Previous ಶಕ್ತಿ ಮತ್ತು ತತ್ವ ಶರಣ Next

ಶಕ್ತಿಯಾರು, ಲಿಂಗವಾರು

ಶಕ್ತಿಯಾರು, ಲಿಂಗವಾರು

ಪರಶಿವನು ಶೂನ್ಯ ಸ್ಥಿತಿಯಲ್ಲಿರುವಾಗ ಅವನಲ್ಲಿ ನೆನಹು ಅಥವಾ ವಿಮರ್ಶಾ ಶಕ್ತಿ ತಲೆದೋರಿದಾಗ, ಅವನೇ ಮುಂದೆ ನಿ ಕಲಲಿಂಗನೆನಿಸಿಕೊಳ್ಳುತ್ತಾನೆ. ಅನಂತರ ಅವನೇ ಅಂಗಸ್ಥಲ ಮತ್ತು ಲಿಂಗಸ್ಥಲ ಎಂದು ಇಬ್ಬಾಗವಾಗುತ್ತಾನೆ. ಅನಂತರ ಲಿಂಗಸ್ಥಲದಲ್ಲಿ ಆರು ಲಿಂಗಗಳೂ ಮತ್ತು ಆರು ಶಕ್ತಿಗಳೂ ಉದ್ಭವವಾಗುತ್ತವೆ. ಹೀಗೆ ಹೇಳುವ ವಚನಕಾರರ ಅರ್ಥವಿಷ್ಟೇ: ಪರಶಿವನ ಇಚ್ಛೆಯಂತೆ ಶಕ್ತಿ ವಿಕಾಸಗೊಳ್ಳುತ್ತದೆ, ಹಾಗೂ ಶಕ್ತಿ ವಿಕಾಸದ ಪ್ರತಿ ಹಂತದಲ್ಲಿಯೂ ಅದು ಪರಶಿವನ ಮಾರ್ಗದರ್ಶನ ಮತ್ತು ನಿಯಂತ್ರಣದಲ್ಲಿರುತ್ತದೆ. ಈ ಮಾತನ್ನು ಅವರು ಈ ಕೆಳಗಿನಂತೆ ಹೇಳುತ್ತಾರೆ

ಲಿಂಗವಾರು ಎಂದರೆ, ಮಹಾಲಿಂಗ, ಪ್ರಸಾದಲಿಂಗ, ಜಂಗಮಲಿಂಗ, ಶಿವಲಿಂಗ, ಗುರುಲಿಂಗ ಮತ್ತು ಆಚಾರಲಿಂಗ, ಇವು ಏಕಕಾಲಕ್ಕೆ ಉದ್ಭವವಾಗದೇ, ಈಗ ತಿಳಿಸಿರುವ ಕ್ರಮದಲ್ಲಿ ಒಂದಾದ ಮೇಲೊಂದರಂತೆ ಉದ್ಭವವಾಗುತ್ತವೆ. ನಿ:ಕಲ ಸ್ಥಲದಲ್ಲೇ ಶಕ್ತಿಯು ಪರಶಿವನೊಂದಿಗಿದ್ದು, ಅದು ಅಂಗಸ್ಥಲ ಲಿಂಗಸ್ಥಲವೆಂದು ಇಬ್ಬಾಗವಾದಾಗ ಅದರಲ್ಲಿದ್ದ ಶಕ್ತಿಯೂ ಇಬ್ಬಾಗವಾಗುತ್ತದೆ. ಲಿಂಗದ ಜೊತೆಗಿರುವ ಶಕ್ತಿಗೆ ಕಲಾ ಶಕ್ತಿಯೆಂದೂ, ಅಂಗದ ಜೊತೆಗಿರುವ ಶಕ್ತಿಗೆ ಭಕ್ತಿ ಶಕ್ತಿಯೆಂದೂ ಹೆಸರಿದೆ. ಮೇಲೆ ತಿಳಿಸಿದ ಆರು ಲಿಂಗಗಳ ಜೊತೆಗಿರುವ ಶಕ್ತಿಗಳೂ ಸಹ ಒಂದಾದ ಮೇಲೊಂದರಂತೆ ಅಂದರೆ, ಲಿಂಗದ ಜೊತೆಗೇ, ಕ್ರಮವಾಗಿ ಉದ್ಭವಿಸುತ್ತವೆ. ಹೀಗೆ ಮಹಾಲಿಂಗದ ಜೊತೆಗಿರುವ ಶಕ್ತಿಗೆ ಚಿಚ್ಛಕ್ತಿ ಎಂದೂ, ಪ್ರಸಾದಲಿಂಗದ ಜೊತೆಗಿರುವ ಶಕ್ತಿಗೆ ಪರಾಶಕ್ತಿ ಎಂದೂ ಜಂಗಮಲಿಂಗದ ಜೊತೆಗಿರುವ ಶಕ್ತಿಗೆ ಆದಿಶಕ್ತಿ ಎಂದೂ ಶಿವಲಿಂಗದ ಜೊತೆಗಿರುವ ಶಕ್ತಿಗೆ ಇಚ್ಛಾಶಕ್ತಿ ಎಂದೂ, ಗುರುಲಿಂಗದ ಜೊತೆಗಿರುವ ಶಕ್ತಿಗೆ ಜ್ಞಾನಶಕ್ತಿ ಎಂದೂ, ಆಚಾರ ಲಿಂಗದ ಜೊತೆಗಿರುವ ಶಕ್ತಿಗೆ ಕ್ರಿಯಾಶಕ್ತಿಯೆಂದೂ ಹೆಸರು.

ಈ ಲಿಂಗಗಳೂ ಈ ಶಕ್ತಿಗಳೂ ಎಲ್ಲಿವೆ? ಅವುಗಳು ಹೇಗೆ ವ್ಯಕ್ತವಾಗುತ್ತವೆ ಅಥವಾ ಅವುಗಳ ಕಾರ್ಯಗಳೇನು? ವಾಸ್ತವವಾಗಿ ಈ ಆರು ಲಿಂಗಗಳು ಮನುಷ್ಯನ ದೇಹದಲ್ಲೇ ಇರುವ ಆರು ಚಕ್ರ ಅಥವಾ ಪದ್ಯಗಳಲ್ಲಿರುತ್ತವೆ. ಅದೇ ರೀತಿ ಈ ಆರು ಶಕ್ತಿ ಮನುಷ್ಯನ ವಿವಿಧ ಭಾಗಗಳಾಗಿ (ಬುದ್ಧಿ, ಬುದ್ದೀಂದ್ರಿಯ, ಇತ್ಯಾದಿಗಳಾಗಿ ಮಾರ್ಪಟ್ಟಿವೆ. ನಮ್ಮ ಆಧ್ಯಾತ್ಮಿಕ ಪ್ರಗತಿಯಾದಂತೆಲ್ಲಾ ಈ ಶಕ್ತಿಗಳ ಅವಗುಣಗಳು ಹೋಗಿ, ನಾವು ಹಂತಹಂತವಾಗಿ ಈ ಲಿಂಗಗಳನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾ ಹೋಗುತ್ತೇವೆ. ವಾಸ್ತವವಾಗಿ ಆರು ಲಿಂಗಗಳಿಲ್ಲ. ಆರು ಲಿಂಗಗಳು ಒಂದೇ ಲಿಂಗದ ಆರು ಅವಸ್ಥೆಗಳು, ಅದೇ ರೀತಿ ವಾಸ್ತವವಾಗಿ ಆರು ಶಕ್ತಿಗಳಿಲ್ಲ. ಅವೆಲ್ಲ ಒಂದೇ ಶಕ್ತಿಯ ಆರು ರೂಪಾಂತರಗಳು. ಹೀಗೆ, ಇಡೀ ಮನುಷ್ಯನನ್ನೆ ಒಂದು ಶಕ್ತಿಯೆಂದು ತೆಗೆದುಕೊಂಡರೆ, ಅವನಲ್ಲಿ ಒಂದೇ ಲಿಂಗ (ಒಬ್ಬ ಪರಶಿವ) ಮಾತ್ರ ಇರುತ್ತಾನೆ. ಅದೇ ಅವನ ಆತ್ಮ. ಹೀಗೆ ನೋಡಿದಾಗ, ಇಡೀ ವಿಶ್ವವೇ ಒಂದು ಶಕ್ತಿ ಮತ್ತು ಅದು ಪರಶಿವನ ದೇಹ, ಅವನು ಅದರ ಆತ್ಮ. ಇಂತಹ ದೇಹಾತ್ಮ ಸಂಬಂಧವುಳ್ಳ ಅಸ್ತಿತ್ವಕ್ಕೆ ಬ್ರಹ್ಮಾಂಡವೆನ್ನುತ್ತಾರೆ. ಮನುಷ್ಯನು ಪಿಂಡಾಂಡವೆನಿಸಿಕೊಳ್ಳುತ್ತಾನೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಶಕ್ತಿ ಮತ್ತು ತತ್ವ ಶರಣ Next