ಜಂಗಮಲಿಂಗ | ತುರೀಯ |
ಮಹಾಮನೆ, ಮಹಮನೆ |
೧. ಲಿಂಗಭಕ್ತನು ಶರಣರೊಡಗೂಡಿ ಅರ್ಪಣೆ, ಅರ್ಚನೆ, ಅನುಭಾವಗಳನ್ನು ಜರುಗಿಸುವ ನೆಲೆ, “ಸ್ಥಳ ; “ಮಹಾಮನೆಯಲ್ಲಿ ಬ್ರಹ್ಮಾಂಡವೆಂಬ ಭಕ್ತಿಮಂದಿರದಲ್ಲಿ” (ಬಸಟೀ.I, ೨೪೪-೩೪೮ ಟೀಕು) ; ಚೆನ್ನಯ್ಯ- ನೆಮ್ಮಯ್ಯನು ಚೆನ್ನಯ್ಯನ ಮಗ ನಾನು ಕೂಡಲಸಂಗನ ಮಹಾಮನೆಯಲಿ ಧರ್ಮಸಂತಾನಿ ಭಂಡಾರಿ ಬಸವಣ್ಣನು (ಬಸವ. ಸಮವ. ೧-೮೪-೩೪೭); ನಿಮ್ಮಡಿಗಳರಮನೆಯೆ ಮಹಾಮನೆಯಾಗಿ ಎನ್ನ ಭಂಡಾರವೆ ನಿಮ್ಮದಾಗಿ ಭಕ್ತರ್ಗಾರಾಧಿಸಿ ನಿಶ್ಚಿಂತ ನಿರುಪಮಶಿವಗೋಷ್ಠಿಯಿಂ ಬಿಜಯಂಗೆಯ್ದೆನ್ನಂ ಕೃತಾರ್ಥನಂ ಮಾಳ್ವುದು (ನೂಪುರ. ೧೯೩-೧೧).
೨. ಜಂಗಮರ ಸೇವೆ, ಪೂಜಾಕಾರ್ಯ ಮುಂತಾದುವುಗಳು ನಡೆಯುತ್ತಿದ್ದ ಕಲ್ಯಾಣದಲ್ಲಿದ್ದ ಬಸವಣ್ಣನವರ ಮನೆ ; ಆಧಿಯ ಲಿಂಗವ ಮೇದಿನಿಗೆ ತಂದು ಮರ್ತ್ಯಲೋಕದಲ್ಲಿ ಮಹಾಮನೆಯ ಕಟ್ಟಿದನಯ್ಯಾ ಸಂಗನ ಬಸವಣ್ಣನು ...ಗುಹೇಶ್ವರನ ಶರಣ ಸಂಗನಬಸವಣ್ಣನ ಮಹಾಮನೆಯ ಕಂಡು ಧನ್ಯನಾದೆನು ಕಾಣಾ (ಅಲ್ಲಮ. ಸಮವ. ೨-೨೬೫-೮೯೨); ನಿಮ್ಮ ಸಂಗನ ಬಸವಣ್ಣ ಬಂದು ಕಲ್ಯಾಣದಲ್ಲಿ ಮನೆಯ ಕಟ್ಟಿದಡೆ ಮರ್ತ್ಯಲೋಕವೆಲ್ಲವು ಭಕ್ತಿ ಸಾಮ್ರಾಜ್ಯವಾಯಿತ್ತು ...ನಿಮ್ಮ ಶರಣ ಸಂಗನ ಬಸವಣ್ಣನ ಮಹಾಮನೆಗೆ ನಮೋ ನಮೋ ಎಂದು ಬದುಕಿದೆನು (ಸಿದ್ಧರಾ. ಸಮವ. ೪-೩೦೬-೧೦೭೬).
೩. ಪವಿತ್ರವಾದ ಕ್ಷೇತ್ರ; ಪುಣ್ಯಸ್ಥಳ ; ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ಕರ್ತನಟ್ಟಿದನಯ್ಯಾ ಒಬ್ಬ ಶರಣನ (ಅಲ್ಲಮ. ಸಮವ. ೨-೪೩೩-೧೪೫೯).
೪. ಮಹಾಮನೆಯ ಮಂಟಪದಲ್ಲಿ ನಾಲ್ಕು ನಡುವಳ ಕಂಬದ ನಡುವಳ ಕಂಬದಲ್ಲಿ ಒಂದು ಒಲೆ ಮನೆಯ ಮಾಡಿತ್ತು (ಕೋಲಶಾಂ. ಸಮವ. ೭-೬೪-೧೬೩),
ಮಹಮನೆ ; ೫. ಬಸವರಾಜನ ಮಹಮನೆಯ ಶಿವರಾತ್ರಿಯ ಸಂಭ್ರಮಕ್ಕೆ ಸಂತಸಂಬಡುತ್ತ ಬಂದು ನಿಂದಿರ್ದ ಶಿವನಂ ...ಬಿಜಯಂಗೆಯ್ಲಿ ಬಸವರಾಜಂ ಸನ್ನಿಧಿಯೊಳು ನೀಚಾಸನದಿಂ ಕುಳ್ಳಿರ್ದು ಪಾದಮಂ ಪಿಡಿದೊತ್ತುತ್ತಮಿರೆ (ನೂಪುರ. ೯೦-೧೬).
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಜಂಗಮಲಿಂಗ | ತುರೀಯ |