Previous ಸ್ಥಲ ಹಸ್ತಗಳು (ಸುಹಸ್ತಗಳು) Next

ಸ್ಥಾವರಲಿಂಗ

ಸ್ಥಾವರಲಿಂಗ

ವಚನಕಾರರು ಇದನ್ನು ಎರಡು ಅರ್ಥಗಳಲ್ಲಿ ಬಳಸಿದ್ದಾರೆ.

೧. ಸ್ಥಿರವಾದ ಅಥವಾ ಚಲಿಸದ ಲಿಂಗ, ಗುಡಿಯಲ್ಲಿ ಅಥವಾ ಮಠ ಅಥವಾ ಮನೆಗಳಲ್ಲಿ ಪ್ರತಿಷ್ಠಾಪಿತವಾಗಿರುವ ಲಿಂಗಗಳೆಲ್ಲ ಸ್ಥಾವರ ಲಿಂಗಗಳೇ. ಈ ಅರ್ಥದಲ್ಲಿ ಸ್ಥಾವರ ಲಿಂಗವು ಇಂದ್ರಿಯಗೋಚರ, ಕಲ್ಲಿನಲ್ಲಿ ಮಾಡಿದ, ಒಂದು ವಿಶಿಷ್ಟ ಆಕಾರ ಮತ್ತು ಗಾತ್ರದ ಲಿಂಗ, ಇದು ಸಾಂಪ್ರದಾಯಿಕ ಹಿಂದೂಗಳ ಪ್ರಕಾರ, ಪರಶಿವನ ಪ್ರತೀಕವಾದರೂ, ವಚನಕಾರರು ಸ್ಥಾವರಲಿಂಗ ಪೂಜೆಯನ್ನು ಕಟುವಾಗಿ ಖಂಡಿಸಿದ್ದಾರೆ.

೨. ಲಿಂಗ (ಪರಶಿವ) ಯಾವಾಗಲೂ ಸ್ಥಾವರವೇ (ಅಚಲವೇ. ಇರುವುದೆಲ್ಲ ಪರಶಿವನೇ ಆಗಿರುವುದರಿಂದಲೂ, ಎಲ್ಲೆಲ್ಲಿಯೂ ಅವನೇ ಇರುವುದರಿಂದಲೂ ಅವನು ಚಲಿಸುತ್ತಾನೆಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅವನು ಚಲಿಸುತ್ತಾನೆಂದು ಕಲ್ಪಿಸಿಕೊಳ್ಳಬೇಕಾದರೆ, ಅವನಿರುವ ಮತ್ತು ಅವನಿಲ್ಲದ ಸ್ಥಳಗಳನ್ನು ಮೊದಲು ಕಲ್ಪಿಸಿಕೊಂಡು, ಅವನಿರುವ ಸ್ಥಳದಿಂದ, ಈಗಿಲ್ಲದ ಸ್ಥಳಕ್ಕೆ ಚಲಿಸುತ್ತಿದ್ದಾನೆಂದು ಕಲ್ಪಿಸಿಕೊಳ್ಳಬೇಕಾಗುತ್ತದೆ. ಆದರೆ ಅವನಿಲ್ಲದ ಸ್ಥಳವೇ ಇಲ್ಲವೆಂದ ಮೇಲೆ, ಅವನು ಚಲಿಸಲು ಸಾಧ್ಯವೇ ಇಲ್ಲ. ಆಗ ಅವನು ಸ್ಥಾವರ ಮಾತ್ರ. ಬಸವಣ್ಣನವರು ಸ್ಥಾವರ ಜಂಗಮ ಒಂದೇ (೧:೧೮೭) ಎಂದು ಹೇಳುವಾಗ, ತಿರುಗಾಡುವ ಲಿಂಗವಾದ ಜಂಗಮನೂ, ಸ್ಥಾವರನಾದ ಪರಶಿವನೂ ಒಂದೇ ಹೊರತು, ಬೇರೆಬೇರೆಯಲ್ಲ ಎಂಬ ಅರ್ಥ ಅವರ ಮಾತಿಗಿದೆ. ಹಾಗೆಯೇ "ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು ಎಂದಾಗಲೂ, ಜಂಗಮನಿಗೆ ಎರೆದರೆ, ಪರಶಿವ ನೆನೆದಂತೆ ಎಂಬರ್ಥವಾಗುತ್ತದೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಸ್ಥಲ ಹಸ್ತಗಳು (ಸುಹಸ್ತಗಳು) Next