ದಾಸೋಹ | ನವವಿಧ ಭಕ್ತಿ |
ದೀಕ್ಷೆ , ಇಷ್ಟಲಿಂಗದೀಕ್ಷೆ |
ದೀಕ್ಷೆಯೆಂದರೆ ಧಾರ್ಮಿಕ ವಿಧಿಗಳ ಮೂಲಕ ಕೆಲವು ಕ್ರಿಯೆಗಳನ್ನು ಆಚರಿಸಲು ನೀಡುವ ಅನುಮತಿ ಎಂಬ ಸಾಮಾನ್ಯ ಅರ್ಥವಿದ್ದರೂ, ವಚನ ಮತ್ತು ಆಗಮಗಳ ಪ್ರಕಾರ, ದೀಕ್ಷೆಯಂದರೆ ಲಿಂಗ ದೀಕ್ಷೆ, ಲಿಂಗದೀಕ್ಷೆ ಎಂಬ ಸಂಕೀರ್ಣ ಧಾರ್ಮಿಕ ಕ್ರಿಯೆಯು ಅನೇಕ ದೀಕ್ಷೆಗಳನ್ನು (ಉದಾಹರಣೆಗೆ ಲಿಂಗದೀಕ್ಷೆಯು ಮಂತ್ರದೀಕ್ಷೆಯನ್ನು) ಒಳಗೊಳ್ಳುತ್ತದೆ. ವೀರಶೈವರಿಗೆ ಲಿಂಗದೀಕ್ಷೆಯನ್ನು ಗರ್ಭಧಾರಣೆಯಾದ ಎಂಟು ತಿಂಗಳಿನಲ್ಲಿ ಮೊದಲು ಮಾಡಿ, ಜನನದ ನಂತರ ಮತ್ತೆ ಮಾಡುತ್ತಾರೆ. ಲಿಂಗಾಯತೇತರರು ಯಾವಾಗ ಬೇಕಾದರೂ ಲಿಂಗದೀಕ್ಷೆ ಪಡೆಯಬಹುದು. ಆದರೆ, ಲಿಂಗದೀಕ್ಷೆಯನ್ನು ಯಾವಾಗಲೂ ಲಿಂಗಾಯತ ಗುರುವೇ ಕೊಡಬೇಕು.
ಸಾಂಸಾರಿಕ ತಾಪತ್ರಯಗಳಿಂದ ಪೀಡಿತರಾಗಿ ಧೃತಿಗೆಟ್ಟವರು ಅವುಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆಧ್ಯಾತ್ಮಿಕ ಜೀವನದ ಕಡೆಗೆ ಒಲವು ತೋರಿಸುತ್ತಾರೆ. ಆದರೆ, ಅವರಿಗೆ ಯಾವ ರೀತಿಯ ಆಧ್ಯಾತ್ಮಿಕ ಜೀವನ ನಡೆಸಿದರೆ ತಾಪತ್ರಯಗಳಿಂದಲೂ, ಕರ್ಮದಿಂದಲೂ ಬಿಡುಗಡೆ ಪಡೆಯಬಹುದೆಂಬುದು ಗೊತ್ತಿರುವುದಿಲ್ಲ. ಆಗ ಅವರು ಗುರುವಿನ ಬಳಿ ಮಾರ್ಗದರ್ಶನಕ್ಕೆ ಬರುತ್ತಾರೆ. ಗುರು ಅವರಿಗೆ ದೀಕ್ಷೆಕೊಟ್ಟು ಮಾರ್ಗದರ್ಶನ ಪ್ರಾರಂಭಿಸುತ್ತಾನೆ.
"ದೀಕ್ಷೆ” ಎಂಬುದಕ್ಕೆ ಸಂಸ್ಕೃತ ವ್ಯುತ್ಪತ್ತಿ ಶಾಸ್ತ್ರವು ಈ ರೀತಿ ಅರ್ಥ ಕೊಡುತ್ತದೆ; ಜ್ಞಾನವನ್ನು ಕೊಡುವ (ದೀಯತೆ) ಮತ್ತು ಪಾಪಸಂಚಯವನ್ನು ಕೆಡಿಸುವ (ಕ್ಷೀಯತೆ ) ಧಾರ್ಮಿಕ ಕ್ರಿಯೆಯೇ ದೀಕ್ಷಾ.
ದೀಕ್ಷೆಯು ಎರಡು ಪ್ರಕಾರವಾಗಿದೆ ಪರಶಿವನು ತೀವ್ರಗತಿಯಲ್ಲಿ ಅನುಗ್ರಹ (ಶಕ್ತಿನಿಪಾತ) ಮಾಡುವ ದೀಕ್ಷೆಗೆ ನಿರಾಧಾರ ದೀಕ್ಷೆಯೆಂದು ಹೆಸರು, ಇದು ಕೆಲವು ಜನರಿಗೆ ಮಾತ್ರ ಕೊಡಬಹುದಾದ ದೀಕ್ಷೆ. ಎಲ್ಲದಕ್ಕೂ ಗುರುವನ್ನೆ ಆಶ್ರಯಿಸಿ, ಮಂದಗತಿಯಲ್ಲಿ ಶಕ್ತಿನಿಪಾತವನ್ನು ಸಾಧಿಸುವವರಿಗೆ ಕೊಡುವ ದೀಕ್ಷೆ ಸಾಧಾರ ದೀಕ್ಷೆ. ಈ ದೀಕ್ಷೆಯನ್ನು ಎಲ್ಲರಿಗೂ ಕೊಡಬಹುದು.
ಸಾಧಾರ ದೀಕ್ಷೆಯು ಸಬೀಜ ದೀಕ್ಷೆ, ನಿರ್ಬೀಜ ದೀಕ್ಷೆ ಮತ್ತು ಚಿನ್ಮಯ ದೀಕ್ಷೆ ಎಂದು ಮೂರು ಪ್ರಕಾರವಾಗಿದೆ. ಮುಕ್ತಿಯನ್ನು ಕರ್ಮಗಳ ಮೂಲಕ ಸಾಧಿಸುವವರಿಗೆ ಸಬೀಜ ದೀಕ್ಷೆ, ಭಕ್ತಿಯ ಮೂಲಕ ಸಾಧಿಸುವವರೆ ನಿರ್ಬೀಜ ದೀಕ್ಷೆ ಮತ್ತು ಜ್ಞಾನದ ಮೂಲಕ ಸಾಧಿಸುವವರಿಗೆ ಚಿನ್ಮಯ ದೀಕ್ಷೆಯನ್ನು ಕೊಡಲಾಗುವುದು.
ನಿರ್ಬಿಜ ದೀಕ್ಷೆಯಲ್ಲಿ ಎರಡು ವಿಧಗಳಿವೆ :
(೧) ಅನೇಕ ಜನ್ಮಾಂತರಗಳಲ್ಲಿ ಕೂಡಿಟ್ಟ ಕರ್ಮಗಳನ್ನೂ, ಈಗ ಫಲ ನೀಡುತ್ತಿರುವ ಕರ್ಮಗಳನ್ನೂ ಇನ್ನು ಮಂದೆ ಫಲ ನೀಡಬಹುದಾದ ಕರ್ಮಗಳನ್ನೂ, ಈ ಶರೀರವಿದ್ದಾಗಲೇ ಸುಟ್ಟು ಸದ್ಯೋನ್ಮುಕ್ತಿಯನ್ನು ಪಡೆಯುವವರಿಗೆ ಕೊಡುವ ದೀಕ್ಷೆಗೆ ಸದ್ಯೋನಿರ್ಮಾಣ ದೀಕ್ಷೆ ಎಂದು ಹೆಸರು.
(೨) ಎಲ್ಲ ಮೂರು ರೀತಿಯ ಕರ್ಮಗಳನ್ನು ಸುಟ್ಟು ಭವಾಂತರದ ಕೊನೆಯಲ್ಲಿ ಮುಕ್ತಿ ಪಡೆಯುವವರಿಗೆ ಕೊಡುವ ದೀಕ್ಷೆ ಚಿರಂನಿರ್ವಾಣ ದೀಕ್ಷೆ ಎನಿಸಿಕೊಳ್ಳುವುದು.
ಚಿರಂನಿರ್ವಾಣ ದೀಕ್ಷೆಯು ಏಳು ಪ್ರಕಾರವಾಗಿದೆ.
(೧) ಗುರುವಿನ ಆಜ್ಞೆಯನ್ನು ಪಾಲಿಸುವಂತೆ ವಚನಬದ್ಧನನ್ನಾಗಿ ಮಾಡುವ ದೀಕ್ಷೆ ಆಜ್ಞಾ ದೀಕ್ಷೆ.
(೨) ಸರ್ವ ಪುರಾತನರು ಪಾಲಿಸಿದಂತಹ ಸಮಯಾಚಾರವನ್ನು ಪಾಲಿಸುವಂತೆ ಕೈಕೊಳ್ಳುವ ದೀಕ್ಷೆ ಉಪಮಾ ದೀಕ್ಷೆ.
೩) ಶಿಷ್ಯನನ್ನು ಸ್ವಸ್ತಿಕವೆಂಬ ಮಂಡಲದ ಮೇಲೆ ಕುಳ್ಳಿರಿಸಿ, ಅವನ ಭೌತಿಕ ದೇಹವನ್ನು ಮಂತ್ರ ಪಿಂಡವನ್ನಾಗಿ ಪರಿವರ್ತಿಸುವಂಥ ಮಂತ್ರಗಳನ್ನು ಒಳಗೊಳ್ಳುವ ದೀಕ್ಷೆಯೇ ಸ್ವಸ್ತಿಕಾರೋಹಣ,
೪) ಆಗಮೋಕ್ತ ಹದಿನಾರು ಸ್ಥಾನಗಳಲ್ಲಿ ವಿಭೂತಿ ಪಟ್ಟವನ್ನು ಧರಿಸುವುದು ವಿಭೂತಿ ಪಟ್ಟ.
೫) ಪಂಚಕಲಶಗಳಲ್ಲಿ ತೀರ್ಥೋದಕವನ್ನು ತುಂಬಿ, ಅವುಗಳಲ್ಲಿ ಲಿಂಗ ಪ್ರತಿಷ್ಠಾಪಿಸಿ, ಆ ತೀರ್ಥದಿಂದ ಶಿಷ್ಯನಿಗೆ ಸ್ನಾನ ಮಾಡಿಸುವುದು ಕಲಶಾಭಿಷೇಕ,
೬) ಶಿಷ್ಯನಿಗೆ ಕೊಡಬೇಕಾದ ಲಿಂಗವನ್ನು ಅವನಿಗೆ ತೋರಿಸುವುದು ಲಿಂಗಾಯತ, ಮತ್ತು
೭) ಆ ಲಿಂಗವನ್ನು ಅವನಿಗೆ ಕೊಟ್ಟು, ಅದನ್ನು ಅವನು ತಲೆ, ಕೊರಳು, ಇತ್ಯಾದಿ ಯಾವದಾದರೊಂದು ಸ್ಥಾನದಲ್ಲಿ ಧರಿಸಿದರೆ ಅದು ಲಿಂಗಾಯತ.
ಸ್ವಾಯತ ದೀಕ್ಷೆ ಸಹಾ ಮೂರು ಪ್ರಕಾರವಾಗಿದೆ :
೧) ಶಿಷ್ಯನ ಮಸ್ತಕದಲ್ಲಿರುವ ಶಿವತತ್ವವನ್ನು ಗುರುವು ಧ್ಯಾನಿಸಿ, ವೇಧಿಸಿ, ಅದನ್ನು ಸ್ವಾಯತವಾದ ಇಷ್ಟಲಿಂಗದಲ್ಲಿ ಪ್ರತಿಷ್ಠಾಪಿಸಿದರೆ, ಆ ದೀಕ್ಷೆ ವೇಧಾದೀಕ್ಷೆ ಎನಿಸಿಕೊಳ್ಳುವುದು,
೨) ಶಿಷ್ಯನು ಲಿಂಗಪೂಜೆಯ ಸಮಯದಲ್ಲಿಯೂ, ಉಳಿದ ಸಮಯದಲ್ಲಿಯೂ ಓಂ ಲಿಂಗಾಯ ನಮಃ ಎಂಬ ಮಂತ್ರವನ್ನು ಉಚ್ಚರಿಸಬೇಕೆಂದು ಹೇಳಿಕೊಡುವುದೇ ಮಂತ್ರ ದೀಕ್ಷೆ.
೩) ಇಷ್ಟಲಿಂಗಕ್ಕೆ ಯಾವ ರೀತಿಯಲ್ಲಿ ಪೂಜೆ ಮಾಡಬೇಕೆಂಬ ಉಪದೇಶ ನೀಡುವುದೇ ಕ್ರಿಯಾ ದೀಕ್ಷೆ. (ನೋಡಿ ೯:೧೩೭೬-೧೩೮೦)
೧. ಗುರುವು ತನ್ನ ಶಿಷ್ಯನ ಮಲತ್ರಯಗಳನ್ನು ನಿವಾರಿಸಿ, ಲಿಂಗಸಂಬಂಧವನ್ನು ಮಾಡಿಕೊಡುವ ವಿಧಿ; ಗುರುವು ತನ್ನ ಶಿಷ್ಯನ ಮನಸ್ಸಂಸ್ಕಾರಕ್ಕಾಗಿ ನೀಡುವ ಮಂತ್ರೋಪದೇಶ ;ಶ್ರೀ ಗುರುಸ್ವಾಮಿ ಶಿಷ್ಯನನನುಗ್ರಹಿಸುವ ಪರಿಯೆಂತೆಂದರೆ ಆಚಾರ ಸ್ಥಲ ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಅರ್ಪಿತಸ್ಥಲ ಪ್ರಸಾದಸ್ಥಲವೆಂದು ಕರುಣಿಸುವುದು ದೀಕ್ಷೆ (ಚೆನ್ನಬ, ಸಮವ. ೩-೫೬-೧೮೩);
ದೀಕ್ಷೆ ೨೧ ಬಗೆಯದಾಗಿರುತ್ತದೆ: ಆಣವಮಲ, ಮಾಯಾಮಲ, ಕಾರ್ಮಿಕಮವೆಂಬ ಮಲತ್ರಯಂಗಳಂ ಕಳೆದು ಆಜ್ಜಾದೀಕ್ಷೆ ಉಪಮಾದೀಕ್ಷೆ ಸ್ವಸ್ತಿಕಾರೋಹಣ ಕಳಶಾಭಿಷೇಕ, ವಿಭೂತಿಯಪಟ್ಟ ಲಿಂಗಾಯತ ಲಿಂಗಸ್ವಾಯತ ಈ ಏಳನು ಕಾಯಕ್ಕುಪದೇಶವ ಮಾಡುವುದು; ಸಮಯ ನಿಸ್ಸಂಸಾರ ನಿರ್ವಾಣ ತತ್ವದೀಕ್ಷೆ ಆಧ್ಯಾತ್ಮ ಅನುಗ್ರಹ ಏಳನು ಪ್ರಾಣಕ್ಕುಪದೇಶವ ಮಾಡುವದು; ಶುದ್ಧವಿದ್ಯೆ ಈ ಮಾಡುವದು; ಏಕಾಗ್ರಚಿತ್ತ ದೃಢವ್ರತ ಪಂಚೇಂದ್ರಿಯಾರ್ಪಿತ ಅಹಿಂಸೆ ಮನೋಲಯ ಲಿಂಗನಿಜ ಸದ್ಯೋನ್ಮುಕ್ತಿ ಈ ಏಳನು ಮನಕ್ಕುಪದೇಶವ ಮಾಡುವುದು. ಈ ಪ್ರಕಾರದುಪದೇಶ ಕೂಡಲಚನ್ನಸಂಗಯ್ಯನಲ್ಲಿ ಸಹಜ ದೀಕ್ಷೆ (ಚೆನ್ನಬ, ಸಮವ ೩-೩೨೮-೯೯೫); ಪ್ರಾಣಕ್ಕೆ ಉಪದೇಶವ ಮಾಡಿ ಕಾಯಕ್ಕೆ ಲಿಂಗವ ಕೊಡಬೇಕು ಕಾಯಶುದ್ಧವ ಮಾಡಿ ಪ್ರಾಣಕ್ಕೆ ಅರಿವ ತೋರಬೇಕು ಇಷ್ಟನರಿಯದೆ ದೀಕ್ಷೆಯ ಮಾಡಬಾರದು (ಅರಿಮಾ, ಸಮವ. ೬-೧೨೮-೩೮೫);
೨. ತ್ರಿವಿಧ ಗುರುಲಿಂಗಸ್ಥಲದಲ್ಲಿರುವ ದೀಕ್ಷೆ, ಶಿಕ್ಷೆ ಮತ್ತು ಅನುಭಾವ ಎಂಬ ಮೂರು ಪ್ರಭೇದಗಳಲ್ಲಿ ಒಂದು : ಗುರುಲಿಂಗಸ್ಥಲ ತ್ರಿವಿಧ ದೀಕ್ಷೆ ಶಿಕ್ಷೆ ಸ್ವಾನಭಾವ ಇದಕ್ಕೆ ವಿವರ ದೀಕ್ಷೆಯೆಂದಡೆ ಗುರು ಶಿಕ್ಷೆಯೆಂದಡೆ ಜಂಗಮ ಸ್ವಾನುಭಾವವೆಂದಡೆ ತನ್ನಿಂದ ತಾನಚೆವುದು (ಚೆನ್ನಬ. ಸಮವ. ೩-೩೨೦-೯೮೭); ತ್ರಿವಿಧಗುರುಲಿಂಗ -ಇವು ದೀಕ್ಷೆ, ಶಿಕ್ಷೆ, ಅನುಭಾವ ಎಂಬಿವೆ. ಆಚರಿಸುವಲ್ಲಿ ತಿಳಿದವರಿಂದ ಮೊದಲು ಹೇಳಿಸಿಕೊಳ್ಳಬೇಕು. ಇದು ದೀಕ್ಷೆ ಎನಿಸುವುದು .
೩. ಪೂಜೆ, ವ್ರತ ಮುಂತಾದ ಪವಿತ್ರ ಕಾರ್ಯಗಳ ಆರಂಭದಲ್ಲಿ ಕೈಕೊಳ್ಳುವ ಒಂದು ನಿರ್ದಿಷ್ಟ ವಿಧಿ, -ನೇಮ;
೪. ಪ್ರಥಮದೀಕ್ಷೆ, ಪರಬ್ರಹ್ಮದೀಕ್ಷೆ, ಅಂಗಲಿಂಗದೀಕ್ಷೆ ಮತ್ತು ಪುನರ್ದಿಕ್ಷೆ ಎಂಬ ನಾಲ್ಕು ಬಗೆಯ ಸಂಸ್ಕಾರ ವಿಶೇಷಗಳು ಸಂಸ್ಕಾರ ವಿಶೇಷಗಳು
೫. ಷಟ್ಪದಾರ್ಥಗಳಲ್ಲಿ ಒಂದು.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ದಾಸೋಹ | ನವವಿಧ ಭಕ್ತಿ |