Previous ತೆರಹಿಲ್ಲದ ಘನ ತ್ರಿವಿಧ ಪ್ರಸಾದ Next

ತ್ರಿಗುಣ, ತ್ರಿಪುಟ

ತ್ರಿಗುಣ

ಇದಕ್ಕೆ ಎರಡು ಅರ್ಥಗಳಿವೆ. ೧. ಕಾಯಗುಣ, ಪ್ರಾಣಗುಣ, ಮತ್ತು ಭಾವಗುಣ. ಇವು ತ್ರಿಗುಣಗಳು ಎಂಬುದು ವಚನಕಾರರ ವಿಶೇಷ ಅರ್ಥ. ಹಸಿವು, ನಿದ್ರೆ, ಇಂದ್ರಿಯಗಳಿಗೆ ಸಂಬಂಧಿಸಿದ ಆಸೆ, ಹುಟ್ಟು, ಸಾವು ಮುಂತಾದವುಗಳೆಲ್ಲ ಕಾಯಗುಣಗಳು; ಇನ್ನೂ ಬಹಳ ದಿನ ಜೀವಿಸಬೇಕೆಂಬ ಆಸೆ ಪ್ರಾಣಗುಣ; ನಾನು, ನನ್ನದು, ನಮ್ಮವರು, ನನಗಾಗಿ ಮುಂತಾದ ಸ್ವಾರ್ಥ ಭಾವನೆಗಳು ಭಾವಗುಣ. (೨ : ೧೦೮೮)

೨. ಮತ್ತೊಂದು ಎಲ್ಲ ಪ್ರಾಚೀನ ಭಾರತೀಯ ದಾರ್ಶನಿಕರೂ ವಚನಕಾರರೂ ಸೇರಿ. ಒಪ್ಪಿಕೊಳ್ಳುವ ಸಾಮಾನ್ಯ ಅರ್ಥ. ಈ ಅರ್ಥದ ಪ್ರಕಾರ, ತ್ರಿಗುಣವೆಂದರೆ, ಸತ್ವ, ರಜಸ್, ತಮಸ್ ಎಂಬ ಮೂರು ಗುಣಗಳು, ಪ್ರತಿಯೊಂದು ವಸ್ತುವೂ (ಮಾನವ ದೇಹ, ಬುದ್ದಿ, ಮನಸ್ಸು ಸೇರಿದಂತೆ) ಈ ಮೂರು ಗುಣಗಳಿಂದ ರಚಿತವಾಗಿದೆ. ಪ್ರಳಯಕಾಲದಲ್ಲದಷ್ಟೇ ಈ ಮೂರುಗುಣಗಳು ಒಂದೇ ಸಮನಾಗಿದ್ದು, ಸೃಷ್ಟಿ, ಸ್ಥಿತಿಗಳಲ್ಲಿ ಅವುಗಳಲ್ಲಿ ಏರುಪೇರಾಗುತ್ತದೆ. ಜಡವಸ್ತುಗಳಲ್ಲಿ ಅತಿಯಾದ ತಮೋಗುಣವಿದ್ದು, ಉಳಿದೆರಡು ಗುಣಗಳು ಗೌಣವಾಗಿರುತ್ತವೆ. ದುಷ್ಟರಲ್ಲಿಯೂ ದಡ್ಡರಲ್ಲಿಯೂ ಹೆಚ್ಚು ತಮೋಗುಣವಿರುತ್ತದೆ. ರಜೋಗುಣ ಹೆಚ್ಚಾಗಿ, ಉಳಿದೆರಡು ಗುಣಗಳು ಕಡಿಮೆ ಇದ್ದವರಲ್ಲಿ ಕ್ರಿಯಾಶೀಲತೆ ಹೆಚ್ಚಾಗಿರುತ್ತವೆ. ಮುಂದಾಳಾಗಿರಬೇಕೆಂಬ ಆಸೆ, ಯಶಸ್ಸು, ಹಣ, ಮತ್ತು ಹೆಣ್ಣಿನ ಆಸೆ ಅವರಲ್ಲಿ ಅಧಿಕವಾಗಿರುತ್ತದೆ. ಸತ್ವಗುಣ ಅಧಿಕವಾಗಿದ್ದು ಉಳಿದೆರಡು ಗುಣಗಳು ಕಡಿಮೆಯಾಗಿದ್ದವರು ಹೆಚ್ಚಾಗಿ ಜ್ಞಾನಿಗಳಾಗಿದ್ದು, ಸಾತ್ವಿಕ ಜೀವನ ನಡೆಸುತ್ತಾರೆ.

ತ್ರಿಗುಣಗಳ ಪ್ರಸ್ತಾಪ ವಚನಗಳಲ್ಲಿ ಹೆಚ್ಚಾಗಿ ಬರದಿದ್ದರೂ, ಆಗಾಗ್ಗೆ ಪರಶಿವನನ್ನು ತ್ರಿಗುಣಾತ್ಮಕ, ತ್ರಿಗುಣಾತೀತ ಎಂದು ವರ್ಣಿಸುವುದುಂಟು.

ತ್ರಿಪುಟ:

ಮೂರು ಘಟಕಗಳನ್ನೊಳಗೊಳ್ಳುವಂಥಹದು. ಸಾಮಾನ್ಯವಾಗಿ ಈ ಪದ ವ್ಯವಹಾರಿಕ ಜ್ಞಾನಕ್ಕೆ ಮಾತ್ರ ಅನ್ವಯವಾಗುತ್ತದೆ. ಇದರಲ್ಲಿ ಮೂರು ಘಟಕಗಳೆಂದರೆ, ಜ್ಞಾತೃ, ತ್ರಿವಿಧ (ತಾನು), ಜ್ಞೇಯ (ಇದಿರು) ಮತ್ತು ಜ್ಞಾನ (ಅರಿವು), ವ್ಯವಹಾರಿಕ ಜ್ಞಾನವು ಜ್ಞಾತೃ ಮತ್ತು ಜ್ಞೇಯಗಳ ಸನ್ನಿಕರ್ಷದಿಂದುಂಟಾದ ಪರಿಮಾಮ ಎಂಬುದು ತ್ರಿಪುಟಿ"ಯ ಅರ್ಥ. ಉದಾಹರಣೆಗೆ ನಾನು ಒಂದು ವಸ್ತುವನ್ನು ನೋಡುತ್ತೇನೆ; ನನ್ನ ಬುದ್ದಿ ಇದು ಪುಸ್ತಕವೆಂಬುದನ್ನು ನಿರ್ಧರಿಸುತ್ತದೆ. ಅಂತಃಕರಣಗಳನ್ನೂ, ಇಂದ್ರಿಯಗಳನ್ನೂ, ಜೀವಾತ್ಮನನ್ನೂ ಒಳಗೊಂಡ ಈ ಸಂಕೀರ್ಣವು ಜ್ಞಾತೃ (ತಿಳಿದುಕೊಳ್ಳುವವನು); ರೂಪರಸಾದಿಗುಣಗಳನ್ನು ಹೊಂದಿರುವ, ಕಾಲದೇಶಗಳ ಮಿತಿಯಲ್ಲಿರುವ ವಸ್ತುವನ್ನು ನಾನು ತಿಳಿದುಕೊಳ್ಳುತ್ತೇನೆ. ಹಾಗೆ ತಿಳಿದುಕೊಂಡ ವಸ್ತುವೇ ಜ್ಞೇಯ. ಜ್ಞಾತೃ ಮತ್ತು ಜ್ಞೇಯಗಳ ಸಂಪರ್ಕದಿಂದ ಉಂಟಾದ "ಇದು ಪುಸ್ತಕ" ಎಂಬ ತಿಳುವಳಿಕೆಯೇ ಜ್ಞಾನ.

ಜ್ಞಾತೃವಿಗೆ ಜ್ಞೇಯವಿಲ್ಲದೆ ಜ್ಞಾನವಿಲ್ಲ; ಅಲ್ಲದೆ ನಾನು ಪುಸ್ತಕವನ್ನು ನೋಡುತ್ತಿದ್ದೇನೆ" ಎಂಬುದನ್ನು ತಿಳಿದುಕೊಳ್ಳದೆಯೂ ಜ್ಞಾನವಿಲ್ಲ. ಅಂದರೆ ಜ್ಞಾತೃವಿನ ಸ್ವಪ್ರಜ್ಞೆ ಜ್ಞೇಯದ ಜ್ಞಾನಕ್ಕೆ ಅವಶ್ಯಕ.

ಆದರೆ ತುರೀಯಾತೀತ ಸ್ಥಿತಿಯಲ್ಲಿ ಜ್ಞಾತೃವಿಗೆ ತಾನು ಇದ್ದೇನೆಂಬ ಅರಿವಾಗಲಿ, ತಾನು ಪರಶಿವನಲ್ಲಿ ಒಂದಾಗಿ ಬೆರೆತಿದ್ದೇನೆ ಎಂಬ ಅರಿವಾಗಲಿ ಇರುವುದಿಲ್ಲ. ಅಂತಹ ಸ್ಥಿತಿಯು ತ್ರಿಪುಟಿ ಶೂನ್ಯ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ತೆರಹಿಲ್ಲದ ಘನ ತ್ರಿವಿಧ ಪ್ರಸಾದ Next