Previous ಸಗುಣ ನಿರ್ಗುಣ ಸಪ್ತವ್ಯಸನಗಳು Next

ಸಪ್ತಾಚಾರ

ಸಪ್ತಾಚಾರ

ಕೆಲವು ವಚನಕಾರರು ಆಚಾರಗಳನ್ನು ಪಂಚಾಚಾರಗಳೆಂದೂ, ಸಪ್ತಾಚಾರಗಳೆಂದೂ, ಏಕಾದಶ ಆಚಾರಗಳೆಂದೂ ಐವತ್ತು ಆಚಾರಗಳೆಂದೂ ಸರ್ವಾಚಾರವೆಂದೂ ವರ್ಗಿಕರಿಸಿದ್ದಾರೆ. ಇಲ್ಲಿ ಸಪ್ತಾಚಾರವೆಂದರೆ, ಕ್ರಿಯಾಚಾರ, ಜ್ಞಾನಾಚಾರ, ಭಾವಾಚಾರ, ಸತ್ಯಾಚಾರ, ನಿತ್ಯಾಚಾರ, ಧರ್ಮಾಚಾರ ಮತ್ತು ಸರ್ವಾಚಾರ ಎಂಬ ಏಳು ಆಚಾರಗಳು.

ಕ್ರಿಯಾಚಾರ : ಪಂಚಾಚಾರ, ಅಷ್ಟಾವರಣ ಮತ್ತು ಷಟ್‌ಸ್ಥಲಗಳ ಆಚರಣೆಗಳಲ್ಲಿ ಸಾಧಕನು ಪರಿಣಿತನಾಗಬೇಕು. ಅಂದರೆ, ಅವುಗಳನ್ನು ಪ್ರಯತ್ನಪೂರ್ವಕವಾಗಿ ಮಾಡದೆ, ಸಹಜವಾಗಿ ಮಾಡುವಷ್ಟು ಪರಿಣಿತನಾಗಬೇಕು. ಹೀಗೆ ಮಾಡುವುದರಿಂದ ಕರ್ಮೇಂದ್ರಿಯಗಳು ತಮ್ಮ ಪೂರ್ವಾಶ್ರಯವನ್ನು ಕಳೆದುಕೊಂಡು ಶುದ್ಧವಾಗುವುವು. ಆದರೆ ಕ್ರಿಯೆಗಳು ಯಾಂತ್ರಿಕವಾಗಿರದೆ, ನಿಷ್ಠೆಯಿಂದ ಕೂಡಿರಬೇಕು.

ಜ್ಞಾನಾಚಾರ : ಶರಣರು ತಮ್ಮ ವಚನಗಳಲ್ಲಿ ಹೇಳಿರುವುದನ್ನು ವಿನಯಪೂರ್ವಕವಾಗಿ ಪಾಲಿಸಬೇಕು. ಗುರುಹಿರಿಯರಲ್ಲಿ ಭಕ್ತಿ, ಗುರುಹಿರಿಯರ ದರ್ಶನ-ಸ್ಪರ್ಶನ ಸಂತರ್ಪಣೆ ಮಾಡಿ, ಅವರ ಸಂಗದಿಂದುಂಟಾಗುವ ಆಧ್ಯಾತ್ಮಿಕ ಲಾಭಗಳನ್ನು ಪಡೆದುಕೊಳ್ಳಬೇಕು.

ಭಾವಾಚಾರ : ಭಾವಾಚಾರವೆಂದರೆ ಸ್ವ-ಪರೀಕ್ಷೆ, ನಮ್ಮ ನಮ್ಮ ಗುಣಾವಗುಣಗಳನ್ನು ನಾವೇ ನಮ್ಮ ಅನುಭವದಿಂದ ತಿಳಿದು, ಅವಗುಣಗಳನ್ನು ತ್ಯಜಿಸಬೇಕು. ಅದರಲ್ಲೂ ಆಧ್ಯಾತ್ಮಿಕ ಜೀವನಕ್ಕೆ ಅಡ್ಡಿ ಮಾಡುವ ಕಾಮ ಕ್ರೋಧ ಮುಂತಾದ ಚಿತ್ತವಿಕಾರಗಳನ್ನು ತ್ಯಜಿಸಬೇಕು, ಹಾಗೂ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು.

ಸತ್ಯಾಚಾರ : ಕೊಟ್ಟ ಮಾತಿನಂತೆ ನಡೆಯುವುದು, ಬೋಧಿಸಿದಂತೆ ನಡೆಯುವುದು, ಸುಳ್ಳು ಹೇಳದೆ ಸತ್ಯವನ್ನಷ್ಟೇ ಹೇಳುವುದು ಸತ್ಯಾಚಾರವೆನಿಸಿಕೊಳ್ಳುತ್ತದೆ.

ನಿತ್ಯಾಚಾರ : ಇಲ್ಲದಿದುದಕ್ಕೆ ಆಶಿಸದೆ, ಬಂದುದನ್ನು ತಿರಸ್ಕರಿಸದೆ, ಏನೇ ಬಂದರೂ ಪ್ರಸಾದ ಭಾವದಿಂದ ಅಂದರೆ (ನಿತ್ಯ ಪ್ರಸಾದಿಯಂತೆ ನಡೆದುಕೊಳ್ಳುವುದೇ ನಿತ್ಯಾಚಾರ.

ಧರ್ಮಾಚಾರ : ಪ್ರಸಾದ ಪಾದೋಕವನ್ನಲ್ಲದೆ ಮತ್ತೇನನ್ನೂ ಸ್ವೀಕರಿಸದಿರುವುದು, ಯಾವಾಗಲೂ ಶಿವಮಂತ್ರವನ್ನು ಜಪಿಸುವುದು ಧರ್ಮಾಚಾರವೆನಿಸಿಕೊಳ್ಳುತ್ತದೆ.

ಸರ್ವಾಚಾರ : ಮೇಲೆ ಹೇಳಿದ ಎಲ್ಲ ಆಚಾರಗಳನ್ನೂ (ಸರ್ವಾಚಾರವನ್ನು) ಲಿಂಗಾಂಗ ಸಾಮರಸ್ಯದ ಸಲುವಾಗಿ ಹಾಗೂ ಅದು ಸಿದ್ದಿಸುವಂತೆ ಮಾಡುವುದೇ ಸರ್ವಾಚಾರ (೩:೯೪೫).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಸಗುಣ ನಿರ್ಗುಣ ಸಪ್ತವ್ಯಸನಗಳು Next