಣವಗಳು, ಶಿವಶಕ್ತಿರಹಿತ ಪ್ರಣವಗಳಲ್ಲದೆ ತ್ರಿವಿಧಪ್ರಣವ, ಷಡ್ವಿಧಪ್ರಣವ, ನವವಿಧಪ್ರಣವ, ದ್ವಾದಶವಿಧಪ್ರಣವ, ಏಕವಿಂಶತಿಪ್ರಣವ, ದಶಪಂಚ- ಪ್ರಣವಗಳು ಎಂಬುವೇ ಮೊದಲಾದುವು ಮುಖ್ಯವಾದುವುಗಳು ;
ಪ್ರಣವನುಚ್ಚರಿಸುವ ಅಪ್ರಮಾಣಿಕರೆಲ್ಲರೂ ಪ್ರಣವಮಂತ್ರಾರ್ಥವನೋದಿ ಮಂತ್ರಾರ್ಥವನಳೆಯರು ...ಪ್ರಣವ ಓಂ ನಮಃ ಶಿವಾಯ ಎಂದುವು ಶ್ರುತಿಗಳೆಲ್ಲಾ (ಬಸವ. ಸಮವ. ೧-೧೫೦-೫೯೮);

ಓಂಕಾರವೆಂಬ ಪ್ರಣವದಲ್ಲಿ ಅಕಾರ ಉಕಾರ ಮಕಾರ ಇವು ಮೂರು ಬೀಜಾಕ್ಷರ (ಕರಣ. ೬೫೭-೨); ಪ್ರಣವಂ ತತ್ಪದಬ್ರಹ್ಮವೆನಿಪ್ಪುದು ಪ್ರಣವ ಪರಮಪದಂ ಪರವೆನಿಪುದು ಪ್ರಣವ ಸಕಲನಿಗಮಾಗಮಮಸದನಂ ಪ್ರಣವ ಶಿವನ ಗೋಪ್ಯವೆನಿಪ ವದನಂ (ದೀಕ್ಷಾಬೋ. ೬೫-೧೫); ಆ ಓಂಕಾರವೆಂಬ ಪ್ರಣವವೇ ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗ ನೋಡಾ (ಸಿದ್ದೇವ. ೯-೩೩); ಅಕಾರೋಕಾರ ವರಮಕಾರತ್ರಯಂ ಪರಿಕಿಸಲವೊಂದಾಗಲೋಂಕಾರವೆಂದೆನಿಪ ಪರತತ್ವ ಪ್ರಣವವಾದುದು ಪ್ರಣವದಿಂ ಪಂಚಲಕ್ಷಣಂ ಜನಿಯಿಸಿದುವು (ಚೆಬಪು. ೬೦-೧೯).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ತುರೀಯ ಜಂಗಮಪಾದೋದಕ Next