Previous ಕರ್ಮತ್ರಯ ಕಲೆಗಳು ಮತ್ತು ಶಕ್ತಿಗಳು Next

ಕಲೆಗಳು

ಕಲೆಗಳು

ವಚನಗಳಲ್ಲಿ ಬರುವ ಕಲೆಗಳ ಪರಿಕಲ್ಪನೆಯು ಸ್ಪಷ್ಟತೆಗೆ ದೂರ. ಕೆಲವು ವಚನಕಾರರು ಕಲೆಗಳು ಅಥವಾ ಕಲಾಶಕ್ತಿಗಳು ಅಧೋಮಾಯೆಯ ರೂಪಗಳೆಂದೂ, ಭಕ್ತಿಗಳು ಅಥವಾ ಭಕ್ತಿ ಶಕ್ತಿಗಳು ಊರ್ಧ್ವಮಾಯೆಯ ರೂಪಗಳೆಂದು ಹೇಳಿದರೆ, ಮತ್ತೆ ಕೆಲವರು ಪರಾಶಕ್ತಿ, ಆದಿಶಕ್ತಿ ಮುಂತಾದ ಶಕ್ತಿಗಳು ಅಧೋಮಾಯೆಯ ರೂಪಗಳೆಂದೂ, ಕಲೆ ಅಥವಾ ಕಲಾಶಕ್ತಿಗಳೇ ಊರ್ಧ್ವಮಾಯೆಯ ರೂಪಗಳೆಂದೂ ಹೇಳುತ್ತಾರೆ. ಕೆಲವರು ಕಲಾ, ಶಕ್ತಿ ಮತ್ತು ಭಕ್ತಿಗಳಿಗೆ ಯಾವ ಭೇದವೂ ಇಲ್ಲವೆನ್ನುತ್ತಾರೆ. ಒಬ್ಬನೇ ವಚನಕಾರ "ಕಲೆ" ಎಂಬ ಪದವನ್ನು ಮೂರು ಅರ್ಥಗಳಲ್ಲಿ ಬಳಸಿ, ನಮ್ಮ ಗೊಂದಲವನ್ನು ಮತ್ತಷ್ಟು ಅಧಿಕ ಮಾಡುತ್ತಾನೆ. ಸಧ್ಯಕ್ಕೆ ನಾವು ಕಲೆಯೆಂದರೆ ಪರಶಿವನ ಶಕ್ತಿಯ ಶುದ್ಧರೂಪವೆಂದೂ, ಶಕ್ತಿಗಳೇ ಅಶುದ್ಧರೂಪವೆಂದೂ ಊಹಿಸಿ ಮುಂದುವರೆಯಬಹುದು.

ಕಲೆಗಳ ಪರಿಕಲ್ಪನೆಯಲ್ಲಿ ಅಸ್ಪಷ್ಟತೆ ಮತ್ತು ಒಮ್ಮತವಿಲ್ಲದಿದ್ದರೂ, ಅವುಗಳ ಬಗ್ಗೆ ಈ ಎರಡು ವಿಷಯಗಳನ್ನು ಖಚಿತವಾಗಿ ಹೇಳಬಹುದು.
(೧) ಅಕ್ಕಮಹಾದೇವಿಯ ಪ್ರಕಾರ ( ೫:೪೮), ಉಪಾಸ್ಯನಾಗಿ ಕಾಣಬೇಕೆಂಬ ಉದ್ದೇಶದಿಂದ ಮಹಾಲಿಂಗವು ಪಂಚಸಾದಾಖ್ಯವಾಗುತ್ತದೆ. ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ ಮತ್ತು ಪ್ರಸಾದಲಿಂಗ ಇವುಗಳೇ ಆ ಲಿಂಗದ ಮುಖಗಳು ಅಥವಾ ಪ್ರಕಾಶಗಳು. (ಸದಾಶಿವ, ತತ್ಪುರುಷ, ಇತ್ಯಾದಿ ಹೆಸರುಗಳೂ ಈ ಹೆಸರುಗಳ ಬದಲು ಬಳಸಲ್ಪಡುತ್ತವೆ. ಅಂತೂ, ಐದು ಮುಖಗಳಿಂದ (ಪಂಚಸಾದಾಖ್ಯಗಳಿಂದ) ಪಂಚಾಕ್ಷರಿ ಮಂತ್ರ ಉತ್ಪತ್ತಿಯಾಗುತ್ತದೆ. ಹೇಗೆಂದರೆ : ನಕಾರವು ಸದ್ಯೋಜಾತ ಮುಖದಿಂದಲೂ, ಮಕಾರವು ವಾಮದೇವ ಮುಖದಿಂದಲೂ, ಶಿಕಾರವು ಅಘೋರ ಮುಖದಿಂದಲೂ ವಕಾರವು ತತ್ಪುರುಷ ಮುಖದಿಂದಲೂ, ಯಕಾರವು ಈಶಾನ್ಯ ಮುಖದಿಂದಲೂ ಉತ್ಪತ್ತಿಯಾಗುತ್ತವೆ.
ಈ ಐದು ಅಕ್ಷರಗಳು ಐದು ಕಲೆಗಳನ್ನು ಉತ್ಪಾದಿಸುತ್ತವೆ. ನಕಾರವು ನಿವೃತ್ತಿಕಲೆಯನ್ನೂ, ಮಕಾರವು ಪ್ರತಿಷ್ಠಾಕಲೆಯನ್ನೂ, ಶಿಕಾರವು ವಿದ್ಯಾಕಲೆಯನ್ನೂ, ವಕಾರವು ಶಾಂತಿಕಲೆಯನ್ನೂ, ಯಕಾರವು ಶಾಂತ್ಯತೀತ ಕಲೆಯನ್ನೂ ಉತ್ಪಾದಿಸುತ್ತವೆ. ತೋಂಟದ ಸಿದ್ದಲಿಂಗ ಶಿವಯೋಗಿಗಳು ಶಾಂತ್ಯತೀತೋತ್ತರೆಯೆಂಬ ಆರನೆ ಕಲೆಯನ್ನು ಗುರುತಿಸಿ, ಅದು ಮಹಾಲಿಂಗ ಅಥವಾ ನಿರ್ಮುಕ್ತ ಸಾದಾಖ್ಯದಿಂದ ಉತ್ಪತ್ತಿಯಾಗುತ್ತದೆ ಎನ್ನುತ್ತಾರೆ (೧೧:೬೩).

(೨) ಕಲೆಗಳು ಸಾಧಕನಿಗೆ ಆಧ್ಯಾತ್ಮಿಕ ಜೀವನವನ್ನು ಪ್ರಬಲಗೊಳಿಸಲು ಸಹಾಯ ಮಾಡುತ್ತವೆ. ಜೀವಾತ್ಮನು ಜ್ಞಾನೇಂದ್ರಿಯ, ಕರ್ಮೇಂದ್ರಿಯ, ಅಂತಃಕರಣ ಮುಂತಾದವುಗಳ ದುಷ್ಪಭಾವದಿಂದ ತಪ್ಪಿಸಿಕೊಳ್ಳುವವರೆಗೂ ಮುಕ್ತನಾಗಲಾರ. ಆದರೆ, ನಿವೃತ್ತಿ ಕಲೆಗಳ ಸಹಾಯದಿಂದ ಅವನು ಅವುಗಳ ದುಷ್ಕ್ರಿಯೆಗಳನ್ನು ತಪ್ಪಿಸಿ, ಅವು ಸಭೆಯ ಮಾಡುವಂತೆ ಮಾಡಬಲ್ಲನು. ಕರ್ಮೇಂದ್ರಿಯಗಳು ಅವನನ್ನು ವಿವಿಧ ರೀತಿಯಲ್ಲಿ ಪ್ರೇರೇಪಿಸಿ, ಅವನನ್ನು ಕರ್ಮಬಂಧನಕ್ಕೊಳಗು ಮಾಡಿವೆ. ಆದರೆ ನಿವೃತ್ತಿ ಕಲೆಯ ಪ್ರಭಾವದಿಂದ, ಅವನು ಅವುಗಳಿಂದ ಆಧ್ಯಾತ್ಮಿಕ ಕೆಲಸಗಳನ್ನಷ್ಟೇ ಮಾಡಿಸುತ್ತಾನೆ. ಹೀಗೆ, ಅವನ ವಾಗಿಂದ್ರಿಯವು ಇನ್ನು ಮೇಲೆ ಯಾವಾಗಲೂ ಶಿವನಾಮವನ್ನೆ ಉಚ್ಚರಿಸುತ್ತದೆ; ಸತ್ಯವನ್ನೇ ನುಡಿಯುತ್ತದೆ; ಮೃದು ವಚನವನ್ನಷ್ಟೇ ನುಡಿಯುತ್ತದೆ; ಅವನ ಕೈಗಳು ಎಂದೂ ದುಷ್ಟ ಕಾರ್ಯಗಳನ್ನೂ ಮಾಡದೆ, ಸತ್ಕಾರ್ಯಗಳನ್ನಷ್ಟೇ ಮಾಡಲು ಉಪಯೋಗಿಸಲ್ಪಡುತ್ತವೆ; ಅವನ ಕಾಲುಗಳು ಯಾವ ದುರ್ಮಾರ್ಗವನ್ನೂ ಕ್ರಮಿಸದೆ, ಗುರು ವಿಧಿಸಿದ ಸನ್ಮಾರ್ಗದಲ್ಲಿ ಮಾತ್ರ ಚಲಿಸುತ್ತವೆ; ಅವನ ಗುದವು ಆಣವ, ಕಾರ್ಮಿಕ ಮತ್ತು ಮಾಯಿಯ ಮಲಗಳಿಂದ ಮುಕ್ತವಾಗುತ್ತದೆ; ಅವನು ಜನನೇಂದ್ರಿಯದ ಮೂಲಕ ಕೂಟದ ಸುಖಪಡುವ ಇಚ್ಛೆಯನ್ನು ತ್ಯಜಿಸಿ, ಲಿಂಗಾಂಗ ಸಾಮರಸ್ಯದ ಮೂಲಕ ಸುಖಪಡುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ. ಇದರಲ್ಲಿ ಜಯಸಾಧಿಸಿದವನು ಆಚಾರಲಿಂಗ ಅಥವಾ ಅದರ ಪ್ರಕಾಶವಾದ ಸದ್ಯೋಜಾತ (ಅಥವಾ ಕರ್ಮ) ಸಾದಾಖ್ಯವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.

ಸಾಧಕನ ಆಧ್ಯಾತ್ಮ ಸಾಧನೆಯಲ್ಲಿ ಇನ್ನೂ ಪ್ರಗತಿಯಾದರೆ ಅವನು ಪ್ರತಿಷ್ಠಾಕಲೆಯ ಪ್ರಭಾವಕ್ಕೊಳಗಾಗಿದ್ದಾನೆಂದರ್ಥ. ಆಗ ಅವನು ರೂಪರಸಗಂಧಾದಿ ವಿಷಯಗಳ ಬಯಕೆಯನ್ನು ನಿಯಂತ್ರಿಸುತ್ತಾನೆ. ಆಗ ಅವನಿಗೆ ಶಬ್ದವೆಂದರೆ ಗುರುವಿನ ವಚನ (ಶಬ್ದ), ಸ್ಪರ್ಶವೆಂದರೆ ಇಷ್ಟಲಿಂಗ ಸ್ಪರ್ಶ, ರೂಪವೆಂದರೆ, ಲಾಂಛನಗಳಾದ ರುದ್ರಾಕ್ಷಿ, ವಿಭೂತಿ, ಕಾವಿಬಟ್ಟೆ, ಮುಂತಾದವುಗಳ ನೋಟ, ರಸವೆಂದರೆ ಪ್ರಸಾದದ ರುಚಿ, ವಾಸನೆಯೆಂದರೆ ಶಿವನ ನಿರ್ಮಲತೆ. ಹೀಗೆ ತನ್ಮಾತ್ರಗಳನ್ನು ನಿಯಂತ್ರಿಸ ಬಲ್ಲ ಸಾಧಕನು ಗುರುಲಿಂಗ ಅಥವಾ ಅದರ ಪ್ರಕಾಶವಾದ ವಾಮದೇವ ಮುಖ (ಅಥವಾ ಕರ್ತುಸಾದಾಖ್ಯ)ವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.

ಶಿವಲಿಂಗ ಅಥವಾ ಅದರ ಪ್ರಕಾಶವಾದ ಅಘೋರಮುಖ (ಮೂರ್ತಿಸಾದಾಖ್ಯ)ವನ್ನು ಅಂತಶ್ಚಕ್ಷುವಿನಿಂದ ನೋಡಬೇಕೆನ್ನುವ ಸಾಧಕನು ವಿದ್ಯಾಕಲೆಯನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ವಿದ್ಯಾಕಲೆಯನ್ನು ಸಾಧಿಸಿದವನು ರುದ್ರಾಕ್ಷಿ, ವಿಭೂತಿ ಮತ್ತು ಲಿಂಗವನ್ನು ಧರಿಸುತ್ತಾನಲ್ಲದೆ ಯಾವ ಆಲಂಕಾರಿಕ ವಸ್ತುಗಳನ್ನೂ ಧರಿಸುವುದಿಲ್ಲ; ಶಿವಲಿಂಗವನ್ನು ನೋಡುತ್ತಾನಲ್ಲದೆ ಯಾವ ಮೋಹಕ ವಸ್ತುವನ್ನೂ ನೋಡುವುದಿಲ್ಲ; ಪ್ರಸಾದವನ್ನಲ್ಲದೆ ಏನನ್ನೂ ತಿನ್ನ. ಏಕೆಂದರೆ, ಅವನಿಗೆ ಗುರುವಿನಿಂದ ವಿದ್ಯೆಯಾವುದು ಅವಿದ್ಯೆ ಯಾವುದು ಎಂಬುದರ ಭೇದ ತಿಳಿದಿದೆ.

ಜಂಗಮಲಿಂಗ ಅಥವಾ ಅದರ ಪ್ರಕಾಶವಾದ ತತ್ಪುರುಷ ಮುಖ (ಅಥವಾ ಅಮೂರ್ತಿಸಾದಾಖ್ಯವನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆನ್ನುವ ಸಾಧಕನು ಶಾಂತಕಲೆಯನ್ನು ಅವಲಂಬಿಸಬೇಕಾಗುತ್ತದೆ. ಇದರಿಂದಾಗಿ ಅವನಿಗೆ ಪ್ರಾಣ, ಸಮಾನ, ಉದಾನ, ಅಪಾನ, ವ್ಯಾನ ಎಂಬ ಐದು ವಾಯುಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ, ಹಾಗೂ ಪರಶಿವನಂತೆ ಸತ್ತು, ಚಿತ್ತು, ಆನಂದ, ನಿತ್ಯ ಮತ್ತು ಪರಿಪೂರ್ಣನಾಗುತ್ತಾನೆ.

ಶಾಂತ್ಯತೀತ ಕಲೆಯ ಸಹಾಯದಿಂದ ಸಾಧಕನು ಮನಸ್ಸು, ಚಿತ್ತ, ಬುದ್ದಿ ಮತ್ತು ಅಹಂಕಾರಗಳನ್ನು ನಿಯಂತ್ರಿಸಿ, ಆಧ್ಯಾತ್ಮದಲ್ಲಿ ಮತ್ತಷ್ಟು ಪ್ರಗತಿ ಸಾಧಿಸುತ್ತಾನೆ. ಆಗ ಅವನ ಮನಸ್ಸು ಯಾವಾಗಲೂ ಲಿಂಗವನ್ನೆ ಮನನ ಮಾಡುತ್ತಿರುತ್ತದೆ; ಅವನ ಬುದ್ಧಿಯು ಯಾವಾಗಲೂ ಸಚ್ಚಾರಿತ್ರವನ್ನ ಅನುಸರಿಸುತ್ತದೆ; ಅವನ ಚಿತ್ತವು ದಾಸೋಹವನ್ನು ಮಾಡಲು ನಿರ್ಧರಿಸುತ್ತದೆ ಮತ್ತು ಅವನು ನಿರಂಹಂಕಾರಿಯಾಗುತ್ತಾನೆ.

ಇಲ್ಲಿ ನಿವೃತ್ತಿ ಕಲೆಗೆ ಆ ಹೆಸರೇಕೆ ಎಂದು ನಾವು ಪ್ರಶ್ನಿಸಬಹುದು. ಅದಕ್ಕೆ ಕಾರಣವಿಷ್ಟೆ. ಮೋಕ್ಷಾರ್ಥಿಯಾದವನು ನಿವೃತ್ತಿ ಮಾರ್ಗವನ್ನು ಅನುಸರಿಸದೆಯೇ ತನ್ನ ಗುರಿಯನ್ನು ಸಾಧಿಸಲಾರ. ನಿವೃತ್ತಿಕಲೆಯು ಸಾಧಕನನ್ನು ನಿವೃತ್ತಿಪರನನ್ನಾಗಿ ಮಾಡುತ್ತದೆ. ಪ್ರತಿಷ್ಠಾಕಲೆಯು ಆ ನಿವೃತ್ತಿಯನ್ನು ಮತ್ತಷ್ಟು ಪ್ರಬಲಗೊಳಿಸುತ್ತದೆ; ವಿದ್ಯಾ ಕಲೆಯು ಆಧ್ಯಾತ್ಮಿಕ ಜ್ಞಾನವನ್ನು ಹುಟ್ಟಿಸುತ್ತದೆ; ಶಾಂತಿಕಲೆಯು ಇಂದ್ರಿಯಗಳನ್ನು ಶಾಂತವಾಗಿಡುತ್ತದೆ ಹಾಗೂ ಶಾಂತ್ಯತೀತ ಕಲೆಯು ಅಂತಃಕರಣಗಳನ್ನು ಶಾಂತವಾಗಿಡುತ್ತದೆ. ಹೀಗೆ ನೋಡಿದಾಗ ಎಲ್ಲ ಕಲಾಗಳೂ ನಿವೃತ್ತಿಕಲೆಗಳೇ ಎಂಬುದು ಖಚಿತವಾಗುತ್ತದೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಕರ್ಮತ್ರಯ ಕಲೆಗಳು ಮತ್ತು ಶಕ್ತಿಗಳು Next