ಸ್ಥಾವರಲಿಂಗ | ಹದಿನಾಲ್ಕು ತೆರನ ಭಕ್ತಿ |
ಹಸ್ತಗಳು (ಸುಹಸ್ತಗಳು) |
ಆಧ್ಯಾತ್ಮಿಕ ಸಾಧನೆಯ ಪ್ರಥಮ ಹಂತದಲ್ಲಿ ಸಾಧಕನು ಆಹಾರವನ್ನು ಲಿಂಗಕ್ಕೆ ತನ್ನ ಕೈಯಿಂದ ನೈವೇದ್ಯ (ಅರ್ಪಣೆ) ಮಾಡುತ್ತಾನೆ. ಆದರೆ ಜಗತ್ತು, ಜೀವ ಮತ್ತು ಪರಶಿವ ಇವರ ಬಗೆಗಿನ ತನ್ನ ಜ್ಞಾನ ಹೆಚ್ಚಾದಂತೆಲ್ಲಾ ಕೇವಲ ತಿನ್ನುವ ಆಹಾರ ಪದಾರ್ಥಗಳನ್ನಷ್ಟೇ ಅಲ್ಲ, ಇತರ ಆಹಾರಗಳನ್ನೂ ಅವನು ಅರ್ಪಿಸಲು ಪ್ರಾಂಭಿಸುತ್ತಾನೆ. ರೂಪ, ರಸ, ಗಂಧ, ಸ್ಪರ್ಶನ ಮತ್ತು ಶಬ್ದ ಇವು ಕ್ರಮವಾಗಿ ಕಣ್ಣು, ನಾಲಗೆ, ಮೂಗು, ಚರ್ಮ ಮತ್ತು ಕಿವಿಗಳ ಆಹಾರಗಳು (ವಿಷಯಗಳು). ಆದರೆ ತಿನ್ನುವ ಆಹಾರವನ್ನು ಕೈಯಿಂದ ಅರ್ಪಿಸುವಂತೆ ಉಳಿದ ಆಹಾರಗಳನ್ನು (ಐಂದ್ರಿಕ ವಿಷಯಗಳನ್ನು) ಕೈಯಿಂದ ಅರ್ಪಿಸಲು ಬರುವುದಿಲ್ಲ. ಅಲ್ಲದೆ, ತಿನ್ನುವ ಆಹಾರವನ್ನು ಅವನು ಒಂದು ನಿರ್ದಿಷ್ಟ ಸಮಯದಲ್ಲಿ ಮತ್ತು ಒಂದು ನಿರ್ದಿಷ್ಟ ಸ್ಥಳದಲ್ಲಿ ಅರ್ಪಿಸುತ್ತಾನೆ. ಆದರೆ ಇಂದ್ರಿಯ ವಿಷಯಗಳಿಗೆ ಈ ಕಾಲದೇಶಗಳ ಮಿತಿಯಿಲ್ಲ. ಭಕ್ತನು ಅವುಗಳನ್ನು ಅವು ಎಲ್ಲಿವೆಯೊ ಅಲ್ಲಿಂದಲೆ, ಅಂತಃಕರಣದಲ್ಲಿ ಅರ್ಪಿಸುತ್ತಾನೆ. ಹೀಗೆ ಅವನ ಅತಃಕರಣ ಚತುಷ್ಟಯವು ಸಾಂಕೇತಿಕವಾಗಿ ಅಥವಾ ಆಲಂಕಾರಿಕ ಹಸ್ತವೆನಿಸಿಕೊಳ್ಳುತ್ತವೆ. ಆರು ಲಿಂಗಗಳಿಗೆ ಆರು ಹಂತದ ಸಾಧಕನು ಯಾವಾವ ಆಹಾರವನ್ನು ಯಾವಾವ ಸುಹಸ್ತದಿಂದ ಅರ್ಪಿಸುತ್ತಾನೆ ಎಂಬುದಕ್ಕೆ ವಿವರ ಹೀಗಿದೆ :
೧. ಸಾಧಕನು ಭಕ್ತಸ್ಥಲದಲ್ಲಿರುವಾಗ ತನ್ನ ಪಂಚಭೂತಗಳಲ್ಲೊಂದಾದ ಪೃಥ್ವಿತತ್ವದಲ್ಲಿರುವ ಸುಗಂಧವನ್ನು ಸದ್ಭಕ್ತಿ (ಶ್ರದ್ಧಾ)ಭಕ್ತಿಯಿಂದ ಸುಚಿತ್ರ ಹಸ್ತದಿಂದ ಆಚಾರಲಿಂಗಕ್ಕೆ ಅರ್ಪಿಸುತ್ತಾನೆ. ಸುಚಿತ್ತವು ಸಾಧಾರಣ ಚಿತ್ತದ ಆಧ್ಯಾತ್ಮಿಕವಾಗಿ ಸುಧಾರಿತ ರೂಪ. ಸಾಧಾರಣ ಜನರ ಚಿತ್ತವು ತಮ್ಮ ಹಿಂದಿನ ಜನ್ಮದ ವಾಸನೆಗಳಿಂದ ಮತ್ತು ಅನಾದಿಯಾಗಿ ಬಂದ ಮರೆವಿನಿಂದಾಗಿ ಏನೆಲ್ಲ ವಸ್ತುಗಳಿಗೆ ಆಸೆ ಪಡುತ್ತಿದ್ದರೆ, ಸಾಧಕನ ಸುಚಿತ್ತವು ತನ್ನ ಎಲ್ಲ ಆಸೆಗಳನ್ನೂ ಪರಶಿವನಿಗೇ ಅರ್ಪಿಸುತ್ತದೆ.
೨. ಮಹೇಶಸ್ಥಲದಲ್ಲಿರುವ ಸಾಧಕನು ಜಲತತ್ವದಲ್ಲಿರುವ ಸುರಸವನ್ನು ನೈಷ್ಠಿಕಾಭಕ್ತಿಯಿಂದ ಸುಬುದ್ದಿ ಎಂಬ ಹಸ್ತದಿಂದ ಗುರುಲಿಂಗಕ್ಕೆ ಅರ್ಪಿಸುತ್ತಾನೆ. ಸುಬುದ್ದಿಯು ಸಾಧಾರಣ ಬುದ್ಧಿಯ ಆಧ್ಯಾತ್ಮಿಕ ರೂಪ. ಸಾಧಾರಣ ಜನರ ಬುದ್ದಿ ಕೆಲವು ವಸ್ತುಗಳನ್ನು ಒಳ್ಳೆಯವೆಂದು, ಕೆಲವನ್ನು ಕೆಟ್ಟವೆಂದೂ ನಿರ್ಧರಿಸಿದರೆ, ಸುಬುದ್ಧಿಯು ಆ ಭೇದವನ್ನೇ ಶಿವನಿಗರ್ಪಿಸಿ ಸುಖದುಃಖ, ಹೊಗಳಿಕೆ ತೆಗಳಿಕೆಗಳನ್ನು ಸಮಾನ ಬುದ್ಧಿಯಿಂದ ನೋಡುತ್ತದೆ.
೩. ಪ್ರಸಾದಿಯು ಅಗ್ನಿತತ್ವದಲ್ಲಿರುವ ಸುರೂಪನ್ನು ಅವಧಾನ ಭಕ್ತಿಯಿಂದ ನಿರಹಂಕಾರ ಹಸ್ತದಿಂದ ಶಿವಲಿಂಗಕ್ಕೆ ಅರ್ಪಿಸುತ್ತಾನೆ. ನಿಜವಾದ ಪ್ರಸಾದಿಯು ತನ್ನ ಅನುಭವಕ್ಕೆ ಬಂದ ವಸ್ತುಗಳನ್ನು ಒಳ್ಳೆಯವು ಕೆಟ್ಟವು ಎಂಬ ಭೇದಭಾವದಿಂದ ನೋಡದೆ, ಯಾವುದನ್ನೂ ದ್ವೇಷಿಸದೆ ಹಾಗೂ ತಿರಸ್ಕರಿಸದೆ, ಯಾವುದನ್ನೂ ಇಷ್ಟಪಡದೆ, ಎಲ್ಲವನ್ನೂ ಅರ್ಪಿಸಿ ಪ್ರಸಾದವನ್ನಾಗಿ ಮಾಡಿಕೊಂಡಿದ್ದಾನೆ.
೪. ಪ್ರಾಣಲಿಂಗಿಯು ವಾಯುತತ್ವದಲ್ಲಿರುವ ಸುಸ್ಪರ್ಶನವನ್ನು ಅನುಭಾವ ಭಕ್ತಿಯಿಂದ ಸುಮನಹಸ್ತದಿಂದ ಜಂಗಮಲಿಂಗಕ್ಕೆ ಅರ್ಪಿಸುತ್ತಾನೆ. ಎಲ್ಲವನ್ನೂ ಶಿವನೇ ನಿರ್ಧರಿಸುತ್ತಾನೆಂದೂ, ಇದರಲ್ಲಿ ಗ್ರಹಗತಿಗಳ ಪಾತ್ರವೇನೂ ಇಲ್ಲವೆಂದೂ ಅವನು ನಂಬಿರುವುದರಿಂದ ಅವನು ಜ್ಯೋತಿಷ್ಯಶಾಸ್ತ್ರವನ್ನು ನಂಬುವುದಿಲ್ಲ. ಅನ್ಯಧರ್ಮ, ಅನ್ಯಯೋಗಗಳನ್ನು ಅವನು ನಂಬುವುದಿಲ್ಲ.
೫. ಶರಣಸ್ಥಲದಲ್ಲಿರುವ ಸಾಧಕನು ಆಕಾಶತತ್ವದಲ್ಲಿರುವ ಸುಶಬ್ದವನ್ನು ಆನಂದಭಕ್ತಿಯಿಂದ ಸುಜ್ಞಾನ ಹಸ್ತದಿಂದ ಪ್ರಸಾದಲಿಂಗಕ್ಕೆ ಅರ್ಪಿಸಿತ್ತಾನೆ. ಅವನು ಜಗತ್ತೆಲ್ಲ ಶಿವಮಯವೆಂದು ಪರಿಗಣಿಸುವುದರಿಂದ, ತಾನು ಕೇಳುವ ಶಬ್ದವೆಲ್ಲವೂ ಸುಶಬ್ದವೆಂದೇ ತಿಳಿಯುತ್ತಾನೆ. ಏಕೆಂದರೆ, ಶಿವಾರ್ಪಿತವಾದ ಎಲ್ಲ ಶಬ್ದಗಳೂ ಸುಶಬ್ದವಾಗೇ ಪರಿವರ್ತಿತವಾಗಬೇಕು. ಅಲ್ಲದೆ ಅವನು ಆದಷ್ಟು ಶಿವನ ಬಗೆಗಿನ ಜಪ, ಭಜನೆ, ವಚನ, ಕಥೆಗಳನ್ನು ಮಾತ್ರ ಕೇಳಲಿಚ್ಛಿಸುತ್ತಾನೆ.
೬. ಐಕ್ಯನು ಆತ್ಮದಲ್ಲಿರುವ ಎಲ್ಲ ಇಂದ್ರಿಯಗಳ ಪರಿಣಾಮವನ್ನು (ತೃಪ್ತಿಯನ್ನು) ಸಮರಸ ಭಕ್ತಿಯಿಂದ ಸದ್ಭಾವ ಹಸ್ತದಿಂದ ಮಹಾಲಿಂಗಕ್ಕೆ ಅರ್ಪಿಸುತ್ತಾನೆ. ಸುಜ್ಞಾನ ಹಸ್ತವು ಇಂದ್ರಿಯ ವಿಷಯಗಳನ್ನು ಇಷ್ಟಲಿಂಗದ ಸೇವಕರನ್ನಾಗಿಯೂ, ಪಂಚವಾಯುಗಳನ್ನು ಪ್ರಾಣಲಿಂಗದ ಸೇವಕರನ್ನಾಗಿಯೂ, ಅವಸ್ಥಾತ್ರಯಗಳನ್ನು ಭಾವಲಿಂಗದ ಸೇವಕರನ್ನಾಗಿಯೂ ಮಾಡುತ್ತದೆ.
ಕೆಲವು ವೇಳೆ, ವಚನಕಾರರು "ಹಸ್ತ" ಎಂಬ ಪದದ `ಸುಹಸ್ತ" ಎಂಬ ಪದವನ್ನು ಬಳಸುತ್ತಾರೆ. ಕೆಲವು ವಚನಕಾರರು ಈ ಸೂಕ್ಷ್ಮ ಅಥವಾ ಆಧ್ಯಾತ್ಮಿಕ ಹಸ್ತಗಳು ಒಂಬತ್ತೆಂದು ಹೇಳಿ, ಉಳಿದ ಮೂರು ಹಸ್ತಗಳ ಕಾರ್ಯಗಳನ್ನು ಈ ರೀತಿ ವಿವರಿಸಿದ್ದಾರೆ.
೭. ನಿರ್ನಾಮ ಹಸ್ತ : ಅಷ್ಟಾವರಣ ಮತ್ತು ಪಂಚಾಚಾರಗಳನ್ನು ತಪ್ಪದೆ ಆಚರಿಸುವಂತೆ ಪ್ರಚೋದಿಸುವ ಹಸ್ತ. ತನಗಾಗಿ ಏನನ್ನೂ ಮಾಡದೆ (ತನ್ನ ಹೆಸರನ್ನೇ ಮರೆತು) ಎಲ್ಲವನ್ನೂ ಶಿವನಿಗೇ ಮಾಡಬೇಕೆಂಬ ಹಸ್ತ.
೮. ನಿಷ್ಕಳಂಕ ಹಸ್ತ : ಲಿಂಗಾಯತ ಧರ್ಮದ ಎಲ್ಲ ಆಚಾರಗಳನ್ನೂ ತಪ್ಪದಂತೆ ಆಚರಿಸುವಂತೆ ಪ್ರಚೋದಿಸುವ ಹಸ್ತ.
೯. ನಿರಾಳ ಹಸ್ತ : ಸಾಧಕನು ತನ್ನನ್ನೆ ಸಂಪೂರ್ಣವಾಗಿ ಪರಶಿವನಿಗೆ ಅರ್ಪಿಸುವ ಹಸ್ತ.
ಈ ಒಂಬತ್ತು ಹಸ್ತಗಳಲ್ಲಿ ಮೊದಲಿನ ಆರರ ವಿಚಾರವು ಷಟ್‌ಸ್ಥಲ ಸಿದ್ಧಾಂತಕ್ಕನುಗುಣವಾಗಿದ್ದು ಅರ್ಥ ಪೂರ್ಣವಾಗಿದೆ. ಉಳಿದ ಮೂರು ಹಸ್ತಗಳ ವಿಚಾರವು ಅರ್ಥವಾಗದಂತಿದ್ದು, ಅನಾವಶ್ಯಕವೆನಿಸುತ್ತದೆ.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಸ್ಥಾವರಲಿಂಗ | ಹದಿನಾಲ್ಕು ತೆರನ ಭಕ್ತಿ |