Previous ದೀಕ್ಷಾವಿಧಿ ಜೀವಾತ್ಮ Next

ನಿತ್ಯ

ನಿತ್ಯ

ಇದಕ್ಕೆ ಕನಿಷ್ಠ ಎರಡು ಅರ್ಥಗಳಿವೆ.

೧. ನಿತ್ಯ ಎಂದರೆ ಆದಿಯಿಲ್ಲದ ಮತ್ತು ಅಂತ್ಯವಿಲ್ಲದ ಎಂಬುದು ಒಂದರ್ಥ. ಈ ಅರ್ಥದಲ್ಲಿ ಈ ಪದವು ಪರಶಿವನಿಗೆ ಮಾತ್ರ ಅನ್ನವಾಗುತ್ತದೆ. ಆತ್ಮ, ಮಾಯೆ, (ಶಕ್ತಿ) ಮುಂತಾದವುಗಳು ಬಹಳ ದೀರ್ಘ ಇದ್ದರೂ ಅವು ನಿತ್ಯವಲ್ಲ. ಸೃಷ್ಟಿಗಿಂತ ಮೊದಲು ಮಾಯೆಗೆ ಅಸ್ತಿತ್ವವಿರುವುದಿಲ್ಲವಾದುದರಿಂದಲೂ, ಪ್ರಳಯದ ನಂತರ ಮತ್ತೆ ಅದು ಶಿವನಲ್ಲಿ ಅಂತರ್ಗತವಾಗುದುದರಿಂದಲೂ, ಅದು ನಿತ್ಯವಲ್ಲ. ಅದೇ ರೀತಿ ಬ್ರಹ್ಮ, ವಿಷ್ಣು ರುದ್ರಾದಿಗಳೂ ಸಹ ನಿತ್ಯ ಅಲ್ಲ. ಆದರೆ ಪ್ರಳಯ, ಸೃಷ್ಟಿ ಇತ್ಯಾದಿಗಳನ್ನು ಮಾಡುವ ಪರಶಿವ ಮಾತ್ರ ಯಾವಾಗಲೂ ಇರುವುದರಿಂದ ಅವನು ನಿತ್ಯ, ಶಾಶ್ವತ.

೨. ನಿತ್ಯವೂ ಮಾಡುವ ವ್ರತವು ನಿತ್ಯನೇಮ ಅಥವಾ ನಿತ್ಯ ಎನಿಸಿಕೊಳ್ಳುತ್ತದೆ. ಕೆಲವು ವ್ರತ ಅಥವಾ ನೇಮಗಳು ವಾರ ಅಥವಾ ತಿಂಗಳಿಗೊಮ್ಮೆ ಮಾಡಲ್ಪಟ್ಟರೆ ಮತ್ತೆ ಕೆಲವು ವ್ರತಗಳು (ನೇಮಗಳು) ದಿನನಿತ್ಯವೂ ಮಾಡಲ್ಪಡಬೇಕು. ಆದರೆ ಒಂದು ನೇಮವನ್ನು ನಿತ್ಯ ಮಾಡುವುದಾದರೂ ಅದನ್ನು ಆ ದಿನವೆಲ್ಲಾ ಮಾಡುವುದಿಲ್ಲ. ಉದಾಹರಣೆಗೆ ಪ್ರತಿದಿನ ತಣ್ಣೀರು ಸ್ನಾನ ಮಾಡಿ ಪೂಜೆಮಾಡುತ್ತೇನೆಂಬ ನಿತ್ಯ ನೇಮಕ್ಕೆ ೨೪ ಗಂಟೆಯೂ ತಣ್ಣೀರು ಸ್ನಾನ ಮಾಡಬೇಕೆಂಬ ಅರ್ಥವಿಲ್ಲ. ಸ್ನಾನ ಮಾಡುವುದೇ ಆದರೆ ತಣ್ಣೀರಲ್ಲಿ ಮಾತ್ರ ಮಾಡುತ್ತೇನೆ ಮತ್ತು ನಿತ್ಯವೂ ಮಾಡುತ್ತೇನೆ ಎಂಬರ್ಥ ಅದಕ್ಕಿದೆ. ಆದರೆ ಪರಶಿವ ನಿತ್ಯ ಎಂದರೆ ದಿನವೂ ಪರಶಿವ ಇರುತ್ತಾನೆ ಎಂಬರ್ಥವಿರದೆ, ಪ್ರತಿಕ್ಷಣವೂ ಇರುತ್ತಾನೆ, ಅವನ ಅಸ್ತಿತ್ವಕ್ಕೆ ಕೊನೆ ಮೊದಲಿಲ್ಲ ಎಂಬರ್ಥವಿದೆ.

೩. ಪರಮೇಶ್ವರನಿಗೆ ಸಂಬಂಧಿಸಿದಂತಿರುವ ಸತ್, ಚಿತ್, ಆನಂದ, ನಿತ್ಯ ಮತ್ತು ಪರಿಪೂರ್ಣ ಎಂಬ ಐದು ಬಗೆಯ ಲಕ್ಷಣಗಳಲ್ಲಿ ಒಂದು: ಲಕ್ಷಣಗಳು -ಇವು ಐದು ಇವೆ. ಅವು ೧. ಸತ್, ೨. ಚಿತ್, ೩. ಆನಂದ, ೪, ನಿತ್ಯ, ೫. ಪರಿಪೂರ್ಣ ಈ ಪ್ರಕಾರ ಇರುತ್ತವೆ. ಇವು ಪರಮಾತ್ಮನ ಸ್ವರೂಪವನ್ನು ಹೇಳುತ್ತವೆ ...ಪರಮಾತ್ಮನು ನಿತ್ಯನಾಗಿದ್ದಾನೆ .,
೪. ಶಾಶ್ವತವಾಗಿರುವವನು; ಪರಶಿವ : ಕೂಡಲಸಂಗಯ್ಯನೆ ನಿತ್ಯ ಉಳಿದ ದೈವವೆಲ್ಲ ಅನಿತ್ಯ ಕಾಣಿಭೋ (ಬಸವ. ಸಮವ. ೧-೧೩೭-೫೫೧); ಅಯ್ಯಾ ನಿತ್ಯನು ನೀನೆ ಆ ಸತ್ಯಶುದ್ಧದೇಹಿ ನೀನೆ ಕಾಣಾ (ಸಿದ್ದರಾ. ಸಮವ. ೪-೧೯-೫೮).

೫. ಮುಕ್ತಿಯನ್ನು ಹೊಂದಿದವನು : ಮಾಡಿ ಮಾಡಿ ನಿತ್ಯಲಿಂಗಾರ್ಚನೆಯ ಮಾಡಿ ಮಾಡಿ ನಿತ್ಯಜಂಗಮಾರ್ಚನೆಯ ಮಾಡಿ ಮಾಡಿ ವಿಸ್ತಾರವೆಂದು ಮಾಡಿ ಕೂಡಿದವರೆಲ್ಲ ನಿತ್ಯರಾದರು (ಸಿದ್ದರಾ, ಸಮವ. ೪-೧೮೨- ೬೬೩).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ದೀಕ್ಷಾವಿಧಿ ಜೀವಾತ್ಮ Next