Previous ಮಹಾಲಿಂಗ ಮಹೇಶ್ವರನಿಗೆ ಅಪ್ಪು ಅಂಗ Next

ಮಹಾಲಿಂಗದಲ್ಲಿ ಮಿಶ್ರಾರ್ಪಣ

ಮಹಾಲಿಂಗದಲ್ಲಿ ಮಿಶ್ರಾರ್ಪಣ

ಮಿಶ್ರಾರ್ಪಣ ಸಿದ್ಧಾಂತದ ಪ್ರಕಾರ, ಪ್ರತಿಯೊಂದು ಲಿಂಗದಲ್ಲಿ ಉಳಿದ ಲಿಂಗಗಳಿವೆ. ಆಚಾರಲಿಂಗದಲ್ಲಿ ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ ಮತ್ತು ಮಹಾಲಿಂಗಗಳಿರುವಂತೆ, ಗುರುಲಿಂಗದಲ್ಲಿ ಆಚಾರಲಿಂಗ, ಶಿವಲಿಂಗ, ಇತ್ಯಾದಿ ಲಿಂಗಗಳಿವೆ. ಆಚಾರಲಿಂಗವು ಪೃಥ್ವಿ ತತ್ವದ ಪ್ರತೀಕವಾದ ಆಧಾರ ಚಕ್ರದಲ್ಲಿದ್ದು, ಅದಕ್ಕೆ ಅರ್ಪಿಸಿದ ವಸ್ತುವು, ಅದರೊಳಗಿರುವ ಉಳಿದ ಲಿಂಗಗಳಿಗೂ ಅರ್ಪಿಸಿದಂತೆಯೇ. ಇದನ್ನು ಮಹಾಲಿಂಗಕ್ಕೆ ಸಂಬಂಧಿಸಿದಂತೆ ಆದಯ್ಯ ಹೀಗೆ ವಿವರಿಸುತ್ತಾನೆ :

ಆಚಾರಲಿಂಗವೂ ಅದರಲ್ಲಿರುವ ಉಳಿದ ಐದು ಲಿಂಗಗಳೂ ಭಕ್ತನು ಅರ್ಪಿಸಿದ ಚಿಗುರು, ಮೊಗ್ಗು, ಹಣ್ಣು, ಮುಂತಾದುವುಗಳ ಗಂಧವನ್ನರಿಯುತ್ತವೆ: ಗುರುಲಿಂಗವೂ ಅದರೊಳಗಿರುವ ಉಳಿದ ಲಿಂಗಗಳೂ ಅರ್ಪಿತವಾದ ರುಚಿಯ ವಿವಿಧ ಪ್ರಕಾರಗಳನ್ನು ಅರಿಯುತ್ತವೆ; ಶಿವಲಿಂಗವೂ, ಅದರೊಳಗಿರುವ ಉಳಿದ ಲಿಂಗಗಳೂ ಅರ್ಪಿತವಾದ ವಿವಿಧ ಬಣ್ಣಗಳನ್ನು ಅರಿಯುತ್ತವೆ; ಜಂಗಮಲಿಂಗವೂ ಅದರೊಳಗಿರುವ ಉಳಿದ ಲಿಂಗಗಳೂ, ಅರ್ಪಿತವಾದ ವಿವಿಧ ಪ್ರಕಾರವಾದ ಸ್ಪರ್ಶವನ್ನು ಅರಿಯುತ್ತವೆ; ಪ್ರಸಾದ ಲಿಂಗವೂ ಅದರೊಳಗಿರುವ ವಿವಿಧ ಲಿಂಗಗಳೂ ಅರ್ಪಿತವಾದ ವಿವಿಧ ರೀತಿಯ ಶಬ್ದಗಳನ್ನು (ಗಂಟೆ, ಜಾಗಟೆ, ವೀಣೆ, ಶಂಖ ಮೊದಲಾದವುಗಳನ್ನು) ಅರಿಯುತ್ತವೆ. ಹೀಗೆ ಪ್ರತಿಯೊಂದು ಲಿಂಗಕ್ಕೂ ಮಾಡಿದ ವಿವಿಧ ರೀತಿಯ ರೂಪ, ವಿವಿಧ ರೀತಿಯ ರುಚಿ, ಮಿಶ್ರಾರ್ಪಣವೆನಿಸಿಕೊಳ್ಳುತ್ತವೆ. ಆದರೆ ಮಹಾಲಿಂಗಕ್ಕೆ ಅರ್ಪಿತವಾಗುವ ಮಿಶ್ರಾರ್ಪಣಗಳು ಇವೆಲ್ಲವುಗಳ ಮೊತ್ತ, ಹೇಗೆಂದರೆ :

ಆಚಾರಲಿಂಗಕ್ಕೆ ಗಂಧಗಳ ಮಿಶ್ರಾರ್ಪಣೆಯನ್ನೂ, ಗುರುಲಿಂಗಕ್ಕೆ ರುಚಿಗಳ ಮಿಶ್ರಾರ್ಪಣವನ್ನೂ (ಇತ್ಯಾದಿ) ಮಾಡಿದರೆ, ಮಹಾಲಿಂಗಕ್ಕೆ, ಆಚಾರಲಿಂಗದ ಮಿಶ್ರಾರ್ಪಣೆಯ ತೃಪ್ತಿಯನ್ನೂ, ಗುರುಲಿಂಗದ ಮಿಶ್ರಾರ್ಪಣೆಯ ತೃಪ್ತಿಯನ್ನೂ, ಹಾಗೆಯೇ ಉಳಿದ ಲಿಂಗಗಳ ಮಿಶ್ರಾರ್ಪಣೆಯ ತೃಪ್ತಿಯನ್ನೂ ಅರ್ಪಿಸಲಾಗುವುದು. (೬:೧೦೨೦) (ನೋಡಿ : ಮಿಶ್ರಷಡುಸ್ಥಲ)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಮಹಾಲಿಂಗ ಮಹೇಶ್ವರನಿಗೆ ಅಪ್ಪು ಅಂಗ Next