ನಾದ | ಭಾವಲಿಂಗ |
ಮಹಾಶೂನ್ಯ |
೧. ಜಗತ್ತೇ ಇಲ್ಲದಿದ್ದಾಗ ಪರಶಿವನೊಬ್ಬನೇ ಇದ್ದ. ಅವನಿಗೆ ಸೃಷ್ಟಿಸಬೇಕೆಂಬ ಇಚ್ಛೆಯೂ ಇರಲಿಲ್ಲದ ಸ್ಥಿತಿ ಅದು, ಅಷ್ಟೇಕೆ, ಪರಶಿವನಿಗೆ ಸ್ವ-ಪ್ರಜ್ಞೆ ಇರಲಿಲ್ಲ. ಆಗ ಇದನ್ನೆ ಶೂನ್ಯ, ಮಹಾಶೂನ್ಯ, ನಿಶೂನ್ಯ ಮುಂತಾಗಿ ಕರೆಯುತ್ತಾರೆ. ಆದರೆ ಪರಶಿವನಲ್ಲಿ ಎಲ್ಲವನ್ನೂ ಸೃಷ್ಟಿಸಲು ಬೇಕಾದ ಶಕ್ತಿ ಇದ್ದರೂ, ಅದೂ ಸಹ ಅವನಲ್ಲಿ ನಿಷ್ಕ್ರಿಯವಾಗಿತ್ತು. ಏಕೆಂದರೆ, ಪರಶಿವ ಅದಕ್ಕೆ ಯಾವ ಪ್ರಚೋದನೆಯನ್ನೂ ನೀಡಿರಲಿಲ್ಲ. ಆದರೆ ಶೂನ್ಯ ಏನೊಂದೇನೂ ಇಲ್ಲದ ಸ್ಥಿತಿಯಲ್ಲ. ಅಂತಹ ಸ್ಥಿತಿ ಅನಿರ್ವಾಚ್ಯ. ಏಕೆಂದರೆ ನಮಗೆ ಏನನ್ನಾದರೂ ವರ್ಣಿಸಲು ಹೋಲಿಕೆ ಬೇಕು. ಶಿವನನ್ನು ಕಾರಣವೆಂದು ವರ್ಣಿಸಲು ಪರಿಣಾಮ (ಉದಾ : ಪ್ರಪಂಚ) ಬೇಕು. ಆದರೆ ಪ್ರಪಂಚವೇ ಇಲ್ಲದಿದ್ದರೆ, ಅವನು ಸೃಷ್ಟಿಕರ್ತ, ಕಾರಣ ಎಂದು ವರ್ಣಿಸಲು ಬರುವುದಿಲ್ಲ. ಪ್ರಪಂಚದ ಸೃಷ್ಟಿಯ ನಂತರ, ಶಿವನನ್ನು ಸೃಷ್ಟಿ ಸ್ಥಿತಿ ಲಯಕರ್ತ ಮುಂತಾಗಿ ವರ್ಣಿಸಬಹುದು. ಆದ್ದರಿಂದ ಶೂನ್ಯವು ಎಲ್ಲವನ್ನೂ ಒಳಗೊಂಡ ಪೂರ್ಣವಾದರೂ, ಅನಿರ್ವಾಚ್ಯವಾದುದರಿಂದಷ್ಟೇ ಶೂನ್ಯ.
೨. ಶೂನ್ಯದಲ್ಲಿರುವ ಸರ್ವಶೂನ್ಯ ಮಹಾಶೂನ್ಯ ಸರ್ವಶೂನ್ಯನಿರಾಲಂಬ ಮತ್ತು ನಿಃಶೂನ್ಯ ನಾಲ್ಕು ಅವಸ್ಥೆಗಳಲ್ಲಿ ಒಂದು; ಏನೇನೊ ಇಲ್ಲದಿರುವ ಸ್ಥಿತಿ; ಮಹಾಬಯಲು ; ಪರಬ್ರಹ್ಮವಿಲ್ಲದಂದು ಪರಶಿವವಿಲ್ಲದಂದು ಶೂನ್ಯ ನಿಃಶೂನ್ಯ ಮಹಾಶೂನ್ಯ ಅತಿಮಹಾಶೂನ್ಯ ಎಂಬ ಮಹಾಘನವಸ್ತುವಿಲ್ಲದಂದು ...ನಿರಂಜನಾತೀತ- ನಾಗಿರ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣ ಕೂಡಲಸಂಗಮದೇವನು (ಬಾಲಸಂ. ಸಮವ. ೧೩-೧೮೭-೧೬೮೦); ವಚನಕಾರರು ಶೂನ್ಯದಲ್ಲಿ ಕೆಲವು ವಿಭಾಗಗಳನ್ನು ಮಾಡುತ್ತಾರೆ. ಅವೆಲ್ಲವೂ ಏನೂ ಇಲ್ಲದಂಥ ಸ್ಥಿತಿಗಳು ಅವುಗಳಲ್ಲಿ ನಾಲ್ಕು ಮುಖ್ಯವಾದವುಗಳು ಸರ್ವಶೂನ್ಯ, ಮಹಾಶೂನ್ಯ, ಸರ್ವಶೂನ್ಯ ನಿರಾಲಂಬ ಇವೆಲ್ಲವುಗಳೂ ಒಂದೇ ಅರ್ಥವನ್ನು ಸೂಚಿಸುತ್ತವೆ (ಶಿವಾಕೋ. ೧೬-೨೦).
೩. ಯಾವ ತತ್ತ್ವಗಳೂ ಇಲ್ಲದ ನಿಷ್ಕಲ ಪರವಸ್ತು; ಮಹಾಲಿಂಗದ ರೂಪ ; ಮಹಾಶೂನ್ಯ ನಿರಾಳ ನಿರಂಜನ ಲಿಂಗವ ಕರ ಮನ ಭಾವ ಸರ್ವಾಂಗಗಳಲ್ಲಿ ತುಂಬಿ ನಿತ್ಯನೆಂದೆನಿಸಲಿಲ್ಲ (ಅಂಬಿಗ, ಸಮವ. ೬-೧೧-೨೬); ಮಹಾಶೂನ್ಯವೆಂದು ಹೇಳಲ್ಪಡುತ್ತಿಹ ಆ ಶಿವತತ್ವವು ಸ್ವತಃ ಶೂನ್ಯತೆಯನೈದದಿಹುದು (ಗಣಭಾ. ೯೧-೮).
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ನಾದ | ಭಾವಲಿಂಗ |