Previous ಸಪ್ತಾಚಾರ ಸಪ್ತವರ್ಣಗಳ ಪರಿಣಾಮಗಳು Next

ಸಪ್ತವ್ಯಸನಗಳು

ಸಪ್ತವ್ಯಸನಗಳು

ಪುರಾತನ ಭಾರತೀಯ ದಾರ್ಶನಿಕರು ಪ್ರತಿಪಾದಿಸುವ ಸಪ್ತವ್ಯಸನಂಗಳು: ಸ್ತ್ರೀ, ಅಕ್ಷ, ಮೃಗಯೆ, ಪಾನ, ವಾಕ್ಪಾರುಷ್ಯ, ದಂಡಪಾರುಷ್ಯ ಮತ್ತು ಅರ್ಥದೂಷಣೆ ಎಂಬ ಏಳು ಬಗೆಯ ಗೀಳು,- ದುರಭ್ಯಾಸ. (womanising, gambling, hunting, intoxicating drinks, harsh speech, punishing and spending money carelessly.)

ವಚನಕಾರರ ಪ್ರಕಾರ ಸಪ್ತವ್ಯಸನಂಗಳು ಈ ಕೆಳಗಿನಂತಿವೆ: ತನುವ್ಯಸನ, ಮನವ್ಯಸನ, ಧನವ್ಯಸನ, ರಾಜ್ಯವ್ಯಸನ, ವಿಶ್ವವ್ಯಸನ, ಉತ್ಸಾಹವ್ಯಸನ, ಸೇವಕವ್ಯಸನ

ಆಧ್ಯಾತ್ಮಿಕ ಮಾರ್ಗದಿಂದ ವಿಚಲಿತನಾಗುವಂತೆ ಮನುಷ್ಯನನ್ನು ಈ ಏಳು ವ್ಯಸನಗಳು ಕಾಡುತ್ತವೆ.

೧. ತನು ವ್ಯಸನ ವೆಂದರೆ ದೇಹಕ್ಕೆ ಸಂಬಂಧಿಸಿದ ವ್ಯಸನ. ತೆಳ್ಳಗಿದ್ದರೆ ದಷ್ಟಪುಷ್ಟವಾಗಿಲ್ಲವಲ್ಲ ಎಂಬ ಚಿಂತೆ, ದಪ್ಪಗಿದ್ದರೆ ತೆಳಗಿಲ್ಲವೆಂಬ ಚಿಂತೆ; ವಸ್ತ್ರ ಆಭರಣಗಳು ಮುಂತಾದ ಶೃಗಾರ ವಸ್ತುಗಳ ಬಗೆಗಿನ ಚಿಂತೆ (೩:೩೩೨).

೨. ಮನವ್ಯಸನವೆಂದರೆ, ಯಾವರೀತಿ ಕಳ್ಳತನ ಮಾಡಲಿ, ಯಾವ ಸುಳ್ಳು ಹೇಳಲಿ, ಎಂಬ ವ್ಯಸನ ಹಾಗೂ ಪರಸ್ತ್ರೀಯರ ಬಗೆಗಿನ ವ್ಯಸನ.

೩. ಧನವ್ಯಸನವೆಂದರೆ ಧನ, ರಾಜ್ಯ, ಇತ್ಯಾದಿಗಳನ್ನು ಬಯಸುವುದು.

೪. ವಾಹನ ವ್ಯಸನವೆಂದರೆ ಆನೆ, ಕುದುರೆ ಮುಂತಾದ ವಾಹನಗಳ ವ್ಯಸನ (ಆಧುನಿಕ ಕಾಲದಲ್ಲಾದರೆ, ಯಾಂತ್ರಿಕ ವಾಹನಗಳ ವ್ಯಸನ).

೫. ಉತ್ಸಾಹ ವ್ಯಸನವೆಂದರೆ ಪುತ್ರ, ಮಿತ್ರ, ಸ್ತ್ರೀಯರ ಸಂಗವ ಬಯಸುವುದು.

೬. ವಿಶ್ವವ್ಯಸನವೆಂದರೆ, ಮನೆ, ಹೊಲ, ರಾಜ್ಯ ಮುಂತಾದ ಕ್ಷೇತ್ರಗಳನ್ನು ಬಯಸುವುದು.

೭. ಸೇವಕ (ಸೇವನ) ವ್ಯಸನವೆಂದರೆ, ತಿನ್ನಲಾರೆ, ಕುಡಿಯಲಾರೆ, ತೊಡಲಾರೆ, ಎಂಬ ವ್ಯಸನ. ಆಧ್ಯಾತ್ಮಿಕ ಉದ್ದೇಶವನ್ನುಳ್ಳವನು ಈ ಏಳು ವ್ಯಸನಗಳಿಂದ ದೂರನಾಗಿ, ಲಿಂಗವ್ಯಸನಿಯಾಗಿರಬೇಕೆಂಬುದು ಚೆನ್ನಬಸವಣ್ಣನವರ ಉಪದೇಶ.

..............
..............
ಇಂತೀ ಸಪ್ತವ್ಯಸನಂಗಳು:
ತನುವ್ಯಸನ ವಸ್ತು ಆಭರಣ ವೀಳೆಯ ಬಯಸೂದು,
ಮನವ್ಯಸನ ಕಳವು ಹುಸಿ ಪಾರದ್ವಾರವ ಬಯಸೂದು,
ಧನವ್ಯಸನ ರಾಜ್ಯವ ಬಯಸೂದು. (ಧನಧಾನ್ಯವ ಬಯಸೂದು?)
ವಾಹನವ್ಯಸನ ಆನೆ ಕುದುರೆ ಸೇನೆ ಬಯಸೂದು,
ವಿಶ್ವವ್ಯಸನ ಚತುರ್ವಿಧಕರ್ತವ್ಯ ಬಯಸೂದು,
ಉತ್ಸಾಹವ್ಯಸನ ಪುತ್ರ ಮಿತ್ರ ಕಳತ್ರವ ಬಯಸೂದು,
ಸೇವಕವ್ಯಸನ ಉಣಲಾರೆ, ಉಡಲಾರೆ ತೊಡಲಾರೆನೆಂದೆನುತ್ತಿಹುದು.
ಈ ಸಪ್ತವ್ಯಸನಂಗಳಂ ಬಿಟ್ಟು ಲಿಂಗವ್ಯಸನಿಯಾಗಬಲ್ಲರೆ
ಕೂಡಲಚೆನ್ನಸಂಗಯ್ಯನಲ್ಲಿ ಪ್ರಾಣಲಿಂಗಿಗಳೆಂಬೆನು. - ಚೆನ್ನಬಸಣ್ಣ

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಸಪ್ತಾಚಾರ ಸಪ್ತವರ್ಣಗಳ ಪರಿಣಾಮಗಳು Next