Previous ಪರಮಾತ್ಮ ಪ್ರಾಣಲಿಂಗ Next

ಬಿಂದು

ಬಿಂದು

೧. ಪ್ರಪಂಚದ ಸೃಷ್ಟಿಗೆ ಕಾರಣವಾದ ನಾದ, ಬಿಂದು, ಕಳೆ ಎಂಬ ಮೂರು ಅಂಶಗಳಲ್ಲಿ ಎರಡನೆಯದು; ಪ್ರಪಂಚಸೃಷ್ಟಿಗೂ ಮೊದಲಿನ ಶೂನ್ಯದಿಂದ ನಾದ, ಬಿಂದು, ಕಳೆಗಳು ಅನುಕ್ರಮವಾಗಿ ಉತ್ಪತ್ತಿಯಾಗುತ್ತವೆ. ನಾದದ ಒಂದು ಬಗೆಯ ಚಲನೆಯಿಂದ ಬಂದು ಉಂಟಾಗುವುದು. ಜಗತ್ತಿನ ಸಕಲವ್ಯಾಪಾರ- ಗಳಿಗೂ ಈ ಮೂರು ತತ್ತ್ವಗಳು ಕಾರಣವಾಗಿರುತ್ತವೆ ;
ಏನೂ ಏನೂ ಇಲ್ಲದಂದು ಬಯಲು ಬಲಿದು ಒಂದು ಬಿಂದುವಾಯಿತ್ತು ನೋಡಾ ಆ ಬಿಂದು ಅಕ್ಷರತ್ರಯದ ಗದ್ದುಗೆಯಲ್ಲಿ ಕುಳ್ಳಿರಲು ಓಂಕಾರ ಉತ್ಪತ್ತಿಯಾಯಿತ್ತು (ಚೆನ್ನಬ, ಸಮವ. ೩-೨೨೦-೭೮೫); ತನ್ನ ಲೀಲಾವಿಲಾಸದಿಂದ ತಾನೆ ಸುನಾದ ಬಿಂದು ಪ್ರಕಾಶ. ತೇಜೋಮೂರ್ತಿಯಾಗಿ ನಿಂದು ಮಹಾಲಿಂಗವೆಂದೆನಿಸಿತ್ತು ಅಕ್ಕಮ. ಸಮವ. ೫-೧೯-೪೮); ನಾದದೊಳಗಣ ; ಚಿನ್ನಾದವ ತೋರಿಸಯ್ಯಾ ಬಿಂದುವೊಳಗಣ ಚಿದ್ಬಿಂದುವ ತೋರಿಸಯ್ಯಾ ಕಲೆಯೊಳಗಣ ಚಿತ್ಕಲೆಯ ತೋರಿಸಯ್ಯಾ (ಜಕ್ಕಣ. ಸಮವ. ೧೦-೬೬೩-೧೫೧೭);

೨. ಪ್ರಣವದಿಂದ ಹೊರಹೊಮ್ಮಿದ ತಾರಕ, ದಂಡಕ, ಕುಂಡಲಿ, ಅರ್ಧೆಂದು ಮತ್ತು ಬಿಂದು ಎಂಬ ಪಂಚಲಕ್ಷಣಗಳಲ್ಲಿ ಒಂದು ;

೩. ಸಕಲ ಜೀವರಾಶಿಯನ್ನೂ ಹುರುಪುಗೊಳಿಸುವ ಪಂಚಶಕ್ತಿಗಳಲ್ಲಿ ಒಂದಾದ ಪರಾಶಕ್ತಿಯಲ್ಲಿರುವ ಬಿಂದು, ಕುಂಡಲಿನಿ ಮತ್ತು ಮಾಯೆ ಎಂಬ ಮೂರು ಪ್ರಕಾರಗಳಲ್ಲಿ ಒಂದು ;

೪. ತ್ರಿವಿಧತತ್ತ್ವಗಳಲ್ಲಿ ಒಂದಾದ ಪಾಶದ ಐದು ವಿಭಾಗಗಳಲ್ಲಿ ಒಂದು ; ಆ ಪಾಶವೇ ಮಲ ಮಾಯೆ ಕರ್ಮ ಬಿಂದು ತಿರೋಧಾನವೆಂದು ಪಂಚವಿಧವಹುದು (ವಿವೇಕ. ೧೩೮);

೫. ಶೂನ್ಯಸ್ಥಿತಿ ಮುಗಿದು, ಪರಶಿವನಿಗೆ ಸೃಷ್ಟಿಮಾಡಬೇಕೆನಿಸಿದಾಗ, ಅವನಲ್ಲೇ ಅವಿನಾಭಾವದಿಂದ ಇರುವ ಅವನ ಅಸ್ಪಷ್ಟರೂಪದ ಶಕ್ತಿಯು ಅವನಿಂದ ಪ್ರತ್ಯೇಕವಾಗುತ್ತದೆ. ಈ ಆದಿ ರೂಪದ ಶಕ್ತಿಯೇ ಬಿಂದು.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಪರಮಾತ್ಮ ಪ್ರಾಣಲಿಂಗ Next