Previous ಮೂವತ್ತಾರು ತತ್ವಗಳು ಲಿಂಗ Next

ರೂಪು ನಿರೂಪು

ರೂಪು ನಿರೂಪು

ಇದನ್ನು ವಚನಕಾರರು ಎರಡು ಅರ್ಥಗಳಲ್ಲಿ ಬಳೆಸಿದ್ದಾರೆ. ಪರಶಿವನಿಗೆ ರೂಪು ಮತ್ತು ನಿರೂಪುಗಳೆರಡನ್ನೂ ಆರೋಪಿಸಬಹುದು ಎಂಬುದು ಒಂದು ಅರ್ಥ. ಸೃಷ್ಟಿ ಪೂರ್ವದ ಮುನ್ನ ಅವನಿಗೆ ಯಾವ ರೂಪವೂ ಇರುವುದಿಲ್ಲ. ಆದರೆ ತಾನೇ ಜಗವಾದಾಗ ಅವನಿಗೆ ಜಗತ್ತಿನ ರೂಪ ಬರುತ್ತದೆ. ಆದರೆ ಜಗತ್ತಿನ ರೂಪ ಅವನ ಶಾಶ್ವತ ರೂಪವಲ್ಲ. ಏಕೆಂದರೆ ಶಿವ ಜಗವಾದಂತೆ, ಜಗವಾಗದಿರಲೂ ಬಲ್ಲ. ಅಲ್ಲದೆ, ಅವನಿಗೆ ರೂಪವೂ ಇಲ್ಲ, ನಿರೂಪವೂ ಇಲ್ಲ ಎಂದು ಹೇಳಬಹುದು. ಜಗತ್ತಿನ ರೂಪ ಪಡೆದಾಗ ಶಿವನು ನಿರೂಪನಲ್ಲ, ಸೃಷ್ಟಿಪೂರ್ವಸ್ಥಿತಿಯಲ್ಲಿ ರೂಪನಲ್ಲ.

ಮತ್ತೊಂದರ್ಥದಲ್ಲಿ, ರೂಪು ನಿರೂಪು ಎಂಬುದನ್ನು ರೂಪವಿದ್ದುದನ್ನು ನಿರೂಪುಗೊಳಿಸುವುದು ಎಂದು ಅರ್ಥೈಸಬಹುದು. ಜಗತ್ತಿನ ಪ್ರತಿಯೊಂದು ವಸ್ತುವಿಗೂ ಒಂದು ನಿರ್ದಿಷ್ಟ ರೂಪ ಇದೆ. ಆದರೆ ತುರೀಯ ಸ್ಥಿತಿಯಲ್ಲಿರುವ ಅನುಭಾವಿಗೆ ಜಗತ್ತಿನ ವೈವಿಧ್ಯಮಯ ವಸ್ತುಗಳು ಕಾಣುತ್ತಿದ್ದರೂ, ಅವುಗಳಲ್ಲಿ ಅಂತಸ್ಥವಾಗಿರುವ ರೂಪವಿಲ್ಲದ ಪರಶಿವ ಗೋಚರಿಸುತ್ತಾನೆ. ಹೀಗೆ ರೂಪನ್ನು ನಿರೂಪಗೊಳಿಸುವುದೇ ಲಿಂಗಾಯತನ ಗುರಿ. ರೂಪಿನೊಳಗಣ ಬಯಲು : ಅಂಗಕ್ಕೆ ದೇಹ, ಇಂದ್ರಿಯ, ಇತ್ಯಾದಿಗಳಿರುವುದರಿಂದ ಅದು ರೂಪಿನೊಳಗಣ ಲಿಂಗವೆನಿಸಿಕೊಳ್ಳುತ್ತದೆ. ಆದರೆ ಆ ಅಂಗವು ಬಯಲು ಎನಿಸಿಕೊಳ್ಳುವ ಪರಶಿವನ ಅಂಶವಾದುದರಿಂದ, ಅದು ಸದ್ಯಕ್ಕೆ ಸಣ್ಣ ಬಯಲು ಎನಿಸಿಕೊಳ್ಳುತ್ತದೆ. ಆದುದರಿಂದ ರೂಪಿನೊಳಗಣ ಬಯಲು ಎಂದರೆ ದೇಹೇಂದ್ರಿಯಾದಿಗಳ ಸಂಪುಟದಲ್ಲಿ ಅಡಗಿರುವ ಅಂಗ (ಆತ್ಮ) ಎಂದಾಗುತ್ತದೆ. (೮:೧೨೮೩)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಮೂವತ್ತಾರು ತತ್ವಗಳು ಲಿಂಗ Next