ಪಂಚಜ್ಞಾನ | ಪಂಚಭೂತಗಳ ಪರಿಣಾಮಗಳು |
ಪಂಚಪಾತಕ (ಪಂಚಮಹಾಪಾತಕ) |
ಸಾಂಪ್ರದಾಯಿಕ ಹಿಂದೂಗಳು ಭ್ರೂಣಹತ್ಯೆ, ಬ್ರಹ್ಮಹತ್ಯೆ, ಮುಂತಾದವುಗಳನ್ನು ಪಂಚಪಾತಕಗಳೆಂದು ಪರಿಗಣಿಸಿದರೆ ಚೆನ್ನಬಸವಣ್ಣನವರು (೩:೧೬೬) ಭವಿ ಮಾಡಿದ ಪಾಕವನ್ನು ಉಣ್ಣುವುದು ಮೊದಲನೆ ಪಾತಕ, ಪರಧನ, ಪರಸತಿಗೆ ಆಸೆ ಪಡುವುದು ಎರಡನೆ ಪಾತಕ, ಜಂಗಮನಿಂದೆ ಮೂರನೆ ಪಾತಕ, ಗುರುವಾಜ್ಞೆ ಮೀರುವುದು ನಾಲ್ಕನೆಯ ಪಾತಕ, ಶಿವನಿಂದ ಐದನೆ ಪಾತಕ ಎಂದು ಹೇಳುತ್ತಾರೆ. ಭವಿಗಳೊಡನಾಟ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿ ಮಾಡುತ್ತದೆ; ಎರಡನೆಯದು ಅನೈತಿಕ: ಜಂಗಮನಿಂದೆ, ಶಿವನಿಂದೆ, ಗುರುವಾಜ್ಞೆ ಮೀರುವುದು ನಿಷ್ಠೆಯಿಲ್ಲದುದರ ಸಂಕೇತ. ಆದುದರಿಂದ ಇವೆಲ್ಲ ವರ್ಜ್ಯ. ಆದರೆ ಚೆನ್ನಬಸವಣ್ಣನವರೇ ಈ ಪಟ್ಟಿಯನ್ನು ಬದಲಾಯಿಸಿ: ಲಿಂಗದೀಕ್ಷೆಯಾದ ಬಳಿಕ ಲಿಂಗವನ್ನು ಕಳೆದುಕೊಳ್ಳುವುದು ಮೊದಲನೆ ಪಾತಕ, ಭವಿಪಾಕಭೋಜನ ಎರಡನೆ ಪಾತಕ ಪ್ರತಿಮೆಗಳಿಗೆ ನಮಸ್ಕರಿಸುವುದು ಮೂರನೆಯ ಪಾತಕ, ಪ್ರಸಾದಿಸ್ಥಲವನ್ನರಿಯದಿದ್ದರೆ, ನಾಲ್ಕನೆಯ ಪಾತಕ, ಲಿಂಗದಲ್ಲಿ ಲೀಯವಾಗದಿದ್ದರೆ ಐದನೆ ಪಾತಕ" ಎನ್ನುತ್ತಾರೆ (೩:೧೯೮), ಅವರೇ ಮತ್ತೊಮ್ಮೆ (೮೭೦೧) ಶಿವ ಭಕ್ತರ ಕಂಡು ಉದಾಸೀನ ಮಾಡುವುದು ಮೊದಲನೆ ಪಾತಕ, ಭಕ್ತರ ಸಮಯೋಚಿತವ ನಡೆಸದಿದ್ದರೆ ಎರಡನೆ ಪಾತಕ, ಭಕ್ತರಿಗೆ ಮಾರುತ್ತರ ಕೊಟ್ಟರೆ, ಮೂರನೆ ಪಾತಕ, ಭಕ್ತರ ಸಕಳಾರ್ಥಕ್ಕೆ ಸಲ್ಲದಿದ್ದರೆ ನಾಲ್ಕನೆ ಪಾತಕ, ಭಕ್ತರಿಗೆ ಮಾಡಿದೆನೆಂದು ಹೆಮ್ಮೆ ಪಟ್ಟುಕೊಂಡರೆ ಐದನೆ ಪಾತಕ ಎನ್ನುತ್ತಾರೆ.
೧. ಬ್ರಹ್ಮಹತ್ಯೆ, ಸುರಾಪಾನ, ಸ್ವರ್ಣಸ್ತೇಯ, ಗುರುಪತ್ನೀ ಗಮನ ಮತ್ತು ಇಂಥ ಪಾಪಕಾರ್ಯಗಳನ್ನು ಮಾಡಿದವರ ಸಹವಾಸ -ಎಂಬ ಐದು ಬಗೆಯ ದೊಡ್ಡ ಪಾಪಕಾರ್ಯಗಳು ; ಕರಿಯಂಜೂದು ಅಂಕುಶಕ್ಕಯ್ಯಾ ...ಪಂಚಮಹಾಪಾತಕವಂಜೂದು ಕೂಡಲಸಂಗನ ನಾಮಕ್ಕಯ್ಯಾ (ಬಸವ. ಸಮವ. ೧-೨೨-೭೫); ಪಂಚಮಹಾಪಾತಕಂಗಳು ಹೋಹ ಠಾವ ಕಂಡೆ ಸರ್ವದುಃಖಗಳು ಬೇವ ಠಾವ ಕಂಡೆ ...ಗುಹೇಶ್ವರ ಲಿಂಗಯ್ಯನ ಎನ್ನ ಕರಸ್ಥಲದಲ್ಲಿ ಕಣ್ಣು ತುಂಬಿ ಕಂಡೆ (ಅಲ್ಲಮ. ಸಮವ. ೨-೩೯೬-೧೩೪೩).
೨. ಗುರು, ಲಿಂಗ, ಜಂಗಮ, ಆಚಾರ, ಪ್ರಸಾದಗಳಿಗೆ ದ್ರೋಹ ಮಾಡುವಂಥ ಐದು ಬಗೆಯ ಪಾಪಕೃತ್ಯಗಳು ; ಗುರುಕಾರುಣ್ಯವ ಹಡೆದ ಭಕ್ತನು ಹಿಂದಣ ಪೂರ್ವಾಶ್ರಯವ ಬೆರಸಿದಡೆ ಗುರುದ್ರೋಹ ಲಿಂಗದ್ರೋಹ ಜಂಗಮದ್ರೋಹ ಆಚಾರದ್ರೋಹ ಪ್ರಸಾದದ್ರೋಹ ಇಂತೀ ಪಂಚಮಹಾತಕಂಗಳು ಭಕ್ತಂಗಲ್ಲದೆ ಭವಿಗೆಲ್ಲಯದೊ.(ಬಸವ. ಸಮವ. ೧-೧೯೫-೭೬೮).
೩. ಅಂಗದ ಮೇಲೆ ಪ್ರತಿಷ್ಠಾಪಿಸಿದ ಲಿಂಗವನ್ನು ತೆಗೆದು ಹಾಕುವುದು, ದೀಕ್ಷೆ ಪಡೆಯದವರಿಂದ ಆಹಾರವನ್ನು ಸ್ವೀಕರಿಸುವುದು, ಪ್ರತಿಮೆಗಳನ್ನು ಪೂಜಿಸುವುದು, ಪ್ರಸಾದಸಂಬಂಧವನ್ನು ತಿಳಿಯದಿರುವುದು, ಪ್ರಾಣವನ್ನು ಲಿಂಗದಲ್ಲಿ ನೆಲೆಗೊಳಿಸದಿರುವುದು ಎಂಬ ಐದು ಬಗೆಯ ಹೀನ ಕಾರ್ಯಗಳು ; ಅಂಗದ ಮೇಲೆ ಲಿಂಗಪ್ರತಿಷ್ಠೆಯನೆ ಮಾಡಿ ಹಿಂಗಿದಡೆ ಪ್ರಥಮ ಪಾತಕ ಭವಿಪಾಕಕ್ಕೆಳಸಿದಡೆರಡನೆಯ ಪಾತಕ ಪ್ರತುಮಾದಿಗಳಿಗೆಆಗಿದಡೆ ಮೂನೆಯ ಪಾತಕ ಪ್ರಸಾದಸ್ಥಲವನಡೆಯದಿದ್ದಡೆ ನಾಲ್ಕನೆಯ ಪಾತಕ ಸುಳುಹಡಗಿ ಲಿಂಗಲೀಯವ ಮಾಡದಿದ್ದಡೆ ಐದನೆಯ ಪಾತಕ ಇಂತೀ ಪಂಚಮಹಾಪಾತಕವ ಕಳೆಯಬಲ್ಲಡೆ ತಿಳಿಯಬೇಕು ...ನಿಮ್ಮ ಶರಣನಾಗಬಲ್ಲಡೆ (ಚೆನ್ನಬ. ಸಮವ. ೩-೫೬-೧೮೨).
೪. ಮೇಲ್ಕಂಡ ಐದು ಬಗೆಯ ಮಹಾಪಾಪಕಾರ್ಯಗಳನ್ನು ಮಾಡಿದ ವ್ಯಕ್ತಿ ; ಅಂಗದ ಮೇಲಣ ಲಿಂಗವ ಹಿಂಗಿ ಸ್ಥಾವರಲಿಂಗಕ್ಕೆಅಗುವ ಭಂಗಿತರ ಮುಖವ ನೋಡಲಾಗದು ...ಅಂತಪ್ಪ ಪಂಚಮಹಾಪಾತಕರ ಮುಖದತ್ತ ತೋಱದಿರಾ (ಅಲ್ಲಮ. ಸಮವ. ೨-೧೯೩-೭೦೪); ಗುರುವಿನಲ್ಲಿ ಉಪದೇಶ ಪಡೆದು ಪ್ರಸಾದಕ್ಕೆ ಸೂತಕವ ಮಾಡುವ ಪಂಚಮಹಾಪಾತಕರು ನೀವು ಕೇಳಿ ಭೋ (ಮಡಿಮಾ, ಸಮವ. ೮-೨೨೧-೫೭೬).
ಶರಣರು ನಿಷಿದ್ಧವಾದ ಅನೇಕ ಬಗೆಯ ಆಚರಣೆಗಳನ್ನು ಪಂಚಮಹಾ ಪಾತಕಗಳೆಂದು ಉಲ್ಲೇಖಿಸಿದ್ದಾರೆ. ಅವುಗಳಲ್ಲಿ ಕೆಲವನ್ನು ಮೇಲೆ ಸೂಚಿಸಲಾಗಿದೆ.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಪಂಚಜ್ಞಾನ | ಪಂಚಭೂತಗಳ ಪರಿಣಾಮಗಳು |