Previous ಇಪ್ಪತ್ತೊಂದು ದೀಕ್ಷೆಗಳು ಏಕಾದಶವಿಧ ಅರ್ಪಣೆ (ಏಕಾದಶವಿಧ ಪ್ರಸಾದ) Next

ಏಕಾದಶವರ್ಮ ( ಹನ್ನೊಂದು ರಹಸ್ಯಗಳು)

ಏಕಾದಶವರ್ಮ ( ಹನ್ನೊಂದು ರಹಸ್ಯಗಳು)

ಇಲ್ಲಿ ವರ್ಮ (ಮರ್ಮ) ಎಂಬ ಪದವು ಶೂನ್ಯಸಂಪಾದನೆಯ ರಹಸ್ಯವನ್ನು ಸೂಚಿಸುತ್ತದೆ. ಈ ಪದವಿಯನ್ನು ಪಡೆಯಲು ನಾವು ಹನ್ನೊಂದು ರೀತಿಯ ಆಚಾರಗಳನ್ನು ಪಾಲಿಸಬೇಕಾಗುತ್ತದೆ. ಈ ಆಚಾರಗಳು ಎಲ್ಲರಿಗೂ ಗೊತ್ತಿಲ್ಲವಾದುದರಿಂದ, ಮೋಕ್ಷಾರ್ಥಿಯು ಅವುಗಳ ರಹಸ್ಯವನ್ನು ಸಮರ್ಥ ಗುರುವಿನಿಂದ ಕಲಿಯಬೇಕಾಗುತ್ತದೆ. ಈ ಹನ್ನೊಂದು ಆಚಾರಗಳ ವಿವರಗಳು ಹೀಗಿವೆ :

೧. ಲಿಂಗಾಚಾರ : ಗುರು, ದೀಕ್ಷೆಯಲ್ಲಿ ಕೊಟ್ಟ ಲಿಂಗವನ್ನಲ್ಲದೆ ಅನ್ಯದೈವಗಳನ್ನು ಕಾಯಾ, ವಾಚಾ, ಮನಸಾ ಅರ್ಚಿಸದಿರುವುದೇ ಲಿಂಗಾಚಾರ.

೨. ಸದಾಚಾರ : ಸಾಧಕನು ಲಿಂಗಾಚಾರವನ್ನೂ ಅಲ್ಲದೆ, ಅದಕ್ಕೆ ಪೂರಕವಾಗಿ ನೈತಿಕ ಆಚಾರಗಳನ್ನೂ (ಸದಾಚಾರವನ್ನೂ) ಪಾಲಿಸಬೇಕು. ಸಾಧಕನು ಭಕ್ತಸ್ಥಲದಲ್ಲಿದ್ದರೆ, ಸತ್ಯಶುದ್ಧ ಕಾಯಕ ಮಾಡಿ, ದಾಸೋಹ ಮಾಡಬೇಕು ಅವನು ಮಹೇಶ ಸ್ಥಲದಲ್ಲಿದ್ದರೆ, ಸತ್ಯಶುದ್ಧ ಭಿಕ್ಷೆ ಮಾಡಿ, ದಾಸೋಹ ಮಾಡಬೇಕು ಅಂತೂ ದಾಸೋಹ ಸಾಧಕನ ಕರ್ತವ್ಯ. ಸಮಸ್ತ ಪ್ರಾಣಿಗಳ ಹಿತಾರ್ಥವಾಗಿ ದಾಸೋಹ ಮಾಡಬೇಕೇ ಹೊರತು, ಆಡಂಭರಕ್ಕಲ್ಲ. ಅಲ್ಲದೆ ಬೇರೆಯವರ ಹಸಿವು-ತೃಷೆಗಳನ್ನು ಗಮನಿಸಿ ದಾಸೋಹ ಮಾಡಬೇಕೇ ಹೊರತು, ಅಪಾತ್ರರಿಗೆ ದಾಸೋಹ ಮಾಡಬಾರದು. ಇಷ್ಟೆಲ್ಲ ಸದಾಚಾರವೆನಿಸಿಕೊಳ್ಳುತ್ತದೆ.

೩.ಶಿವಾಚಾರ : ನೈತಿಕ ಕ್ರಿಯೆ ಶಿವಾಚಾರವನ್ನೂ ಒಳಗೊಳ್ಳುತ್ತದೆ. ಗುರು ಹೇಳಿದಂತೆ ನಡೆದುಕೊಳ್ಳುವ ಶಿವಭಕ್ತರು ನಮ್ಮವರೆಂಬ ಅಭಿಮಾನದಿಂದ, ಅವರಿಗೆ ತನು ಮನ ಧನಗಳನ್ನು ಅರ್ಪಿಸಬೇಕು. ಆಗ ಅವರು ಲಾಂಛನಧಾರಿಗಳೆಂಬುದನ್ನು ನೋಡಬೇಕೇ ಹೊರತು, ಅವರ ಗುಣಾವಗುಣವನ್ನಲ್ಲ. ವಾಸ್ತವವಾಗಿ ಅವರೆಲ್ಲರೂ ` ಗುರುಮಾರ್ಗಾಚಾರದಲ್ಲಿ ನಿಂದವರೇ ಆದುದರಿಂದ ಅವರ ಗುಣಾವಗುಣಗಳ ಪರೀಕ್ಷೆ ಅನಗತ್ಯ.

೪. ಗಣಾಚಾರ : ಶಿವಗಣಗಳ (ಶಿವಭಕ್ತರ) ಅಥವಾ ಅಷ್ಟಾವರಣಗಳ ನಿಂದೆಯು ಕೇಳಿ ಬಂದರೆ, ಗಣಸಮೇತ ಆ ಸ್ಥಳವನ್ನು ಬಿಟ್ಟು ಬೇರೆ ಕಡೆಗೆ ಹೋಗುವುದೇ ಗಣಾಚಾರ. (ಕೆಲವರು ಶಿವಭಕ್ತರನ್ನೂ ಶಿವಧರ್ಮವನ್ನೂ ನಿಂದಿಸುವವರ ಕೊಲ್ಲಬೇಕು ಎಂಬುದೇ ಗಣಾಚಾರ ಎನ್ನುತ್ತಾರೆ).

೫. ಭೃತ್ಯಾಚಾರ : ನೃತ್ಯನೆಂದರೆ ಸೇವಕ. ನಿಜವಾದ ಲಿಂಗವಂತನು ಗುರು ಮತ್ತು ಜಂಗಮರನ್ನು ನೃತ್ಯರಂತೆ ಸೇವೆ ಮಾಡಬೇಕು. ಜಾತಿ, ಆಶ್ರಮ, ಕುಲ, ಗೋತ್ರ ಮುಂತಾದವುಗಳನ್ನು ಲೆಕ್ಕಿಸದೆ ಗುರುವಿನಿಂದ ಇಷ್ಟಲಿಂಗವನ್ನು ಪಡೆದು, ಭಕ್ತಿ, ಜ್ಞಾನ, ವೈರಾಗ್ಯಗಳಿಂದ ಅಷ್ಟಾವರಣ ಮತ್ತು ಷಟ್‌ಸ್ಥಲಗಳನ್ನಾಚರಿಸುವ ಶಿವಭಕ್ತರನ್ನು ಭಕ್ತಿಗೌರವಗಳಿಂದ ಆದರಿಸಿ, ಅವರಿದ್ದಲ್ಲಿಗೇ ಹೋಗಿ ತನುಮನಧನಗಳನ್ನರ್ಪಿಸುವುದು ಭೃತ್ಯಾಚಾರ.

೬. ಕ್ರಿಯಾಚಾರ : ಕ್ರಿಯಾಚಾರದಲ್ಲಿ ಅನೇಕ ರೀತಿಯ ಧಾರ್ಮಿಕ ಕ್ರಿಯೆಗಳು ಅಡಕವಾಗಿವೆ. ಇವುಗಳಲ್ಲಿ ಮುಖ್ಯವಾದುವೆಂದರೆ : ದೀಕ್ಷಾಗುರು, ಶಿಕ್ಷಾಗುರು ಮತ್ತು ಜ್ಞಾನಗುರುಗಳಿಂದ ಪೂಜೆ ಹೇಗೆ ಮಾಡಬೇಕು, ಮಂತ್ರವನ್ನು ಹೇಗೆ, ಯಾವಾಗ, ಉಚ್ಚರಿಸಬೇಕು ಮುಂತಾದವುಗಳನ್ನು ಕಲಿತು, ಅದರಂತೆ ಆಚರಿಸಬೇಕು; ದೈಹಿಕ ಶುಚಿಯನ್ನು ಆಚರಿಸಿ, ಸಾಕಾರ ಮತ್ತು ನಿರಾಕಾರ ಅರ್ಚನೆ ಮಾಡುವುದನ್ನು ಕಲಿತು, ಅದರಂತೆ ಆಚರಿಸಬೇಕು.

೭. ಜ್ಞಾನಾಚಾರ : ಕ್ರಿಯಾಚಾರದಿಂದ ದೈಹಿಕ ಮತ್ತು ಮಾನಸಿಕ ಶುದ್ದಿಯನ್ನು ಪಡೆದ ನಂತರ ಸಾಧಕನು ಜ್ಞಾನವನ್ನು ಪಡೆಯಲು ಪ್ರಯತ್ನಿಸಬೇಕು. ಈ ಪ್ರಯತ್ನವು ಜ್ಞಾನಾಚಾರವೆನ್ನಿಸಿಕೊಳ್ಳುತ್ತದೆ. ಇದರಲ್ಲಿ ಮುಖ್ಯವಾದುವೆಂದರೆ : ಗುರುಹಿರಿಯರಲ್ಲಿ ಅಹಂಕಾರದಿಂದ ವರ್ತಿಸಬಾರದು; ಕುಂದು.ನಿಂದೆ, ಹಾಸ್ಯ-ರೋಷಗಳನ್ನು ವರ್ಜಿಸಬೇಕು. ಪಾತಕರ ದರ್ಶನ, ಸ್ಪರ್ಶನ, ಸಹಭೋಜನ, ಸಹವಾಸವನ್ನು ವರ್ಜಿಸಬೇಕು. ವಚನಗಳಲ್ಲಿ ಹೇಳಿರುವಂತೆ ನಡೆದುಕೊಳ್ಳಬೇಕು.

೮. ಭಾವಾಚಾರ : ಭಾವಾಚಾರವೆಂದರೆ ನಮ್ಮ ಭಾವ (ಅಂತರಂಗವನ್ನು ನಾವೇ ಪರೀಕ್ಷೆ ಮಾಡಿಕೊಳ್ಳುವುದು. ತನು ವಿಕಾರದಿಂದ ಉಂಟಾದ ಕಾಮಕ್ರೋಧ ಲೋಭಮೋಹಮದ ಮಾತ್ಸರ್ಯಗಳನ್ನು ವರ್ಜಿಸಬೇಕು ಭವಿಜೀವನವನ್ನು ಬಿಡಬೇಕು ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬುದನ್ನು ನಾವೇ ನಮ್ಮ ಸ್ವಂತ ವಿವೇಚನೆಯಿಂದ ನಿರ್ಧರಿಸಿ, ದುರ್ಗುಣವ ತ್ಯಜಿಸಿ, ಸದ್ಗುಣವ ಹಿಡಿದು, ಬಿಡದಿಪ್ಪುದೇ ಭಾವಾಚಾರ".

೯. ಸತ್ಯಾಚಾರ : ಸತ್ಯಾಚಾರವೆಂದರೆ, ಸತ್ಯವಚನ. ಅತ್ಯಾಸೆಯಿಂದ ಹುಸಿಯ ನುಡಿಯದೆ, ಸತ್ಯವನ್ನೇ ನುಡಿಯಬೇಕೆಂಬುದು ನುಡಿದ ಮೇಲೆ, ಅದರಂತೆ ನಡೆಯಬೇಕೆಂಬುದು ವಚನ ಕೊಟ್ಟಮೇಲೆ ವಚನಕ್ಕೆ ತಪ್ಪದಿರುವುದು ಸತ್ಯಾಚಾರವೆನಿಸಿಕೊಳ್ಳುತ್ತದೆ.

೧೦. ನಿತ್ಯಾಚಾರ : ಕಾಮನ ಬಾಧೆಗೊಳಗಾಗಿ ಅನೈತಿಕವಾಗಿ ವರ್ತಿಸದೆ, ಮಡಿ ಮೈಲಿಗೆ ಮುಂತಾದವುಗಳನ್ನು ಆಚರಿಸದೆ, ಬಂದುದೆಲ್ಲವೂ ಪ್ರಸಾದವೆಂದು ತಿಳಿದು, ಆ ಪ್ರಸಾದ ಭೋಗದಲ್ಲಿ ಲೋಲುಪ್ತನಾಗಿರುವುದೇ ನಿತ್ಯಾಚಾರ.

೧೧. ಧರ್ಮಾಚಾರ : ಯಾವುದೇ ಪರಿಸ್ಥಿತಿಯಲ್ಲಿ ದಶವಿಧ ಪಾದೋದಕದ ಆಚರಣೆ, ಏಕಾದಶ ಪ್ರಸಾದದ ಆಚರಣೆ ಮತ್ತು ಮೂವತ್ತಾರು ಪ್ರಣವಗಳ ಆಚರಣೆ ಇವುಗಳನ್ನು ಧರ್ಮಚಾರ ಒಳಗೊಳ್ಳುತ್ತದೆ.

ಇದೆಲ್ಲವನ್ನೂ ಸಮರ್ಥ ಗುರುವಿನಿಂದ ತಿಳಿದುಕೊಂಡು ಅದರಂತೆ ಆಚರಿಸುವುದೇ ಸರ್ವಾಚಾರ ಸಂಪತ್ತು ಎಂದು ಚೆನ್ನಬಸವಣ್ಣವರು ನಿರ್ಣಯಿಸಿದ್ದಾರೆ. (೩:೯೪೫)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಇಪ್ಪತ್ತೊಂದು ದೀಕ್ಷೆಗಳು ಏಕಾದಶವಿಧ ಅರ್ಪಣೆ (ಏಕಾದಶವಿಧ ಪ್ರಸಾದ) Next