Previous ಬಿಂದು ಪಂಚಬ್ರಹ್ಮ Next

ಪ್ರಾಣಲಿಂಗ

ಪ್ರಾಣಲಿಂಗ

೧. ಇಷ್ಟಲಿಂಗ, ಭಾವಲಿಂಗ ಮತ್ತು ಪ್ರಾಣಲಿಂಗಗಳೆಂಬ ತ್ರಿವಿಧಲಿಂಗಗಳಲ್ಲಿ ಒಂದು; ಸೂಕ್ಷ್ಮಶರೀರದಲ್ಲಿ ಗುರುವಿನಿಂದ ನೆಲೆಗೊಂಡ ಲಿಂಗತತ್ತ್ವ; ಗುರುವು, ಇಷ್ಟಲಿಂಗದಲ್ಲಿ ಚಿಚ್ಚಕ್ತಿಯನ್ನು ಆವಾಹನೆಮಾಡಿ ತನ್ನ ಶಿಷ್ಯನಿಗೆ ಅನುಗ್ರಹಿಸಿದ ಲಿಂಗ; ತ್ಯಾಗಾಂಗ, ಭೋಗಾಂಗ, ಯೋಗಾಂಗಗಳ ಮೂಲಕ ಸ್ಥೂಲ, ಸೂಕ್ಷ್ಮ, ಕಾರಣ ತನುಗಳಲ್ಲಿರುವ ಶಿವತತ್ವವೇ ಇಷ್ಟ ಪ್ರಾಣ, ಭಾವಲಿಂಗಗಳಾಗಿ ಪ್ರಕಟಗೊಳ್ಳುವವು. ಇಂದ್ರಿಯಗಳಿಗೆ ಚೈತನ್ಯಸ್ವರೂಪವಾದ ಪ್ರಾಣದಲ್ಲಿಯೇ ಪ್ರಾಣಲಿಂಗವು ನೆಲೆಗೊಳ್ಳುವುದರಿಂದ ದೇಹಗುಣಗಳು ಅಳಿದು, ಲಿಂಗಗುಣಗಳು ಅಳವಡುವುವು. ಇದರಲ್ಲಿ ಶಿವಲಿಂಗ, ಜಂಗಮಲಿಂಗ ಎಂಬ ಎರಡು ಪ್ರಭೇದಗಳಿವೆ ; ಪ್ರಾಣಲಿಂಗ ಪ್ರತಿಗ್ರಾಹಕನಾದ ಬಳಿಕ ಲಿಂಗವಿರಹಿತನಾಗಿ ನಡೆವ ಪರಿಯೆಂತೊ (ಬಸವ. ಸಮವ. ೧-೨೦೫-೭೯೭); ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ ಆಕಾಶಗಂಗೆಯಲ್ಲಿ ಮಜ್ಜನ ಹೂವಿಲ್ಲದ ಪರಿಮಳದ ಪೂಜೆ ಹೃದಯಕಮಳದಲ್ಲಿ ಶಿವಶಿವಾ ಎಂಬ ಶಬ್ದ (ಅಲ್ಲಮ. ಸಮವ. ೨-೬೩-೧೯೮);

ಸತಿಯ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ ಸುತನ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ ...ತನುವ ಸೋಂಕಿ ವಜ್ರಲೇಪದಂತಿರಬೇಕು ಮನ ಕರದಲ್ಲಿ ಕೊಟ್ಟ ಪ್ರಾಣಲಿಂಗ ಹಿಂಗಿದರೆ ಅವನಂದೇ ವ್ರತಗೇಡಿ (ಚೆನ್ನಬ. ಸಮವ. ೩-೧೨೦-೩೬೬); ಹೋಗಹೋಗಲು ಕಾಣೆ ಮುಂದಣ ಭಾಗದಲ್ಲಿ ಶಿವಲಿಂಗವದೆ ನೀಂ ಹೋಗು ನಿನ್ನಯ ಪ್ರಾಣಲಿಂಗಂ ತಾನದುವೆ (ಬಸಪು. ೧೭-೪); ಸೂಕ್ಷ್ಮತರತತ್ವವೇ ಪ್ರಾಣಲಿಂಗವೆನಿಕುಂ (ಶಿವಚಿಂ. ೪೯-೬).

೨. ಐದು ಬಗೆಯ ಲಿಂಗಗಳಲ್ಲಿ ಒಂದು ; ಸ್ವಯಂಭುಲಿಂಗ ಬಾಣಲಿಂಗ ಚಲಲಿಂಗ ಸಂಕೀರ್ಣಲಿಂಗ ಪ್ರಾಣಲಿಂಗವೆಂಬ ಪಂಚವಿಧ- ಲಿಂಗಂಗಳಂ ತಮ್ಮ ತಮ್ಮ ಶಕ್ಕನುಸಾರಮಾದರ್ಚನಾತತ್ಪರರಾಗಲ್ವೇಳ್ಳುಂ (ವಿವೇಕ. ೯೨).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಬಿಂದು ಪಂಚಬ್ರಹ್ಮ Next