Previous ವಚನ ಶಕ್ತಿ Next

ವ್ರತ, ನೇಮ, ಶೀಲ

ವ್ರತ, ನೇಮ, ಶೀಲ

ಆಚಾರವು ಸಾಮಾನ್ಯವಾದರೆ ವ್ರತವು ವಿಶಿಷ್ಟ, ಲಿಂಗಾಯತರೆಲ್ಲರೂ ಲಿಂಗಪೂಜೆ ಮಾಡುವುದು ಸಾಮಾನ್ಯ. ಮೌನವ್ರತ, ಸ್ವರ್ಣಗೌರೀವ್ರತ, ಮುಂತಾದ ವ್ರತಗಳನ್ನು ಆಚರಿಸುವುದು ವಿಶಿಷ್ಟ ಸಂದರ್ಭಗಳಲ್ಲಿ, ವಿಶಿಷ್ಟ ರೀತಿಯಲ್ಲಿ ಮಾಡುವ ಅರ್ಚನೆ (ಉದಾ : ಕುಂಕುಮಾರ್ಚನೆ) ಅಥವಾ ಅರ್ಪಣೆ (ಉದಾ : ವಿಶಿಷ್ಟ ಭೋಜ್ಯಗಳನ್ನು ಅರ್ಪಿಸುವುದು) ಇವೆಲ್ಲ ವ್ರತಗಳ ವಿವಿಧ ಪ್ರಕಾರಗಳು. ಸೋಮವಾರ ಊಟ ಮಾಡುವುದಿಲ್ಲ ಅಥವಾ ಒಂದೇ ಹೊತ್ತು ಊಟ ಮಾಡುತ್ತೇನೆ ಎಂಬುದು ಕೆಲವರ ವ್ರತ. ಛಳಿಗಾಲದಲ್ಲಿ ತಣ್ಣೀರಲ್ಲಿ ಸ್ನಾನಮಾಡಿ ಒದ್ದೆ ಬಟ್ಟೆಯಲ್ಲೇ ಅಡುಗೆ ಮಾಡುತ್ತೇನೆ ಎಂಬುದು ಕೆಲವರ ವ್ರತ. ಈ ಇಡೀ ತಿಂಗಳು ಬಾಳೆಹಣ್ಣು ತಿನ್ನುವುದಿಲ್ಲ, ಈ ತಿಂಗಳು ಮುಖಕ್ಷೌರ ಮಾಡಿಕೊಳ್ಳುವುದಿಲ್ಲ ಎಂಬುದು ಕೆಲವರ ವ್ರತ, ಭಾನುವಾರ ಮಾತನಾಡುವುದಿಲ್ಲ (ಮೌನ) ಎಂಬುದು ಕೆಲವರ ವ್ರತ. ಹೀಗೆ ವ್ರತಕ್ಕೆ ನಾನಾ ಮುಖಗಳುಂಟು.

ವ್ರತವನ್ನು ಆಚರಿಸುವುದು ಮುಖ್ಯವಾಗಿ ಎರಡು ಉದ್ದೇಶಗಳಿಗಾಗಿ, ಮೊದಲನೆಯದು ಇಂದ್ರಿಯ ನಿಗ್ರಹ, ಎರಡನೆಯದು ಆಧ್ಯಾತ್ಮಿಕ ಪ್ರಗತಿ. ಉದಾಹರಣೆಗೆ ವಿಷಯಲೋಲುಪತೆಯಲ್ಲಿ ಮುಳುಗಿ ತಮ್ಮ ಆಸೆಗಳನ್ನು ಕಡಿಮೆ ಮಾಡಿಕೊಳ್ಳುಬೇಕೆನ್ನುವರು ವಾರದಲ್ಲೊಂದು ದಿನ ಮದ್ಯಪಾನ ಮಾಡುವುದಿಲ್ಲ ಅಥವಾ ಮಾಂಸಭಕ್ಷಣೆ ಮಾಡುವುದಿಲ್ಲ, ಮುಂತಾದ ವ್ರತಗಳನ್ನು ಮಾಡುವುದು ಒಳ್ಳೆಯದೇ. ಅವರು ಇದೇ ವ್ರತವನ್ನು ವಾರದಲ್ಲಿ ಎರಡು ಸಾರಿ ಆಚರಿಸಿ, ಮತ್ತೆ ಕೆಲವು ತಿಂಗಳಾದ ಬಳಿಕ, ವಾರದಲ್ಲಿ ಮೂರುಬಾರಿ ಆಚರಿಸಿ, ಕೊನೆಗೆ ಅದನ್ನು ವಾರದ ಏಳು ದಿವಸಗಳಿಗೆ ವಿಸ್ತರಿಸಿದರೆ, ಆ ವ್ರತದ ಮೂಲಕ ಆ ಒಂದು ಆಸೆಯನ್ನು ಗೆಲ್ಲಬಹುದು. ಅದೇ ರೀತಿ, ಅರಿಷಡ್ವರ್ಗಗಳಿಗೂ ವ್ರತದ ಮೂಲಕ ಕಡಿವಾಣ ಹಾಕಿ, ಕೊನೆಗೆ ಅವುಗಳ ಮೇಲೂ ನಿಯಂತ್ರಣ ಸಾಧಿಸಬಹುದು. ಆದರೆ ಜೀವಮಾನವೆಲ್ಲ ಸೋಮವಾರ ಮಾತ್ರ ಮಾಂಸಭಕ್ಷಣೆ ವರ್ಜ ಮಾಡುವವರು ಅಂತಹ ವ್ರತದಿಂದ ಇಂದ್ರಿಯ ನಿಗ್ರಹವನ್ನೂ ಸಾಧಿಸುವುದಿಲ್ಲ, ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವುದಿಲ್ಲ. ಏಕೆಂದರೆ, ಇಂದ್ರಿಯ ನಿಗ್ರಹವಿಲ್ಲದೆ, ಆತ್ಮಶುದ್ಧಿ ಸಾಧ್ಯವಿಲ್ಲ, ಆತ್ಮಶುದ್ಧಿಯಿಲ್ಲದೇ ಆಧ್ಯಾತ್ಮಿಕ ಗುರಿಯೂ ಅಸಾಧ್ಯ. ಆದುದರಿಂದ ವ್ರತಗಳೂ ಆಚಾರಗಳಂತೆ ಸಾಮಾನ್ಯವಾಗಿರಬೇಕೇ ಹೊರತು, ಕಾಲಕ್ಕೆ ಸೀಮಿತವಾಗಿರಬಾರದು.

ಇನ್ನು ಕೆಲವರು ಉಪವಾಸ ವ್ರತ ಮಾಡುತ್ತೇವೆಂದು, ಮತ್ತೆ ಕೆಲವರು ಒಪ್ಪತ್ತು ಮಾಡುತ್ತೇವೆಂದು, ಮತ್ತೆ ಕೆಲವರು ಸಂಕಷ್ಟಿ ಮಾಡುತ್ತೇವೆಂದು, ಅನ್ನ ರೊಟ್ಟಿ, ಚಪಾತಿ ಮುಂತಾದ ದೈನಂದಿನ ಆಹಾರಗಳನ್ನು ವರ್ಜಿಸಿ, ಅವುಗಳ ಬದಲು ಉಪ್ಪಿಟ್ಟು, ಅವಲಕ್ಕಿ, ಹಣ್ಣು, ಖರ್ಜೂರ, ಇತ್ಯಾದಿಗಳನ್ನು ಹೊಟ್ಟೆ ತುಂಬಾ ತಿನ್ನುತ್ತಾರೆ. ಆದರೆ ಇದು ಉಪವಾಸ ವ್ರತವಲ್ಲ. ಉಪವಾಸ ವ್ರತದ ಉದ್ದೇಶವೂ ಸಹ, ಹಸಿವು, ತೃಷೆ ಮುಂತಾದ ಮೂಲಪ್ರವೃತ್ತಿಗಳನ್ನು ಜಯಿಸಬೇಕೆಂಬುದೇ. ಆದರೆ ಉಪವಾಸದ ಹೆಸರಿನಲ್ಲಿ ಉಪ್ಪಿಟ್ಟು, ಅವಲಕ್ಕಿ, ಇತ್ಯಾದಿಗಳನ್ನು ಹೇರಳವಾಗಿ ತಿಂದರೆ, ಹಸಿವು ತೃಷೆಯನ್ನು ಗೆಲ್ಲಲು ಸಾಧ್ಯವೇ ಇಲ್ಲ. ಅಲ್ಲದೇ, ಇಂಥ ವ್ರತಗಳ ಉದ್ದೇಶವೇನೆಂಬುದೇ ಕೆಲವರಿಗೆ ಗೊತ್ತಿಲ್ಲವಾದುದರಿಂದ, ಅಂಥವರ ವ್ರತಗಳು ಉದ್ದೇಶವಿಲ್ಲದೇ ಹೊರಟ ಕುರುಡನ ನಡಿಗೆಯಂತೆ ನಿಷ್ಟ್ರಯೋಜಕ

ವ್ರತಗಳ ಹೆಸರಿನಲ್ಲಿ ಕೆಲವರು ಅರ್ಥವಿಲ್ಲದ ಆಚಾರಗಳನ್ನು ರೂಢಿಸಿಕೊಳ್ಳುತ್ತಾರೆ. ಭವಿಗಳ ಮನೆಯಲ್ಲಿ ಊಟ ಮಾಡುವುದಿಲ್ಲ. (ಆದರೆ ಅವರು ಕೊಟ್ಟ ಪಡಿ ಸ್ವೀಕರಿಸಿದರೆ ದೋಷವಿಲ್ಲ); ಉಪ್ಪನ್ನು ತಿನ್ನುವುದಿಲ್ಲ ಪೂಜೆಗೆ ಚಿಲುಮೆಯ ನೀರನ್ನು ಮಾತ್ರ ಬಳಸುತ್ತೇನೆ: ಲಿಂಗಕ್ಕೆ ಆಕಳ ಹಾಲನ್ನೇ ನೈವೇದ್ಯ ಮಾಡುತ್ತೇನೆ: ಪರಿಮಳವನ್ನು ವಸ್ತ್ರಕ್ಕೆ ಸಿಂಪಡಿಸಿಕೊಳ್ಳುವುದಿಲ್ಲ ಅಥವಾ ಮೈಮೇಲೆ ಲೇಪಿಸಿಕೊಳ್ಳುವುದಿಲ್ಲ, ಲಿಂಗಪೂಜೆಗೆ ಕೆಂಪು ಹೂಗಳೇ ಶ್ರೇಷ್ಠ, ಮುಂತಾದವುಗಳು ಕೆಲವು. ಭಕ್ತ ಉಪ್ಪು ತಿನ್ನುವುದನ್ನು ಬಿಟ್ಟರೆ ಶಿವನಿಗೆ ಹೇಗೆ ಸಂತೋಷವಾಗುತ್ತದೆ? ನಿತ್ಯತೃಪ್ತನಾದ ಶಿವನಿಗೆ ನಾವು ನೈವೇದ್ಯ ಮಾಡುವ ಅರ್ಧ ಲೋಟ ಹಾಲಿನಿಂದ ಇನ್ನೂ ಹೆಚ್ಚಿನ ತೃಪ್ತಿಯಾಗುತ್ತದೆಯೇ? ಉಪ್ಪು ತಿನ್ನದವರನ್ನೂ ಹಾಲು ನೈವೇದ್ಯ ಮಾಡಿದವರನ್ನೂ ಶಿವ ಮೆಚ್ಚಿಕೊಳ್ಳುತ್ತಾನೆಯೇ? ಇಂಥ ವ್ರತಾಚರಣೆಗಳನ್ನು ಶರಣರು ಕಟುವಾಗಿ ಟೀಕಿಸಿದ್ದಾರೆ. ಅವರ ಪ್ರಕಾರ, ಪರದ್ರವ್ಯ, ಪರಸತಿಯರಿಗೆ ಆಸೆ ಮಾಡುವುದನ್ನೂ, ಹುಸಿ, ಕೊಲೆ, ಕಳವು ಮಾಡುವುದನ್ನೂ ವರ್ಜಿಸುತ್ತೇವೆಂದು ವ್ರತಮಾಡಬೇಕೇ ಹೊರತು, ಈ ರೀತಿ ಅರ್ಥರಹಿತ ವ್ರತಗಳನ್ನು ಮಾಡುತ್ತೇವೆಂದಲ್ಲ. ಪ್ರಾಯಶಃ ನಮ್ಮ ಅಜ್ಞಾನವೂ ಈ ವ್ರತಾಚಾರಕ್ಕೆ ಕಾರಣವಾಗಿದ್ದಿತು. ಅದಕ್ಕೆ ಅಲ್ಲಮ ಪ್ರಭು “ಸುಖವನರಿಯದ ಕಾರಣ ಹೆಂಗುಸು ಸೂಳೆಯಾದಳು, ಶಿವಲಿಂಗವನರಿಯದ ಕಾರಣ ಭಕ್ತ ಶೀಲವಂತನಾದ ಅಥವಾ ವ್ರತಸ್ಥನಾದ ಎಂದು ಹೇಳಿದುದು. ಪರದ್ರವ್ಯ, ಪರಸತಿಯರಿಗೆ ಆಸೆ ಪಡುವುದು, ಮುಂತಾದ ದುರ್ಗುಣಗಳನ್ನು ತ್ಯಜಿಸುತ್ತೇನೆಂದು ಯಾರೂ ವ್ರತ ಕೈಗೊಳ್ಳುವುದಿಲ್ಲ. ಏಕೆಂದರೆ ಅದು ಬಹಳ ಕಠಿಣ: ಉಪ್ಪು ತಿನ್ನುವುದಿಲ್ಲ, ಹಾಲನ್ನೇ ನೈವೇದ್ಯ ಮಾಡುತ್ತೇನೆ. ಎಂಬ ವ್ರತ ಕೈಕೊಳ್ಳುವುದು ಸುಲಭ. ಆದರೆ ದುರ್ಗುಣ ವರ್ಜದಿಂದಾಗುವ ಲಾಭ ವ್ರತಾಚರಣೆಗಿಲ್ಲ.

ವಚನಕಾರರು ವ್ರತಗಳನ್ನು ಶೀಲ ಮತ್ತು ನೇಮಗಳಿಂದ ಪ್ರತ್ಯೇಕಿಸದೆ, ಅವು ಮೂರನ್ನು ಸಮೀಕರಿಸುವುದು ಆಶ್ಚರ್ಯ. ಉದಾಹರಣೆಗೆ ಈ ಕೆಳಗಿನ ವಚನಗಳನ್ನು ಗಮನಿಸಿ,

೧. ಬಂದುದ ಕೈಕೊಳ್ಳಬಲ್ಲಡೆ ನೇಮ ವಂಚನೆಯ ಮಾಡದಿಪ್ಪುದೇ ನೇಮ ನಡೆದು ತಪ್ಪದಿದ್ದರೆ ನೇಮ ನುಡಿದು ಹುಸಿಯದಿದ್ದರೆ ನೇಮ.

೨. ಭಕ್ತರ ಮಠಕ್ಕೆ ಹೋಗಿ, ಒಳಹೊರಗಿಂಬುದು ಶೀಲವೇ? ನಮ್ಮ ಲಿಂಗಕ್ಕೆ ಒಳ್ಳೆಯ ಅಗ್ಗಣಿ ತನ್ನಿ, ಒಳ್ಳೆಯ ಪುಷ್ಪವನ್ನು ತನ್ನಿ, ಒಳ್ಳೆಯ ಓಗರವ ಮಾಡಿರಿ ಎಂಬುದು ಶೀಲವೇ? ಅಲ್ಲ, ಪಂಚೇಂದ್ರಿಯ ಸಪ್ತಧಾತು ಅರಿಷಡ್ವರ್ಗ ಅಷ್ಟಮದವ ಕೊಂದಾತನೆ ಶೀಲವಂತ, ೩. ವ್ರತವನಾಶ್ರಯಿಸಿದ ಮೇಲೆ, ಹುಸಿ, ಕೊಲೆ, ಕಳವು, ಪರದಾರ ಮಾಡುವನ್ನ ಬರ ವ್ರತಸ್ಥನಲ್ಲದೆ ನೇಮಕ್ಕೆ ಸಲ್ಲ, ಅವಗಾಚಾರವಿಲ್ಲ.

೪. ಪರಧನವನೊಲ್ಲ ನಿಪ್ಪುದೇ ವ್ರತ, ಪರಸ್ತ್ರೀಯರ ಕೂಡದಿಪ್ಪುದೇ ಶೀಲ, ಸರ್ವಜೀವನ ಕೊಲ್ಲದಿಪ್ಪುದೇ ನೇಮ.

೫. ಮನ ಆರೋಚಕವಾದಲ್ಲಿ ಲವಣ ವಾರಿಯಾಗಿ ಪರಪಾಕ ಮುಂತಾದ ರಸದ್ರವ್ಯನೊಲ್ಲನಿಪ್ಪುದು ವ್ರತವೇ?.... ಪರದ್ರವ್ಯ, ಪರಸತಿ, ಹುಸಿ, ಕೊಲೆ, ಕಳವು ಅತಿಕಾಂಕ್ಷೆಯಂ ಬಿಟ್ಟು ಬಂದುದ ನಿಂದುದ ಕಂಡು ಆಕಾಂಕ್ಷೆ ಮಾಡದಿಪ್ಪುದೆ ಅರವತ್ನಾಲ್ಕು ವ್ರತ, ಐವತ್ತಾರು ಶೀಲ, ಮೂವತ್ತೆರೆಡು ನೇಮ....

ದುರ್ಗುಣ ನಿರ್ಮೂಲನೆಗೆ ನೇಮವೆಂದು ಮೊದಲನೆಯ ವಚನವೂ, ಶೀಲವೆಂದು ಎರಡನೆಯ ವಚನವೂ, ವ್ರತವೆಂದು ಮೂರನೆಯ ವಚನವೂ ಹೇಳಿ, ಈ ಮೂರು ಪದಗಳಿಗೆ ಸಮಾನ ಅರ್ಥವಿದೆ ಎಂಬುದನ್ನು ಅವು ಖಚಿತಪಡಿಸುತ್ತವೆ. ನಾಲ್ಕು ಮತ್ತು ಐದನೆ ವಚನಗಳು ಇನ್ನೂ ಹೆಚ್ಚು ಸ್ಪಷ್ಟವಾಗಿ ಸಚ್ಚಾರಿತ್ರವೇ ಶೀಲ, ವ್ರತ ಮತ್ತು ನೇಮ ಎಂದು ಹೇಳಿವೆ.

ಇದರಿಂದ ಎರಡು ಅಂಶಗಳು ವ್ಯಕ್ತವಾಗುತ್ತವೆ. ೧. ನಿಜವಾದ ವ್ರತಶೀಲ ನೇಮಗಳು ಆಧ್ಯಾತ್ಮಿಕ ಜೀವನಕ್ಕೆ ಬಹಳ ಅಗತ್ಯ. ಅದಿಲ್ಲದೆ ಆತ್ಮಶುದ್ಧಿಯಿಲ್ಲ, ಆತ್ಮಶುದ್ಧಿಯಿಲ್ಲದವನಿಗೆ ಅನುಗ್ರಹ, ಅನುಭಾವ ಇಲ್ಲ. ಇವೆರಡೂ ಇಲ್ಲದೆ ಲಿಂಗಾಂಗ ಸಾಮರಸ್ಯವಿಲ್ಲ. ೨. ಚಿಲುಮೆಯ ನೀರು ಮಾತ್ರ ಪೂಜೆಗೆ ಯೋಗ್ಯ, ಭವಿಗಳ ಮನೆಯಲ್ಲಿ ಪ್ರಸಾದ ಸ್ವೀಕರಣೆ ಯೋಗ್ಯವಲ್ಲ, ಮುಂತಾದ ಬಾಹ್ಯ, ವ್ಯಾವಹಾರಿಕ ಆಚರಣೆಗಳು ವ್ರತಗಳೂ ಅಲ್ಲ, ಶೀಲಗಳೂ ಅಲ್ಲ ನೇಮಗಳೂ ಅಲ್ಲ. ಅವುಗಳಿಂದ ಆಧ್ಯಾತ್ಮಿಕ ಪ್ರಗತಿಯೂ ಆಗುವುದಿಲ್ಲ. ಆದುದರಿಂದ ಅವು ಅನಾವಶ್ಯಕ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ವಚನ ಶಕ್ತಿ Next