Previous ಅನಾದಿ ದಶವಿಧಪಾದೋದಕ Next

ಗುರುಲಿಂಗ

ಗುರುಲಿಂಗ

೧. ಸಾಧಕನು ಮಹೇಶ ಸ್ಥಲದಲ್ಲಿರುವಾಗ ಗುರುಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಗುರುಲಿಂಗ ಸ್ವಾಧಿಷ್ಠಾನ ಚಕ್ರದ ಮಧ್ಯದಲ್ಲಿದೆ, ಕುಂಡಲಿನಿ ಶಕ್ತಿಯು ಮೊದಲು ಆಧಾರ ಚಕ್ರವನ್ನು ಭೇದಿಸಿ, ಆ ಮೇಲೆ ಸ್ವಾಧಿಷ್ಠಾನ ಚಕ್ರವನ್ನು ಭೇದಿಸಿದಾಗ, ಸಾಧಕನು ಅಲ್ಲಿರುವ ಗುರುಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆಂಬುದು ವಚನಕಾರರ ಸಿದ್ಧಾಂತ.

೨. ಕೆಲವು ವೇಳೆ ಗುರುವನ್ನೇ ಗುರುಲಿಂಗವೆಂದು ಕರೆಯುವುದುಂಟು (ಜಂಗಮನನ್ನು ಜಂಗಮಲಿಂಗ ಎಂದು ಕರೆದಂತೆ). ಇದಕ್ಕೆ ಕಾರಣವೇನೆಂದರೆ - ಗುರುವಾದವನು ಲಿಂಗಾಂಗ ಸಾಮರಸ್ಯವನ್ನು ಪಡೆದಿರುವುದರಿಂದ ತಾನೇ ಲಿಂಗವೆಂದು ನಂಬುತ್ತಾನೆ. ಹೀಗೆ ಲಿಂಗೈಕ್ಯವನ್ನು ಪಡೆಯದೆಯೇ ಗುರುವೆನಿಸಿಕೊಳ್ಳಲು ಬರುವುದಿಲ್ಲ. ಲಿಂಗಾಂಗ ಸಾಮರಸ್ಯ ಪಡೆಯೆದೆಯೇ ಶಿಷ್ಯರಿಗೆ ಬೋಧನೆ ಮಾಡಿದರೆ ಅದು ಒಬ್ಬ ಕುರುಡ ಇನ್ನೊಬ್ಬ ಕುರುಡನಿಗೆ ಮಾರ್ಗದರ್ಶನ ಮಾಡಿದಂತೆ.

ಷಟ್‌ಸ್ಥಲಗಳಿಗೆ ಅನುಗುಣವಾಗಿರುವ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ ಮತ್ತು ಮಹಾಲಿಂಗ ಎಂಬ ಷಡ್ವಿಧಲಿಂಗಗಳಲ್ಲಿ ಒಂದು; ಗುರುರೂಪದಲ್ಲಿರುವ ಲಿಂಗ; ಇದು ಕ್ರಿಯಾಗಮ, ಭಾವಾಗಮ, ಜ್ಞಾನಾಗಮ, ಸಕಾಯ, ಅಕಾಯ, ಪರಕಾಯ, ಧರ್ಮಾಚಾರ, ಭಾವಾಚಾರ ಮತ್ತು ಜ್ಞಾನಾಚಾರ ಎಂದು ಒಂಬತ್ತು ವಿಧಗಳಾಗಿವೆ. ಲಿಂಗನಿಷ್ಠನಾದವನು ಷಟ್‌ಚಕ್ರಗಳ ಮೂಲಕ ತನ್ನ ದೇಹದಲ್ಲಿ ಹರಿಯುವ ಶಕ್ತಿಗಳನ್ನು ಲಿಂಗಮುಖವನ್ನಾಗಿ ಮಾಡಿದಾಗ ಗುರುಲಿಂಗವು ಸ್ವಾಧಿಷ್ಠಾನ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ಇದು ಮಹೇಶ್ವರನಿಗೆ ಸಂಬಂಧಪಟ್ಟಿದೆ. ಮನುಷ್ಯನ ಚಿತ್ರ ಬುದ್ದಿ, ಅಹಂಕಾರ, ಮನ, ಜ್ಞಾನ ಮತ್ತು ಭಾವಗಳ ಮೂಲಕ ಕ್ರಿಯೆಗಳು ನಡೆಯುತ್ತವೆ. ಇವುಗಳಲ್ಲಿ ಬುದ್ಧಿಯು ಗುರುಲಿಂಗಕ್ಕೆ ಸಂಬಂಧಿಸಿದೆ. ಗುರುಲಿಂಗದ ಪ್ರಧಾನಲಕ್ಷಣ ಮಂತ್ರಗಳು, ಈ ಮಂತ್ರಗಳು ಆಚಾರಲಿಂಗದೊಡನೆ ಬೆರೆತಾಗ ಗುರುಲಿಂಗದಲ್ಲಿಯ ಆಚಾರಲಿಂಗ, ಗುರುಲಿಂಗದೊಡನೆ ಬೆರೆತಾಗ ಗುರುಲಿಂಗದಲ್ಲಿಯ ಗುರುಲಿಂಗ, ಶಿವಲಿಂಗದೊಡನೆ ಬೆರೆತಾಗ ಗುರುಲಿಂಗದಲ್ಲಿಯ ಶಿವಲಿಂಗ, ಜಂಗಮಲಿಂಗದೊಡನೆ ಬೆರೆತಾಗ ಗುರುಲಿಂಗದಲ್ಲಿಯ ಜಂಗಮಲಿಂಗ, ಪ್ರಸಾದಲಿಂಗದೊಡನೆ ಬೆರೆತಾಗ ಗುರುಲಿಂಗ- ದಲ್ಲಿಯ ಪ್ರಸಾದಲಿಂಗ ಹಾಗೂ ಮಹಾಲಿಂಗದೊಡನೆ ಬೆರೆತಾಗ ಗುರುಲಿಂಗದಲ್ಲಿಯ ಮಹಾಲಿಂಗ ಎಂಬ ಆರು ಬಗೆಯ ಸ್ವರೂಪಗಳನ್ನು ಪಡೆಯುತ್ತವೆ. ಈ ರೀತಿ ಸಂಬಂಧಿಸಿದಾಗ ಆಯಾಯ ಸ್ಥಲಗಳಿಗೆ ಅನುಕ್ರಮವಾಗಿ ಸತ್ನಿಯೆಯಿಂದ ಕ್ರಿಯಾದೀಕ್ಷೆ, ಮಂತ್ರಾನುಗ್ರಹದಿಂದ ಮಂತ್ರದೀಕ್ಷೆ, ಗುರುವಿನ ಹಸ್ತಮಸ್ತಕ ಸಂಯೋಗದಿಂದ ವೇಧಾದೀಕ್ಷೆ, ತ್ರಿವಿಧಲಿಂಗಜ್ಞಾನದ ಮೂಲಕ ಬೋಧಾದೀಕ್ಷೆ, ಅನುಗ್ರಹಿಸುವುದರ ಮೂಲಕ ಪ್ರಸನ್ನ ದೀಕ್ಷೆ ಮತ್ತು ತಾನೇ ಮೋಕ್ಷಸ್ವರೂಪವೆಂದು ಕರುಣಿಸುವುದರಿಂದ ನಿರ್ವಾಣದೀಕ್ಷೆ ಆರು ಪ್ರಕಾರದ ಕ್ರಿಯೆಗಳು ಮನುಷ್ಯನಿಗೆ ಪ್ರಾಪ್ತವಾಗುವುವು ;

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಅನಾದಿ ದಶವಿಧಪಾದೋದಕ Next