ಶಿವ | ಶಿವಶಕ್ತಿ ಸಂಪುಟ |
ಶಿವಯೋಗ |
“ಯೋಗ" ಎಂಬ ಪದವು ಯುಜ್" ಎಂಬ ಧಾತುವಿನಿಂದ ವ್ಯುತ್ಪತ್ತಿಯಾಗಿದ್ದು, ಅದಕ್ಕೆ "ಕೂಟ" (ಕೂಡುವುದು" ಅಥವಾ "ಬೆರೆಯುವುದು") ಎಂಬ ಅರ್ಥವಿದೆ. ಸಾಮಾನ್ಯವಾಗಿ, ಈ ಅರ್ಥದ ಆಧಾರದ ಮೇಲೆ "ಯೋಗವೆಂದರೆ ಆತ್ಮವು ಪರಮಾತ್ಮನಲ್ಲಿ ಬೆರೆಯುವುದು" ಎಂದು ಹೇಳಲಾಗುವುದು. ಇದೇ ಅರ್ಥದ ಆಧಾರದ ಮೇಲೆ, `ಜೀವನು ಶಿವನೊಂದಿಗೆ ಬೆರೆಯುವುದೇ ಶಿವಯೋಗ" ಎನ್ನಬಹುದು. ಶಿವನನ್ನು ಸೇರುವುದು ಶಿವಯೋಗಿಗಳ ಧ್ಯೇಯ.
“ಯೋಗ" ಎಂಬ ಪದಕ್ಕೆ "ಮಾರ್ಗ" ಎಂಬ ಅರ್ಥವೂ ಇದೆ. ಉದಾಹರಣೆಗೆ, ಭಕ್ತಿಯೋಗ, ಕರ್ಮಯೋಗ ಎಂಬ ಪದಗಳಿಗೆ ಭಕ್ತಿ ಮಾರ್ಗ, ಕರ್ಮಮಾರ್ಗ ಎಂಬ ಪರ್ಯಾಯ ಪದಗಳೂ ಇವೆ. ಭಕ್ತಿ ಅಥವಾ ಕರ್ಮಮಾರ್ಗವಾಗಿ ಪರಮಾತ್ಮನನ್ನು ಸೇರುವುದು ಎಂಬುದು ಈ ಪದಗಳ ಅರ್ಥ. ಅದೇ ರೀತಿ, ಶಿವಯೋಗವೆಂದರೆ ಶಿವನನ್ನು ಸೇರುವ ಮಾರ್ಗ, ಶಿವಪಥ ಎಂಬರ್ಥವೂ ಇದೆ.
ವಚನಕಾರರ ಪ್ರಕಾರ, ಮನುಷ್ಯ ಪರಶಿವನಲ್ಲ, ಪರಶಿವನಾಗಲಾರ, ಆದರೆ ಅವನಲ್ಲಿ ಶಿವಾಂಶವಿದೆ. ಅವನು ಮೂಲತಃ ಪರಶಿವನ ಅಂಗ (ಭಾಗ ಅಥವಾ ದೇಹ). ಆದರೆ ಅವನು ಈ ಸತ್ಯವನ್ನು ಮರೆತು, ತಾನು ಸ್ವತಂತ್ರ, ಅಂಗಭೋಗವೇ ಜೀವನದ ಪರಮೋದ್ದೇಶ, ಎಂದು ತಪ್ಪು ತಿಳಿದು, ನಾನಾ ರೀತಿಯ ಆಸೆಗಳಿಗೊಳಗಾಗಿ, ಅವುಗಳನ್ನು ಪೂರೈಸಿಕೊಳ್ಳಲು ನಾನಾರೀತಿಯ ಕರ್ಮಗಳನ್ನು ಮಾ, ಅವುಗಳ ಫಲಗಳನ್ನು ಅನುಭವಿಸಲು ನಾನಾರೀತಿಯ ಜನ್ಮಗಳನ್ನೆತ್ತಿ, ಸಂಸ್ಕಾರಕ್ಕೆ ದನಾಗಿ, ಅನೇಕ ರೀತಿಯ ದುಃಖವನ್ನು ಅನುಭವಿಸುತ್ತಾನೆ. ಈ ದುಃಖವನ್ನುಂಟು ಮಾಡುವ ಕರ್ಮವನ್ನು ಧ್ವಂಸ ಮಾಡಿ, ಸಂಸಾರ ಬಂಧನದಿಂದ ತಪ್ಪಿಸಿಕೊಂಡು, ತಾನು ದೇಹೇಂದ್ರಿಯಾದಿ ಕರಣಗಳಲ್ಲ, ಶಿವನ ಅಂಗವಾದ ಆತ್ಮ ಎಂಬ ಜ್ಞಾನವನ್ನು ಪಡೆದು, ಪುನಃ ಮೊದಲಿನಂತೆ ಶಿವನೊಂದಿಗೆ ಸಾಮರಸ್ಯ ಪಡೆಯುವುದೇ ಶಿವಯೋಗದ ಧೈಯ. ಇದನ್ನು ಪಡೆಯಲು ಅಗತ್ಯವಾದ ಶಕ್ತಿಗಳನ್ನು ಅವನು ಹೊರಗಿನಿಂದ ಪಡೆಯಬೇಕಾಗಿಲ್ಲ, ಅವು ಅವನಲ್ಲೇ ಇವೆ. ಅದನ್ನು ಸರಿಯಾದ ಗುರುವಿನ ಮಾರ್ಗದರ್ಶನದಲ್ಲಿ ಜಾಗೃತಗೊಳಿಸಿ, ಸದುಪಯೋಗಪಡಿಸಿಕೊಂಡು, ಅವುಗಳನ್ನು ಶಿವಾಭಿಮುಖವಾಗಿ ಮಾಡಿದರೆ, ಶಿವಯೋಗ ಸಫಲವಾದಂತೆಯೇ.
ಈ ಶಕ್ತಿಗಳನ್ನು ಶಿವಾಭಿಮುಖವಾಗಿ ಮಾಡಿದರೆ ಆಗ ಅವು ಭಕ್ತಿ ಅಥವಾ ಭಕ್ತಿ ಶಕ್ತಿಗಳೆನಿಸಿಕೊಳ್ಳುತ್ತವೆ. ಶಕ್ತಿಯು ಚಿತ್ ಶಕ್ತಿ, ಪರಾಶಕ್ತಿ, ಆದಿಶಕ್ತಿ, ಇಚ್ಛಾ ಶಕ್ತಿ, ಜ್ಞಾನಶಕ್ತಿ, ಮತ್ತು ಕ್ರಿಯಾಶಕ್ತಿ ಎಂದು ಆರು ಪ್ರಕಾರವಾಗಿದ್ದು, ಅವು ಭಕ್ತಿಗಳಾಗಿ ಪರಿವರ್ತಿತವಾದಾಗ, ಶ್ರದ್ಧಾಭಕ್ತಿ, ನಿಷ್ಠಾಭಕ್ತಿ, ಅವಧಾನಭಕ್ತಿ, ಅನುಭಾವ ಭಕ್ತಿ, ಆನಂದ ಭಕ್ತಿ ಮತ್ತು ಸಮರಸ ಭಕ್ತಿ ಎನಿಸಿಕೊಳ್ಳುತ್ತವೆ. ಈ ಶಕ್ತಿಗಳನ್ನು ಭಕ್ತಿಗಳನ್ನಾಗಿ ಪರಿವರ್ತಿಸುವ ದಾರಿಯಲ್ಲಿ ಆರು ಮೈಲಿಕಲ್ಲುಗಳಿದ್ದು, ಅವನ್ನು ಷಟ್‌ಸ್ಥಲ ಎಂದು ಕರೆಯಲಾಗುತ್ತದೆ. ಆದುದರಿಂದ, ಶಿವಯೋಗವು ಆರು ಹಂತಗಳಲ್ಲಿ ನಡೆಯುವ ಒಂದು ಆಧ್ಯಾತ್ಮಿಕ ಪ್ರಯೋಗ.
ಪರಶಿವನಲ್ಲಿರುವ ಶಕ್ತಿಯೇ ಚಿತ್‌ಶಕ್ತಿ ಮುಂತಾದ ಶಕ್ತಿಗಳಾಗಿ ವಿಕಾಸಗೊಂಡು, ಮನುಷ್ಯನಲ್ಲಿ ಪಂಚಭೂತಗಳಿಂದಾದ ದೇಹ, ಅಂತಃಕರಣಗಳು, ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳಾಗಿ ರೂಪಾಂತರಗೊಂಡಿದೆ. ಅವುಗಳನ್ನು ಭಕ್ತಿಗಳನ್ನಾಗಿ ಪರಿವರ್ತಿಸುವುದೆಂದರೆ, ಮೊದಲು ಅವುಗಳನ್ನು ಅಧಾರ್ಮಿಕವಾಗಿ ವರ್ತಿಸದಂತೆ ತಡೆಯುವುದು, ಅನಂತರ, ಅವು ಶಿವಕೇಂದ್ರೀಯ ವರ್ತನೆಯಲ್ಲಿ ಮಾತ್ರ ತೊಡಗುವಂತೆ ಪ್ರೇರೇಪಿಸುವುದು; ಉದಾಹರಣೆಗೆ ಕೈಗಳನ್ನು ಕಳ್ಳತನ ಮಾಡದಂತೆ ತಡೆಹಿಡಿದು, ಲಿಂಗಪೂಜೆ ಮಾಡುವಂತೆ ಅವುಗಳನ್ನು ಪ್ರೇರೇಪಿಸುವುದು ಲೌಕಿಕ ವಿಷಯಗಳಿಗೆ ಸತತವಾಗಿ ಹರಿದಾಡುವ ಮನಸ್ಸನ್ನು ನಿಯಂತ್ರಿಸಿ ಶಿವಮಂತ್ರವನ್ನು ಉಚ್ಚರಿಸುವಂತೆ ಅಥವಾ ಶಿವಧ್ಯಾನ ಮಾಡುವಂತೆ ನಿಯಂತ್ರಿಸುವುದು, ಇತ್ಯಾದಿ.
ಇದೇ ತತ್ವವನ್ನು ಮತ್ತೊಂದು ರೀತಿಯಲ್ಲಿ ಮಂಡಿಸಬಹುದು : ಮೇಲೆ ತಿಳಿಸಿದ ಶಕ್ತಿಗಳು, ಸ್ಥೂಲ ಶರೀರ, ಸೂಕ್ಷ್ಮ ಶರೀರ ಮತ್ತು ಕಾರಣ ಶರೀರ ಎಂದು ಮೂರು ರೀತಿಯ ಅಂಗಗಳಾಗಿ ರೂಪಾಂತರಗೊಂಡಿವೆ. ಸಾಧಕನು ಇವುಗಳನ್ನು ಕ್ರಮವಾಗಿ ತ್ಯಾಗಾಂಗ, ಭೋಗಾಂಗ ಮತ್ತು ಯೋಗಾಂಗಗಳಾಗಿ ಪರಿವರ್ತಿಸಬೇಕು.
ಸ್ಥೂಲ ಶರೀರವು ಪಂಚಭೂತಗಳಿಂದ ಮಾಡಲ್ಪಟ್ಟಿದ್ದು, ಅದು ಹೆಚ್ಚಾಗಿ ಕ್ರಿಯಾಶಕ್ತಿಯ ರೂಪಾಂತರವಾಗಿದೆ. ಅದರ ಬಯಕೆಗಳನ್ನು ತೀರಿಸಲು ಮನುಷ್ಯನು ಕ್ರಿಯಾಶೀಲನಾಗಿ, ಅನೇಕ ರೀತಿಯ ಕರ್ಮಗಳನ್ನು ಮಾಡಬೇಕಾಗುತ್ತದೆ. ಶರಣರು ಕ್ರಿಯಾಶಕ್ತಿಯ ದುಷ್ಪಭಾವವನ್ನು ತಪ್ಪಿಸಲು, ಅಂದರೆ ಸ್ಥೂಲಶರೀರವನ್ನು ತ್ಯಾಗಾಂಗವನ್ನಾಗಿ ಮಾಡಲು, ಸಾಧಕನು ಅದನ್ನು ಧಾರ್ಮಿಕ ಕಾರ್ಯಗಳಿಗೆ ಮಾತ್ರ ಬಳಸಬೇಕೆನ್ನುತ್ತಾರೆ. ಇಲ್ಲಿ ಇಷ್ಟ ಲಿಂಗ ಪೂಜೆ, ಮತ್ತು ಇತರ ಆಚಾರಗಳು ತ್ಯಾಗಗಳಾಗಿ ಪರಿಣಮಿಸುತ್ತವೆ. ಗುರುಲಿಂಗ ಜಂಗಮರಿಗೆ ಮಾಡುವ ದಾಸೋಹ, ದಾಸೋಹಕ್ಕೆ ಪೂರ್ವಭಾವಿಯಾಗಿ ಅಗತ್ಯವಾದ ಕಾಯಕ, ಇವೆಲ್ಲ ಸ್ಥೂಲಶರೀರವನ್ನು ತ್ಯಾಗಾಂಗವನ್ನಾಗಿ ಮಾಡುವ ಕ್ರಮಗಳು.
ಸೂಕ್ಷ್ಮ ಶರೀರದಲ್ಲಿ ಜ್ಞಾನೇಂದ್ರಿಯ, ಅಂತಃಕರಣ, ಇತ್ಯಾದಿಗಳಿವೆ. ನಮ್ಮ ಸ್ಥೂಲದೇಹವು ಮರಣದಲ್ಲಿ ನಶಿಸಿಹೋದಾಗ, ಆತ್ಮವು ಉಳಿದ ಎರಡು ಶರೀರಗಳೊಡನೆ ಮುಂದಿನ ಜನ್ಮಕ್ಕೆ ಹೋಗುತ್ತದೆ. ನಮ್ಮ ಆಸೆ ಆಕಾಂಕ್ಷೆಗಳನ್ನು ಹರಿಯಬಿಡುವುದಾಗಲಿ, ನಿಯಂತ್ರಿಸುವುದಾಗಲಿ ಸೂಕ್ಷ್ಮಶರೀರವೇ ಮಾಡಬೇಕು. ಅದೇ ಕರ್ತ ಮತ್ತು ಭೋಕ್ತ. ಇದನ್ನು ಸಾಧಕನು ಭೋಗಾಂಗವಾಗಿ ಪರಿವರ್ತಿಸಬೇಕು. ಶರಣರು ದೇಹದ ಹಾಗೂ ಮಾನಸಿಕ ಬಯಕೆಗಳನ್ನು ತೀರಿಸಬಾರದು ಎಂದು ಹೇಳಲಿಲ್ಲ. ಅದರ ಬದಲು, ಬರೀ ಅದರ ಕಡೆಗೆ ಗಮನಕೊಡಬಾರದೆಂದೂ, ಎಲ್ಲವನ್ನೂ ಪರಶಿವನಿಗೆ ಅರ್ಪಿಸಿದ ನಂತರವೇ ಭೋಗಿಸಬೇಕೆಂದೂ ಹೇಳಿದರು. ಈ ರೀತಿಯ ಭೋಗಕ್ಕೆ ಎರಡು ಸ್ತರಗಳಿವೆ. ಮೊದಲನೆ ಸ್ತರದಲ್ಲಿ ಸಾಧಕನು ತಾನು ಸೇವಿಸುವ ಆಹಾರ ಪಾನೀಯಗಳನ್ನಷ್ಟೇ ಪರಶಿವನಿಗರ್ಪಿಸಿ, ಅನಂತರ ತಾನು ಭೋಗಿಸುತ್ತಾನೆ. ಕ್ರಮೇಣ, ಅವನು ತನ್ನ ಜ್ಞಾನೇಂದ್ರಿಯ, ಕರ್ಮೇಂದ್ರಿಯ, ಅಂತಃಕರಣಗಳನ್ನೆಲ್ಲಾ ಪರಶಿವನಿಗರ್ಪಿಸಿ, ಅನಂತರ ಅವುಗಳನ್ನು ಉಪಯೋಗಿಸುತ್ತಾನೆ: ಎರಡನೆ ಸ್ವರದಲ್ಲಿ, ಪ್ರತಿ ಕರ್ಮೇಂದ್ರಿಯ ಜ್ಞಾನೇಂದ್ರಿಯ ಬಾಗಿಲಿನಲ್ಲೂ ಪರಶಿವನನ್ನೇ ಪ್ರತಿಷ್ಠಾಪಿಸುತ್ತಾನೆ. ಇದರಿಂದಾಗಿ, ಅವನು ನೋಡುವ ನೋಟ, ಕೇಳುವ ಶಬ್ದ, ಇತ್ಯಾದಿಯನ್ನು ಪರಶಿವನು ಮೊದಲು ಅನುಭವಿಸಿ, ಅನಂತರ ಸಾಧಕನು ಅನುಭವಿಸುತ್ತಾನೆ. ಹೀಗೆ ಸೂಕ್ಷ್ಮ ಶರೀರದಲ್ಲಿ ಅರಿಷಡ್ವರ್ಗ ಮುಂತಾದ ಆಧ್ಯಾತ್ಮಿಕ ಜೀವನದ ವೈರಿಗಳಿದ್ದರೆ, ಭೋಗಾಂಗಳಲ್ಲಿ ಅಂಥ ಯಾವುದೂ ಇಲ್ಲ. ಮುಖ್ಯವಾಗಿ, ಅಲ್ಲಿ ಸ್ವಾರ್ಥವಿಲ್ಲ. ಸ್ವಾರ್ಥವಿಲ್ಲದ ಆತ್ಮ ಶುದ್ದ.
ಕಾರಣ ಶರೀರದಲ್ಲಿ ಆತ್ಮನೂ ಹಿಂದಿನ ಜನ್ಮದ ವಾಸನೆಗಳೂ ಇರುತ್ತವೆ. ಇವುಗಳಿಂದಾಗಿ ಈಗಿನ ಜನ್ಮದಲ್ಲಿ ಅನೇಕ ರೀತಿಯ ಆಸೆ ಆಕಾಂಕ್ಷೆಗಳು ತಲೆದೋರುತ್ತವೆ. ಅಲ್ಲದೆ, ಹಿಂದಿನ ಜನ್ಮದ ಕರ್ಮಗಳು ಈಗಿನ ಜನ್ಮದಲ್ಲಿ ಫಲನೀಡುತ್ತವೆ. ಇದರಿಂದಾಗಿಯೂ ನಾವು ದುಃಖಪಡುತ್ತೇವೆ. ಆದರೆ ಕಾರಣ ಶರೀರವನ್ನು ನಾವು ಯೋಗಾಂಗವನ್ನಾಗಿ ಮಾಡಿದರೆ, ನಾವು ಜೀವನ್ಮುಕ್ತರಾಗುತ್ತೇವೆ.
ಯೋಗಾಂಗವೆಂದರೆ, ಪರಶಿವನೊಂದಿಗೆ ಯೋಗವನ್ನು (ಐಕ್ಯವನ್ನು ಪಡೆಯಲು ಸಹಾಯಕವಾಗುವ ಅಂಗ (ಶರೀರ), ಇಲ್ಲಿಯೂ ರೀತಿಯೂ ಎರಡು ಹಂತಗಳಿವೆ. ಮೊದಲನೆಯ ಹಂತದಲ್ಲಿ ಸಾಧಕನು ಪರಶಿವನೊಂದಿಗೆ ಧ್ಯಾನದಲ್ಲಿ ಒಂದಾಗುತ್ತಾನೆ. ಎರಡನೆ ಹಂತದಲ್ಲಿ ತಾನೆಂಬ ಭಾವವನ್ನು ಸಂಪೂರ್ಣವಾಗಿ ಮರೆಯುತ್ತಾನೆ. ಹೀಗಾಗಿ, ತಾನು ನೋಡುವುದು, ಕೇಳುವುದು, ರುಚಿಸುವುದು, ಮುಂತಾದ ಕ್ರಿಯೆಗಳು ಪರಶಿವನಿಗಾಗಿಯೇ ಹೊರತು ತನಗಾಗಿ ಅಲ್ಲ, ಅಥವಾ ತನ್ನ ಜ್ಞಾನೇಂದ್ರಿಯಗಳ ಮೂಲಕ ಪರಶಿವನು ಅರಿಯುತ್ತಾನೆ ಹಾಗೂ ಭೋಗಿಸುತ್ತಾನೆ ಅಥವಾ "ತಾನೊಂದು ಪರಶಿವನ ವಾಹನ" ಎಂದು ತಿಳಿಯುತ್ತಾನೆ. ಹೀಗೆ ಶಿವ ಬೇರೆ
೧. ದೇವನನ್ನು ಕೂಡುವುದು; ಲಿಂಗಾಂಗ ಸಾಮರಸ್ಯ ; ಲಿಂಗಯೋಗ, ದೃಷ್ಟಿಯೋಗ ಅಥವಾ ಅನಿಮಿಷಯೋಗ; ಶಿವಯೋಗದಲ್ಲಿರುವಾತನೆ ಲಿಂಗವಂತ ನೆಂಬೆನಯ್ಯಾ (ಚೆನ್ನಬ. ಸಮವ. ೩-೩೮೯-೧೧೨೬);
೨. ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗ ಮತ್ತು ಶಿವಯೋಗ -ಎಂಬ ಯೋಗಪಂಚಕಗಳಲ್ಲಿ ಒಂದು; ಶಿವಸಂಬಂಧವಾದ ಜ್ಞಾನ, ಭಕ್ತಿ, ಧ್ಯಾನ, ವ್ರತ ಮತ್ತು ಅರ್ಚನೆಗಳೆಂಬ ಐದು ವಿಷಯಗಳಿಂದ ಕೂಡಿದ ಯೋಗ ;
೩. ಲಿಂಗಾಂಗ- ಸಾಮರಸ್ಯವನ್ನು ಸಾಧಿಸಲು ಬೇಕಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿ ಎಂಬ ಎಂಟು ಅಂಗಗಳು;
ಯೋಗದ ಅಷ್ಟಾಂಗಗಳಿಗನುಗುಣವಾಗಿ ಶಿವಯೋಗದಲ್ಲಿರುವ
೧. ಸುಳ್ಳು, ಹಿಂಸೆ, ಪರದ್ರವ್ಯ, ಪರಸ್ತ್ರೀ, ಪರನಿಂದ -ಇವುಗಳನ್ನು ತ್ಯಜಿಸುವುದು. ಯಮಯೋಗ.
೨. ಸದಾಚಾರಗಳಿಂದ ಕೂಡಿದ್ದು ಶಿವಲಿಂಗಾರ್ಚನೆಯನ್ನು ಮಾಡುವುದು ನಿಯಮ- ಯೋಗ,
೩. ಪದ್ಮಾಸನ, ಸಿದ್ಧಾಸನ, ಮುಂತಾದ ಆಸನಗಳಲ್ಲಿ ಒಂದನ್ನು ಸ್ವೀಕರಿಸಿ ಸ್ಥಿರಚಿತ್ತದಿಂದ ಲಿಂಗಾರ್ಚನೆಯನ್ನು ಮಾಡುವುದು ಆಸನಯೋಗ,
೪, ರೇಚಕ, ಪೂರಕಗಳ ಭೇದವನ್ನು ತಿಳಿದುಕೊಂಡು, ಪ್ರಣವಗಳನ್ನುಚ್ಚರಿಸುತ್ತ ಲಿಂಗವನ್ನು ಸಂಬಂಧಿಸಿಕೊಂಡು ಪರಶಿವಧ್ಯಾನದಲ್ಲಿರುವುದು ಪ್ರಾಣಾಯಾಮ.
೫. ಸರ್ವೆಂದ್ರಿಯ ಗಳನ್ನು ಅಂಕೆಯಲ್ಲಿಟ್ಟುಕೊಂಡು ಧರ್ಮಮಾರ್ಗದಲ್ಲಿರುವುದು ಪ್ರತ್ಯಾಹಾರ,
೬. ಕರಸ್ಥಲದ ಲಿಂಗವನ್ನು ಪರಮಾತ್ಮನೆಂದು ತಿಳಿದು, ಅದನ್ನು ಷಟ್‌ಚಕ್ರಗಳಲ್ಲಿ ಷಡ್ಲಿಂಗಗಳಾಗಿ ನೆಲೆಗೊಳಿಸಿ ಧ್ಯಾನಿಸುವುದು ಧ್ಯಾನಯೋಗ,
೭. ಷಡ್‌ಲಿಂಗಗಳು ಷಟ್‌ಚಕ್ರಗಳಲ್ಲಿ ನೆಲೆ- ಗೊಂಡುದರ ಪರಿಣಾಮವಾಗಿ ಭಾವ, ಕರಣ, ಮನ ಮುಂತಾದವುಗಳಲ್ಲಿ ಲಿಂಗಕಳೆಯು ಬೆಳಗಿ ಆಚರಣೆಗಳುಂಟಾಗುವ ಧಾರಣಯೋಗ,
೮. ಪರಂಜ್ಯೋತಿಸ್ವರೂಪವಾದ ಮಹಾಲಿಂಗದಲ್ಲಿ ಬೆರೆಯುವುದು ಸಮಾಧಿಯೋಗ -ಎಂಬ ಎಂಟು ಲಿಂಗಸಂಬಂಧವಾದ ಅಂಗಗಳು ;
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಇವು ಯೋಗದ ಅಷ್ಟಾಂಗಗಳಿವೆ. ಆದರೆ, ಶಿವಯೋಗದಲ್ಲಿ ಈ ಅಂಗಗಳಿಗೆ ಲಿಂಗಾಯತ ಆಚಾರಕ್ಕನುಗುಣವಾಗಿ ಕ್ರಿಯೆಗಳು ಹೇಳಲ್ಪಡುವುದುಂಟು
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಶಿವ | ಶಿವಶಕ್ತಿ ಸಂಪುಟ |