Previous ಮಹಾಪ್ರಳಯ ಮಹಾಲಿಂಗದಲ್ಲಿ ಮಿಶ್ರಾರ್ಪಣ Next

ಮಹಾಲಿಂಗ

ಮಹಾಲಿಂಗ

ಅನೇಕ ಶರಣರ ಪ್ರಕಾರ, ಮಹಾಲಿಂಗವೆಂದರೆ, ನಿಷ್ಕಲ ಲಿಂಗ ಮಹಾಲಿಂಗನಿಂದ ಐದು ಶಕ್ತಿ, ಐದು ಭಕ್ತಿ, ಐದು ಅಧಿದೇವತೆಗಳು, ಇತ್ಯಾದಿ ಉತ್ಪತ್ತಿಯಾಗುತ್ತವೆ. ಆದರೆ ತೋಂಟದ ಸಿದ್ದಲಿಂಗ ಶಿವಯೋಗಿಗಳ ಪ್ರಕಾರ, ಸ್ವಪ್ರಜ್ಞೆಯಿಲ್ಲದ ಪರಶಿವನೇ ಶೂನ್ಯಲಿಂಗ, ಸ್ವಪ್ರಜ್ಞೆ ಉಂಟಾಗಿ ಅವನಲ್ಲಿ ಸೃಷ್ಟಿಮಾಡಬೇಕೆಂಬ ಇಚ್ಛೆ ಉಂಟಾದರೆ, ಅವನು ನಿಃಕಲ ಲಿಂಗ ಎನಿಸಿಕೊಳ್ಳುತ್ತಾನೆ. ನಿಃಕಲ ಲಿಂಗದಲ್ಲಿ ಆ ಇಚ್ಛೆ ಉಂಟಾದ ಕೂಡಲೆ ಅದರಿಂದ ಚಿತ್ತು ಉತ್ಪತ್ತಿಯಾಗಿ, ಇದರಿಂದ ಅ, ಉ, ಮಕಾರಗಳು ಉತ್ಪತ್ತಿಯಾಗಿ, ಚಿತ್ತು ಆ ಮೂರಕ್ಷರಗಳನ್ನು ಕೂಡಿಕೊಂಡು ಪ್ರಣಮವೆನಿಸಿಕೊಳ್ಳುತ್ತದೆ. ಆ ಓಂಕಾರವೆಂಬ ಪ್ರಣಮವೇ ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮಯ ಮೂರ್ತಿಯಪ್ಪ ಮಹಾಲಿಂಗ". (೧೧:೩೩)

ಹೀಗೆ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಪ್ರಕಾರ ಮಹಾಲಿಂಗವೂ ಒಂದು ಉತ್ಪತ್ತಿಯೇ ಹೊರತು, ಅದೇ ಸೃಷ್ಟಿಕರ್ತನಲ್ಲ. ಆದರೆ, ಸೃಷ್ಟಿಗೆ ಬೇಕಾದ ಉಪಾದಾನ ಕಾರಣಗಳೆಲ್ಲವೂ ಮಹಾಲಿಂಗದಲ್ಲಿ ಅಡಕವಾಗಿವೆ. ಪಂಚಶಕ್ತಿಯನು, ಪಂಚಸಾದಾಖ್ಯವನು, ಪಂಚಕಲೆಗಳನು, ಪಂಚಾಕ್ಷರಗಳನು, ಪಂಚಭೂತಾತ್ಮವನು ತನ್ನಲ್ಲಿ ಗರ್ಭಿಕರಿಸಿಕೊಂಡು ತಾನು ಚಿದ್‌ಬ್ರಹ್ಮಾಂಡಾತ್ಮಕನಾಗಿ" (೧೧:೩೬), ಸರ್ವವ್ಯಾಪಕನಾಗಿದ್ದಾನೆ. ಹೀಗೆ ಅನಂತ ಕೋಟಿ ಬ್ರಹ್ಮಾಂಡಗಳನ್ನು ಮಹಾಲಿಂಗ ಗರ್ಭೀಕರಿಸಿಕೊಂಡಿದ್ದರೂ ಅವನಿಗೆ ಕರ ಚರಣಾದ್ಯವಯಂಗಳಿಲ್ಲ" (೧೧:೩೪). ಅಂತೂ, ಸೃಷ್ಟಿ ಪೂರ್ವಸ್ಥಿತಿಯ ಶಿವನ ಒಂದು ಅವಸ್ಥೆಯೇ ಮಹಾಲಿಂಗ,

ಈ ಮಹಾಲಿಂಗ ತಾನೊಬ್ಬನೇ, ಅಂದರೆ ಕೇವಲ ಇಚ್ಛಾಮಾತ್ರದಿಂದ ಸೃಷ್ಟಿಸಲಾರ. ಅವನಿಗೆ ಹಾಗೆ ಮಾಡಲು ಶಕ್ತಿ ಬೇಕು. ಶಕ್ತಿಯೂ ಸಹ ಆ ಸ್ಥಿತಿಯಲ್ಲಿ ನಾಮ ರೂಪಗಳಿಲ್ಲದ ಅವ್ಯಕ್ತಸ್ಥಿತಿಯಲ್ಲಿದ್ದು, ಮಹಾಲಿಂಗನ ಒಂದು ಅವಿಭಾಜ್ಯ ಅಂಗವಾಗಿದೆ. ಪರಶಿವನ ಆ ಅವಸ್ಥೆಗೆ ಮಹಾಲಿಂಗ ಎಂಬ ಹೆಸರು. ಹೇಗೆ ಅನ್ವಯವಾಗುತ್ತದೆಯೋ ಹಾಗೆ ಶಕ್ತಿಯ ಆಗಿನ ಅವಸ್ಥೆಗೆ ಚಿಚ್ಛಕ್ತಿ (ಚಿತ್‌ಶಕ್ತಿ) ಎಂಬ ಹೆಸರು ಅನ್ವಯವಾಗುತ್ತದೆ. (ನೋಡಿ : ಚಿತ್ತು, ನಿಃಕಲ ಲಿಂಗ, ಶಕ್ತಿ).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಮಹಾಪ್ರಳಯ ಮಹಾಲಿಂಗದಲ್ಲಿ ಮಿಶ್ರಾರ್ಪಣ Next