Previous ದಶವಿಧ ಉದಕ ದೀಕ್ಷೆ Next

ದಾಸೋಹ

ದಾಸೋಹ

ಲಿಂಗಾಂಗ ಸಾಮರಸ್ಯಕ್ಕೆ ಬಹಳ ಆವಶ್ಯಕವಾದ ಒಂದು ಅಂಶವೆಂದರೆ ನಿಸ್ವಾರ್ಥತೆ. ನಿಸ್ವಾರ್ಥತೆಯನ್ನು ನಾವು ಎರಡು ರೀತಿಗಳಲ್ಲಿ ವ್ಯಕ್ತಪಡಿಸಬಹುದು- ಭೃತ್ಯಾಚಾರದಲ್ಲಿ ಮತ್ತು ದಾಸೋಹದಲ್ಲಿ, ಗುರು ಜಂಗಮ ಸೇವೆ, ಇತರ ಶರಣರ ಸೇವೆ, ಸಮಾಜ ಸೇವೆ, ಜಂಭವಿಲ್ಲದೆ ಇರುವುದು, ಇತರರನ್ನು ಗೌರವದಿಂದ ಕಾಣುವುದು ಭೃತ್ಯಾಚಾರದ ಲಕ್ಷಣಗಳಾದರೆ, ಅರ್ಪಣಾ ಮನೋಭಾವದಿಂದ ದಾನ ಮಾಡುವುದು ದಾಸೋಹದ ಲಕ್ಷಣ.

ದಾಸೋಹ ಪದವು "ದಾಸೋಹಂ" ಪದದ ತದ್ಭವ. "ದಾಸೋಹಂ" ಎಂಬುದಕ್ಕೆ ದಾಸ+ಅಹಂ= ದಾಸ ನಾನು ಎಂಬ ಅರ್ಥವಿದೆ. ಆದರೆ "ದಾಸೋಹ" ಎಂಬ ಪದಕ್ಕೆ ದಾನ ಎಂಬರ್ಥವಿದೆ. ಶಿವನ ದಾಸ (ಶರಣ)ನಾದವನು ದಾನ ಮಾಡಬೇಕು ಎಂಬರ್ಥ ಈಗ ದಾಸೋಹ ಎಂಬ ಪದಕ್ಕೆ ಬಂದಿದೆ. ಹೀಗೆ, ದಾಸ ಎಂಬ ಪದವು ನೃತ್ಯ ಎಂಬ ಪದಕ್ಕೆ ಸಮನಾಗಿದ್ದರೂ, ದಾಸೋಹ, ಭೃತ್ಯಾಚಾರ ಬೇರೆ ಬೇರೆ ಅರ್ಥಗಳುಳ್ಳ ಪದಗಳಾಗುತ್ತವೆ. ಆದರೆ, ದಾಸೋಹ ಮಾಡಬೇಕಾದರೆ ಭಕ್ತನು ಭೃತ್ಯಾಚಾರ ಮನೋಭಾವವುಳ್ಳವನಾಗಿರಬೇಕೇ ಹೊರತು, ಜಂಭವುಳ್ಳವನಾಗಿರಬಾರದು.

ದಾಸೋಹವನ್ನು ಸಾಮಾನ್ಯವಾಗಿ ಎರಡು ರೀತಿಗಳಲ್ಲಿ ಮಾಡಲಾಗುತ್ತದೆ. ಮಠಗಳಲ್ಲಿ ಮಾಡುವ ದಾಸೋಹವು ಸಾಮಾನ್ಯವಾಗಿ ಅನ್ನ ಸಂತರ್ಪಣೆಯ ರೂಪದಲ್ಲಿರುತ್ತದೆ. ಜಂಗಮರೇ ಮಾಡುವ ಈ ರೀತಿಯ ದಾಸೋಹಕ್ಕೆ ಪೂರಕವಾಗಿ ಭಕ್ತಾದಿಗಳು ಧನ ಕನಕಾದಿಗಳನ್ನು ಜಂಗಮರಿಗೆ ನೀಡುತ್ತಾರೆ. ಅಲ್ಲದೆ, ಜಂಗಮರು ಜ್ಞಾನದಾಸೋಹವನ್ನೂ ಮಾಡುತ್ತಾರೆ. ಭಕ್ತಾದಿಗಳು ಮಾಡುವ ದಾಸೋಹವು ಎರಡು ರೀತಿಯದು. ಅವರು ಜಂಗಮರಿಗೂ, ಇತರ ಶರಣ ಶರಣೆಯರಿಗೂ ಅನ್ನಸಂತರ್ಪಣೆ ಮಾಡಬಹುದು, ಅಥವಾ ಸಾಮಾಜಿಕ ವಿನಿಯೋಗಕ್ಕಾಗಿ ಜಂಗಮರಿಗೆ ಧನಕನಾಕಾದಿಗಳನ್ನು ದಾನ ಮಾಡಬಹುದು. ಹೀಗೆ ಸಾಮಾಜಿಕ ಒಳಿತನ್ನು ಸಾಧಿಸುವ ಮೂಲಕ ತನ್ನ ಆಧ್ಯಾತ್ಮಿಕ ಪ್ರಗತಿಯನ್ನೂ ಸಾಧಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿರುವುದು ದಾಸೋಹದ ವೈಶಿಷ್ಟ್ಯ.

ದಾಸೋಹವನ್ನು ಆಚರಿಸಲು ಎರಡು ನಿಯಮಗಳನ್ನು ಪಾಲಿಸುವುದು ಆವಶ್ಯಕ. ಮೊದಲನೆಯದು, ಸತ್ಯ ಶುದ್ದ ಕಾಯಕದಿಂದ ಸಂಪಾದಿಸಿದುದಷ್ಟನ್ನೇ ದಾಸೋಹಕ್ಕೆ ಉಪಯೋಗಿಸಬೇಕೇ ಹೊರತು, ಉಳಿದ ಮಾರ್ಗಗಳಿಂದ ಸಂಪಾದಿದುದನ್ನಲ್ಲ. ಹಿಂಸೆ, ಕ್ರೌರ್ಯ, ಮೋಸ, ಮುಂತಾದ ಮಾರ್ಗಗಳಿಂದ ಸಂಪಾದಿಸಿದುದು ದಾಸೋಹಕ್ಕೆ ಅರ್ಹವಲ್ಲ. ಅದೇ ರೀತಿ ದಾಸೋಹವು ಭಕ್ತನ ನೃತ್ಯಭಾವವನ್ನು ಪ್ರತಿಬಿಂಬಿಸಬೇಕೇ ಹೊರತು, ಅವನ ಡಾಂಭಿಕತನ, ವ್ಯವಹಾರಿಕ ಬುದ್ಧಿ, ಅಹಂಕಾರವನ್ನಲ್ಲ. ದಾಸೋಹವು ಪ್ರಾಪಂಚಿಕ ವಸ್ತುಗಳ ಮೇಲಿನ ನಮ್ಮ ವ್ಯಾಮೋಹವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಪರಶಿವನಿಂದ ಪಡೆದುದನ್ನು ಅವನಿಗೇ ದಾಸೋಹದ ರೂಪದಲ್ಲಿ ಹಿಂತಿರುಗಿಸಿ, ಋಣಮುಕ್ತ ಭಾವವನ್ನು ಪ್ರಕಟಿಸುತ್ತೇವೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ದಶವಿಧ ಉದಕ ದೀಕ್ಷೆ Next