ಅಷ್ಟತನು ನಿವೃತ್ತಿ ಮಾರ್ಗ | ಅಷ್ಟವಿಧ ಸಕೀಲ |
ಅಷ್ಟಮದಗಳು |
ವಾಸ್ತವವಾಗಿ ಅಷ್ಟಮದಗಳು ಕುಲಮದ, ಐಶ್ವರ್ಯಮದಗಳಂಥ ಮದಗಳೇನಲ್ಲ. ಅವು ಪ್ರಬಲವಾದ ಅಷ್ಟತನುವಿನ ಘಟಕಗಳ ಪರಿಣಾಮವಷ್ಟೇ. ಮಾನವನು ಪೃಥ್ವಿ, ಸಲಿಲ, ಪಾವಕ, ಪಾವನ, ಅಂಬರ, ಸೂರ್ಯ, ಚಂದ್ರ ಮತ್ತು ಆತ್ಮ ಎಂಬ ಎಂಟು ಘಟಕಗಳಿಂದಾದ ಒಂದು ಸಂಪುಟ ಇವುಗಳಲ್ಲಿ ಯಾವುದಾರೊಂದು ಕೆಲವು ವೇಳೆ ಉಳಿದವುಗಳ ಮೇಲೆ ಪ್ರಾಬಲ್ಯ ಸಾಧಿಸಿದಾಗ, ಅದರ ಪರಿಣಾಮ ಹೆಚ್ಚು ಕಂಡು ಬಂದು, ಉಳಿದವುಗಳ ಪರಿಣಾಮ ಕಡಿಮೆ ಕಂಡುಬರುತ್ತದೆ. ಪ್ರತಿಯೊಂದೂ ಉಳಿದವುಗಳ ಮೇಲೆ ಒಂದಲ್ಲ ಒಂದು ಕಾಲದಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸಬಹುದು. ಹಾಗೆ ಪ್ರಾಬಲ್ಯ ಸಾಧಿಸಿದ ಘಟಕದ ಪರಿಣಾಮ ಮದ" ಎನಿಸಿಕೊಳ್ಳುತ್ತದೆ. ಚೆನ್ನಬಸವಣ್ಣನವರ ಪ್ರಕಾರ, ಪೃಥ್ವಿಮದ, ಸಲಿಲಮದ, ಪಾವಕಮದ, ಪವನಮದ, ಅಂಬರಮದ, ರವಿಮದ, ಶಶಿಮದ ಮತ್ತು ಆತ್ಮಮದ ಇವೇ ಅಷ್ಟಮದಗಳು. ಈ ಅಷ್ಟಮದಗಳು ಮಾನವನ ವರ್ತನೆಯಲ್ಲಿ ಯಾವ ಪರಿಣಾಮವನ್ನುಂಟುಮಾಡುತ್ತವೆ ಎಂಬುದನ್ನು ಈಗ ನೋಡೋಣ.
ಮನುಷ್ಯನಲ್ಲಿರುವ ಪೃಥ್ವಿತತ್ವವು ಪ್ರಬಲಗೊಂಡಾಗ ಪೃಥ್ವಿ ಮದವುಂಟಾಗಿ ಆಗ ಅವನು ತನ್ನ ಪಾರ್ಥಿವ ಶರೀರದ ಕಡೆಗೆ ಗಮನಕೊಡುತ್ತಾನೆ. ಅಂದರೆ, ಊಟೋಪಚಾರ, ಶೃಂಗಾರ, ಇತ್ಯಾದಿಗಳಿಗೆ ಗಮನಕೊಡುತ್ತಾನೆ: ಸಲಿಲಮದವುಂಟಾದಾಗ, ತನಗೆ ಬೇಕು, ತನ್ನ ಮಕ್ಕಳಿಗೆ ಬೇಕು, ತನ್ನ ಕುಟುಂಬಕ್ಕೆ ಬೇಕು, ಎಂಬ ಮಮಕಾರ ಅವನಲ್ಲಿ ಉಂಟಾಗುತ್ತದೆ; ಪಾವಕಮದವುಂಟಾದಾಗ, ಅವನಲ್ಲಿ ಲೈಂಗಿಕ ಭಾವನೆ ಹೆಚ್ಚಾಗಿ ತನ್ನ ಪ್ರಿಯೆಯನ್ನು ನೋಡಬೇಕು, ನುಡಿಸಬೇಕು, ಅಲಿಂಗಿಸಬೇಕು, ಇತ್ಯಾದಿ ಆಸೆಗಳುಂಟಾಗುತ್ತವೆ: ಪವನಮದವುಂಟಾದಾಗ ಸಂಚರಿಸಬೇಕೆಂಬ ಬಯಕೆ ಉಂಟಾಗುತ್ತದೆ; ಅಂಬರಮದ ಉಂಟಾದಾಗ ರಾಜನಿಗೆ ಆವಶ್ಯಕವಾದ ಆನೆ, ಕುದುರೆ, ಪಲ್ಲಕ್ಕಿ, ಸೈನ್ಯ, ಛತ್ರ-ಚಾಮರ, ಮುಂತಾದವುಗಳು ಬೇಕೆಂಬ ಬಯಕೆ ಉಂಟಾಗುತ್ತದೆ ರವಿಮದದಿಂದ ಕೋಪ ಹೆಚ್ಚಾಗುತ್ತದೆ; ಶಶಿಮದದಿಂದ ಚಿಂತೆ ಹೆಚ್ಚಾಗುವುದಲ್ಲದೆ, ಆತ್ಮವಿಶ್ವಾಸ ಹೋಗಿ, ಆಗುವುದೋ ಇಲ್ಲವೋ, ಮುಂತಾದ ಸಂದೇಹಗಳು ಹುಟ್ಟುತ್ತವೆ. ಆತ್ಮಮದದಿಂದ ಸೌಂದರ್ಯ/ವಿದ್ಯೆ/ಐಶ್ವರ್ಯ ಶಕ್ತಿಯಲ್ಲಿ ತನ್ನ ಸಮಾನರಿಲ್ಲ ಎಂಬ ಅಹಂಕಾರ ಹುಟ್ಟುತ್ತದೆ. ಶಿವಯೋಗಿಯಾಗಬೇಕೆಂಬ ಸಾಧಕನು ಈ ಅಷ್ಟಮದಗಳನ್ನು ವರ್ಜಿಸಲೇಬೇಕು.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಅಷ್ಟತನು ನಿವೃತ್ತಿ ಮಾರ್ಗ | ಅಷ್ಟವಿಧ ಸಕೀಲ |