ಚಿದಂಗ | ಜ್ಞಾನ |
ಜಂಗಮ |
ಇದಕ್ಕೆ ಇರುವ ಅರ್ಥಗಳನ್ನು ಮುಖ್ಯವಾಗಿ ಎರಡು ಭಾಗ ಮಾಡಬಹುದು.
೧. ಜಂಗಮ ಎಂಬ ಉಪಜಾತಿಯಲ್ಲಿ ಹುಟ್ಟಿದವನು.
೨. ಚಲಿಸುವವನು ವಚನಕಾರರು ಮೊದಲೆಲ್ಲಾ ಎರಡನೆಯ ಅರ್ಥದಲ್ಲೇ ಆ ಪದವನ್ನು ಬಳಸಿದ್ದಾರೆ. ಆದರ ಇಲ್ಲಿ ಚಲನೆ" ಎಂಬುದಕ್ಕೂ ವಿವಿಧ ಅರ್ಥಗಳಿರುವಂತೆ ಕಾಣುತ್ತದೆ. ಪ್ರತಿಯೊಬ್ಬರಲ್ಲೂ ಪರಶಿವ ಅಂತಸ್ಥನಾಗಿರುವುದರಿಂದ ಹಾಗೂ ಎಲ್ಲರೂ ಚಲಿಸುವುದರಿಂದ, ಎಲ್ಲರೂ ಜಂಗಮರೇ. ಒಂದು ವಿಶಾಲಾರ್ಥದಲ್ಲಿ ಮನುಷ್ಯರಷ್ಟೇ ಅಲ್ಲ, ಚಲಿಸುವ ಪ್ರಾಣಿಗಳೂ "ಜಂಗಮ" ವರ್ಗಕ್ಕೆ ಸೇರುತ್ತವೆ.
ಸಂಕುಚಿತ ಅರ್ಥದಲ್ಲಿ ಯಾರು ತನ್ನಲ್ಲಿ ಪರಶಿವನನ್ನು ಪ್ರತಿಷ್ಠಾಪಿಸಿಕೊಂಡಿದ್ದಾನೋ, ಅವನು ಮಾತ್ರ ಜಂಗಮ. ಅಂಥವನು ಅನುಭಾವದ ಮೂಲಕ ಪರಶಿವನನ್ನು ಸಾಕ್ಷಾತ್ಕರಿಸಿಕೊಂಡು, ತನ್ನನ್ನು ಪರಶಿವನಿಂದ ಪ್ರತ್ಯೇಕಿಸಿಕೊಳ್ಳದೆ, ತಾನು ಪರಶಿವನೊಂದಿಗೆ ಒಂದಾಗಿರುವ ಭಾವನೆಯನ್ನು ತಳೆದಿರುತ್ತಾನೆ. ಬೇರೆಯವರ ದೃಷ್ಟಿಯಲ್ಲಿ ಅವನು ಬೇರೆ, ಲಿಂಗ (ಪರಶಿವ) ಬೇರೆ. ಆದರೆ ಲಿಂಗಾಂಗ ಸಾಮರಸ್ಯ ಪಡೆದವನಲ್ಲಿ ತಾನು ಲಿಂಗದ ಅಂಗ (ಅಥವಾ ತಾನು ಲಿಂಗ ಎಂಬ ಭಾವನೆ ಬೇರೂರಿರುತ್ತದೆ. ಆದುದರಿಂದ ಅವನು ಲಿಂಗ - ನಡೆದಾಡುವ ಲಿಂಗ. ಈ ಅರ್ಥದಲ್ಲಿ ಐಕ್ಯಸ್ಥಲ ತಲುಪಿದವರೆಲ್ಲಾ ಜಂಗಮರೇ. ಈ ಕಾರಣದಿಂದಲೆ ವಚನಕಾರರು ಕಾವಿಬಟ್ಟೆ, ರುದ್ರಾಕ್ಷಿ ಮಾಲೆ ಮತ್ತು ವಿಭೂತಿ, ಕೈಯಲ್ಲಿ ದಂಡ ಮುಂತಾದ ಲಾಂಛನವಿದ್ದವರೆಲ್ಲಾ ಜಂಗಮರಲ್ಲ ಎಂದೂ, ಜಂಗಮರಲ್ಲಿ ಜಾತಿಯನರಸಬಾರದು ಎಂದೂ ಹೇಳಿದ್ದಾರೆ.
ಜಂಗಮನು ಗುರುವು ಮಾಡುವ ಕರ್ತವ್ಯಗಳನ್ನು ಮಾಡಬಹುದಾದರೂ, ಅವನ ಮುಖ್ಯ ಉದ್ದೇಶ ಸಮಾಜದ ಉದ್ದಾರ. ಮೊದಲನೆಯದಾಗಿ, ಅವನು ಲಿಂಗಾಯತ ಧರ್ಮದ ದಾರ್ಶನಿಕ, ಧಾರ್ಮಿಕ ಮತ್ತು ನೈತಿಕ ತತ್ವಗಳನ್ನು ಪ್ರಚಾರ ಮಾಡಬೇಕು. ಎರಡನೆಯದಾಗಿ, ಎಲ್ಲರೂ ಶಿವಪಥದಲ್ಲಿ ನಡೆಯುತ್ತಿದ್ದಾರೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ, ಶಿವಪಥವನ್ನು ಬಿಟ್ಟು ಅನ್ಯ ಮಾರ್ಗ ಹಿಡಿದವರಿಗೆ ಹಿತವಚನ ಹೇಳಿ, ಸಾಧ್ಯವಾದರೆ ದಂಡಿಸಿ, ಮತ್ತೆ ಅವರನ್ನು ಶಿವಪಥ ಹಿಡಿಯುವಂತೆ ಮಾಡಬೇಕು. ಈ ಕರ್ತವ್ಯವನ್ನು ಎಸಗಲು ಜಂಗಮ ಊರಿಂದೂರಿಗೆ ತಿರುಗಬೇಕು. ಹೀಗೆ ತಿರುಗುವದರಿಂದಲೇ ಅವನಿಗೆ ಜಂಗಮ ಎಂಬ ಹೆಸರು ಬಂದಿದೆ. ಆದರೆ ಜಂಗಮನಿಗೇ ಲಿಂಗಸಾಕ್ಷಾತ್ಕಾರವಾಗಿರದಿದ್ದರೆ, ಅವನು ಇತರರಿಗೆ ಪರಿಣಾಮಕಾರಿ ಮಾರ್ಗದರ್ಶನ ಮಾಡಲಾರ.
ಜಂಗಮನು ಸಂನ್ಯಾಸಿ. ಆದುದರಿಂದ ಜನರಿಗೆ ಜ್ಞಾನದಾಸೋಹ, ಅನ್ನದಾಸೋಹಗಳನ್ನು ಮಾಡಿಸಲು ಧನಧಾನ್ಯ ಸಂಗ್ರಹ ಮಾಡಬಹುದಾದರೂ ತನಗಾಗಿ ಏನನ್ನೂ ಸಂಗ್ರಹಿಸಬಾರದು.
ಜಂಗಮನು ಜ್ಞಾನದಾಸೋಹ ಮತ್ತು ಅನ್ನದಾಸೋಹಕ್ಕೆ ಆದರೂ, ಭಕ್ತರನ್ನು ಕಾಡಬಾರದು. ಏಕೆಂದರೆ ಕಾಡುವವನು ಜಂಗಮನಲ್ಲ. ಜಂಗಮ ಕೇಳುವುದಕ್ಕೆ ಮೊದಲೇ ಭಕ್ತ ನೀಡಬೇಕು. ನಿಜವಾದ ಜಂಗಮನಿಗೆ ಭಕ್ತ ಕೊಡದೇ ಇರಬಾರದು. ಅನುಭಾವದ ಮೂಲಕ ಅನಾದಿಯಾದ ಪರಶಿವನನ್ನು ಸಾಕ್ಷಾತ್ಕರಿಸಿಕೊಂಡವನು: ನಡೆದಾಡುವ ಲಿಂಗ.
ಜಂಗಮ = ಜನನ, ಗಮನ, ಮರಣ ವನ್ನು 0"ಶೂನ್ಯ" ಮಾಡಿಕೊಂಡವನೆ ಜಂಗಮ
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಚಿದಂಗ | ಜ್ಞಾನ |