Previous ಪಂಚಾಚಾರ ಪಿಂಡತ್ರಯ Next

ಪಂಚೀಕರಣ(ಪಂಚೀಕೃತಿ)

ಪಂಚೀಕರಣ(ಪಂಚೀಕೃತಿ)

ಮನುಷ್ಯನೆಂದರೆ ಇಪ್ಪತ್ತೈದು ತತ್ವಗಳ ಒಂದು ಸಂಕೀರ್ಣ ಸಂಯೋಜನೆ. ಈ ಇಪ್ಪತ್ತೈದು ತತ್ವಗಳೆಂದರೆ: ೧. ಭೂತ ಪಂಚಕ : ಪೃಥ್ವಿ, ಅಪ್ಪು, ವಾಯು, ಅಗ್ನಿ ಮತ್ತು ಆಕಾಶ, ಎಂಬ ಐದು ಮಹಾಭೂತಗಳು.

೨. ವಾಯು ಪಂಚಕ : ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಎಂಬ ಐದು ವಾಯುಗಳು.

೩. ಕರ್ಮೇಂದ್ರಿಯ ಪಂಚಕ : ಪಾಯು, ಗುಹ್ಯ, ಪಾದ, ಪಾಣಿ ಮತ್ತು ವಾಕ್ ಎಂಬ ಐದು ಕರ್ಮೇಂದ್ರಿಯಗಳು.

೪. ಕರಣ ಪಂಚಕ : ಅಹಂಕಾರ, ಚಿತ್ತ, ಮನಸ್ಸು, ಬುದ್ದಿ, ಜ್ಞಾನ ಎಂಬ ಐದು ಅಂತಃಕರಣಗಳು.

೫. ಜ್ಞಾನೇಂದ್ರಿಯ ಪಂಚಕ : ಕಣ್ಣು, ನಾಲಗೆ, ಮೂಗು, ಚರ್ಮ ಮತ್ತು ಕಿವಿ ಎಂಬ ಐದು ಜ್ಞಾನೇಂದ್ರಿಯಗಳು.

ವಾಸ್ತವವಾಗಿ ಕರ್ಮೇಂದ್ರಿಯ, ಜ್ಞಾನೇಂದ್ರಿಯ, ಇತ್ಯಾದಿಗಳು ಭೂತ ಪಂಚಕಗಳ ವಿವಿಧ ಪ್ರಮಾಣದ ಮಿಶ್ರಣಗಳು. ಯಾವ ಭೂತ ಉಳಿದ ಯಾವ ಭೂತಗಳೊಡನೆ ಎಷ್ಟು ಪ್ರಮಾಣದಲ್ಲಿ ಸೇರಿದರೆ ಯಾವ ತತ್ವಗಳು ಹುಟ್ಟುತ್ತದೆ ಎಂಬುದರ ಜ್ಞಾನವೇ ಪಂಚೀಕರಣದ ಜ್ಞಾನ, ಪಂಚೀಕರಣದ ಜ್ಞಾನದಿಂದಾಗಿ, ನಾವು ಕರ್ಮೇಂದ್ರಿಯ, ಜ್ಞಾನೇಂದ್ರಿಯ ಇತ್ಯಾದಿಗಳ ಬಗೆಗೆ ತಿಳಿದುಕೊಂಡರೆ ಅವನ್ನು ಆಧ್ಯಾತ್ಮಿಕ ಜೀವನಕ್ಕೆ ಹೇಗೆ ಪರಿವರ್ತಿಸಿಕೊಳ್ಳಬಹುದೆಂಬುದನ್ನು ತಿಳಿದುಕೊಳ್ಳಬಹುದು. ಆದುದರಿಂದ ಪಂಚೀಕರಣದ ಜ್ಞಾನ ಕೇವಲ ಬೌದ್ಧಿಕ ತೃಪ್ತಿಗಾಗಿ ಅಲ್ಲ, ಆಧ್ಯಾತ್ಮಿಕ ಪ್ರಯೋಜನಕ್ಕಾಗಿ ಎಂಬ ಮಾತನ್ನು ವಚನಕಾರರು ಒತ್ತಿ ಹೇಳಿದ್ದಾರೆ.

ಈಗ ಪಂಚೀಕರಣದ ವಿವರಗಳನ್ನು ಪರಿಶೀಲಿಸೋಣ.

ಪಂಚಭೂತಕಗಳಲ್ಲಿ ಅತ್ಯಂತ ಸೂಕ್ಷ್ಮವಾದುದೆಂದರೆ, ಆಕಾಶ ತತ್ವ, ಜ್ಞಾನ, ಬುದ್ದಿ, ಮನಸ್ಸು ಚಿತ್ತ ಮತ್ತು ಅಹಂಕಾರ ಎಂಬ ಸೂಕ್ಷ್ಮ ತತ್ವಗಳು ಆಕಾಶದಿಂದ ಹೇಗೆ ಉತ್ಪತ್ತಿಯಾಗುತ್ತವೆ, ಎಂಬುದನ್ನು ವಚನಕಾರರು ಹೀಗೆ ವಿವರಿಸುತ್ತಾರೆ : ಆಕಾಶದ ಒಂದಂಶವು ವಾಯುವನ್ನು ಸೇರಿದರೆ ಮನಸ್ಸು, ಮತ್ತೊಂದಂಶವು ಅಗ್ನಿಯನ್ನು ಸೇರಿದರೆ ಬುದ್ದಿ, ಮತ್ತೊಂದಂಶವು ಜಲ ತತ್ವವನ್ನು ಸೇರಿದರೆ, ಚಿತ್ತ, ಮತ್ತು ಮತ್ತೊಂದಂಶವು ಪೃಥ್ವಿಯನ್ನು ಸೇರಿದರೆ ಅಹಂಕಾರ ಹುಟ್ಟುತ್ತವೆ. ಜ್ಞಾನವು ಅಂತಃಕರಣವಲ್ಲದಿದ್ದರೂ, ಅದು ಆಕಾಶದ ಮೂಲಸ್ವರೂಪ. ಅಂದರೆ, ಬುದ್ಧಿ, ಮನಸ್ಸು, ಮುಂತಾದ ಅಂತ ಕರಣಗಳು ಜ್ಞಾನ ಪಡೆಯಲು ಸಾಧ್ಯವಾಗುವುದು ಅವು ಆಕಾಶಜನ್ಯ ತತ್ವಗಳಾದುದರಿಂದ.

ವಾಯು ಪಂಚಕಗಳು ವಾಯುವಿನ ವಿವಿಧ ರೂಪಗಳು.

ವಾಯುವಿನ ಎರಡು ಅಂಶಗಳು ಕೂಡಿಕೊಂಡರೆ, ಉದಾನ ವಾಯುವೂ, ಒಂದಂಶ ವಾಯು ಒಂದಂಶ ಆಕಾಶ ಕೂಡಿಕೊಂಡರೆ, ಸಮಾನ ವಾಯುವೂ, ಒಂದಂಶ ಅಪ್ಪುವಿನಲ್ಲಿ ಕೂಡಿಕೊಂಡರೆ ಅಪಾನ ವಾಯುವೂ ಒಂದಂಶ ವಾಯು ಪೃಥ್ವಿಯನ್ನು ಕೂಡಿಕೊಂಡರೆ ಪ್ರಾಣವಾಯುವೂ ಜನಿಸುತ್ತದೆ.

ಅಗ್ನಿ ಎಂಬ ಮಹಾಭೂತದ ವಿವಿಧ ರೂಪಗಳೇ ಬುದ್ದೀಂದ್ರಿಯಗಳು (ಜ್ಞಾನೇಂದ್ರಿಯಗಳು) ಅವುಗಳ ಉತ್ಪತ್ತಿಯ ವಿವರ : ಅಗ್ನಿ ಅಗ್ನಿಯನ್ನು ಕೂಡಿದರೆ ನೇತ್ರ. ಅಂದರೆ, ಅಗ್ನಿ (ಬೆಳಕು) ಇದ್ದರೆ ಮಾತ್ರ ನೇತ್ರ ನೋಡಲು ಸಾಧ್ಯ. ಅಗ್ನಿಯ ಒಂದಂಶ ಆಕಾಶದ ಒಂದಂಶವನ್ನು ಕೂಡಲು ತೇಂದ್ರಿಯ (ಕಿವಿ), ಒಂದಶ ವಾಯುವನ್ನು ಕೂಡಿಕೊಂಡರೆ ತ್ವಗಿಂದ್ರಿಯವೂ, ಅಪ್ಪುವಿನ ಒಂದಂಶವನ್ನು ಸೇರಿದರೆ ಜಿ.ಯೂ (ನಾಲಗೆಯೂ), ಅಗ್ನಿಯ ಒಂದಂಶ ಪೃಥ್ವಿಯ ಒಂದಂಶವನ್ನು ಕೂಡಿದರೆ ಘ್ರಾಣೇಂದ್ರಿಯವೂ ಉತ್ಪತ್ತಿ.ಆಗುತ್ತದೆ.

ಅಪ್ಪು ಎಂಬ ಮಹಾಭೂತದ ವಿವಿಧ ರೂಪಗಳೇ ವಿಷಯ (ತನ್ಮಾತ್ರೆಗಳು. ಅವುಗಳ ಉತ್ಪತ್ತಿಯ ವಿವರ : ಅಪ್ಪುವಿನ ಒಂದಂಶ ಅಪ್ಪುವಿನ ಮತ್ತೊಂದಂಶವನ್ನು ಕೂಡಿದರೆ, ರಸವೂ, ಅಪ್ಪುವಿನ ಒಂದಂಶ ಆಕಾಶವನ್ನು ಕೂಡಿದರೆ ಶಬ್ದವೂ, ಮತ್ತೊಂದಂಶ ವಾಯುವನ್ನು ಕೂಡಿದರೆ ಸ್ಪರ್ಶವೂ ಒಂದಂಶ ಅಗ್ನಿಯನ್ನು ಕೂಡಿದರೆ ರೂಪವೂ, ಒಂದಂಶ ಪೃಥ್ವಿಯನ್ನು ಕೂಡಿದರೆ ಗಂಧವೂ ಉತ್ಪತ್ತಿಯಾಗುತ್ತವೆ.

ಪೃಥ್ವಿ ತತ್ವವು ಉಳಿದ ನಾಲ್ಕು ತತ್ವಗಳಿಗಿಂತ ಹೆಚ್ಚು ಸ್ಥೂಲವಾದುದು. ಅದರಂತೆ, ವಿವಿಧ ರೂಪಗಳಾದ ಕರ್ಮೇಂದ್ರಿಯಗಳೂ ಸ್ಥೂಲವಾದ ಅಂಗಗಳಾಗಿವೆ. ಅವು ಪೃಥ್ವಿ ತತ್ವದಿಂದ ಹೇಗೆ ಉತ್ಪತ್ತಿಯಾಗುತ್ತವೆ ಎಂಬುದಕ್ಕೆ ವಿವರ ಹೀಗಿದೆ : ಪೃಥ್ವಿಯ ಎರಡಂಶಗಳು ಕೂಡಿದರೆ ಪಾಯವೂ, ಪೃಥ್ವಿಯ ಒಂದಂಶ ಆಕಾಶದ ಒಂದಂಶದೊಂದಿಗೆ ಸೇರಿದರೆ, ವಾಗಿಂದ್ರಿಯವೂ, ಒಂದಂಶ ವಾಯುವನ್ನು ಕೂಡಿದರೆ ಹಸ್ತವೂ, ಒಂದಂಶ ಅಗ್ನಿಯನ್ನು ಕೂಡಿದರೆ ಪಾದವೂ ಒಂದಂಶ ಅಪ್ಪುವನ್ನು ಕೂಡಿದರೆ ಗುಹೇಂದ್ರಿಯವೂ ಉತ್ಪತ್ತಿಯಾಗುತ್ತದೆ.

ಪಂಚಮಹಾಭೂತಗಳಿಂತ ಶರೀರದಲ್ಲಿ ಉಂಟಾಗುವ ತತ್ವಗಳ ಸಂಬಂಧವೇ ಪಂಚೀಕರಣವೆನಿಸುತ್ತದೆ
1) ಪೃಥ್ವಿಯ ಪಂಚೀಕರಣ: ವಾಕ್ಕು, ಪಾದ, ಪಾಣಿ, ಪಾಯು, ಉಪಸ್ಥ(ಗುಹ್ಯ)(ಕರ್ಮೇಂದ್ರಿಯ)
- ಅಪ್ಪುವಿನ ಪಂಚೀಕರಣ: ಶಬ್ದ, ಸ್ಪರ್ಶ, ರೂಪ, ರಸ, ಗಂಧ(ವಿಷಯಗಳು)
- ಅಗ್ನಿಯ ಪಂಚೀಕರಣ: ಸ್ತೋತ್ರ, ತ್ವಕ್ಕು, ನೇತ್ರ, ಜಿಹ್ನೆ, ಪ್ರಾಣ(ಜ್ಞಾನೇಂದ್ರಿಯಗಳು) - ವಾಯುವಿನ ಪಂಚೀಕರಣ: ಸಮಾನ, ವ್ಯಾನ, ಉದಾನ, ಅಪಾನ, ಪ್ರಾಣ(ವಾಯುಗಳು)
- ಆಕಾಶದ ಪಂಚೀಕರಣ ಜ್ಞಾತೃ, ಮನಸ್ಸು, ಬುದ್ಧಿ, ಚಿತ್ರ, ಅಹಂಕಾರ(ಅಂತಃರಣ)
2) ಪೃಥ್ವಿಯ ಪಂಚೀಕೃತಿಯಿಂದ ಪಾಯು, ಗಂಧ, ಘ್ರಾಣೇಂದ್ರಿಯ, ಪ್ರಾಣವಾಯು, ಅಹಂಕಾರ ಹುಟ್ಟುತ್ತವೆ
ಅಪ್ಪುವಿನ ಪಂಚೀಕೃತಿಯಿಂದ ಗುಹ್ಯ, ರಸ, ಜಿಂದ್ರಿಯ, ಅಪಾನವಾಯು, ಚಿತ್ತ ಹುಟ್ಟುತ್ತವೆ ಅಗ್ನಿಯ ಪಂಚೀಕೃತಿಯಿಂದ ಪಾದೇಂದ್ರಿಯ, ರೂಪು, ನೇತೇಂದ್ರಿಯ, ಉದಾನವಾಯ್ತು, ಬುದ್ದಿ ಹುಟ್ಟುತ್ತವೆ
- ವಾಯುವಿನ ಪಂಚೀಕೃತಿಯಿಂದ ಪಾಣೀಂದ್ರಿಯ, ಸ್ಪರ್ಶನ, ತ್ವಗಿಂದ್ರಿಯ, ವ್ಯಾನವಾಯು, ಮನಸ್ಸು ಹುಟ್ಟುತ್ತವೆ
- ಆಕಾಶದ ಪಂಚೀಕೃತಿಯಿಂದ ವಾಗಿಂದ್ರಿಯ, ಶಬ್ದ, ಪ್ರೋತೇಂದ್ರಿಯ, ಸಮಾನವಾಯು, ಜ್ಞಾತೃತತ್ವ ಹುಟ್ಟುತ್ತವೆ

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಪಂಚಾಚಾರ ಪಿಂಡತ್ರಯ Next