Previous ಶೈವಸಿದ್ಧಾಂತ ಷಡಂಗ Next

ಷಟ್‌ಸ್ಥಲ ಬ್ರಹ್ಮ

ಷಟ್‌ಸ್ಥಲ ಬ್ರಹ್ಮ

ಪ್ರತಿಯೊಂದು ಸ್ಥಲದಲ್ಲಿಯೂ ಉಳಿದ ಐದು ಸ್ಥಲಗಳಿವೆ. ಉದಾಹರಣೆಗೆ ಭಕ್ತನಲ್ಲಿ ಮಹೇಶ, ಭಕ್ತನಲ್ಲಿ ಪ್ರಸಾದಿ, ಭಕ್ತನಲ್ಲಿ ಪ್ರಾಣಲಿಂಗಿ, ಭಕ್ತನಲ್ಲಿ ಶರಣ, ಭಕ್ತನಲ್ಲಿ ಐಕ್ಯ, ಹಾಗೆಯೇ ಮಹೇಶನಲ್ಲಿ ಭಕ್ತ, ಮಹೇಶನಲ್ಲಿ ಪ್ರಸಾದಿ, ಇತ್ಯಾದಿ. ಅಲ್ಲದೆ, ಪ್ರತಿಯೊಂದು ಸ್ಥಲದಲ್ಲಿಯೂ ತನ್ನ ಸ್ಥಲದ ಲಿಂಗವನ್ನಲ್ಲದೆ, ಆ ಲಿಂಗದಲ್ಲಿರುವ ಉಳಿದ ಐದು ಲಿಂಗಗಳನ್ನೂ ಸಾಧಕನು ಅರ್ಪಿಸಬೇಕು. ಉದಾಹರಣೆಗೆ, ಭಕ್ತನು ಆಚಾರಲಿಂಗವನ್ನೂ, ಭಕ್ತನಲ್ಲಿರುವ ಮಹೇಶನು ಆಚಾರಲಿಂಗದಲ್ಲಿರುವ ಗುರುಲಿಂಗವನ್ನೂ, ಭಕ್ತನಲ್ಲಿರುವ ಪ್ರಸಾದಿಯು ಆಚಾರಲಿಂಗದಲ್ಲಿರುವ ಶಿವಲಿಂಗವನ್ನೂ, ಭಕ್ತನಲ್ಲಿರುವ ಪ್ರಾಣಲಿಂಗಿಯು ಆಚಾರಲಿಂಗದಲ್ಲಿರುವ ಜಂಗಮಲಿಂಗವನ್ನೂ, ಭಕ್ತನಲ್ಲಿರುವ ಶರಣನು ಆಚಾರಲಿಂಗದಲ್ಲಿರುವ ಪ್ರಸಾದಲಿಂಗವನ್ನೂ, ಭಕ್ತನಲ್ಲಿರುವ ಐಕ್ಯನು ಆಚಾರಲಿಂಗದಲ್ಲಿರುವ ಮಹಾಲಿಂಗವನ್ನೂ ಅರ್ಚಿಸಬೇಕು. ಭಕ್ತನಿಗೆ ಪೃಥ್ವಿಯೇ ಅಂಗ, ಆ ಅಂಗಕ್ಕೆ ಸುಚಿತ್ತವೆಂಬ ಸೂಕ್ಷ್ಮ ಹಸ್ತ, ಭಕ್ತನಲ್ಲಿ ಮಹೇಶ, ಪ್ರಸಾದಿ, ಇತ್ಯಾದಿ ಇರುವಂತೆ, ಅವನ ಅಂಗವಾದ ಪೃಥ್ವಿಯಲ್ಲಿ ಮಹೇಶನ ಅಂಗವಾದ ಅಪ್ಪು, ಪ್ರಸಾದಿಯ ಅಂಗವಾದ ಅಗ್ನಿ, ಇತ್ಯಾದಿ ಅಂಗಗಳೂ, ಸುಚಿತ್ತವೆಂಬ ಹಸ್ತದಲ್ಲಿ ನಿರಹಂಕಾರ ಸುಮನ, ಮುಂತಾದ ಹಸ್ತಗಳೂ ಇವೆ. ಹೀಗೆ ವಾಸ್ತವವಾಗಿ ಲಿಂಗಗಳು ಆರಲ್ಲವೆಂದೂ, ಸ್ಥಲಗಳು ಆರಲ್ಲವೆಂದೂ, ದೇಹಗಳು ಆರಲ್ಲವೆಂದೂ, ಒಂದೇ ಲಿಂಗ, ಒಂದೇ ಸ್ಥಲ, ಒಂದೇ ದೇಹ ಎಂದೂ ತಿಳಿದು ಅದನ್ನು ಒಡಗೂಡಿದವನೇ ಷಟ್‌ಸ್ಥಲಬ್ರಹ್ಮ ಅಥವಾ ಬ್ರಹ್ಮಯೋಗಿ. (೧೩:೧೮೭೧)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಶೈವಸಿದ್ಧಾಂತ ಷಡಂಗ Next