Previous ಶೈವ ಪ್ರಭೇದ ಷಟ್‌ಸ್ಥಲ ಬ್ರಹ್ಮ Next

ಶೈವಸಿದ್ಧಾಂತ

ಶೈವಸಿದ್ಧಾಂತ

ಶೈವ ಸಿದ್ಧಾಂತ ಅಥವಾ ತಮಿಳು ಶೈವದಲ್ಲಿ ಶಿವನೇ ಪ್ರಮುಖ. ಅದರ ದರ್ಶನದಲ್ಲಿ ಶಿವನು ಶಕ್ತಿಯೆಂಬ ಕರಣದ ಮೂಲಕ, ಮಾಯೆ ಅಥವಾ ಪ್ರಕೃತಿಯಿಂದ ಜಗತ್ತನ್ನು ಸೃಷ್ಟಿಸುತ್ತಾನೆ. ಮಾಯೆಯು ಮನುಷ್ಯನಿಗೆ ಬಂಧನವನ್ನುಂಟು ಮಾಡುವುದರಿಂದ, ಅದಕ್ಕೆ ಪಾಶವೆಂದು ಹೆಸರು. ಜೀವಾತ್ಮನಿಗೆ ಪಶು ಎಂದು ಹೆಸರು. ಅವನು ಬಂಧನದಲ್ಲಿದ್ದಾಗ ಪಶು. ಬಂಧನದಲ್ಲಿದ್ದಾಗ, ಪ್ರಾಣಿಯಂತೆ, ಅಜ್ಞಾನಿಯಾದುದರಿಂದ ಅವನು ಪಶು. ಶಿವನ ಅನುಗ್ರಹದಿಂದ ಅವನು ಮೋಕ್ಷ ಪಡೆಯುವುದರಿಂದ, ಹಾಗೂ ಶಿವನೇ ಎಲ್ಲ ಪಶುಗಳ ಒಡೆಯನಾದುದರಿಂದ, ಶಿವನೇ ಪಶುಪತಿ. ಹೀಗೆ ಶೈವ ಸಿದ್ಧಾಂತದಲ್ಲಿ ಪಶು, ಪಾಶ, ಪಶುಪತಿ ಪ್ರಧಾನ ಪರಿಕಲ್ಪನೆಗಳಾಗಿವೆ.

ಶೈವ ಸಿದ್ಧಾಂತಿಗಳು ದ್ವೈತಿಗಳು. ಅವರ ಪ್ರಕಾರ, ಶಿವ ತಾನೇ ಜಗವಾಗುವುದಿಲ್ಲ, ಅವನು ಪ್ರಕೃತಿಯನ್ನು ಮಾರ್ಪಡಿಸುತ್ತಾನೆ. ಕುಂಬಾರನು ಮಣ್ಣಿಗೆ ಹೇಗೆ ವಿವಿಧ ರೂಪ ಕೊಡುವ ಮೂಲಕ ವಿವಿಧ ರೀತಿಯ ಮಡಕೆ, ಹೂಜಿ, ಮುಂತಾದವುಗಳನ್ನು ರಚಿಸುತ್ತಾನೋ, ಹಾಗೆ ಶಿವನು ಪ್ರಕೃತಿಗೆ ವಿವಿಧ ರೂಪಗಳನ್ನು ಕೊಡುವ ಮೂಲಕ ಪ್ರಪಂಚದ ವಿವಿಧ ವಸ್ತುಗಳನ್ನು ರಚಿಸುತ್ತಾನೆ.

ಶೈವಸಿದ್ಧಾಂತಿಗಳ ಪ್ರಕಾರ, ಮೋಕ್ಷ ಪಡೆದ ಆತ್ಮ ಶಿವಲೋಕಕ್ಕೆ ಹೋಗಿ, ಅಲ್ಲಿ ನಿರಂತರ ಶಿವಸಾನಿಧ್ಯದಲ್ಲಿರುತ್ತದೆ. ಜೀವನು ಶಿವನಾಗುತ್ತಾನೆಂಬ ಮಾತನ್ನು ಅವರು ಒಪ್ಪುವುದಿಲ್ಲ.

ಶೈವಸಿದ್ಧಾಂತವು ಭಕ್ತಿ ಪ್ರಧಾನ ಪಂಥ, ಅವರ ಅರವತ್ತು ಮೂರು ಪುರಾತನರೇ ವಚನಕಾರರಿಗೆ ಆದರ್ಶ ಪುರುಷರು. ಶೈವಸಿದ್ಧಾಂತದ ಪ್ರತಿಪಾದಕರೂ ಸಂಸ್ಕೃತದಲ್ಲಿ ಬರೆಯದೆ, ತಮ್ಮ ಅನುಭವಗಳನ್ನು ತಮಿಳಿನಲ್ಲಿ ಬರೆದು, ತಮ್ಮ ಸಂದೇಶವನ್ನು ಜನಸಾಮಾನ್ಯರಿಗೆ ಮುಟ್ಟಿಸಿದರು. ಅವರೂ ಜಾತಿಮತಪಂಥಗಳನ್ನು ತಿರಸ್ಕರಿಸಿ, ಶಿವಭಕ್ತರೆಲ್ಲ ಒಂದೇ ಎಂದು ಸಾರಿದರು.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಶೈವ ಪ್ರಭೇದ ಷಟ್‌ಸ್ಥಲ ಬ್ರಹ್ಮ Next