Previous ನಿವೃತ್ತಿ ಚಕ್ರ Next

ಚತುರ್ವಿಧ ಫಲ ಪದವಿ

ಚತುರ್ವಿಧ ಫಲ ಪದವಿ

ಸಾಮಾನ್ಯವಾಗಿ ಇದಕ್ಕೆ ಮೋಕ್ಷದ ನಾಲ್ಕು ಹಂತಗಳು ಎಂಬ ಅರ್ಥವಿದೆ. ದ್ವೈತ ವೈಷ್ಣವರೂ, ದ್ವೈತ ಶೈವ ಸಿದ್ಧಾಂತಿಗಳೂ ಶುದ್ಧಾತ್ಮನು ನಾಲ್ಕು ಉತ್ತಮ ಪದ (ಪದವಿಗಳನ್ನು ಪಡೆಯುತ್ತಾನೆ ಎನ್ನುತ್ತಾನೆ. ಅವೆಂದರೆ, ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ ಮತ್ತು ಸಾಯುಜ್ಯ ಶುದ್ಧಾತ್ಮನು ಮೊದಲು ಪರಮಾತ್ಮನು ಇರುವ ಲೋಕಕ್ಕೆ (ಸಾಲೋಕ್ಯ) ಹೋಗುತ್ತಾನೆ. ಅನಂತರ ಪರಮಾತ್ಮನ ಸಾಮೀಪ್ಯವನ್ನು ಪಡೆಯುತ್ತಾನೆ: ಪರಮಾತ್ಮನಂತೆ ಶುದ್ಧನಾಗಿ ಸಾರೂಪ್ಯನಾಗುತ್ತಾನೆ ಕೊನೆಯಲ್ಲಿ ಪರಮಾತ್ಮನೊಂದಿಗೆ ಬೆರೆಯುತ್ತಾನೆ (ಆದರೆ ಪರಮಾತ್ಮನಾಗುವುದಿಲ್ಲ). ಈ ರೀತಿಯ ನಾಲ್ಕು ರೀತಿಯ ಫಲಪದಗಳು ಆಧ್ಯಾತ್ಮಿಕ ಜೀವನಕ್ಕೆ ಸಿಕ್ಕ ಬಹುಮಾನ. ಈ ಸಿದ್ದಾಂತವು ವಚನಕಾರರಿಂದ ತಿರಸ್ಕರಿಸಲ್ಪಟ್ಟಿದೆ. ಏಕೆಂದರೆ, ಅವರ ಪ್ರಕಾರ, ಇಹಲೋಕ ಮತ್ತು ವೈಕುಂಠ ಅಥವಾ ಕೈಲಾಸ ಎಂಬ ಎರಡು ಲೋಕಗಳಿಲ್ಲ. ಎರಡನೆಯದಾಗಿ ನಾವು ಅತ್ಯಂತ ಶ್ರೇಷ್ಠವಾದ ಶಿವಸಾಯುಜ್ಯವನ್ನು ಈ ಜನ್ಮದಲ್ಲೇ ಸಾಧಿಸಿಕೊಳ್ಳಬೇಕೇ ಹೊರತು, ಸತ್ತನಂತರವಲ್ಲ.

ಕೆಲವು ವಚನಕಾರರ ಪ್ರಕಾರ, ಚತುರ್ವಿಧ ಫಲಪದವೆಂದರೆ, ಐಹಿಕ ಜೀವನದಲ್ಲೇ ಸಾಧಿಸಿಕೊಳ್ಳಬೇಕಾದ ನಾಲ್ಕು ರೀತಿಯ ಪದವಿಗಳು. ಅವೆಂದರೆ, ಗುರು, ಲಿಂಗ, ಜಂಗಮ ಮತ್ತು ಪ್ರಸಾದ, ಮಾನವ ಜೀವನದ ಅತ್ಯಂತ ಶ್ರೇಷ್ಠ ಧೈಯ ಲಿಂಗೈಕ್ಯ ಪ್ರಾಪ್ತಿಯೇ ಆದರೂ, ಆ ಧೈಯ ನಾಲ್ಕು ರೂಪಗಳಲ್ಲಿ ವ್ಯಕ್ತವಾಗುತ್ತದೆ. ಲಿಂಗಾಂಗ ಸಾಮರಸ್ಯದ ಮೂಲಕ ಜ್ಞಾನ (ಅರಿವು) ಪಡೆದವನೇ ಗುರು; ಹೀಗೆ, ಮೋಕ್ಷ ಪಡೆಯುವುದೆಂದರೂ ಒಂದೇ, ಗುರುಪದವಿಯನ್ನು ಪಡೆಯುವುದೆಂದರೂ ಒಂದೇ; ಅದೇ ರೀತಿ ಗುರುವು ಲಿಂಗದೊಡನೆ ಸಾಮರಸ್ಯಪಡೆದಿರುವುದರಿಂದ ಗುರು ಮತ್ತು ಲಿಂಗ ಸಮಾನ: ಹಾಗೆಯೇ ಜಂಗಮ ಸಹ ಗುರುವಿನಂತೆ ಲಿಂಗಸಮಾನ. ಆದುದರಿಂದ ಇವು ಮೂರು ಪದವಿಗಳೂ ಒಂದೇ ಪದವಿ. ತನ್ನ ಶರೀರ, ಕರಣಗಳು, ಆತ್ಮ ಮುಂತಾದುವುಗಳೆಲ್ಲವೂ ತನ್ನವಲ್ಲ ಪರಶಿವನ ಪ್ರಸಾದವೆಂದು ತಿಳಿದವನು (ಅಥವಾ ತಾನೇ ಪ್ರಸಾದವೆಂದು ತಿಳಿದವನು) ಮುಕ್ತ. ಹೀಗೆ ಜೀವಂತವಿದ್ದಾಗಲೇ ಈ ಚತುರ್ವಿಧ ಫಲ ಪದವಿಯನ್ನು ಪಡೆಯಬೇಕು.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ನಿವೃತ್ತಿ ಚಕ್ರ Next